ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಣ್ಣಾ.. ಊಟಕ್ಕೆ ಹೋಗಿ ಎಂದರೂ ಕದಲುತ್ತಿರಲಿಲ್ಲ ಅಂಬಿ’: ನಿರ್ದೇಶಕ ನಾಗಣ್ಣ

ಕುರುಕ್ಷೇತ್ರ ಶೂಟಿಂಗ್‌ ಸಮಯದ ಸಮೃದ್ಧ ನೆನಪುಗಳು
Last Updated 13 ಆಗಸ್ಟ್ 2019, 11:00 IST
ಅಕ್ಷರ ಗಾತ್ರ

ಕನ್ನಡಕ್ಕೆ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ನಂತಹ ಐತಿಹಾಸಿಕ ಸಿನಿಮಾ ಕೊಟ್ಟ ಹಿರಿಮೆ ನಿರ್ದೇಶಕ ನಾಗಣ್ಣ ಅವರದು. ‘ಮುನಿರತ್ನ ಕುರುಕ್ಷೇತ್ರ’ ಚಿತ್ರದ ಮೂಲಕ ಮತ್ತೆ ಐತಿಹಾಸಿಕ ರಸದೌತಣವನ್ನುಆಗಸ್ಟ್‌ 9ರ ವರಮಹಾಲಕ್ಷ್ಮಿ ಹಬ್ಬದಂದುಉಣಬಡಿಸಿದ್ದಾರೆ. ಚಿತ್ರದ ಶೂಟಿಂಗ್‌ನ ಸಮೃದ್ಧ ನೆನಪುಗಳಲ್ಲಿ ಕೆಲವನ್ನು ಹೆಕ್ಕಿ ಕೊಟ್ಟಿದ್ದಾರೆ. ಅದನ್ನು ಅವರ ಮಾತುಗಳಲ್ಲೇ ಕೇಳಿ.

**

‘ಮುನಿರತ್ನ ಕುರುಕ್ಷೇತ್ರ’ ನನ್ನ ವೃತ್ತಿಬದುಕಿನ ಅಪರೂಪದ ಚಿತ್ರ. ನನ್ನ ಹಿಂದಿನ ಯಾವ ಸಿನಿಮಾಗಳ ಜೊತೆಗೂ ಇದರ ಹೋಲಿಕೆ ಮಾಡಲು ಆಗುವುದಿಲ್ಲ. ಕನ್ನಡ ಚಿತ್ರರಂಗದಲ್ಲಿ ಇಲ್ಲಿಯವರೆಗೂ ಮಹಾಭಾರತ ಕಥೆಯನ್ನು ಯಾರೊಬ್ಬರೂ ತೆರೆಯ ಮೇಲೆ ತಂದಿಲ್ಲ. ಈಗ ದೊಡ್ಡ ಕ್ಯಾನ್ವಾಸ್‌ ಮೇಲೆ ಕುರುಕ್ಷೇತ್ರ 2D ಮತ್ತು 3D ರೂಪದಲ್ಲಿ ಅರಳುತ್ತಿದೆ. ನನಗೆ ಇದಕ್ಕಿಂತ ಖುಷಿ ಬೇರೊಂದಿಲ್ಲ.

ಕನ್ನಡ ಸಿನಿಮಾಗಳು ಈಗ ಜಗತ್ತಿನ ಗಮನ ಸೆಳೆಯುತ್ತಿವೆ. ಕುರುಕ್ಷೇತ್ರದ್ದೂ ಇದೇ ಹಾದಿಯ ಪಯಣ. ಇದು ನನ್ನ ಚಿತ್ರವಲ್ಲ. ಕನ್ನಡ ಇಂಡಸ್ಟ್ರಿಯ ಸಿನಿಮಾ. ಈಗ ಕನ್ನಡದಲ್ಲಿ ವಾರಕ್ಕೆ ಏಳೆಂಟು ಚಿತ್ರಗಳು ತೆರೆಕಾಣುತ್ತಿವೆ. ಸದ್ಯದ ಸಿನಿಮಾ ಮಾರುಕಟ್ಟೆಯ ಸ್ಥಿತಿಗತಿ ಬಗ್ಗೆ ನಾನು ಬಿಡಿಸಿ ಹೇಳಬೇಕಿಲ್ಲ. ಚಿತ್ರ ನಿರ್ಮಾಣ ಸುಲಭದ ಹಾದಿಯಲ್ಲ. ಮಾರುಕಟ್ಟೆಯ ಸ್ಥಿತಿಗತಿ ಅವಲೋಕಿಸಿದರೆ ಬಿಡುಗಡೆಯ ದಾರಿಯೂ ಸರಳವಾಗಿಲ್ಲ. ಇಂತಹ ದೊಡ್ಡ ಬಜೆಟ್‌ ಚಿತ್ರ ಮಾಡಲು ನಿರ್ಧರಿಸಿದ ನಿರ್ಮಾಪಕ ಮುನಿರತ್ನ ಅವರ ಸಾಹಸವನ್ನು ಮೆಚ್ಚಬೇಕು. ಪುರಾಣ ಕಾಲದಿಂದಲೂ ನಾವು ಮಹಾಭಾರತದ ಕಥೆ ಕೇಳುತ್ತಾ ಬಂದಿದ್ದೇವೆ. ಈ ಮಹಾಕಾವ್ಯದಲ್ಲಿ ಬರುವ ಎಲ್ಲ ಪಾತ್ರಗಳು ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿವೆ. ‘ಕುರುಕ್ಷೇತ್ರ’ ನಾಟಕ ಗ್ರಾಮೀಣ ಜಗತ್ತಿನ ಮನರಂಜನೆಯ ಜೀವಾಳ. ಇಂದಿಗೂ ಹಳ್ಳಿಗಳಲ್ಲಿ ಈ ನಾಟಕ ಪ್ರದರ್ಶನ ನಡೆಯುತ್ತಿರುತ್ತದೆ. ಅದನ್ನೇ ತೆರೆಯ ಮೇಲೆ ನೋಡುವಾಗ ಸಿಗುವ ಖುಷಿಯೇ ಬೇರೆ.‌

ನಾಟಕವೂ ಮನರಂಜನೆಯ ಒಂದು ಭಾಗ. ಜನರು ನೇರವಾಗಿ ರಂಗಸಜ್ಜಿಕೆ ಮೇಲೆ ಪಾತ್ರಧಾರಿಗಳನ್ನು ನೋಡುತ್ತಾರೆ. ನಾಟಕ ನೋಡುವಾಗಿನ ಏಕಾಗ್ರತೆ ಬೇರೆಯಾಗಿರುತ್ತದೆ. ಆದರೆ, ಸಿನಿಮಾ ಮತ್ತು ನಾಟಕದ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಹಳ್ಳಿಯ ವಾತಾವರಣದಲ್ಲಿ ನಾಟಕ ನೋಡುವ ರೀತಿಯ ಭಿನ್ನವಾಗಿರುತ್ತದೆ. ಥಿಯೇಟರ್‌ನಲ್ಲಿ ಪ್ರೇಕ್ಷಕರನ್ನು ಹಿಡಿದು ಕೂರಿಸುವುದು ನಿಜಕ್ಕೂ ಸವಾಲು. ಪರದೆ ಮೇಲೆ 3D ಕಟ್ಟಿಕೊಡುವ ರಸಾನುಭವೇ ಅನನ್ಯ.‌ ಕಾಸ್ಟ್ಯೂಮ್, ಸೆಟ್‌ ನೋಡುಗರನ್ನು ಹೊಸ ಲೋಕಕ್ಕೆ ಕರೆದೊಯ್ಯುತ್ತದೆ. ಪ್ರೇಕ್ಷಕರನ್ನು ಕುರ್ಚಿಯ ತುದಿಯ ಮೇಲೆ ಹಿಡಿದು ಕೂರಿಸುತ್ತದೆ. ಅದೊಂದು ಅದ್ಭುತ ಅನುಭವ.

ಚಿತ್ರದಲ್ಲಿ ದೊಡ್ಡ ತಾರಾಬಳಗ ಇದೆ. ಶೂಟಿಂಗ್‌ಗೂ ಮೊದಲೇ ಎಲ್ಲ ಕಲಾವಿದರ ಡೇಟನ್ನು ಹೊಂದಾಣಿಕೆ ಮಾಡಿಕೊಂಡೇ ಯುದ್ಧಭೂಮಿಗೆ ಇಳಿದೆವು. ಹಾಗಾಗಿ, ಕಲಾವಿದರನ್ನು ಸಂಭಾಳಿಸುವುದು ಸವಾಲು ಎನಿಸಲಿಲ್ಲ. ನಮಗೆ ನಿಜಕ್ಕೂ ಸವಾಲಾಗಿದ್ದು ಗ್ರಾಫಿಕ್‌ ಕೆಲಸ. ಗ್ರಾಫಿಕ್‌ ಇಲ್ಲದೆ ಪೌರಾಣಿಕ ಅಥವಾ ಐತಿಹಾಸಿಕ ಸಿನಿಮಾ ಮಾಡುವುದು ಕಷ್ಟ. ಈ ಚಿತ್ರದ ಗ್ರಾಫಿಕ್‌ ಕೆಲಸ ಒಂದು ವರ್ಷ ಕಾಲ ಹಿಡಿಯಿತು. ಪದೇ ಪದೇ ಸಾಣೆ ಹಿಡಿಯುವ ಕೆಲಸವೂ ನಡೆಯುತ್ತಿತ್ತು. ಚಿತ್ರ ಚೆನ್ನಾಗಿ ಮೂಡಿಬರಬೇಕು ಎನ್ನುವುದೇ ಇದರ ಹಿಂದಿನ ಉದ್ದೇಶವಾಗಿತ್ತು. ಹಾಗಾಗಿ, ಸಿನಿಮಾ ಬಿಡುಗಡೆಗೆ ವಿಳಂಬವಾಯಿತು.

ಈಗ ಎಲ್ಲಾ ಸವಾಲು ಎದುರಿಸಿ ತೆರೆಯ ಮೇಲೆ ಬರಲು ಚಿತ್ರ ಸಜ್ಜಾಗಿದೆ. ಇದಕ್ಕಾಗಿ ಕ್ಯಾಮೆರಾದ ಮುಂದೆ ಸಾವಿರಾರು ಜನರು ದುಡಿದಿದ್ದಾರೆ. ಅಷ್ಟೇ ಸಂಖ್ಯೆಯಲ್ಲಿ ಕ್ಯಾಮೆರಾದ ಹಿಂದೆಯೂ ಕೆಲಸ ಮಾಡಿದ್ದಾರೆ.

ನಿರ್ದೇಶಕ ನಾಗಣ್ಣ
ನಿರ್ದೇಶಕ ನಾಗಣ್ಣ

ದರ್ಶನ್‌ ವಸ್ತ್ರಾಭರಣದ ತೂಕ 40 ಕೆ.ಜಿ

‘ದುರ್ಯೋಧನ’ ಮಹಾಭಾರತ ಕಥಾನಕದ ಪ್ರಮುಖ ಪಾತ್ರ. ನಟ ದರ್ಶನ್‌ ಈ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರ ಪಾತ್ರಕ್ಕಾಗಿ ವಿಶೇಷ ಗದೆ ಮಾಡಿಸಲಾಗಿತ್ತು. ಕಿರೀಟ, ವಸ್ತ್ರಾಭರಣ ಸೇರಿದರೆ ಬರೋಬ್ಬರಿ 35 ಕೆ.ಜಿಯಿಂದ 40 ಕೆ.ಜಿ ಭಾರ ಹೊತ್ತು ದರ್ಶನ್‌ ನಟಿಸಿದ್ದಾರೆ. ಕೆಲವು ಸನ್ನಿವೇಶಗಳಲ್ಲಿ ಈ ಭಾರದಲ್ಲಿ ವ್ಯತ್ಯಾಸವೂ ಇರುತ್ತಿತ್ತು. ಪ್ರತಿಯೊಬ್ಬ ಪಾತ್ರಧಾರಿಯ ಕಿರೀಟ, ಗದೆ, ಕಾಸ್ಟ್ಯೂಮ್ ಭಿನ್ನವಾಗಿರಬೇಕು. ಆಗಷ್ಟೇ ನೋಡುಗರಿಗೂ ಅದು ರಸದೌತಣ ನೀಡಲು ಸಾಧ್ಯ. ಹಾಗಾಗಿಯೇ ಚೆನ್ನೈ, ಮುಂಬೈ, ಹೈದರಾಬಾದ್‌ನಲ್ಲಿ ಪರಿಣತರಿಂದ ಈ ಪರಿಕರಗಳನ್ನು ತಯಾರಿಸಿ ಬಳಸಲಾಗಿದೆ. ಕತ್ತಿ, ವಸ್ತ್ರಾಭರಣ, ಗದೆಗಳನ್ನು ಇಷ್ಟೇ ಗಾತ್ರ, ತೂಕ ಇರಬೇಕೆಂದು ಅಳತೆ ನೀಡಿ ಮಾಡಿಸಲಾಗಿದೆ.

ಅಂಬಿ ಊಟಕ್ಕೆ ಹೋಗುತ್ತಿರಲಿಲ್ಲ!

ಶಪಥಕ್ಕೆ ಮತ್ತೊಂದು ಹೆಸರೇ ಭೀಷ್ಮ.ಮಹಾಭಾರತದಲ್ಲಿ ಸದಾ ನೆನಪಿನಲ್ಲಿ ಉಳಿಯುವಪಾತ್ರಗಳಲ್ಲಿ ಆತನೂ ಒಬ್ಬ. ಚಿತ್ರದಲ್ಲಿ ನಟ ಅಂಬರೀಷ್‌ ಅವರದು ಭೀಷ್ಮನ ಪಾತ್ರ. ಅವರು ನೇರವಾಗಿ ಸೆಟ್‌ಗೆ ಬರುತ್ತಿದ್ದರು. ಅವರ ಪಾತ್ರದ ಮೇಕಪ್‌ಗೆ ಎರಡೂವರೆ ಗಂಟೆ ಹಿಡಿಯುತ್ತಿತ್ತು. ಅವರು ಮಧ್ಯಾಹ್ನವಾದರೂ ಊಟಕ್ಕೆ ಹೋಗುತ್ತಿರಲಿಲ್ಲ. ಆದರೆ, ಸೆಟ್‌ನಲ್ಲಿದ್ದಎಲ್ಲರನ್ನೂ ಊಟಕ್ಕೆ ಕಳುಹಿಸುತ್ತಿದ್ದರು. ‘ಅಣ್ಣಾ... ನೀವು ಊಟಕ್ಕೆ ಹೋಗಿ’ ಎಂದು ಕೋರುತ್ತಿದ್ದೆ. ‘ನಾನು ಆಮೇಲೆ ಊಟ ಮಾಡುತ್ತೇನೆ’ ಎನ್ನುವ ಉತ್ತರ ಬರುತ್ತಿತ್ತು. ಶೂಟಿಂಗ್‌ ಮುಗಿಯುವವರೆಗೂ ಅವರು ಊಟ ಮಾಡುತ್ತಿರಲಿಲ್ಲ. ದರ್ಬಾರು, ಯುದ್ಧದ ಸೀನ್‌ನಲ್ಲಿ ಅವರು ನಟಿಸಿದ್ದಾರೆ. ಅವರು ಸೆಟ್‌ನಲ್ಲಿ ಇದ್ದಾಗ ಶೂಟಿಂಗ್ ಮಾಡುವುದೇ ಗೊತ್ತಾಗುತ್ತಿರಲಿಲ್ಲ. ಹಬ್ಬದ ವಾತಾವರಣ ಮೇಳೈಸಿರುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT