ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಬೆಣ್ಣೆ ಮಾತು ಆಡಿದರೆ ಪ್ರಯೋಜನವಿಲ್ಲ: ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು

Last Updated 3 ಮಾರ್ಚ್ 2023, 13:33 IST
ಅಕ್ಷರ ಗಾತ್ರ

ಬೆಂಗಳೂರು: ಚಿತ್ರರಂಗಕ್ಕೆ ನೀಡುವ ಸೌಲಭ್ಯಗಳ ಕುರಿತು ಸರ್ಕಾರಗಳು ಕೇವಲ ಬೆಣ್ಣೆ ಮಾತು ಆಡಿದರೆ ಪ್ರಯೋಜನವಿಲ್ಲ. ಸೌಲಭ್ಯ ನೀಡಲು ಕೆಲಸ ಮಾಡಬೇಕು ಎಂದು ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಆಗ್ರಹಿಸಿದರು.

ಕನ್ನಡದ ಪ್ರಥಮ ವಾಕ್ಚಿತ್ರ ಸತಿ ಸುಲೋಚನ ಬಿಡುಗಡೆಯಾದ ದಿನದ ಹಿನ್ನೆಲೆಯಲ್ಲಿ ಶುಕ್ರವಾರ ನಗರದ ಕಲಾವಿದರ ಸಂಘದಲ್ಲಿ ‘ವಿಶ್ವ ಕನ್ನಡ ಸಿನಿಮಾ ದಿನ ಸಂಭ್ರಮಾಚರಣೆ’ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಚಿತ್ರರಂಗಕ್ಕೆ ಬೇಕಾದ ಸೌಲಭ್ಯಗಳ ವಿಚಾರದಲ್ಲಿ ಕಳೆದ ಹಲವು ವರ್ಷಗಳಿಂದ ಹಲವು ಮುಖ್ಯಮಂತ್ರಿಗಳು ಭರವಸೆ ನೀಡಿ ಹೋಗಿದ್ದಾರೆ. ಆದರೆ ಸೌಲಭ್ಯಗಳು ದೊರೆತಿಲ್ಲ. ಚಿತ್ರನಗರಿ ವಿಚಾರದಲ್ಲಿ 1970ರಲ್ಲಿ ದೇವರಾಜ ಅರಸು ಅವರು 500 ಎಕರೆ ಕೊಟ್ಟರು. ಅದು ಅಲ್ಲಿಗೇ ಮುಚ್ಚಿ ಹೋಯಿತು. ಇನ್ನೊಬ್ಬರು ಮೈಸೂರಿನಲ್ಲಿ, ಮತ್ತೊಬ್ಬರು ರಾಮನಗರದಲ್ಲಿ ಚಿತ್ರನಗರಿ ನಿರ್ಮಾಣ ಎಂದರು. ಆದರೆ ಇನ್ನೂ ಇದು ನಿರ್ಮಾಣವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನಾವು ಹೊಗಳುಭಟರುಗಳಾಗದೆ ಕ್ರಾಂತಿಕಾರಿಗಳಾಗಬೇಕು. ಸೌಲಭ್ಯಗಳನ್ನು ಏಕೆ ನೀಡುತ್ತಿಲ್ಲ ಎಂದು ಕೇಳಬೇಕು. ಕೇಳುವ ಅಧಿಕಾರ, ಹಕ್ಕು ನಮಗಿದೆ. ಇನ್ನೆರಡು ವರ್ಷ ಕಳೆದರೆ ಕನ್ನಡ ಸಿನಿಮಾಗಳು ಕರ್ನಾಟಕದಲ್ಲೇ ತೆರೆ ಕಾಣಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಲಿದೆ’ ಎಂದು ಅವರು ಹೇಳಿದರು.

‘ಏಕಪರದೆ ಚಿತ್ರಮಂದಿರಗಳಿಲ್ಲದೆ ಕನ್ನಡ ಚಿತ್ರರಂಗ ಬೆಳೆಸುವುದು ಬಹಳ ಕಷ್ಟವಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಪರಭಾಷಾ ಚಿತ್ರಗಳು ರಾರಾಜಿಸಲಿವೆ. ತಮಿಳುನಾಡಿನಲ್ಲಿ ಚಿತ್ರರಂಗ ಕರೆಕೊಟ್ಟರೆ ಇಡೀ ಸರ್ಕಾರ ಅವರ ಮನೆ ಬಾಗಿಲ ಬಳಿ ಇರುತ್ತದೆ. ನಾವು ನಮ್ಮಲ್ಲೇ ಪಕ್ಷದ ಹೆಸರಲ್ಲೇ ವಿಭಜನೆಯಾಗಿದ್ದೇವೆ. ಇದರಿಂದ ಸಂಕಷ್ಟವನ್ನೂ ಅನುಭವಿಸುತ್ತಿದ್ದೇವೆ’ ಎಂದರು.

‘ನಾವು ಇಂದು ‘ಕೆ.ಜಿ.ಎಫ್‌.’, ‘ಕಾಂತಾರ’ ಎಂಬ ಎರಡು ಚಿತ್ರಗಳನ್ನಷ್ಟೇ ಹೇಳುತ್ತಿದ್ದೇವೆ. ಸುಮಾರು 400 ಸಿನಿಮಾಗಳು ಬೆಳಗ್ಗೆ ಪ್ರದರ್ಶನ ಕಂಡು ಮಧ್ಯಾಹ್ನ ಚಿತ್ರಮಂದಿರಗಳಿಂದ ಎತ್ತಂಗಡಿಯಾಗುತ್ತಿವೆ. ಜನರು ನಮ್ಮ ಕೈಯಿಂದ ತಪ್ಪಿ ಹೋಗುತ್ತಿದ್ದಾರೆ. ಅವರಿಗೆ ‘ಬಾಹುಬಲಿ’, ‘ಅವತಾರ್‌’, ‘ಪಠಾಣ್‌’ನಂತ ಸಿನಿಮಾ ಬೇಕು. ಇಲ್ಲಿ ನಮ್ಮತನ ಎಲ್ಲಿದೆ. ಕನ್ನಡತನವನ್ನು ಹೇಗೆ ಬೆಳೆಸಬೇಕು ಎನ್ನುವುದನ್ನು ಒಗ್ಗಟ್ಟಾಗಿ ಚರ್ಚಿಸಬೇಕು’ ಎಂದು ಕರೆ ನೀಡಿದರು.

ಚಿತ್ರೋತ್ಸವ; ಸರ್ಕಾರಿ ಆದೇಶವಾಗಲಿ: ‘ಪ್ರತೀ ವರ್ಷ ಮಾರ್ಚ್‌ 3ರಿಂದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ ಎಂದು ಕಳೆದ ಬಾರಿ ಮುಖ್ಯಮಂತ್ರಿ ಘೋಷಿಸಿದ್ದರು. ಆದರೆ ಯಾವ ಕಾರಣಕ್ಕೆ ಇದು ಈ ವರ್ಷ ಸಾಧ್ಯವಾಗಲಿಲ್ಲ ಎಂದು ನನಗೆ ತಿಳಿದಿಲ್ಲ. ಅಕಾಡೆಮಿಯ ಹಿಂದಿನ ಅಧ್ಯಕ್ಷರು ಅದನ್ನು ಸರ್ಕಾರಿ ಆದೇಶ(ಜಿ.ಒ) ಮಾಡಿಸಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವುದು ನನ್ನ ಅನಿಸಿಕೆ. ಮುಂದಿನ ವರ್ಷದಿಂದ ಮಾರ್ಚ್‌ 3ರಿಂದಲೇ ಚಿತ್ರೋತ್ಸವ ನಡೆಯಬೇಕು ಎಂದು ಸರ್ಕಾರಿ ಆದೇಶ ಮಾಡಿಸಿಕೊಂಡು, ವಿಶ್ವ ಕನ್ನಡ ಸಿನಿಮಾ ದಿನವನ್ನು ಸಂಭ್ರಮಿಸಬೇಕು’ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್‌ ಕಶ್ಯಪ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT