‘ಬಜಾರಿ’ ಜೊತೆ ಫೇಸ್‌ ಟು ಫೇಸ್‌

ಸೋಮವಾರ, ಮಾರ್ಚ್ 18, 2019
31 °C

‘ಬಜಾರಿ’ ಜೊತೆ ಫೇಸ್‌ ಟು ಫೇಸ್‌

Published:
Updated:
Prajavani

2017ರಲ್ಲಿ ತೆರೆಗೆ ಬಂದ ‘ಹುಲಿರಾಯ’ ಚಿತ್ರದ ಸೆಕೆಂಡ್‌ ಹಾಫ್‌ನಲ್ಲಿ ಕಾಣಿಸಿಕೊಂಡಿರುವ ದಿವ್ಯಾ ಉರುಡುಗ, ತಮ್ಮ ಬಜಾರಿತನದಿಂದ ಸಿನಿಮಾ ವೀಕ್ಷಕರ ಮನಸ್ಸು ಗೆದ್ದಿದ್ದರು. ನಂತರ ತೆರೆಗೆ ಬಂದ ‘ಧ್ವಜ’ ಚಿತ್ರದಲ್ಲಿ ‘ಮೊಟ್ಟೆ ಮಹಾಲಕ್ಷ್ಮಿ’ ಪಾತ್ರದಲ್ಲಿ ಕಾಣಿಸಿಕೊಂಡರು. ಅವರ ಮೂರನೆಯ ಸಿನಿಮಾ ‘ಫೇಸ್‌ ಟು ಫೇಸ್‌’ ಶುಕ್ರವಾರ ತೆರೆಗೆ ಬರುತ್ತಿದೆ.

‘ಈವರೆಗೆ ಸಿಕ್ಕ ಪಾತ್ರಗಳಿಗಿಂತ ಬಹಳ ಭಿನ್ನವಾದ ಪಾತ್ರ ಸಿಕ್ಕಿದೆ’ ಎಂಬ ಖುಷಿಯಲ್ಲಿದ್ದ ದಿವ್ಯಾ, ‘ಸಿನಿಮಾ ಪುರವಣಿ’ಗೆ ಮಾತಿಗೆ ಸಿಕ್ಕಿದ್ದರು. ‘ಫೇಸ್‌ ಟು ಫೇಸ್‌ನಲ್ಲಿ ಸಿಕ್ಕಿರುವ ಪಾತ್ರ ಎಂಥದ್ದು’ ಎಂದು ಕೇಳಿದಾಗ, ‘ಇದರಲ್ಲಿ ನನ್ನ ಪಾತ್ರ ಏನು ಎಂಬುದನ್ನು ತೀರಾ ನಿರ್ದಿಷ್ಟವಾಗಿ ಹೇಳಲಾರೆ. ಏಕೆಂದರೆ ಅದು ಚಿತ್ರದ ಕಥೆಗೆ ನೇರವಾಗಿ ಕೂಡಿಕೊಂಡಿದೆ. ಆದರೆ ಬಹಳ ಮುಖ್ಯವಾದ, ಬಹಳ ಆಸಕ್ತಿಕರವಾದ ಪಾತ್ರ ಅದು’ ಎಂದರು.

ಮೊದಲ ಪ್ರೇಯಸಿಯನ್ನು ಕಳೆದುಕೊಂಡು ದುಃಖದಲ್ಲಿದ್ದ ‘ಹುಲಿರಾಯ’ನಿಗೆ ಸಿಗುವ ಎರಡನೆಯ ಪ್ರೇಯಸಿ ಈ ಸಿನಿಮಾದಲ್ಲಿ ಹೇಗೆ ಕಾಣಿಸಿಕೊಂಡಿರಬಹುದು ಎಂಬ ಕುತೂಹಲವನ್ನು ಹಾಗೆಯೇ ಉಳಿಸಿದರು.

‘ಸಿನಿಮಾದಲ್ಲಿನ ಪ್ರಮುಖ ತಿರುವುಗಳು, ಮುಖ್ಯವಾದ ಸನ್ನಿವೇಶಗಳು ನಾನು ನಿಭಾಯಿಸಿದ ಪಾತ್ರದ ಮೂಲಕವೇ ನಡೆಯುತ್ತವೆ. ಬೇರೆ ಬೇರೆ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದು ಒಂಚೂರು ಮಾಹಿತಿ ನೀಡಿದರು.

ದಿವ್ಯಾ ಅವರಿಗೆ ‘ಫೇಸ್‌ ಟು ಫೇಸ್‌’ನ ಕಥೆಯನ್ನು ಮೊದಲು ಕೇಳಿದಾಗ ಅರ್ಥವೇ ಆಗಿರಲಿಲ್ಲ. ಕಥೆ ಅರ್ಥವಾದ ನಂತರ ಪಾತ್ರದ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿತು. ‘ಇದು ಮಾಮೂಲಿ ಸಿನಿಮಾ ಅಲ್ಲವೇ ಅಲ್ಲ. ವಿಭಿನ್ನವಾಗಿ ಮೂಡಿಬಂದಿದೆ ಇದು. ನಿರ್ದೇಶಕರು ಈ ಮೊದಲು ಉಪೇಂದ್ರ ಅವರ ಜೊತೆ ಆರು ವರ್ಷ ಕೆಲಸ ಮಾಡಿದ್ದರು. ಅದು ಚಿತ್ರಕಥೆಯಲ್ಲಿ ಕೂಡ ಎದ್ದು ಕಾಣುತ್ತಿದೆ. ಉಪೇಂದ್ರ ಅವರಲ್ಲಿ ಇರುವಂತಹ ಸೃಜನಶೀಲತೆಯೇ ಈ ಚಿತ್ರದಲ್ಲಿಯೂ ಕಾಣುತ್ತದೆ. ಟ್ರೇಲರ್‌ ನೋಡಿ ಕಥೆ ಊಹಿಸಲು ಸಾಧ್ಯವಿಲ್ಲ’ ಎಂದರು ದಿವ್ಯಾ.

ಸಿನಿಮಾ ಬಿಡುಗಡೆಗೆ ಮುನ್ನ ಸಹಜವಾಗಿಯೇ ಇರುವ ಎಕ್ಸೈಟ್‌ಮೆಂಟ್‌ ದಿವ್ಯಾ ಅವರಲ್ಲಿ ಗಾಢವಾಗಿ ಕಾಣಿಸುತ್ತಿದೆ. ಚಿತ್ರವನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ಕೂಡ ಇದೆ.

‘ಫೇಸ್‌ ಟು ಫೇಸ್‌ ಚಿತ್ರದಲ್ಲಿ ನನಗೆ ಭಿನ್ನ ರೀತಿಯಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ. ಇದರಲ್ಲಿ ನಾನು ಸಿಂಪಲ್ ಹುಡುಗಿ. ಆದರೆ ಆಕೆ ಬೇರೆ ತರಹದ ವ್ಯಕ್ತಿ ಕೂಡ ಆಗಬಹುದು ಎಂಬ ಅಂಶವೂ ಚಿತ್ರದಲ್ಲಿ ಅಡಕವಾಗಿದೆ. ಪಾತ್ರದ ಬಗ್ಗೆ ಹೆಚ್ಚೇನೂ ಹೇಳುವುದಿಲ್ಲ. ನನ್ನ ಪಾತ್ರ ಹೇಳಿಬಿಟ್ಟರೆ ಕಥೆಯನ್ನೇ ಹೇಳಿದಂತೆ ಆಗಿಬಿಡುತ್ತದೆ’ ಎಂದು ಪಾತ್ರದ ಕುರಿತ ವಿವರಣೆಗೆ ಪೂರ್ಣ ವಿರಾಮ ಹಾಕಿದರು.

ನಟಿಸಿದ ಮೂರು ಸಿನಿಮಾಗಳಲ್ಲಿ ಯಾವ ಪಾತ್ರ ಹೆಚ್ಚು ಆಪ್ತ ಎಂದು ಕೇಳಿದಾಗ: ‘ಸ್ಕ್ರೀನ್‌ಸ್ಪೇಸ್‌ ಈ ಚಿತ್ರದಲ್ಲೇ ಜಾಸ್ತಿ ಇದೆ. ‘ಫೇಸ್‌ ಟು ಫೇಸ್‌’ನಲ್ಲಿನ ಅಭಿಯನ ನನಗೆ ಸವಾಲಿನದ್ದಾಗಿತ್ತು. ಆದರೆ ಮೂರೂ ಸಿನಿಮಾಗಳೂ ನನಗೆ ವಿಶೇಷವೇ, ಮೂರೂ ಸಿನಿಮಾಗಳ ಪಾತ್ರವೂ ಆಪ್ತವೇ. ಹುಲಿರಾಯ ಎಲ್ಲ ರೀತಿಯಲ್ಲೂ ವಿಶೇಷ. ಅದು ನನ್ನ ಮೊದಲ ಸಿನಿಮಾ. ಅದನ್ನು ಬೇರೆ ಸಿನಿಮಾಗಳ ಜೊತೆ ಹೋಲಿಕೆ ಮಾಡಲು ಸಹ ಆಗುವುದಿಲ್ಲ. ಧ್ವಜ ಸಿನಿಮಾದಲ್ಲಿ ಪ್ರಿಯಾಮಣಿ ಜೊತೆ ಅಭಿನಯಿಸಲು ಅವಕಾಶ ಸಿಕ್ಕಿತು. ಅದನ್ನು ನಿಭಾಯಿಸಿದ್ದೇ ಒಂದು ಮಜ’ ಎಂದರು.

‘ಹುಲಿರಾಯ’ದ ಅಭಿನಯದ ಕಾರಣದಿಂದಾಗಿ ‘ಧ್ವಜ’ ಸಿನಿಮಾದಲ್ಲಿ ಅವಕಾಶ ಸಿಕ್ಕಿತು. ಎರಡೂ ಸಿನಿಮಾಗಳ ಕಾರಣದಿಂದ ಈ ಸಿನಿಮಾದಲ್ಲಿ ಅವಕಾಶ ಸಿಕ್ಕಿತು. ಇದಲ್ಲದೆ, ‘ರಾಂಚಿ’, ‘ಜೋರು’ ಎಂಬ ಎರಡು ಸಿನಿಮಾಗಳಲ್ಲಿ ದಿವ್ಯಾ ಈಗ ನಟಿಸುತ್ತಿದ್ದಾರೆ. ‘ನಿಷ್ಕರ್ಷ–2’ ಎಂಬ ಸಿನಿಮಾ ಕೂಡ ಇವರ ಕೈಯಲ್ಲಿದೆ.

‘ಈವರೆಗಿನ ಸಿನಿಮಾಗಳಲ್ಲಿ ನಿಮ್ಮ ಕನಸಿನ ಪಾತ್ರ ಸಿಕ್ಕಿದೆಯಾ’ ಎಂದು ಕೇಳಿದರೆ, ‘ಆ ರೀತಿಯ ಪಾತ್ರವನ್ನು ನಾನು ಮನಸ್ಸಿನಲ್ಲಿ ಕಲ್ಪಿಸಿಕೊಂಡೇ ಇಲ್ಲ’ ಎಂದು ಉತ್ತರಿಸಿದರು. ‘ಪ್ರತಿ ಬಾರಿಯೂ ನನಗೆ ಸವಾಲಿನ ಪಾತ್ರವೇ ಸಿಗಬೇಕು ಎಂಬ ಆಸೆ ಇದೆ. ನಾನು ಹಿಂದೆ ಮಾಡಿದ್ದಕ್ಕಿಂತ ಹೆಚ್ಚು ಉತ್ತಮವಾಗಿ ಅಭಿನಯಿಸುವ ಪಾತ್ರ ಸಿಗಬೇಕು’ ಎಂಬ ತಮ್ಮೆ ಇಚ್ಛೆ ಹೇಳಿಕೊಂಡರು.

***

ಪವನ್ ಕುಮಾರ್ ನಿರ್ದೇಶನದ ಸಿನಿಮಾದಲ್ಲಿ ನಟಿಸಬೇಕು, ಅಪ್ಪು ಸರ್ (ಪುನೀತ್ ರಾಜ್‌ಕುಮಾರ್) ಜೊತೆ ನಟಿಯಾಗಿ ಅಭಿನಯಿಸಬೇಕು ಎಂಬುದೊಂದು ದೊಡ್ಡ ಆಸೆ.

- ದಿವ್ಯಾ ಉರುಡುಗ, ನಟಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !