ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗಿದೆ ನೋಡಿ ಉಪ್ಪಿ ನಿರ್ದೇಶನದ ಹೊಸ ಸಿನಿಮಾ ಶೀರ್ಷಿಕೆ

Last Updated 11 ಮಾರ್ಚ್ 2022, 8:27 IST
ಅಕ್ಷರ ಗಾತ್ರ

ಚಂದನವನದಲ್ಲಿ ನಟನಾಗಿ ಮಿಂಚುವುದಕ್ಕೂ ಮುನ್ನ ನಿರ್ದೇಶಕರಾಗಿ, ತಮ್ಮದೇ ಶೈಲಿಯ ನಿರ್ದೇಶನದಿಂದ ಛಾಪು ಮೂಡಿಸಿದವರು ನಟ ಉಪೇಂದ್ರ. ‘ಓಂ’, ‘ಶ್‌’, ‘ಉಪೇಂದ್ರ’, ‘ಸೂಪರ್‌’ ಹೀಗೆ ಹಲವು ಹಿಟ್‌ ಚಿತ್ರಗಳನ್ನು ನಿರ್ದೇಶಿಸಿದ್ದ ಉಪೇಂದ್ರ ಅವರು ಇದೀಗ ಮತ್ತೆ ಆ್ಯಕ್ಷನ್‌ ಕಟ್ ಹೇಳುತ್ತಿದ್ದಾರೆ. ತಮ್ಮ ನಿರ್ದೇಶನದ ಹೊಸ ಸಿನಿಮಾದ ಶೀರ್ಷಿಕೆ ಹಾಗೂ ಪೋಸ್ಟರ್‌ ಅನ್ನು ಶುಕ್ರವಾರ ಉಪ್ಪಿ ಬಿಡುಗಡೆಗೊಳಿಸಿದ್ದಾರೆ.

‘ಲಾಕ್‌ಡೌನ್‌ ಸಂದರ್ಭದಲ್ಲಿ ಹಲವು ಕಥೆಗಳನ್ನು ಸಿದ್ಧಪಡಿಸಿದ್ದೇನೆ. ನನಗೇ ಥ್ರಿಲ್‌ ಆದ ಒಂದು ವಿಷಯ ದೊರಕಿದೆ. ಶೀಘ್ರದಲ್ಲೇ ನನ್ನ ನಿರ್ದೇಶನದ ಹೊಸ ಚಿತ್ರ ಘೋಷಿಸುತ್ತೇನೆ’ ಎಂದು ಕೆಲ ತಿಂಗಳ ಹಿಂದಷ್ಟೇ ಉಪೇಂದ್ರ ಹೇಳಿದ್ದರು.

ಚಿತ್ರಕ್ಕೆ ವಿಭಿನ್ನವಾದ ಶೀರ್ಷಿಕೆ, ಅಡಿ ಬರಹ ನೀಡುವುದು ಉಪೇಂದ್ರ ಅವರ ಶೈಲಿ. ಅದರಂತೇ ತಮ್ಮ ಹೊಸ ಸಿನಿಮಾಗೂ ಕುದುರೆಯ ಲಾಳಾಕೃತಿಯಲ್ಲಿ ಇಂಗ್ಲಿಷ್‌ನ ‘ಯು’(U) ಶೀರ್ಷಿಕೆ ಇಟ್ಟು, ಬೆಂಕಿಯಲ್ಲಿ ಉದ್ದ ನಾಮ ಎಳೆದಿದ್ದಾರೆ. ಚಿತ್ರದ ಅಡಿ ಬರಹದ ಪ್ರತಿ ಶಬ್ದವನ್ನೂ ಏಳು ಭಾಷೆಯಲ್ಲಿ ಬರೆದಿದ್ದಾರೆ. ‘ಇವನು ಹೇಗೆ ಬರುತ್ತಾನೆ ಎಂದು ತಿಳಿದಿಲ್ಲ, ಆದರೆ ನಿಶ್ಚಿತವಾಗಿಯೂ ಬರುತ್ತಾನೆ’ ಎಂದು ಅಡಿಬರಹದಲ್ಲಿ ಉಲ್ಲೇಖಿಸಲಾಗಿದೆ.

ಶೀರ್ಷಿಕೆಗೆ ಉಪೇಂದ್ರ ಅಭಿಮಾನಿಗಳು ಫಿದಾ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ‘ಇಂಥ ಸಿನಿಮಾಗಾಗಿಯೇ ಕಾಯುತ್ತಿದ್ದೇವೆ’ ಎಂದು ಹಲವರು ಹೇಳಿದ್ದಾರೆ.

ಈ ಹೊಸ ಸಿನಿಮಾವನ್ನು ಜಿ.ಮನೋಹರನ್‌ ಹಾಗೂ ಶ್ರೀಕಾಂತ್‌ ಕೆ.ಪಿ ಅವರು ನಿರ್ಮಾಣ ಮಾಡುತ್ತಿದ್ದಾರೆ.‘ಈ ಚಿತ್ರರಂಗದಲ್ಲಿ ‘ಉಪೇಂದ್ರ’ ಅನ್ನೊ ಕಥೆ ಮಾಡಿ, ಕಳೆದ 33 ವರ್ಷದಲ್ಲಿ ಚಿತ್ರಕಥೆ ಬರೆದು, ಸಂಭಾಷಣೆ ಹೇಳಿಸಿ, ಶಿಳ್ಳೆ ಚಪ್ಪಾಳೆಯಲ್ಲೇ ನಿರ್ದೇಶನ ಮಾಡಿದವರು ನೀವು. ಎಲ್ಲಾ ಅಭಿಮಾನಿ ಪ್ರಜಾ ಪ್ರಭುಗಳಿಗೆ ಈ ಚಿತ್ರ ಅರ್ಪಿಸುತ್ತಿದ್ದೇನೆ’ ಎಂದು ಉಪೇಂದ್ರ ಟ್ವೀಟ್‌ ಮೂಲಕ ಹೇಳಿದ್ದಾರೆ. ಪ್ರಸ್ತುತ ಕೆ.ಮಾದೇಶ್‌ ನಿರ್ದೇಶನದ ‘ಲಗಾಮ್‌’ ಚಿತ್ರ ಹಾಗೂ ಆರ್‌.ಚಂದ್ರು ಅವರ ನಿರ್ದೇಶನದ ‘ಕಬ್ಜ’ ಚಿತ್ರದ ಚಿತ್ರೀಕರಣದಲ್ಲಿ ಉಪೇಂದ್ರ ತೊಡಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT