ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧನ್‌ವೀರ್‌ ಹೇಳಿದ ‘ಬಂಪರ್‌’ ಕಥೆ

Last Updated 28 ಮೇ 2020, 19:30 IST
ಅಕ್ಷರ ಗಾತ್ರ

‘ಆ ಹುಡುಗ ಆ‌ಗಿನ್ನೂ ಹೈಸ್ಕೂಲ್‌ ಮೆಟ್ಟಿಲು ಹತ್ತಿದ್ದ. ತನ್ನ ಬಡಾವಣೆಯಲ್ಲಿ ಪ್ರತಿವರ್ಷ ನಡೆಯುತ್ತಿದ್ದ ಪೌರಾಣಿಕ ನಾಟಕಗಳನ್ನು ತಪ್ಪದೇ ವೀಕ್ಷಿಸುತ್ತಿದ್ದ. ರಂಗಸಜ್ಜಿಕೆ ಮೇಲೆ ಹಿರಣ್ಯಕಶಿಪು ಪಾತ್ರಧಾರಿ ಬಂದಾಗ ಕಣ್ಣು ಮಿಟುಕಿಸದೇ ನೋಡುತ್ತಿದ್ದ. ರಾತ್ರಿಯೆಲ್ಲಾ ‘ಪ್ರಚಂಡ ರಾವಣ’ ನಾಟಕ ನೋಡಿ ಮನೆಗೆ ಬಂದಾಗ ರಾವಣನ ಪಾತ್ರದ ಹಾವಭಾವದಲ್ಲಿಯೇ ದಿನ ಕಳೆಯುತ್ತಿದ್ದ. ಪಿಯುಸಿ ಓದುವ ವೇಳೆಗಾಗಲೇ ಆತ ಸಂಪೂರ್ಣವಾಗಿ ರಂಗದ ಸೆಳೆತಕ್ಕೆ ಸಿಲುಕಿದ. ಪದವಿ ಕಾಲೇಜಿಗೆ ಸೇರಿದಾಗ ನಾಟಕದ ಗೀಳು ಹತ್ತಿಸಿಕೊಂಡ. ಕೊನೆಗೆ, ರಂಗಸಜ್ಜಿಕೆ ಮೇಲೆ ಹಿರಣ್ಯಕಶಿಪು, ರಾವಣನಾಗಿ ಅಬ್ಬರಿಸುತ್ತಲೇ ನಟನೆಯ ಪಟ್ಟುಗಳನ್ನು ಕರಗತ ಮಾಡಿಕೊಂಡ’

–ನಟ ಧನ್‌ವೀರ್‌ ನಟನೆಯ ಬೆನ್ನು ಬಿದ್ದಿದ್ದು ಹೀಗೆ. ಸಿಂಪಲ್‌ ಸುನಿ ನಿರ್ದೇಶನದ ‘ಬಜಾರ್’ ಚಿತ್ರದಲ್ಲಿಶೋಕ್ದಾರ್‌ ಆಗಿ ಲವಲವಿಕೆಯಿಂದ ನಟಿಸಿದ್ದ ಅವರು ಗಾಂಧಿನಗರದಲ್ಲಿ ಯಶಸ್ವಿಯಾಗಿಯೇ ಮೊದಲ ಅಂಬೆಗಾಲಿಟ್ಟಿದ್ದರು. ಈಗ ಹರಿ ಸಂತೋಷ್‌ ನಿರ್ದೇಶನದ ಹೊಸ ಚಿತ್ರದ ಮೂಲಕ ‘ಬಂಪರ್‌’ ಹೆಜ್ಜೆ ಇಡಲು ಮುಂದಾಗಿದ್ದಾರೆ. ‘ಬಜಾರ್‌’ನಲ್ಲಿ ಮಾಸ್‌ ಕ್ಯಾರೆಕ್ಟರ್‌ನಲ್ಲಿ ಮಿಂಚಿದ್ದ ಅವರು, ‘ಬಂಪರ್‌’ ಚಿತ್ರದ ಮೂಲಕ ಕೌಟುಂಬಿಕ ಕಥನದ ಹಾದಿಗೆ ಹೊರಳಿದ್ದಾರೆ.

‘ಬಜಾರ್‌ ಮೂಲಕ ಮೊದಲ ಬಾರಿಗೆ ಕ್ಯಾಮೆರಾ ಎದುರಿನ ನಟನಾ ಪಯಣ ಆರಂಭಿಸಿದೆ. ಒಬ್ಬ ಪ್ರೇಕ್ಷಕನಾಗಿ ಹಲವು ಬಾರಿ ಈ ಸಿನಿಮಾ ನೋಡಿರುವೆ. ನನ್ನ ನಟನೆಯಲ್ಲಿನ ತಪ್ಪುಗಳ ಅರಿವಾಗಿದೆ. ನನ್ನ ದ್ವಿತೀಯ ಚಿತ್ರದಲ್ಲಿ ಅವುಗಳನ್ನು ತಿದ್ದಿಕೊಳ್ಳಲು ನಿರ್ಧರಿಸಿದ್ದೇನೆ. ಈ ಚಿತ್ರದ ಪಾತ್ರಕ್ಕಾಗಿ ಡಾನ್ಸ್‌,ಜಿಮ್ನಾಸ್ಟಿಕ್‌ ಕಲಿತಿರುವೆ’ ಎಂದು ವಿವರಿಸುತ್ತಾರೆ.

‘ಬಂಪರ್’ ಪಕ್ಕಾ ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್‌ ಚಿತ್ರ. ಇದರಲ್ಲಿ ಧನ್‌ವೀರ್‌ ಅವರದು ಯೂತ್‌ಫುಲ್‌ ಹುಡುಗನ ಪಾತ್ರವಂತೆ. ಮಕ್ಕಳಿಗೆ ಸುಂದರ ಬದುಕು ಕಟ್ಟಿಕೊಡಲು ತಂದೆ–ತಾಯಿ ಹಗಲಿರುಳು ಶ್ರಮಿಸುತ್ತಾರೆ. ಆದರೆ, ಮಕ್ಕಳೇ ಪೋಷಕರ ಸ್ಥಾನದಲ್ಲಿ ನಿಂತು ಅವರ ಬದುಕನ್ನು ಹೇಗೆ ಕಟ್ಟಿಕೊಡುತ್ತಾರೆ ಎಂಬುದೇ ಇದರ ತಿರುಳು.

ಬಣ್ಣದಲೋಕದ ಸೆಳೆತಕ್ಕೆ ಸಿಕ್ಕಿದ ಬಗೆಯನ್ನು ಅವರು ವಿವರಿಸುವುದು ಹೀಗೆ: ‘ನನಗೆ ಬಾಲ್ಯದಿಂದಲೂ ಪೌರಾಣಿಕ ನಾಟಕಗಳನ್ನು ನೋಡುವುದೆಂದರೆ ಅಚ್ಚುಮೆಚ್ಚು. ಸಾಕಷ್ಟು ನಾಟಕಗಳನ್ನು ನೋಡುತ್ತಿದ್ದೆ. ನಾನು ರಂಗಸಜ್ಜಿಕೆ ಮೇಲೆ ಅಭಿನಯಿಸಬೇಕು ಎಂಬ ಆಸೆಯಾಗುತ್ತಿತ್ತು. ಪದವಿ ಶಿಕ್ಷಣಕ್ಕಾಗಿ ಕೊಂಚ ಬಿಡುವು ತೆಗೆದುಕೊಂಡೆ. ಕೊನೆಗೊಂದು ದಿನ ನನ್ನೊಳಗಿರುವ ಕಲೆಗೆ ವೇದಿಕೆ ಕಲ್ಪಿಸಲು ಹುಡುಕಾಟ ಆರಂಭಿಸಿದೆ. ಹಾಗಾಗಿ, ಶಿಕ್ಷಣ ಅರ್ಧಕ್ಕೆ ಮೊಟಕುಗೊಂಡಿತು.ಬೆಂಗಳೂರಿನಲ್ಲಿ ನಮ್ಮ ಮನೆಯ ಸಮೀಪವೇ ಶ್ರೀಧರ್‌ ಎಂಬುವರ ಪೌರಾಣಿಕ ನಾಟಕ ತಂಡವಿತ್ತು. ಆ ತಂಡದೊಟ್ಟಿಗೆ ಸೇರಿಕೊಂಡೆ. ‘ಭಕ್ತ ಪ್ರಹ್ಲಾದ’, ‘ಪ್ರಚಂಡ ರಾವಣ’ ಮತ್ತು ಶ್ರೀನಿವಾಸ ಕಲ್ಯಾಣ’ ನಾಟಕಗಳಲ್ಲಿ ನಟಿಸಿದೆ. ಇಸ್ಕಾನ್‌ನಿಂದ ಪ್ರತಿವರ್ಷ ಹೆರಿಟೇಜ್‌ ಫೆಸ್ಟಿವಲ್ ಸ್ಪರ್ಧೆ ಹಮ್ಮಿಕೊಳ್ಳುತ್ತಾರೆ. ನಾನು ಹದಿನೇಳು ವರ್ಷಗಳ ಕಾಲ ಹಿರಣ್ಯಕಶಿಪು ಪಾತ್ರ ಮಾಡಿದ್ದು ಖುಷಿ ಕೊಟ್ಟಿದೆ’.

ಧನ್‌ವೀರ್‌ ಅವರು ಯಾವುದೇ ನಟನಾ ಶಾಲೆಗೆ ಹೋದವರಲ್ಲ. ಅವರು ನಟನೆ ಕಲಿತಿದ್ದು ರಂಗದ ಮೂಲಕವೇ. ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಅವರು ಒಳ್ಳೆಯ ಯೂತ್‌ಫುಲ್‌ ಸ್ಕ್ರಿಪ್ಟ್‌ಗಾಗಿ ಕಾಯುತ್ತಿದ್ದರು. ಆಗ ಅವರಿಗೆ ಪರಿಚಯವಾಗಿದ್ದು ಸುನಿ. ಈ ಪರಿಚಯವೇ ಅವರು ಬೆಳ್ಳಿತೆರೆ ಪ್ರವೇಶಿಸಲು ವೇದಿಕೆಯಾಯಿತು.

ಪೌರಾಣಿಕ ಪಾತ್ರಗಳಲ್ಲಿ ನಟಿಸಿರುವ ಅವರಿಗೆ ಬೆಳ್ಳಿತೆರೆಯಲ್ಲೂ ಪೌರಾಣಿಕ ಅಥವಾ ಐತಿಹಾಸಿಕ ಪಾತ್ರಗಳಲ್ಲಿ ನಟಿಸುವ ಆಸೆ ಇದೆಯಂತೆ. ‘ಐತಿಹಾಸಿಕ ಸಿನಿಮಾಗಳಲ್ಲಿ ನಟಿಸುವ ಆಸೆಯಿದೆ. ಆದರೆ, ಅಂತಹ ಸ್ಕ್ರಿಪ್ಟ್‌ಗಳು ನನ್ನನ್ನು ಹುಡುಕಿಕೊಂಡು ಬಂದಿಲ್ಲ. ಲಾಕ್‌ಡೌನ್ ಅವಧಿಯಲ್ಲಿ ಸಾಕಷ್ಟು ಸ್ಕ್ರಿಪ್ಟ್‌ ಕೇಳಿದ್ದೇನೆ. ಆದರೆ, ಯಾವುದೂ ಅಂತಿಮಗೊಂಡಿಲ್ಲ. ಹೈದರಾಬಾದ್‌ನ ಹರೀಶ್‌ ಎಂಬುವರು ‘ಬಂಪರ್’ ಕಥೆಯ ಒಂದು ಎಳೆ ಹೇಳಿದರು. ನನಗೆ ತುಂಬಾ ಇಷ್ಟವಾಯಿತು. ಹಾಗಾಗಿ, ಒಪ್ಪಿಕೊಂಡೆ. ಚಿತ್ರದಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶವಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT