ಗುರುವಾರ , ಅಕ್ಟೋಬರ್ 17, 2019
24 °C

ಭರಪೂರ ಮನರಂಜನೆಯ 'ಪೊಗರು' ಬಗ್ಗೆ ನಿರ್ದೇಶಕ ನಂದಕಿಶೋರ್ ಮಾತು

Published:
Updated:
ಪೊಗರು ಸಿನಿಮಾದ ದೃಶ್ಯ

‘ಪರದೆ ಮೇಲೆ ಚಿತ್ರ ತೋರಿಸಿ ಬುದ್ಧಿಮಾತು ಹೇಳುತ್ತೇನೆ; ಬದುಕಿನ ತತ್ವ ಸಾರುತ್ತೇನೆ ಎಂದರೆ ಯಾರಿಗೂ ಸಿನಿಮಾದ ಬಗ್ಗೆ ಆಸಕ್ತಿಯೇ ಇರುವುದಿಲ್ಲ’  ನಿರ್ದೇಶಕ ನಂದ ಕಿಶೋರ್‌ ಖಚಿತ ಧ್ವನಿಯಲ್ಲಿ ಹೇಳಿದರು. ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ‘ಪೊಗರು’ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವ ಅವರ ಈ ಮಾತು ಅನಿರೀಕ್ಷಿತವೆಂಬಂತೆ ಇತ್ತು. 

‘ಪ್ರಸ್ತುತ ಟಿ.ವಿ. ಮಾಧ್ಯಮಗಳ ಹಾವಳಿ ನಡುವೆ ನಮ್ಮ ಬದುಕನ್ನು  ಹುಡುಕಿಕೊಳ್ಳುವುದಕ್ಕೆ ಕಷ್ಟವಾಗಿದೆ. ಪ್ರತಿದಿನವೂ ಜೀವನದ ಜಂಜಡದಿಂದ ನಲುಗುತ್ತಿದ್ದೇವೆ. ಧುತ್ತನೇ ಎದುರಾಗುವ ಸವಾಲುಗಳನ್ನು ಮೆಟ್ಟಿನಿಲ್ಲಲು ಕಷ್ಟವಾಗುತ್ತಿದೆ. ಇದೆಲ್ಲವನ್ನೂ ಮೀರಿ ಜನರು ಸಿನಿಮಾಕ್ಕೆ ಬರುತ್ತಿದ್ದಾರೆ. ಅವರಿಗೆ ಮನರಂಜನೆ ಬೇಡವೇ?’ ಎಂದು ಖಡಕ್‌ ಆಗಿ ಹೇಳಿದರು. 

‘ಎರಡು ಗಂಟೆಯ ಸಿನಿಮಾ ನಮ್ಮ ಮನಸ್ಥಿತಿಯನ್ನು ಬೇರೆ ಲೋಕಕ್ಕೆ ಕರೆದೊಯ್ಯಬಹುದು ಎಂದು ಜನರು ಥಿಯೇಟರ್‌ಗೆ ಬರುತ್ತಾರೆ. ಅವರು ಸಂತೋಷಪಟ್ಟು ಹೊರಗಡೆ ಹೋಗಬೇಕು. ಹೊರಗಡೆಯೂ ಬೇಜಾರಾಗಿದ್ದು, ಸಿನಿಮಾಕ್ಕೆ ಬಂದೂ ಬೇಜಾರಾದರೆ ನಮ್ಮನ್ನು ಬೈದುಕೊಂಡು ಹೋಗುತ್ತಾರೆ’ ಎಂದು ವಾಸ್ತವಾಂಶವನ್ನು ತೆರೆದಿಟ್ಟರು.  

‘ಪ್ರೇಕ್ಷಕರಿಗೆ ಮನರಂಜನೆಯಷ್ಟೇ ಮುಖ್ಯ. ಅದನ್ನು ನೀಡುವುದಷ್ಟೇ ನನ್ನ ಕಾಯಕ. ಮನರಂಜನೆಗಾಗಿಯೇ ಜನರು ಚಿತ್ರಮಂದಿರಕ್ಕೆ ಬರುತ್ತಾರೆ ಅಲ್ಲವೇ?’ ಎಂದು ಪ್ರಶ್ನೆ ಮುಂದಿಟ್ಟರು.

* ‘ಪೊಗರು’ ಚಿತ್ರದ ಕಥೆ ಚಿಗುರಿದ್ದು ಹೇಗೆ?

ಈಗಾಗಲೇ, ಧ್ರುವ ಸರ್ಜಾ ನಟನೆಯ ಮೂರು ಚಿತ್ರಗಳು ಸೂಪರ್‌ ಹಿಟ್‌ ಆಗಿವೆ. ಅವರಿಗೆ ಲವರ್‌ಬಾಯ್ ಇಮೇಜ್ ಕೂಡ ಇದೆ. ಹಾಗಾಗಿ, ಅವರಿಗೆ ಬೇರೆ ಬೇರೆ ಕಥೆಗಳನ್ನು ಮಾಡಬೇಕು ಎಂದು ಚರ್ಚೆಯಲ್ಲಿ ಮುಳುಗಿದ್ದೆವು. ಕಮರ್ಷಿಯಲ್‌ ಸಿನಿಮಾ ಮಾಡಬೇಕು; ಅದು ವಿಭಿನ್ನವಾಗಿರಬೇಕು ಎಂಬ ಯೋಚನೆ ಹೊಳೆಯಿತು. ಒಂದು ಎಕ್ಸ್‌ಟ್ರೀಮ್‌ ಆದ ಕ್ಯಾರೆಕ್ಟರ್‌ ಮಾಡಿದರೆ ಹೇಗಿರುತ್ತದೆ ಎಂದು ಆಲೋಚಿಸಿದೆ. ಆಗ ಜೀವ ತಳೆದಿದ್ದೇ ಈ ಚಿತ್ರದ ಕಥೆ. ಇದರಲ್ಲಿ ಅವರದು ತೀರಾ ಎಕ್ಸ್‌ಟ್ರೀಮ್‌ ಆದ ಕ್ಯಾರೆಕ್ಟರ್‌.

* ಈ ಸಿನಿಮಾದ ಕಥೆಯ ಭಿತ್ತಿ ಯಾವ ರೀತಿಯದ್ದು?

ತಾಯಿ ಮತ್ತು ಮಗನ ನಡುವೆ ನಡೆಯುವ ಕಥೆ ಇದು. ಒಂದು ಸಣ್ಣ ಭಿನ್ನಾಭಿಪ್ರಾಯ ಹೇಗೆ ಮನುಷ್ಯನ ಮನಸ್ಸನ್ನು ಬದಲಾಯಿಸುತ್ತದೆ ಎನ್ನುವುದು ಕಥೆಯ ಒಂದು ಎಳೆ. ನಾವು ಯಾವುದೇ ತಪ್ಪು ಮಾಡಿದರೂ ಅದು ಕರ್ಮಫಲವನ್ನು ಆಧರಿಸಿರುತ್ತದೆ. ನಾವು ಮಾಡಿದ ತಪ್ಪಿಗೆ ದಂಡನೆ ಅನುಭವಿಸಲೇಬೇಕು ಎನ್ನುವುದು ಮತ್ತೊಂದು ಎಳೆ. ಈ ಎರಡು ಎಳೆಗಳ ಮೇಲೆ ಕಥೆಯ ಚಕ್ರ ಸಾಗಲಿದೆ.

* ಪೊಗರಿನ ವಿಶೇಷತೆ ಏನು? 

ಇದು ಪಕ್ಕಾ ಫ್ಯಾಮಿಲಿ ಕಮರ್ಷಿಯಲ್‌ ಸಿನಿಮಾ. ಕನ್ನಡದಲ್ಲಿ ಇಂತಹ ಸಿನಿಮಾ ತೆರೆಕಂಡು ಸಾಕಷ್ಟು ವರ್ಷಗಳೇ ಸರಿದಿವೆ. ‘ಜೋಗಿ’ ಸಿನಿಮಾ ಅದಕ್ಕೊಂದು ನಿದರ್ಶನ. ಅದು ಎಮೋಷನಲ್‌ ಡ್ರಾಮಾ. ಅದರಲ್ಲಿ ಕಮರ್ಷಿಯಲ್‌ ಮತ್ತು ರೌಡಿಸಂ ಅಂಶಗಳು ಢಾಳವಾಗಿದ್ದರೂ ಅದರೊಳಗೊಂದು ತಾಯಿಯ ಎಳೆ ಅಡಕವಾಗಿತ್ತು. ಪೊಗರಿನಲ್ಲೂ ತಾಯಿ– ಮಗನ ಕಥೆ ಬೆಸೆದುಕೊಂಡಿದೆ.

* ಚಿತ್ರದ ಶೂಟಿಂಗ್‌ ಯಾವ ಹಂತದಲ್ಲಿದೆ?

ಸಿನಿಮಾದ ಶೇಕಡ 90ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಹಾಡುಗಳು ಮತ್ತು ಸಣ್ಣಪುಟ್ಟ ಪ್ಯಾಚ್‌ವರ್ಕ್‌ ಬಿಟ್ಟರೆ ಬೇರೇನೂ ಇಲ್ಲ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆ. ಇನ್ನೂ 15 ದಿನದ ಶೂಟಿಂಗ್‌ ಅಷ್ಟೇ ಬಾಕಿಯಿದೆ. ಈ ತಿಂಗಳಿನಲ್ಲಿ ಒಂದು ಟ್ರೇಲರ್‌ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಟ್ರೇಲರ್‌ ಮತ್ತು ಈಗ ಪೂರ್ಣಗೊಂಡಿರುವ ಶೂಟಿಂಗ್‌ನ ಸಂಕಲನದ ಕೆಲಸ ನಡೆಯುತ್ತಿದೆ. 

* ಸಿನಿಮಾ ಬಿಡುಗಡೆ ಯಾವಾಗ?

ನಾವು ಅಂದುಕೊಂಡಂತೆ ಎಲ್ಲಾ ಕೆಲಸಗಳು ಪೂರ್ಣಗೊಂಡರೆ ಡಿಸೆಂಬರ್‌ 24ರಂದು ಥಿಯೇಟರ್‌ಗೆ ಬರುವುದು ನಿಶ್ಚಿತ. ಈ ನಿಟ್ಟಿನಲ್ಲಿ ಭರದ ಸಿದ್ಧತೆ ಸಾಗಿದೆ. ಅದು ಸಾಧ್ಯವಾಗದಿದ್ದರೆ ಸಂಕ್ರಾಂತಿ ಹಬ್ಬಕ್ಕೆ ಜನರ ಮುಂದೆ ಬರುವುದು ಗ್ಯಾರಂಟಿ.

* ನಿಮ್ಮ ಹಿಂದಿನ ಸಿನಿಮಾಗಳಿಗೂ, ಈ ಸಿನಿಮಾಕ್ಕೂ ವ್ಯತ್ಯಾಸ ಇದೆಯೇ? 

ನನ್ನ ಹಿಂದಿನ ಸಿನಿಮಾಗಳಿಗೂ ಮತ್ತು ‘ಪೊಗರು’ ಚಿತ್ರಕ್ಕೂ ವ್ಯತ್ಯಾಸವಿದೆ ಎಂದು ನಾನು ಹೇಳುವುದಿಲ್ಲ. ಪ್ರತಿಯೊಂದು ಸಿನಿಮಾಕ್ಕೂ ಅದರದೇ ಆದ ವೈಶಿಷ್ಟ್ಯ ಇರುತ್ತದೆ. ನಾವು ಹೋಲಿಕೆ ಮಾಡಿದರೆ ತಪ್ಪಾಗುತ್ತದೆ. ಶರಣ್‌ ಜೊತೆಗೆ ನಾನು ಕಾಮಿಡಿ ಜಾನರ್‌ ಸಿನಿಮಾ ಮಾಡಿದೆ. ಅವರ ಸ್ಟ್ರೆಂಥ್‌, ಲವಲವಿಕೆ, ಹಾಸ್ಯ‍ಪ್ರಜ್ಞೆ ಇಟ್ಟುಕೊಂಡೇ ಸಿನಿಮಾ ಮಾಡಿದೆ. ಮತ್ತೆ ಸುದೀಪ್‌ ಸರ್‌ ಜೊತೆಗೆ ವಿಚಾರಗಳು, ಅವರ ಸ್ಟೈಲ್, ಸಂಪ್ರದಾಯ ಇಟ್ಟುಕೊಂಡು ‘ರನ್ನ’ ಚಿತ್ರ ಕಟ್ಟಿದೆ. ಉಪೇಂದ್ರ ಸರ್‌ ಅವರೊಟ್ಟಿಗೆ ಸಿನಿಮಾ ಮಾಡುವಾಗಲೂ ಅವರ ಶೈಲಿ ಇಟ್ಟುಕೊಂಡೇ ಸಿನಿಮಾ ಮಾಡಿದ್ದು. ‘ಬೃಹಸ್ಪತಿ’, ‘ಟೈಗರ್‌’ ಸಿನಿಮಾದಲ್ಲಿ ಯುವಜನರಿಗೆ ಏನು ಬೇಕೋ ಅದನ್ನು ಕೊಟ್ಟಿರುವೆ. ನಾನು ನಿರ್ದೇಶಿಸಿರುವ ಎಲ್ಲಾ ಸಿನಿಮಾಗಳಿಗೆ ಅದರದ್ದೇ ಆದ ವೈಶಿಷ್ಟ್ಯವಿದೆ. 

* ನಾಯಕಿ ರಶ್ಮಿಕಾ ಮಂದಣ್ಣ ಅವರ ಪಾತ್ರದ ಬಗ್ಗೆ ಹೇಳಿ.

ಚಿತ್ರದಲ್ಲಿ ರಶ್ಮಿಕಾ ಅವರದು ಶಿಕ್ಷಕಿಯ ಪಾತ್ರ. ಆಕೆಯದು ತೀರಾ ಸೂಕ್ಷ್ಮವಾದ ಮನಸ್ಥಿತಿ. ಆದರೆ, ನಾಯಕ ತೀರಾ ಒರಟ. ಇಬ್ಬರದು ಕ್ಯಾಟ್‌ ಅಂಡ್‌ ಮೌಸ್‌ ಗೇಮ್‌ ಮನಸ್ಥಿತಿ. ಹೀಗಿದ್ದಾಗ ಇಬ್ಬರ ನಡುವೆ ಯಾವ ಸಾಮಾನ್ಯ ಅಂಶಗಳು ಹೊಂದಾಣಿಕೆಯಾಗುತ್ತವೆ ಎನ್ನುವುದೇ ಚಿತ್ರದ ಕುತೂಹಲ ಅಂಶ. 

* ಚಿತ್ರದ ಉಳಿದ ಪಾತ್ರಗಳ ಬಗ್ಗೆ ಹೇಳಿ.

ನಟ ರಾಘವೇಂದ್ರ ರಾಜ್‌ಕುಮಾರ್‌, ‘ಡಾಲಿ’ ಖ್ಯಾತಿ ಧನಂಜಯ್‌ ಕೂಡ ನಟಿಸಿದ್ದಾರೆ. ಚಿತ್ರದಲ್ಲಿ ಎಲ್ಲರದ್ದು ಸಹಜವಾದ ಪಾತ್ರಗಳಾಗಿವೆ. ಆದರೆ, ಆ ಪಾತ್ರಗಳಲ್ಲಿ ಭಿನ್ನತೆ ಕಾಣಬಹುದು. ರಾಘಣ್ಣ ಇದರಲ್ಲಿ ಪೋಷಕ ಪಾತ್ರ ಮಾಡುತ್ತೇನೆಂದು ಹೇಳಿದ್ದೇ ನಮ್ಮ ಅದೃಷ್ಟ. ಅವರು ಅದ್ಭುತವಾಗಿ ನಟಿಸಿದ್ದಾರೆ.

* ಅಂತರರಾಷ್ಟ್ರೀಯ ಖ್ಯಾತಿಯ ಬಾಡಿಬಿಲ್ಡರ್‌ಗಳು ನಟಿಸಿರುವ ಹಿನ್ನೆಲೆ ಏನು? 

ಯಾವುದೇ ಒಬ್ಬ ವ್ಯಕ್ತಿ ಮಹಾನಾಯಕನಾಗಲು ಎದುರಾಳಿ ಕೂಡ ಜೋರಾಗಿರಬೇಕು. ಆ ಕಾನ್ಸೆಫ್ಟ್‌ ಇಟ್ಟುಕೊಂಡೇ ಅಂತರರಾಷ್ಟ್ರೀಯ ಖ್ಯಾತಿಯ ಬಾಡಿಬಿಲ್ಡರ್‌ಗಳನ್ನೂ ಚಿತ್ರದ ಭಾಗವಾಗಿಸಿಕೊಳ್ಳಲಾಗಿದೆ. ಅಂತಹ ರಣದೈತ್ಯರ ಎದುರು ಗುದ್ದಾಡಲು ಸಾಧ್ಯವಾಗಲ್ಲ ಎಂದು ಎಲ್ಲರೂ ಅಂದುಕೊಂಡಿರುತ್ತಾರೆ. ಅಂತಹವರ ವಿರುದ್ಧ ತೊಡೆತಟ್ಟಿದರಷ್ಟೇ ನಾಯಕನಾಗಲು ಸಾಧ್ಯ. ಅದಕ್ಕಾಗಿ ಫ್ರೆಂಚ್‌ ಮಾರ್ಗೆನ್ ಆಸ್ಟೆ, ಅಮೆರಿಕದ ಕಾಯ್‌ ಗ್ರೀನ್‌ ಕೂಡ ನಟಿಸಿದ್ದಾರೆ.

* ನಿಮ್ಮ ಮುಂದಿನ ಪ್ರಾಜೆಕ್ಟ್‌ಗಳೇನು?

ಸದ್ಯಕ್ಕೆ ನನ್ನ ಮುಂದಿರುವ ದೊಡ್ಡ ‍ಪ್ರಾಜೆಕ್ಟ್‌ ಅಂದರೆ ‘ಪೊಗರು’. ಇದು ಪೂರ್ಣಗೊಂಡ ಬಳಿಕವಷ್ಟೇ ಮುಂದಿನ ಚಿತ್ರಗಳ ಬಗ್ಗೆ ಯೋಚಿಸುತ್ತೇನೆ. ಎರಡು ಸಿನಿಮಾಗಳ ಕಥೆಯೂ ಸಿದ್ಧವಾಗಿದ್ದು, ಮಾತುಕತೆ ನಡೆದಿದೆ.

ಇದನ್ನೂ ಓದಿ: ಪೊಗರು' ಶೂಟಿಂಗ್ ಸೆಟ್‌ಗೆ ಬೆಂಕಿ: ನಟ ಧ್ರುವ ಸರ್ಜಾ ಪಾರು

Post Comments (+)