ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನಿರೀಕ್ಷಿತ’ ಚಿತ್ರದ ನಿರ್ದೇಶಕ ನಾಗೇಶ್‌ ಬಾಬ ಇನ್ನಿಲ್ಲ

Last Updated 6 ಅಕ್ಟೋಬರ್ 2020, 8:02 IST
ಅಕ್ಷರ ಗಾತ್ರ

ಹಿರಿಯ ಚಿತ್ರನಿರ್ದೇಶಕ ನಾಗೇಶ್ ಬಾಬ (82)ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರಬೆಳಿಗ್ಗೆ ನಿಧನಹೊಂದಿದ್ದಾರೆ.

ಅವರಿಗೆ ಪತ್ನಿ ಶ್ಯಾಮಲಾ ಹಾಗೂ ಮೂವರು ಮಕ್ಕಳು ಇದ್ದಾರೆ.ನಿರ್ದೇಶನ, ಸಂಭಾಷಣೆ ರಚನೆ, ಸಿನಿಮಾ ನಿರ್ಮಾಣ ಹೀಗೆ ಹಲವು ವಿಭಾಗಗಳಲ್ಲಿ ದುಡಿದಿರುವ ಬಾಬಹಲವು ವರ್ಷಗಳ ಕಾಲ ಮದರಾಸಿನಲ್ಲಿದ್ದ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸೂಪರಿಂಟೆಂಡ್ ಆಗಿ ಕಾರ್ಯನಿರ್ವಹಿದ್ದರು. ಆಗೆಲ್ಲಾ ತಮ್ಮ ಶಿಫಾರಸು ಬಳಸಿಕನ್ನಡ ನಿರ್ಮಾಪಕರು, ನಿರ್ದೇಶಕರಿಗೆ ಕಚ್ಛಾ ಫಿಲ್ಮ್ ದೊರಕಿಸಿಕೊಡುವಲ್ಲಿ ನೆರವಾಗುತ್ತಿದ್ದರು.

ಮಂಡ್ಯ ಜಿಲ್ಲೆ ಬೆಳಕವಾಡಿಯಲ್ಲಿನ ಜನಿಸಿದ ಇವರು, ಬೆಂಗಳೂರಿನಲ್ಲಿ ಬಿಎಸ್ಸಿ ಪದವಿ ಮುಗಿಸಿದ ನಂತರಚಿತ್ರರಂಗದಲ್ಲಿ ಕೆಲಸ ಮಾಡುವ ಇರಾದೆಯಿಂದ 1956ರಲ್ಲಿ ಮದರಾಸಿಗೆ ಪ್ರಯಾಣ ಬೆಳೆಸಿದರು. ಆರ್.ನಾಗೇಂದ್ರರಾವ್ ನಿರ್ದೇಶನದ ‘ಪ್ರೇಮದ ಪುತ್ರಿ’ (1957) ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ‘ಬೆಟ್ಟದ ಕಳ್ಳ’, ‘ಪ್ರತಿಮಾ’ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಮತ್ತು ‘ಕೋಟಿ ಚೆನ್ನಯ’ ತುಳು ಚಿತ್ರಕ್ಕೆ ತಾಂತ್ರಿಕ ನಿರ್ದೇಶಕರಾಗಿ ದುಡಿದಿದ್ದಾರೆ.

‘ತೂಗುದೀಪ’, ‘ನನ್ನ ಕರ್ತವ್ಯ’ ಚಿತ್ರಗಳಿಗೆ ಸಂಭಾಷಣೆಯನ್ನೂ ರಚಿಸಿದ್ದಾರೆ. ‘ಅನಿರೀಕ್ಷಿತ’ (1970) ಅವರು ನಿರ್ಮಿಸಿ, ನಿರ್ದೇಶಿಸಿದ ಸಿನಿಮಾ. ಕೃಷ್ಣಮೂರ್ತಿ ಪುರಾಣಿಕರ ‘ವಸುಂಧರೆ’ ಕೃತಿ ಆಧರಿಸಿದ ಪ್ರಯೋಗವಿದು. ಚಿತ್ರಕ್ಕೆ ವಿಜಯಭಾಸ್ಕರ್ ಸಂಯೋಜಿಸಿದ ಎರಡು ಟ್ಯೂನ್‌ಗಳಿಗೆ ಪ್ರೇಮಕವಿ ಕೆ.ಎಸ್. ನರಸಿಂಹಸ್ವಾಮಿ ಅವರು ಮದರಾಸಿಗೆ ತೆರಳಿ ಗೀತೆ ರಚಿಸಿಕೊಟ್ಟಿದ್ದು ವಿಶೇಷ. ಈ ಸಿನಿಮಾ ತೆರೆಕಂಡು ಇಲ್ಲಿಗೆ ಐವತ್ತು ವರ್ಷ.

ಸ್ಥಿರಚಿತ್ರ ಛಾಯಾಗ್ರಹಣ ಅನನ್ಯ ಕೊಡುಗೆ

ಕನ್ನಡ ಸಿನಿಮಾ ಸ್ಥಿರಚಿತ್ರ ಛಾಯಾಗ್ರಹಣ ವಿಭಾಗದಲ್ಲಿ ನಾಗೇಶ್ ಬಾಬ ಸ್ಮರಣೀಯ ಕೊಡುಗೆ ನೀಡಿದ್ದಾರೆ.ಮದರಾಸಿನಲ್ಲಿ ವೆಂಕಟೇಶ್ವರನ್ ಅವರೊಡಗೂಡಿ ‘ತ್ರೀ ಸ್ಟಾರ್ಸ್’ ಸ್ಥಿರಚಿತ್ರ ಛಾಯಾಗ್ರಹಣ ಸಂಸ್ಥೆಯನ್ನು 1964ರಲ್ಲಿಆರಂಭಿಸಿದ್ದರು. ಬೆಂಗಳೂರಿಗೆ ಮರಳಿದ ನಂತರ ಗಾಂಧಿನಗರದ 6ನೇ ಕ್ರಾಸ್‌ನಲ್ಲಿ ‘ಪ್ರಗತಿ’ ಸ್ಟುಡಿಯೋವನ್ನು 1972ರಲ್ಲಿತೆರೆದರು. ಇವರ ಚಿಕ್ಕಪ್ಪನ ಮಗ ಅಶ್ವತ್ಥ ನಾರಾಯಣ ಅವರು ನಾಗೇಶ್ ಬಾಬರಿಗೆ ಸಾಥ್‌ ನೀಡಿದರು. ಮುಂದೆ ‘ಪ್ರಗತಿ’ ಸ್ಟುಡಿಯೋಸುಮಾರು 350ಕ್ಕೂ ಹೆಚ್ಚು ಸಿನಿಮಾಗಳಿಗೆ ಸ್ಥಿರಚಿತ್ರ ಛಾಯಾಗ್ರಾಹಣ ನೀಡುವ ಮೂಲಕಕನ್ನಡ ಚಿತ್ರರಂಗದ ಇತಿಹಾಸದಲ್ಲಿ ತನ್ನದೇ ಆದಸ್ಥಾನ ಪಡೆಯಿತು. ಜತೆಗೆ ಚಿತ್ರನಿರ್ದೇಶಕರು, ನಟ-ನಟಿಯರು ಒಂದೆಡೆ ಸೇರಿ ಚರ್ಚಿಸಲು ವೇದಿಕೆಯನ್ನು ಒದಗಿಸಿತು.2005ರಲ್ಲಿ ‘ಪ್ರಗತಿ’ ಸ್ಟುಡಿಯೋ ಕಾರ್ಯ ಸ್ಥಗಿತಗೊಳಿಸಿದ ನಂತರ ನಾಗೇಶ್‌ ಚಿತ್ರರಂಗದ ಚಟುವಟಿಕೆಗಳಿಂದ ಬಹುತೇಕ ದೂರವೇ ಉಳಿದಿದ್ದರು.

ಅದ್ವೈತ ಪ್ರತಿಪಾದಕ ನಿಸರ್ಗದತ್ತ ಮಹಾರಾಜ್ ಅವರ ಕುರಿತು ನಾಗೇಶ್ ಬಾಬ ಅವರು 2009ರಲ್ಲಿತಯಾರಿಸಿದ ‘ತತ್ವಮಸಿ – ಯು ಆರ್ ದಟ್’ 87 ನಿಮಿಷಗಳ ಇಂಗ್ಲಿಷ್ ಸಾಕ್ಷ್ಯಚಿತ್ರ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪ್ರದರ್ಶನಗೊಂಡಿದೆ. ಈ ಸಾಕ್ಷ್ಯಚಿತ್ರಮರಾಠಿಯಲ್ಲೂ (ನಿರ್ಗುಣಚೆ ಭೇದಿ) ತಯಾರಾಗಿದೆ. ಬಹುಮುಖ ಪ್ರತಿಭೆಯಾಗಿದ್ದನಾಗೇಶ್ ಬಾಬ ಅವರ ಬದುಕು ಸಾಧನೆ ಕುರಿತುಜೆಮಿನಿ ಸ್ಟುಡಿಯೋ ಮಾಲೀಕ ಎಸ್.ಎಸ್. ವಾಸನ್ ಕೃತಿಯನ್ನೂ ರಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT