ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಲಾಸ್‌, ಮಾಸ್‌ ಮತ್ತು ಜಗ್ಗೇಶ್!

Last Updated 20 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

* ಕನ್ನಡ ಮಾಧ್ಯಮ, ಶಿಕ್ಷಣ, ಸರ್ಕಾರಿ ಶಾಲೆ ಇವನ್ನೆಲ್ಲ ಸಿನಿಮಾ ವಸ್ತುವನ್ನಾಗಿ ಆಯ್ಕೆ ಮಾಡಿಕೊಳ್ಳಲು ಕಾರಣ ಏನು?
ನಾನು ಇಂದು ಎದುರಿಸುತ್ತಿರುವ ಪರಿಸ್ಥಿತಿಯೇ ಅದಕ್ಕೆ ಕಾರಣ! ನನ್ನ ಮಗುವನ್ನು ಎಲ್‌ಕೆಜಿಗೆ ಸೇರಿಸಬೇಕು. ಆದರೆ, ನನ್ನಲ್ಲೊಂದು ಗೊಂದಲ ಇದೆ. ನನಗೆ ಕನ್ನಡ ಪ್ರೇಮ ಇದೆ. ನನ್ನದೇ ಆದ ಕನ್ನಡ ಸಂಘಟನೆಯೂ ಇದೆ. ಕನ್ನಡ ಮಾತನಾಡಿ ಎಂದು ನಾವು ಪ್ರತಿ ತಿಂಗಳೂ ಅಭಿಯಾನ ನಡೆಸುತ್ತೇವೆ. ಆದರೆ ನನಗೇ ನನ್ನ ಮಗುವನ್ನು ಕನ್ನಡ ಶಾಲೆಗೆ ಸೇರಿಸಲಾಗದ ಸ್ಥಿತಿ ಸೃಷ್ಟಿಸಲಾಗಿದೆ. ನನ್ನ ಆದರ್ಶಗಳನ್ನು ಮಗುವಿನ ಮೇಲೆ ಹೇರಬೇಕೋ ಬೇಡವೋ ಎಂಬ ತಾಕಲಾಟ ನನ್ನಲ್ಲಿ ಇದೆ. ಕಾರ್ಪೊರೇಟ್ ಜಗತ್ತು ಇಂತಹ ಪರಿಸ್ಥಿತಿ ಸೃಷ್ಟಿಸಿದೆ.

ಕನ್ನಡ ಶಾಲೆ ಅಥವಾ ಸರ್ಕಾರಿ ಶಾಲೆಯ ಗುಣಮಟ್ಟ ಕಡಿಮೆ ಮಾಡಿದಂತೆಲ್ಲಾ ಖಾಸಗಿ ಶಾಲೆಗಳಿಗೆ ಹೆಚ್ಚು ಲಾಭ. ಇಂದು ಆರಂಭದಲ್ಲಿ ಒಂದು ಸಾರ್ವತ್ರಿಕ ಅಭಿಪ್ರಾಯ ರೂಪಿಸಲಾಗುತ್ತದೆ. ನಂತರ ನಮ್ಮ ಜೀವನವನ್ನು ವ್ಯಾವಹಾರಿಕ ಜಗತ್ತು ನಿರ್ದೇಶಿಸುತ್ತದೆ. ಇದು ಎಲ್ಲ ವಿಚಾರಗಳಿಗೂ ಅನ್ವಯವಾಗುತ್ತದೆ. ಅತ್ಯಾಧುನಿಕ ಮೊಬೈಲ್‌ ಇದ್ದರೆ ಮಾತ್ರ ಮನುಷ್ಯ ಎಂದು ಪರಿಗಣಿಸುವುದು, ಸರ್ಕಾರಿ ಶಾಲೆಗಳಲ್ಲಿ ಓದಿದರೆ ಉದ್ಧಾರ ಆಗುವ ಸಾಧ್ಯತೆ ಕಡಿಮೆ ಎನ್ನುವುದು, ನಿರ್ದಿಷ್ಟ ಖಾಸಗಿ ಶಾಲೆಗೆ ಹೋದರೆ ಒಳ್ಳೆಯದಾಗುತ್ತದೆ ಎಂಬುದೆಲ್ಲ ಅಭಿಪ್ರಾಯ ರೂಪಿಸುವುದಕ್ಕೆ ಉದಾಹರಣೆಗಳು. ಇಂತಹ ಅಭಿಪ್ರಾಯಗಳನ್ನು ಸಾರ್ವತ್ರಿಕವಾಗಿ ಸೃಷ್ಟಿಸಲಾಗುತ್ತದೆ. ನಂತರ ಅದನ್ನು ಬಳಸಿ ವ್ಯವಹಾರ ನಡೆಸಲಾಗುತ್ತದೆ.

ಖಾಸಗಿ ಶಾಲೆಯಲ್ಲಿ ಒಂದು ಮಗು ನೂರಕ್ಕೆ ತೊಂಬತ್ತೊಂಬತ್ತು ಅಂಕ ಪಡೆದರೆ ಅದರಿಂದ ಮಗುವಿನ ಉದ್ಧಾರ ಆಗುತ್ತದೆ ಎನ್ನಲಾಗದು. ಆ ಮಗುವಿನ ಫೋಟೊ ಬಳಸಿ, ಅದನ್ನು ಶಾಲೆ ಎದುರು ಹಾಕಿ, ಇನ್ನಷ್ಟು ಮಕ್ಕಳು ಲಕ್ಷಾಂತರ ಶುಲ್ಕ ಪಾವತಿಸಿ ಆ ಶಾಲೆಗೆ ಬರುವಂತೆ ಮಾಡಲಾಗುತ್ತದೆ. ಇದೊಂದು ಜಾಲ. ಇಂತಹ ಪರಿಸ್ಥಿತಿ ನಿರ್ಮಾಣ ಆಗಿರುವುದು ನನ್ನಲ್ಲಿ ಬೇಸರ ತರಿಸಿತು. ಆ ಬೇಸರದ, ವಿಷಾದದ ಕಾರಣದಿಂದಾಗಿ ಈ ಸಿನಿಮಾ ಕಥೆ ಹುಟ್ಟಿತು.

ನಾವಂತೂ ಕಷ್ಟಪಟ್ಟೆವು, ನಮ್ಮ ಮಕ್ಕಳಾದರೂ ಸುಖವಾಗಿರಲಿ ಎಂದು ಮಧ್ಯಮ ವರ್ಗದವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಮಧ್ಯಮ ವರ್ಗದವರು ಇಂದು ಜೀವನ ನಡೆಸುತ್ತಿರುವುದೇ ತಮ್ಮ ಮಕ್ಕಳನ್ನು ಓದಿಸಲು ಎಂಬಂತೆ ಆಗಿಬಿಟ್ಟಿದೆ. ಇವನ್ನೆಲ್ಲ ಸಿನಿಮಾ ರೂಪದಲ್ಲಿ ಹೇಳಬಹುದಲ್ಲ ಎಂದು ಅನಿಸಿತು.

* ಈ ಕಥೆಯ ನಾಯಕನನ್ನಾಗಿ ಜಗ್ಗೇಶ್ ಅವರನ್ನು ಆಯ್ಕೆ ಮಾಡಿಕೊಳ್ಳಲು ಕಾರಣ ಏನು?
ಈ ಎಲ್ಲ ವಿಚಾರಗಳನ್ನು ಗಂಭೀರವಾಗಿ ಹೇಳಿದರೆ ಸಿನಿಮಾ ಜನರನ್ನು ತಲುಪುವುದಿಲ್ಲ. ಸಿನಿಮಾ ವಿಚಾರ ಗಂಭೀರವಾಗಿದ್ದರೂ, ಅದನ್ನು ಹಾಸ್ಯದ ಲೇಪದ ಜೊತೆ ಹೇಳಬೇಕು. ಹಾಗೆ ಹೇಳಲು ಸೂಕ್ತ ವ್ಯಕ್ತಿ ಜಗ್ಗೇಶ್. ಅವರು ಒಬ್ಬ ಅದ್ಭುತ ನಟ. ಅವರಿಗೆ ನಾವು ‘ನವರಸ ನಾಯಕ’ ಎಂದು ಹೆಸರು ನೀಡಿದ್ದರೂ, ಬಳಸಿಕೊಂಡಿದ್ದು ಅವರಲ್ಲಿನ ‘ಹಾಸ್ಯರಸ’ವನ್ನು ಮಾತ್ರ.

ಜಗ್ಗೇಶ್ ಈಚಿನ ದಿನಗಳಲ್ಲಿ ಟಿ.ವಿ. ಶೋಗಳಲ್ಲಿ ಭಾಗವಹಿಸಿ ಕೆಲವು ಕಿವಿಮಾತುಗಳನ್ನು ಹೇಳುತ್ತಿದ್ದಾರೆ. ಅವರು ಹೇಳುವ ರೀತಿ ಬಹಳ ಪರಿಣಾಮಕಾರಿ ಆಗಿರುತ್ತದೆ. ಅವರು ಹೇಳಿದ್ದನ್ನು ಜನ ಆಲಿಸುತ್ತಿದ್ದಾರೆ. ಜಗ್ಗೇಶ್ ಅವರ ಹಳೆಯ ಇಮೇಜ್‌ ಹಾಗೂ ಈಗ ಅವರಿಗೆ ಪ್ರಾಪ್ತಿಯಾಗಿರುವ ಅಣ್ಣನಂತಹ ಇಮೇಜ್‌ನ ಮಿಶ್ರಣ ನಮ್ಮ ಸಿನಿಮಾಕ್ಕೆ ಸೂಕ್ತವಾಗುತ್ತದೆ. ಒಂದಿಷ್ಟು ಉಡಾಫೆ, ಒಂದಿಷ್ಟು ತಮಾಷೆ, ಜವಾಬ್ದಾರಿಯನ್ನು ವಹಿಸಿಕೊಳ್ಳುವುದು ಇವೆಲ್ಲ ಇರುವ ಪಾತ್ರವನ್ನು ಅವರು ನಿಭಾಯಿಸುತ್ತಾರೆ.

* ಇಷ್ಟು ಗಂಭೀರ ವಿಚಾರವನ್ನು ಜನ ಸ್ವೀಕರಿಸುತ್ತಾರೆ ಎನ್ನುವ ವಿಶ್ವಾಸ ಇದೆಯಾ?
ಖಂಡಿತ ಇದೆ. ನಾವು ಇದನ್ನು ಬೋರು ಹೊಡೆಸುವ ರೀತಿಯಲ್ಲಿ ಹೇಳುವುದಿಲ್ಲ. ಸಿನಿಮಾದ ಶೇಕಡ 70ರಷ್ಟು ಭಾಗ ಹಾಸ್ಯಮಯವಾಗಿರುತ್ತದೆ. ಕೊನೆಯ ಶೇಕಡ 30ರಷ್ಟು ಭಾಗ ಗಂಭೀರವಾಗಿರುತ್ತದೆ. ನಾನು ಹಲವರಿಗೆ ಇದರ ಕಥೆ ಹೇಳಿದ್ದೇನೆ. ಎಲ್ಲರೂ ಇದು ತಮ್ಮ ಮನೆಯ ಕಥೆ ಎಂದು ಪ್ರತಿಕ್ರಿಯಿಸಿದ್ದಾರೆ. ಎಲ್ಲರೂ ಇದನ್ನು ತಮ್ಮದಾಗಿಸಿಕೊಳ್ಳುತ್ತಾರೆ.

ಹಾಗೆಯೇ ಸಿನಿಮಾದಲ್ಲಿ ಒಂದು ಉತ್ತಮ ಸಂದೇಶ ಇದೆ. ಸಂದೇಶ ನೀಡಿ ಕ್ರಾಂತಿ ಮಾಡುವ ಭ್ರಮೆ ಇಲ್ಲ. ಆದರೆ ಚಿಂತನೆಗೆ ಹಚ್ಚುವ ಭರವಸೆಯಂತೂ ನಮ್ಮಲ್ಲಿ ಇದೆ. ವೀಕ್ಷಕರು ನಕ್ಕು, ನಂತರ ಅದರಲ್ಲಿನ ಸಂದೇಶದ ಬಗ್ಗೆ ಆಲೋಚನೆ ಮಾಡಲಿದ್ದಾರೆ. ನಮ್ಮ ನಿರೂಪಣಾ ತಂತ್ರ ಯಶಸ್ಸು ಕಾಣುತ್ತದೆ ಎಂಬ ಭರವಸೆ ಇದೆ.

* ಗಂಭೀರ ವಿಚಾರವನ್ನು ಹಾಸ್ಯದ ಲೇಪದ ಜೊತೆ ನೀಡಿದರೆ ಜನ ನೋಡುತ್ತಾರೆ ಅಂತ ಅನಿಸಿದ್ದು ಏಕೆ?
ಹಾಗೆ ನೀಡಿದಾಗ ಜನ ಸಿನಿಮಾ ನೋಡುತ್ತಾರೆ ಎನ್ನಲು ಆಧಾರ ಇಲ್ಲ. ಆದರೆ ಸಿನಿಮಾ ಎಂಬುದು ಮನರಂಜನೆಗೆ ಇರುವ ಮಾಧ್ಯಮ. ಸಂದೇಶ ಪಡೆಯಲು ಸಿನಿಮಾ ನೋಡುವುದಿಲ್ಲ. ಹಾಸ್ಯವೊಂದೇ ಮನರಂಜನೆ ಅಲ್ಲ. ಒಳ್ಳೆಯ ಸಸ್ಪೆನ್ಸ್‌ ಕಥೆ ಕೂಡ ಮನಸ್ಸನ್ನು ರಂಜಿಸುತ್ತದೆ.

ಹೊಡಿ–ಬಡಿ ಸಿನಿಮಾಗಳನ್ನು ಮಾಸ್‌ ವೀಕ್ಷಕರು, ಸೂಕ್ಷ್ಮ ವಿಚಾರಗಳನ್ನು ಕ್ಲಾಸ್‌ ವೀಕ್ಷಕರು ಇಷ್ಟಪಡುತ್ತಾರೆ ಎಂಬ ನಂಬಿಕೆ ಇದೆ. ಕ್ಲಾಸ್‌ ಹಾಗೂ ಮಾಸ್‌ ವೀಕ್ಷಕರಿಬ್ಬರೂ ಇಷ್ಟಪಡುವುದು ಹಾಸ್ಯವನ್ನು. ಜಗ್ಗೇಶ್ ಅವರನ್ನು ಇಷ್ಟಪಡುವ ಕ್ಲಾಸ್‌ ವೀಕ್ಷಕರ ಸಂಖ್ಯೆ ದೊಡ್ಡದಿದೆ. ಜಗ್ಗೇಶ್ ಅವರ ಇಮೇಜ್, ಒಂಚೂರು ಹಾಸ್ಯ, ಒಂದಿಷ್ಟು ವಿಚಾರಗಳು ಇವೆಲ್ಲ ಒಳ್ಳೆಯ ಕಾಂಬಿನೇಷನ್. ಈ ಸಿನಿಮಾ ಮೂಲಕ ನಾವು ಒಂದು ಸೃಜನಶೀಲ ಪ್ರಯತ್ನವನ್ನು ಜನರ ಮುಂದಿಡುತ್ತಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT