ಬುಧವಾರ, ಮಾರ್ಚ್ 3, 2021
19 °C
ಇವ್ರು ಧಮ್‌ ಬಿರಿಯಾನಿ ಸ್ಪೆಷಲಿಸ್ಟ್‌!

ಸುದೀರ್ಘ ಬರಹ: ಸೂರಿ ಹೇಳಿದ ಆ ಕ್ಷಣದ ಸತ್ಯಗಳು!

ರಘುನಾಥ ಚ.ಹ. – ಪದ್ಮನಾಭ ಭಟ್ Updated:

ಅಕ್ಷರ ಗಾತ್ರ : | |

2007ರಲ್ಲಿ ತೆರೆಕಂಡ ‘ದುನಿಯಾ’ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ನಿರ್ದೇಶಕ ಸೂರಿ ಜನಪ್ರಿಯ ಸಿನಿಮಾಗಳಿಗೆ ಹೊಸ ರಭಸ ತಂದುಕೊಟ್ಟವರು. ‘ದುನಿಯಾ’, ‘ಇಂತಿ ನಿನ್ನ ಪ್ರೀತಿಯ’, ‘ಜಂಗ್ಲಿ’, ‘ಜಾಕಿ’, ‘ಅಣ್ಣಾಬಾಂಡ್‌’, ‘ಕಡ್ಡಿಪುಡಿ’, ‘ದೊಡ್ಮನೆ ಹುಡ್ಗ’, ‘ಕೆಂಡಸಂಪಿಗೆ’, ‘ಟಗರು’ – ಸೂರಿ ಅವರ ಎಲ್ಲ ಚಿತ್ರಗಳೂ ಬದುಕಿನ ನೆಳಲು ಬೆಳಕನ್ನು ಸೂಚಿಸುವಂತಿದೆ. ನಗರಗಳ ಕೊಳೆಗೇರಿಗಳಲ್ಲಿನ ಜೀವಂತಿಕೆ ಹಾಗೂ ಪಾತಕತೆ ಎರಡನ್ನೂ ಸೂರಿ ಅವರ ಚಿತ್ರಗಳು ಚಿತ್ರಿಸಿರುವ ರೀತಿ ಕನ್ನಡ ಚಿತ್ರರಂಗಕ್ಕೇ ಹೊಸತು ಅನ್ನಿಸುವಂತಿದೆ. ಚಿತ್ರಕಥೆ ರಚನೆಗಾಗಿ ಎರಡು ಬಾರಿ ರಾಜ್ಯಪ್ರಶಸ್ತಿ ಪಡೆದಿರುವ ಅವರು, ಹರಿತ ಬರವಣಿಗೆಗೂ ಹೆಸರಾದವರು. ಸಿನಿಮಾಗಳಷ್ಟೇ ಅವರ ಮಾತುಗಳು ಕೂಡ ಭಿನ್ನ ಎನ್ನುವುದಕ್ಕೆ ಉದಾಹರಣೆಯಂತಿರುವ ಈ ಸುದೀರ್ಘ ಸಂದರ್ಶನ, ಪ್ರತಿಭಾವಂತ ಕಲಾವಿದನೊಬ್ಬನ ಚೆಲ್ಲಾಪಿಲ್ಲಿ ಸ್ವಗತಗಳಂತಿವೆ.

ಸಾಮಾನ್ಯವಾಗಿ ಜನಪ್ರಿಯ ನಿರ್ದೇಶಕರ ಕಚೇರಿ ಸದಾ ಜನರಿಂದ ಗಿಜಿಗುಡುತ್ತಿರುತ್ತದೆ. ಆದರೆ ನಿರ್ದೇಶಕ ಸೂರಿ ಅವರ ಕಚೇರಿ ಇದಕ್ಕೆ ಪೂರ್ತಿ ಭಿನ್ನ. ತಾವೇ ಬಾಗಿಲು ತೆರೆದು ಒಳಹೊಕ್ಕ ಅವರ ಹಿಂದೆಯೇ ನಾವು ಒಳಗಡಿ ಇರಿಸಿದೆವು. ಗೋಡೆಗೆ ಬಳಿದ ದಟ್ಟ ಹಸಿರು ಬಣ್ಣ, ಮೂಲೆಯಲ್ಲಿ ಪ್ರಖರ ಬೆಳಕ ಹರಡುತ್ತಿರುವ ವಿದ್ಯುದ್ದೀಪಗಳು, ಟೇಬಲ್‌ ಮೇಲೊಂದು ಗಾಜಿನ ಬಾಟಲಿ ಎಲ್ಲವೂ ಅವರ ಬರುವನ್ನೇ ಕಾಯುತ್ತ ನಿಶ್ಚಲ ಕೂತಿದ್ದವು. ‘ಇಲ್ಲಿ ಬನ್ನಿ’ ಎಂದು ಕರೆದೊಯ್ದ ಸೂರಿ ನಮ್ಮನ್ನು ತಮ್ಮ ಪೇಂಟಿಂಗ್ ಕೋಣೆಯಲ್ಲಿ ನಿಲ್ಲಿಸಿದರು. ಗೋಡೆಗೆ ಅಂಟಿಸಿದ ರಾವ್‌ಬೈಲ್ ಚಿತ್ರ, ಅದರ ಕೆಳಗೆ ಬಣ್ಣಚೆಲ್ಲಿಕೊಂಡು ಬಿದ್ದಿದ್ದ ತಟ್ಟೆ, ಗೋಡೆಗೆ ಒರಗಿಸಿಟ್ಟಿದ್ದ ಕಲಾಕೃತಿಗಳು... ‘ಇದು ನಾನು ಸದ್ಯಕ್ಕೆ ಕೆಲಸ ಮಾಡುತ್ತಿರುವ ಕೃತಿ’ ಎಂದು ಒಂದು ಕಲಾಕೃತಿಯನ್ನು ತೋರಿಸಿದರು. ತಮ್ಮ ಹೆಂಡತಿ ಮಾಡಿದ್ದ ಮಣ್ಣಿನ ಕಲಾಕೃತಿಯನ್ನೂ ಉತ್ಸಾಹದಿಂದಲೇ ತೋರಿಸಿದರು. ಸೂಕ್ಷ್ಮವಾಗಿ ಗಮನಿಸಿದರೆ ಬಚ್ಚಲು ಮನೆಯನ್ನೇ ಅವರು ತಮ್ಮ ಪೇಂಟಿಂಗ್ ರೂಮ್ ಆಗಿ ಬದಲಾಯಿಸಿಕೊಂಡಿದ್ದರು.

ನಂತರ ಒಂದಿಷ್ಟು ಬಿಳಿ ಹಾಳೆ, ಪೆನ್ನು ತಂದು ಪರೀಕ್ಷೆಗೆ ಸಿದ್ಧವಾಗಿ ಬಂದ ವಿದ್ಯಾರ್ಥಿಯ ಹಾಗೆ ಎದುರಿಗೆ ಬಂದು ಕೂತುಕೊಂಡರು. ಕಾದ ಎಣ್ಣೆಗೆ ಹಾಕಿದ ಸಾಸಿವೆ ಕಾಳುಗಳ ಹಾಗೆ ಅವರು ಪಟಪಟ ಮಾತುಗಳನ್ನು ಸಿಡಿಸುತ್ತಲೇ ಹೋದರು. ಕೆಲವು ಮಾತುಗಳನ್ನು ಆಡಿದ ತಕ್ಷಣ ‘ನೋಡಿ, ನಾನು ಹೀಗೆ ಯೋಚಿಸ್ತೀನಿ ಅಂತ ನನಗೂ ಗೊತ್ತಿರಲಿಲ್ಲ. ನಿಮ್ಮ ಜತೆ ಮಾತಾಡ್ತಾನೇ ಬಂದುಬಿಡ್ತು’ ಎಂದು ನಕ್ಕರು. ಅಡುಗೆ ಮತ್ತು ಸಿನಿಮಾವನ್ನು ಒಟ್ಟೊಟ್ಟಿಗೇ ಸಮೀಕರಿಸುತ್ತಾ ಹೋದ ಅವರ ಮಾತು ಮುಗಿಯುವಷ್ಟರಲ್ಲಿ ಸ್ವಾದಿಷ್ಟಕರ ಭೋಜನವೊಂದನ್ನು ಹೊಟ್ಟೆ ತುಂಬಿರುವ ಪರಿವೆಯೂ ಇರದೆ ಸವಿದ ಭಾವ ನಮ್ಮದಾಗಿತ್ತು. ಆ ರುಚಿಯನ್ನು ಅರುಹುವ ಅಕ್ಷರಗಳು ಇಲ್ಲಿವೆ. ಓದಿ...

ನಿಮ್ಮ ಸಿನಿಮಾಗಳ ಕ್ಯಾನ್ವಾಸಿನ ಮೇಲೆ ಇರಬಹುದಾದ ನಿಮ್ಮ ಬಾಲ್ಯ ಹಾಗೂ ಬೆಳೆದು ಬಂದ ಪರಿಸರದ ಪ್ರಭಾವ ಯಾವ ಬಗೆಯದು?

ನಾನೇನೂ ಸ್ಪೆಷಲ್‌ ಅಲ್ಲ, ಈ ಮನುಷ್ಯ ಪ್ರಪಂಚದ ಗಂಡು–ಹೆಣ್ಣು ಪ್ರಭೇದ ಇದ್ಯಲ್ಲಾ, ಅದರಲ್ಲಿ ನಾನೇನೂ ವಿಶೇಷ ಅಲ್ಲ. ನಾನು ಇವತ್ತು ನಿಮ್ಮ ಮುಂದೆ ಕೂತು ಮಾತಾಡ್ತಿದ್ದೀನಲ್ಲಾ, ಈಗ ಏನೋ ಆಗಿದ್ದೀನಲ್ಲಾ... ಅದಕ್ಕೆ ನನ್ನ ಬದುಕಿನಲ್ಲಿ ಈ ಕ್ಷಣದವರೆಗೆ ನನ್ನನ್ನು ಯಾರ‍್ಯಾರು ಭೇಟಿಯಾಗಿರುವರೋ ಅವರೆಲ್ಲರೂ ಕಾರಣ.

ಏನಕ್ಕೆ ಸ್ಲಮ್‌? ಏನಕ್ಕೆ ಗೊಟ್ಟಿಗೆರೆ? ಏನಕ್ಕೆ ಕಾವೇರಿನಗರ... ಎಲ್ಲೋ ಯಾರದೋ ಸಾವಾಗತ್ತೆ, ಇಲ್ಲಿ ನಮಗೆ ಬಡತನ ಬರುತ್ತೆ. ನನ್ನ ಪರಿಸರವನ್ನು ಅದ್ಯಾವುದೋ ಡಿಸೈಡ್‌ ಮಾಡುತ್ತೆ. ನಾನು ಡಾಲರ್ಸ್‌ ಕಾಲೋನಿನಾ ಅಥವಾ ಕಾವೇರಿ ನಗರವಾ ಅಂತ ಇನ್ಯಾವುದೋ ಸಂಗತಿ ಡಿಸೈಡ್‌ ಮಾಡುತ್ತದೆ. ಆ ಡಿಸೈಡ್‌ ಮಾಡುವ ಸಂಗತಿ ಯಾವುದು ಅಂತ ನನಗೊತ್ತಿಲ್ಲ.

ಸರಿ, ಇಲ್ಲಿರುವ ಅನುಭವಗಳು ನನ್ನ ಇಡೀ ಜೀವನದ ಆಹಾರ ಆಗುತ್ತೆ. ಇವತ್ತು ಬೆಳಿಗ್ಗೆ ನನ್ನ ತಾಯಿ ಏನೋ ತಿಂಡಿ ಮಾಡಿಕೊಟ್ಟಳಲ್ಲ... ಅದನ್ನು ನಾನು ತಿಂದೆನಲ್ಲ... ಅದೂ ಕೂಡ ಸಿನಿಮಾದ್ದೇ. ಅದು ನನ್ನ ಬದುಕಿನದ್ದೂ ಹೌದು. ಇಲ್ಲಿರುವ ಪ್ರತಿ ವಸ್ತು ನಾನು ಸಿನಿಮಾದಿಂದ ತಗೊಂಡಿರೋದು.

ಇದನ್ನೂ ಓದಿ: ನಟ ರಾಘವೇಂದ್ರ ರಾಜ್‌ಕುಮಾರ್ ಅನಾರೋಗ್ಯದ ದಿನಗಳು

ನಾನು ನಂಬರ್ ಒನ್‌ ಆಗಬೇಕು ಅಂತ ತುಂಬ ಚಿಕ್ಕವಯಸ್ಸಿನಿಂದಲೇ ಟ್ರೈ ಮಾಡ್ದೋನು. ಕ್ಲಾಸ್‌ರೂಮಲ್ಲಿ ಫಸ್ಟ್‌ ಒನ್. ಟೀಚರ್‌ ನನ್ನನ್ನು ‘ನೀ ಕ್ಲಾಸ್‌ರೂಮ್‌ ನೋಡ್ಕೊ’ ಅಂತ ಬಿಟ್ಟು ಹೋಗೋರು. ಏರಿಯಾ... ಅಲ್ಲಿಯೂ ನಂಬರ್ ಒನ್‌. ಗಣೇಶನ ಕೂಡಿಸ್ಬೇಕು, ಗಣೇಶನ ವಾಪಸ್‌ ಬಿಡಬೇಕು ಅಂತ ಕೆಲಸ ಮಾಡ್ತಿದ್ದೆ. ಗಣೇಶನ ಹಬ್ಬಕ್ಕೆ ದುಡ್ಡು ತರಬೇಕು, ಅದು ಅನ್ಯಾಯದಿಂದ ಆಗಿರಬಾರದು ಎನ್ನುವ ಸ್ಪಷ್ಟತೆ ಇತ್ತು. ಈ ಎಲ್ಲ ಚಟುವಟಿಕೆಗಳಿಗೆ ಒಂದು ಪುಟ್ಟ ಸಂಘ ಇತ್ತು. ಅಲ್ಲಿ ನಮಗಿಂತ ದೊಡ್ಡವರೂ ಇದ್ದರು. ಆದ್ರೆ ನನಗೆ ಚಿತ್ರಕಲೆ ಬೇಸ್‌ ಆಗಿತ್ತು. ಈ ಕಾರಣಕ್ಕೇ ನನ್ನನ್ನು ಕ್ರೈಂನವರೂ ಮುಟ್ತಾ ಇರ್ಲಿಲ್ಲ. ನಾನು ರೌಡಿಗಳ ಜೊತೆಗೇ ಇದ್ದರು ಕೂಡ ಅವರು ನನ್ನನ್ನು ನೋಡುವ ದೃಷ್ಟಿ ಬೇರೆಯೇ ಆಗಿತ್ತು. ಅದು ನನಗೆ ಹೆಲ್ಪ್‌ ಆಯ್ತು.

ನನ್ನ ಇಡೀ ಜೀವನದಲ್ಲಿ ಸ್ಕೂಲಿಗೆ ಹೋಗು ಅಂತ ನಂಗ್ಯಾರೂ ಹೇಳಿಲ್ಲ. ಶಾಲಾದಿನಗಳ ಸಮಯದಲ್ಲೇ ತಂದೆ ಹೋದರು. ನಂತ್ರ ನಂಗೆ ಸ್ಕೂಲಿಗೆ ಹೋಗು ಅಂತ ಹೇಳ್ದೋರು ಒಬ್ರೂ ಇಲ್ಲ. ಬರೀ ‘ಕೆಲಸ ಕಲಿ’ ಅಂತ ಎಲ್ಲರೂ ಹೇಳೋರು. ನನಗೆ ದೊಡ್ಡೋರು ಅಂದ್ರೆ ಭಯ. ಯಾಕೆ ಭಯ ಅಂದ್ರೆ ಅವರೆಲ್ಲ ತಲೆಮೇಲೆ ಕೈಯಿಟ್ಟು ಹೇಳೋದು ‘ಕೆಲ್ಸ ಕಲಿ’ ಅಂತ. ಅದೂ ‘ಕೈ ಕೆಲಸ ಕಲಿ’ ಅಂತ ಹೇಳೋರು. ಕೈ ಕೆಲಸ ಅಂದರೆ ಮೆಕ್ಯಾನಿಕ್, ಟೈಲರಿಂಗ್‌ ಎಲ್ಲವೂ ಬರ್ತದೆ. ಈ ಕೈ ಕೆಲಸಗಳೇ ನಮಗೆಲ್ಲ ಆಗ ಅನ್ನ ಹಾಕಿದ್ದು.

ನಾನು ನನಗೆ ಸುಲಭ ಅಂತ್ಹೇಳಿ ಸೈನ್‌ಬೋರ್ಡ್‌ ಅಂಗಡಿ ಸೇರ್ಕೊಂಡೆ. ನನ್ನಣ್ಣ ಟೈಲರ್‌ ಅಂಗಡಿಗೆ ಹೋಗಿ ಕೆಲಸಕ್ಕೆ ಸೇರಿಕೊಂಡ. ಇವತ್ತಿಗೂ ಅವನೊಬ್ಬ ಟೈಲರ್ ಆಗಿಯೇ ಇದಾನೆ. ಸೈನ್‌ ಬೋರ್ಡ್‌ ಅಂಗಡಿಗೆ ಹೋದಾಗ ನನಗೆ ಚಿತ್ರ ಬರಿಯೋಕೆ ಬರ್ತಿತ್ತು. ಚಿತ್ರ ಬರೆಯೋದು ನಾನು ಕಲಿತಿದ್ದಲ್ಲ, ಅದು ಆಲ್‌ರೆಡಿ ಇತ್ತು. ಕೆಲವರಿಗೆ ಕಂಠ ಇರುತ್ತೆ. ಯಾರೋ ‘ಏ, ನಿನ್ನ ಕಂಠ ಚೆನ್ನಾಗಿದೆ. ಒಂದಿಷ್ಟು ಸಂಗೀತ ಕಲಿ’ ಎಂದು ಸಲಹೆ ಕೊಟ್ಟಾಗ ಸಂಗೀತ ಕಲಿಯೋಕೆ ಶುರುಮಾಡ್ತಾರಲ್ಲಾ, ಆ ರೀತಿ ನನ್ನ ಜೀವನ ಶುರುವಾಗಿದ್ದು ಸೈನ್‌ಬೋರ್ಡ್‌ ಅಂಗಡೀಲಿ.

ನಾಲ್ಕನೇ ತರಗತಿ ಮುಗಿಸಿ ಐದನೇ ಕ್ಲಾಸಿಗೆ ಸೇರಿಕೊಳ್ಳುವ ಹೊತ್ತಿಗಾಗಲೇ ನನಗೆ ಈ ಜೀವನಕ್ಕೆ ದುಡ್ಡು ಬೇಕು ಎಂಬುದು ಅರ್ಥ ಆಗೋಗಿತ್ತು. ಇವತ್ತಿನ ಯಾವ ಐದನೇ ಕ್ಲಾಸಿನ ಹುಡುಗನಿಗೆ ಇಂಥದ್ದೆಲ್ಲ ಅರ್ಥ ಆಗುತ್ತೋ ಗೊತ್ತಿಲ್ಲ ನಂಗೆ. ನಾನು ತುಂಬ ಚಿಕ್ಕವಯಸ್ಸಿನಿಂದ ದೊಡ್ಡವರ ಜತೆ ಇದ್ದೂ ಇದ್ದೂ ಅವರ ವ್ಯವಹಾರಗಳನ್ನು ನೋಡ್ಡೋನು.

ನಿಮ್ಮಲ್ಲಿನ ಪ್ರತಿಭೆ ನಿಮಗೇ ತಿಳಿದಿದ್ದು ಯಾವಾಗ?

ಈಗ ಎರಡು ರೀತಿಯ ದ್ವಂದ್ವದಲ್ಲಿ ಎಲ್ಲರೂ ಇದ್ದೀವಿ ನಾವು. (ಹೀಗೆನ್ನುತ್ತಾ ಎದುರಿಗಿದ್ದ ಬಿಳೀ ಹಾಳೆಯ ನಟ್ಟ ನಡುವೆ ಸುಯ್ಯನೇ ಗೆರೆ ಎಳೆದರು ಸೂರಿ.) ಒಂದು ನಮ್ಮ ರೂಟು. ಇನ್ನೊಂದು ಈಗ ಚಾಲ್ತಿಯಲ್ಲಿ ಇರುವ ರೂಟು. ನಾನು ಹೇಳ್ತೀನಿ ‘ನನ್ ರೂಟು ಸರಿ’ ಅಂತ. ಆದರೆ ನನ್ನ ರೂಟಿನಲ್ಲಿ ಬದುಕು ನನ್ನನ್ನು ಮೂಲೆಗೆ ಹಾಕಿ ಅಮುಕತ್ತೆ. ಅಲ್ಲಿಯೇ ನಾನು ಕಲೀತಾ ಹೋಗ್ತೀನಿ.

ನಾನು ಇಂದಿನವರೆಗೆ ಪ್ರತಿಯೊಂದನ್ನು ಕಲಿತಿದ್ದೂ ಊಟಕ್ಕೋಸ್ಕರ. ಊಟ ಬೇಕೇ ಬೇಕು. ಯಾವಾಗ ನೀವು ಮಾಡುವ ಕೆಲಸ ನಿಮ್ಮ ಊಟಕ್ಕೆ ಅನಿವಾರ್ಯ ಆಗುತ್ತದೆಯೋ ಆಗ ನಿಮ್ಮೆಲ್ಲ ಟ್ಯಾಲೆಂಟೂ ಓಪನ್ನಾಗಿಬಿಡತ್ತೆ. ಬೆಳಿಗ್ಗೆ ಎದ್ದು ನಮ್ಮ ಇಂದಿನ ಬದುಕಿಗೆ ಬೇಕೇ ಬೇಕು ಎನ್ನುವ ಎಲ್ಲ ಕಲೆಗಳೂ ಹಾಗೆಯೇ. ನಾನು ಚಿತ್ರ ಬರೆದೆ, ದುಡ್ ಕೊಟ್ರು. ಚಿತ್ರಕಲೆ ಮತ್ತು ಬದುಕಿನ ಅನುಭವ ಸೇರಿಸಿ ಸಿನಿಮಾ ಮಾಡ್ದೆ, ಮತ್ತೆ ದುಡ್‌ ಕೊಟ್ರು. ಪ್ರತಿಭೆ ತೋರ್ಸೋದೆಲ್ಲ ಸರಿ, ಆದರೆ ಯಾವಾಗ ಅದು ಬದುಕಿಗೇ ಆಗಬೇಕು ಅಂತ ಆಗುತ್ತಲ್ಲ... ಆಗ ಆ ಕೆಲಸವನ್ನು ಎಲ್ಲರೂ ಚೆನ್ನಾಗಿಯೇ ಮಾಡುತ್ತಾರೆ. 

ಇದನ್ನೂ ಓದಿ: ಸಂಯುಕ್ತಾ ಸುಧಾ ಮುಖಾಮುಖಿ

* ನೀವು ಬದುಕಿನಲ್ಲಿ ಕಂಡ ಅನುಭವಗಳು ಸಿನಿಮಾ ಆಗಿ ರೂಪುಗೊಳ್ಳುವ ಪ್ರಕ್ರಿಯೆ ಹೇಗಿರುತ್ತದೆ?

‘ದುನಿಯಾ’ ಸಿನಿಮಾದಿಂದ ಇಲ್ಲಿಯವರೆಗೆ ನಾನು ನನ್ನ ಸಿನಿಮಾಗಳಲ್ಲಿ ಬಳಸಿರುವ ಯಾವ ಅಂಶವೂ ನನ್ನದಲ್ಲ. ನನ್ನದಾಗಲಿಕ್ಕೆ ಸಾಧ್ಯವೂ ಇಲ್ಲ. ‘ದುನಿಯಾ ಸಿನಿಮಾದಲ್ಲಿ ತಾಯಿಯನ್ನು ಮಣ್‌ ಮಾಡೋಕೆ ಹೋದಾಗ ನಾಯಕ ಎದುರಿಸುವ ದೃಶ್ಯ ಇದೆಯಲ್ಲ, ಅದು ನಿಮಗೆ ಆಗಿದ್ಯಾ’ ಅಂತ ಸುಮಾರು ಜನರು ನನ್ನ ಕೇಳ್ತಿರ್ತಾರೆ. ಇದಕ್ಕೂ ತಾತನಂಥ ಅನುಭಗಳನ್ನು ಹಾದು ಬಂದಿದೀನಿ. ನನ್ನ ಲೈಫಲ್ಲಿ ಕಂಡದ್ದೆಲ್ಲವನ್ನೂ ಸಿನಿಮಾದಲ್ಲಿ ಹೇಳೋಕೆ ಆಗಲ್ಲ. ಅಂಥದ್ದೆಲ್ಲ ಕಣ್ಮುಂದೆ ನಡೆದುಹೋಗಿದೆ. ನಾವು ಕಂಡ ಬದುಕನ್ನು ಹಂಗ್ಹಂಗೆ ಇಡೋದಲ್ಲ ಕಲೆ. ಸಿನಿಮಾಕ್ಕೆ ಎಷ್ಟು ಬೇಕೋ, ಅದರಲ್ಲಿ ಹೇಗೆ ಹೇಳಬೇಕೋ ಹಾಗೆ, ಚಿತ್ರಮಂದಿರಕ್ಕೆ ಬಂದು ಕೂಡುವ ಆರುನೂರು ಜನರಿಗೆ ಡಿಸ್ಟರ್ಬ್‌ ಆಗದ ಹಾಗೆ ಒಂದಿಷ್ಟು ಹೇಳ್ತಿದೀನಿ ಅಷ್ಟೆ.

 

ಮೊನ್ನೆ ಒಂದು ಕೇಸ್‌ ಆಗಿದೆ: ಗಂಡ ಸತ್ತು ಹೋಗಿದ್ದಾನೆ. ಹೆಂಡತಿಗೆ ಬದುಕಕ್ಕಾಗಲ್ಲ, ಆತ್ಮಹತ್ಯೆ ಮಾಡ್ಕೋಬೇಕು ಅಂದ್ಕೋತಾಳೆ. ತನ್ನ ಆರು ವರ್ಷದ ಗಂಡುಮಗು ಕಾಣಿಸುತ್ತೆ. ಅವಳು ಅದನ್ನೂ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ತಾಳೆ – ಈ ಕಥೆ ಚೆನ್ನಾಗಿದೆಯಲ್ವಾ? ಮನಕಲಕುವ ಹಾಗಿದೆಯಲ್ವಾ? ಇದನ್ನು ತೆರೆಯ ಮೇಲೆ ಹೇಳ್ಬೇಕಾ? ಬೇಡ್ವಾ? ಈ ಘಟನೆ ಯಾರನ್ನು ತಲುಪಬೇಕೋ ಅವರಿಗೆ ಹೋಗಿ ತಲುಪಿ ಆಗಿದೆ. ವೃತ್ತಪತ್ರಿಕೆಗಳಲ್ಲಿ ಬಂದಾಯ್ತು. ಟೆಲಿವಿಷನ್‌ ನ್ಯೂಸ್‌ನಲ್ಲಿಯೂ ಹೇಳಾಯ್ತು. ಈ ಘಟನೆಯ ಪಿನ್‌ ಟು ಪಿನ್ ಪೊಲೀಸ್‌ ದಾಖಲೆಗಳಲ್ಲಿ ದಾಖಲಾಗಿಹೋಗಿದೆ. ಇಷ್ಟೆಲ್ಲ ಆದಮೇಲೆ ಸಿನಿಮಾ ಮಾಡಿ ಸಾರ್ವಜನಿಕರಿಗೆ ಹೇಳಬೇಕಾ? ಹಾಗೆ ಹೇಳಿದ್ರೆ ಅದು ಸಾಕ್ಷ್ಯಚಿತ್ರ ಆಗುತ್ತೋ ಅಥವಾ ಸಿನಿಮಾ ಆಗುತ್ತೋ?

* ಹಾಗಾದ್ರೆ ಸಿನಿಮಾ ಆಗುವುದು ಹೇಗೆ?

ಇದು ನಮ್ಮಲ್ಲಿ ಬಹಳ ಜನರಿಗೆ ಇರುವ ಪ್ರಶ್ನೆ. ನನ್ನ ಬಳಿ ಸಿನಿಮಾ ಹೇಗಾಗುತ್ತೆ ಎಂದು ಯಾರಾದ್ರೂ ಕೇಳಿದ್ರೆ – ‘ಪೇಂಟಿಂಗ್ ಅಂದ್ರೆ ಏನು? ಮ್ಯೂಸಿಕ್ ಅಂದ್ರೆ ಏನು?’ ಅಂತ ನಾನು ಕೇಳುತ್ತೇನೆ. ಹಾಗೆ ಹೇಳೋಕೆ ಸಾಧ್ಯನಾ ಅದು?’

* ಇದು ಎಲ್ಲ ಕಲೆಗಳಲ್ಲಿಯೂ ಇರುವ ಗೊಂದಲ ಅಲ್ವಾ ಇದು?

ಗೊಂದಲ ಇಲ್ಲ. ಆಯಾಮ್ ಸಾರಿ, ಗೊಂದಲ ಇಲ್ಲ. ಗೊಂದಲ ಅಂತ ಅಂದ್ಕೊಂಡವ್ರೆ. ಕ್ಲಾರಿಟಿ ಇಲ್ಲ ಅಷ್ಟೆ. ತುಂಬ ಸರಳ ಅದು. ನನಗೆ ಸ್ಪಷ್ಟತೆ ಇರೋದಕ್ಕೆ ನಾನು ಹಿಂಗಿದೀನಿ. ನನಗೆ ಯಾವ ಪ್ರಶ್ನೆಗಳೂ ಇಲ್ಲ. ನಾಳೆ ಯಾರೋ ನನ್ನ ಬಳಿ ಬಂದು ‘ಹಿಮಾಲಯದ ಮೇಲೆ ಸಾಧು ಸಂತರೆಲ್ಲ ಹೋಗ್ತಾರಲ್ಲ... ಅಲ್ಲಿ ಅವ್ರಿಗೇನೋ ಆಗಿಬಿಡ್ತದಂತೆ. ಅದ್ರ ಮೇಲೆ ಒಂದು ಸಿನಿಮಾ ಮಾಡೋಣ’ ಅಂದ್ರೆ ದೇವ್ರಾಣೆ ನಾನು ಅಲ್ಲಿಯವರೆಗೂ ಹೋಗೋದೇ ಇಲ್ಲ. ನನ್ನ ಬದುಕಲ್ಲಿ, ನನಗಿರೋ ಟೈಮಲ್ಲಿ, ಫುಡ್ಡಿಗೆ ಆರಾಮಾಗಿ ಸಿಗ್ತಿರೋವಾಗ, ಈ ಸಿನಿಮಾ ಭಾಷೆಯ ಮೇಲೆ ನನಗೊಂದು ಗ್ರಿಪ್‌ ಇರೋವಾಗ, ನಾನ್ಯಾಕೆ ಅಲ್ಲಿಗೆಲ್ಲ ಹೋಗಿ ಸಾಯಲಿ?

ನಾನು ಆದಷ್ಟೂ ಸುಲಭ ಮಾಡಿಕೊಳ್ತೇನೆ. ಜನಕ್ಕೆ ಎಷ್ಟು ಹೇಳಿದ್ರೆ ಸಾಕೋ ಅಷ್ಟೇ ಹೇಳ್ತೀನಿ. ನಿಜ ಅಂದ್ರೆ ಅಷ್ಟೇ ಇರೋದು. ನಾನು ಇಲ್ಲಿ ಬಂದಿರೋದು ಫುಡ್ಡಿಗೋಸ್ಕರ. ಊಟ ಮಾಡ್ಬೇಕು. ನನ್ನದೊಂದು ರೆಫ್ಲಿಕಾ ಕೊಡಬೇಕು. ಆ ಕೆಲಸ ಆಲ್‌ರೆಡಿ ಆಗೋಗಿದೆ. ನಮ್ಮಲ್ಲಿ ಸುಮಾರು ಜನ ಹೇಳ್ತಾರೆ – ‘ಸತ್ತಾಗ ನಾಲ್ಕು ಜನ ಬರ್ಬೇಕು’ ಅಂತ. ಆದರೆ, ಮನುಷ್ಯಂಗೆ ಸಾಯೋದೇ ಗೊತ್ತಾಗಲ್ಲ. ಹಾಗಾದ್ರೆ ಈ ಲಗೇಜೆಲ್ಲ ಅದ್ಕೋಸ್ಕರ ಮಾಡ್ತಾ ಇದ್ದೀವಾ – ಹೆಸರು, ಸ್ಪೆಷಲ್... ಇವೆಲ್ಲ ಏನು?

ಇಲ್ಲಿ ಯಾವುದೂ ಸ್ಪೆಷಲ್ ಅಲ್ಲ. ಅವರವರಿಗೆ ಗೊತ್ತಿರೋದನ್ನು ಅವರು ಮಾಡ್ತಾ ಇದಾರೆ ಅಷ್ಟೆ. ನನಗೆ ಗೊತ್ತಿರೋದನ್ನು ನಾನಷ್ಟೇ ಮಾಡೋಕೆ ಸಾಧ್ಯ. ಯಾವ್ದೇ ಕಾರಣಕ್ಕೂ ನಾನು ಓದಿರೋ ಪುಸ್ತಕ ನೀವು ಓದಿದೇಟಿಗೆ ನೀವೂ ನನ್ನಂಗೆ ಆಗೋಕೆ ಸಾಧ್ಯ ಇಲ್ಲ. ಬೇರೆಯವರ ಯಾವುದೇ ಅನುಭವ ನನಗೆ ತಟ್ಟುವುದಿಲ್ಲ. ಅದು ನನ್ನದಾದಾಗಲೇ ನನಗೆ ತಟ್ಟುವುದು. ಸಿನಿಮಾದಲ್ಲಿಯೂ ಅದನ್ನೇ ಹೇಳಬೇಕು.

ಅದರ ಜತೆಗೆ ಸ್ಪಷ್ಟತೆ ಇರಬೇಕು. ನಾನು ನನ್ನ ನಾಲ್ಕು ಜನ ಸ್ನೇಹಿತರಿಗೋಸ್ಕರ ಸಿನಿಮಾ ಮಾಡುತ್ತಿದ್ದೇನಾ ಅಥವಾ ಮೂರು ಮೂರು ಗಂಟೆಗಳಿಗೆ ಬೇರೆ ಬೇರೆ ಆರುನೂರು ಜನ ಪ್ರೇಕ್ಷಕರು ಬಂದು ಕೂತ್ಕೋತಾರಲ್ಲ.... ಅವರಿಗೋಸ್ಕರ ಸಿನಿಮಾ ಮಾಡ್ತಿದ್ದೇನಾ –ಈ  ಸ್ಪಷ್ಟತೆ ನಿಮಗಿರಬೇಕು. ಆ ಸ್ಪಷ್ಟತೆ ಬಂದ ದಿನ ಸಿನಿಮಾ ಸರಿಯಾಗುತ್ತದೆ.

* ಅವೆರಡೂ ಸಾಧ್ಯತೆಗಳನ್ನು ಮಿಕ್ಸ್‌ ಮಾಡೋಕೆ ಆಗಲ್ವಾ?

ಯಾಕೆ ಮಿಕ್ಸ್‌ ಮಾಡಬೇಕು? ನಾನು ‘ಕೆಂಡಸಂಪಿಗೆ’ ಮಾಡುವಾಗ ಅದನ್ನೇ ಮಾಡಬೇಕು. ಅದರಲ್ಲಿ ಪುನೀತ್ ರಾಜ್‌ಕುಮಾರ್ ತಂದು ಡಾನ್ಸ್ ಮಾಡಿಸಲ್ಲ ನಾನು. ಪುನೀತ್‌ ಅವರಿಗೂ ನನಗೂ ಒಳ್ಳೆಯ ಸ್ನೇಹ ಇದೆ ಎಂದು, ‘ಕೆಂಡಸಂಪಿಗೆ’ಯ ಆರಂಭದಲ್ಲಿ ಅವರದೊಂದು ಹಾಡು ಹಾಕ್ಬಿಟ್ರೆ ಏನಾಗ್ತಿತ್ತು? ಇನ್ನೂ ಓಡಿಬಿಡೋದು. ಈಗ ಓಡ್ತಿದ್ಯಲ್ಲಾ... ‘ಟಗರು’... ಆದ್ರೆ ನಾನು ಹಾಕಲ್ಲ. ಅದೇ ‘ಜಾಕಿ’ ಸಿನಿಮಾದಲ್ಲಿ ಹಾಕ್ತೀನಿ. ಈ ಸ್ಪಷ್ಟತೆ ಇರಬೇಕು. ನಮ್ಮಲ್ಲಿ ಹೊಸತಾಗಿ ಬರೋರಿಗೆ ಈ ಸ್ಪಷ್ಟತೆ ಇಲ್ಲ. ಬದುಕು, ಸೆಕ್ಸು... ಅವೆಲ್ಲ ತುಂಬ ದೂರ ಉಳೀತು, ನಮಗೆ ಯಾವ ತಿಂಡಿ ಬೇಕು ಎನ್ನುವುದರ ಬಗ್ಗೆಯೂ ನಮಗೆ ಕ್ಲಾರಿಟಿ ಇರಲ್ಲ.

*. ಚಿತ್ರನಿರ್ಮಿತಿಯಲ್ಲಿ ನೀವು ಸ್ಕ್ರಿಪ್ಟ್‌ಗೆ ಎಷ್ಟು ಮಹತ್ವ ಕೊಡ್ತೀರಿ?

ತುಂಬ ಜನ ನನ್ನ ಬಳಿ ಒಳ್ಳೆಯ ಸ್ಕ್ರಿಫ್ಟ್‌ ಇದೆ ಅಂತಿರ್ತಾರೆ. ಅಯ್ಯೋ, ಸ್ಕ್ರಿಪ್ಟ್‌ ಇಂಪಾರ್ಟೆಂಟ್‌ ಅಲ್ಲ ಗುರು... ನನ್ನ ‘ಪಾಪ್‌ಕಾರ್ನ್‌ ಮಂಕಿ ಟೈಗರ್‌’ ಸಿನಿಮಾದ ಸ್ಕ್ರಿಪ್ಟ್‌ ಕೊಟ್ಬಿಡ್ತೀನಿ. ಪಬ್ಲಿಷ್‌ ಮಾಡ್ಬಿಡ್ತೀನಿ ಬೇಕಾದ್ರೆ. ನಾನು ಮಾಡುವ ಹಂಗೆ ಸಿನಿಮಾ ಮಾಡ್ಕೊಡ್ತೀರಾ ಯಾರಾದ್ರೂ? ಬೇರೆಯವ್ರು ಮಾಡಿದ್ರೆ ಬೇರೇನೇ ಆಗಿರುತ್ತೆ.

ಸೂರ್ಯ ಮುಳುಗೋದನ್ನು ನೋಡಿ ನಿಮ್ಮ ತಲೇಲಿ ಸಾವಿರ ವಿಷಯ ಓಡಬಹುದು, ನನ್ನ ತಲೇಲಿ ಬೇರೆಯದೇ ಸಾವಿರ ಓಡ್ತಿರ್ತದೆ. ಕ್ಷಣ ಕ್ಷಣ ಕ್ಷಣ ಚೇಂಜಾಗ್ತಿದೆ ಅದು. ನಾನ್‌ ಹೇಳ್ತೀನಿ ‘ಹಿಡಿದ್ಬಿಟ್ಟೆ’ ಅಂತ. ಯಾವುದನ್ನು ಹಿಡ್ದಿದ್ದು? ಒಂದು ಸಣ್ಣ ಮೂವ್‌ಮೆಂಟ್ ಅನ್ನು. ಅದಾದ ಮೇಲೆ ಅಲ್ಲೇನೇನೋ ಆಗ್ತಿರ್ತದಲ್ಲಾ... ನಮ್ಮ ಪ್ರಕಾರ ಸೂರ್ಯ ಮುಳುಗ್ತಿರ್ತಾನೆ. ಆದೇ ಸಮಯಕ್ಕೆ ಸುಮಾರು ಪ್ರಾಣಿ, ಪಕ್ಷಿ ಸಂಕುಲ ಎಲ್ಲ ಎದ್ದು ಬಿಡ್ತವೆ. ಹಾಗಾದ್ರೆ ಅವಕ್ಕೆ ಏನಾಗ್ತಿರ್ತದೆ ಆ ಗಳಿಗೆ? ಅವಕ್ಕೆಲ್ಲ ‘ಬೆಳಗು’ ಸಾರ್ ಅದು...

ಯಾವ್ದೋ ಲೊಕೇಶನ್ ನೋಡಲು ಹೋದಾಗ ಹೋದಾಗ ಒಂದು ಫೋಟೊ ತೆಗೆದೆ. ಬಯಲು, ಮಳೆ ಬಂದು ನಿಂತಿದೆ. ಒಂಟಿಮರ. ಅದನ್ನೇ ಬಂದು ಪೇಂಟ್‌ ಮಾಡಿದೆ (ಆ ಪೇಂಟಿಂಗ್ ತೆಗೆದು ತೋರಿಸಿದರು). ಬಯಲಲ್ಲಿ ಮಳೆ ಬಂದು ನಿಂತ ಮೇಲೆ ಎಲ್ಲೋ ಒಂದು ಕಡೆ ಬೆಳಕೆದ್ದು ಬಿಡುತ್ತೆ ಗೊತ್ತಾ? ಅದೊಂದು ಅನುಭವ. ಅದನ್ನು ಹೆಂಗೆ ಕ್ಯಾಚ್‌ ಮಾಡೋದು? ಆ ಅನುಭವದ ಜಾದೂ ಫೋಟೊದಲ್ಲಿಲ್ಲ; ಆದರೆ ನನ್ನ ಪೇಂಟಿಂಗ್‌ನಲ್ಲಿದೆ. ಮರ, ಆಕಾಶ, ಬಯಲು ಅವೆಲ್ಲವೂ ಫೋಟೊದಲ್ಲಿಯೂ ಇವೆ. ನನ್ನ ಚಿತ್ರದಲ್ಲಿಯೂ ಇವೆ. ಆದರೂ ಚಿತ್ರದಲ್ಲಿ ಮತ್ತೇನೋ ಆಗಬೇಕಲ್ಲ. ಅದು ಆ ಜಾದೂ. ಆ ಫೋಟೋನೆ ಸ್ಕ್ರಿಫ್ಟ್‌. ನಾನು ಮಾಡಿದ ಪೇಂಟಿಂಗ್ ಸಿನಿಮಾ! ಅಷ್ಟೆ.

ಇದನ್ನೂ ಓದಿ: ಯೋಗರಾಜ್ ಭಟ್ ಜೊತೆಗೆ ಸುದೀರ್ಘ ಪಟ್ಟಾಂಗ

ಅಕ್ಕಿ, ಬೇಳೆ... ಹೀಗೆ ಚಿತ್ರಾನ್ನ ಮಾಡಲು ಬೇಕಾಗುವ ಎಲ್ಲವನ್ನೂ ತಂದು ಪ್ಲೇಟಿಗೆ ಹಾಕಿಕೊಡೋದು ತಿನ್ನು ಅಂತ. ಅದು ಸ್ಕ್ರಿಪ್ಟ್‌. ಅದನ್ನೆಲ್ಲ ಸೇರಿಸಿ ಬೇಯಿಸಿದರೆ ಮಾತ್ರ ಚಿತ್ರಾನ್ನ. ಅದಕ್ಕೆ ಬೆಂಕಿ ಬೇಕು. ಇಲ್ಲಾಂದ್ರೆ ‘ಯಾವನೋ ಹಿಂಗೆ ಕೊಟ್ಟು ಹೋದ ಬೇಳೆಬಾತ್‌ ಅಂತ, ಏನೋ ಇದು’ ಅಂತ ಬೈಕೋತಾರೆ.

ಹಾಗಾದ್ರೆ ಈ ಚಿತ್ರಾನ್ನ ಮಾಡುವ ಬೆಂಕಿ ಎಲ್ಲಿಂದ ಬರತ್ತೆ? ಬದುಕು ನಿಮ್ಮಲ್ಲಿ ಆ ಬೆಂಕಿಯನ್ನು ಹುಟ್ಟಿಸತ್ತೆ. ನೀವು ಏನೇನು ನೋಡ್ಬೇಕು ಅಂತ ಇದೆಯೋ ಈ ದರಿದ್ರ ಲೈಫಲ್ಲಿ ಎಲ್ಲವನ್ನೂ ನೋಡ್ಬಿಟ್ಟು ಹೋಗ್ತೀರಾ... ನೀವು ಏನೇನು ಮಾಡ್ಬೇಕು ಅಂತಿರತ್ತೋ ಅದನ್ನೆಲ್ಲಾ ಮಾಡ್ಬಿಟ್ಟೇ ಹೋಗೋದು... ಅದರ ಮಧ್ಯ ನನ್ನ ಫುಡ್‌ ನಾನು ಸಂಪಾದನೆ ಮಾಡಿದ್ದಕ್ಕೆ ಪ್ರಶಸ್ತಿ, ಮನ್ನಣೆ ಏನೇನೋ...

ವಾಸ್ತವ ಏನೆಂದ್ರೆ ನನ್ನ ಮನೆ ಎದುರಿಗೆ ಐರನ್ ಮಾಡ್ತಿದಾನಲ್ವಾ, ಅವನಿಗೆ ಏನು ಗೊತ್ತಾಗಿದ್ಯೋ ನನಗೂ ಅಷ್ಟೇ ಗೊತ್ತಾಗಿರೋದು. ಐರನ್ ಮಾಡಿದ್ರೆ ದುಡ್ಡು ಬರತ್ತೆ ಅಂತ ಅವನಿಗೆ ಗೊತ್ತಾಗಿದೆ. ಚಿತ್ರಕಲೆ, ನನ್ನೆಲ್ಲ ಎಮೋಷನ್‌ಗಳನ್ನು ಒಂದ್ಕಡೆ ಹಾಕಿ ಸಿನಿಮಾ ಮಾಡಿದ್ರೆ ದುಡ್ಡು ಕೊಡ್ತಾರೆ ಅಂತ ನನಗೆ ಗೊತ್ತಾಗಿದೆ, ಅಷ್ಟೆ. ನನಗೆ ಕೋಟಿ ರೂಪಾಯಿ ಕೊಡ್ತಾರೆ! ಆ ವಿಷಯದಲ್ಲಿ ನಾನು ತುಂಬ ಅದೃಷ್ಟವಂತ.

* ಈ ಸತ್ಯ ನಿಮಗೆ ಹೊಳೆದಿದ್ದು ಯಾವಾಗ?

ನಾನು ತುಂಬ ಸಣ್ಣ ವಯಸ್ಸಿನಲ್ಲಿ ‘ನಂದಿನಿ’ ಕಂಪನಿಯಿಂದ ಒಂದು ಲಕ್ಷ ರೂಪಾಯಿ ಆರ್ಡರ್ ತಗೊಂಡೆ. ಅವತ್ತು ಒಂದು ಲಕ್ಷ ರೂಪಾಯಿ ನನ್ನ ಕೈಗೆ ಬಂದಾಗ ತುಂಬ ಚಿಕ್ಕ ಹುಡುಗ ನಾನು. ಆಗ ನನಗಿದ್ದ ಸಹವಾಸಗಳಲ್ಲಿ ಆ ಹಣವನ್ನು ಕುಡಿದು ತಿಂದು ಏನು ಬೇಕಾದ್ರೂ ಮಾಡ್ಬೋದಿತ್ತು. ಆದರೆ ಹಾಗೆ ಮಾಡಲಿಲ್ಲ. ಪೇಪರ್ ತಂದು ಬೋರ್ಡ್‌ಗಳನ್ನು ಮಾಡಿ ಚಿತ್ರಬರೆದು ಕೊಟ್ಟೆ. ಆಗ ನನಗೆ ಆರ್ಡರ್‌ ಕೊಟ್ಟ ವ್ಯಕ್ತಿ ಹೇಳಿದ: ‘ಇಷ್ಟು ಚಿಕ್ಕ ವಯಸ್ಸಿಗೆ ಇದನ್ನೆಲ್ಲ ಮಾಡ್ತೀಯಾ ಅಂದ್ರೆ ಮುಂದೆ ಏನೋ ದೊಡ್ಡದನ್ನು ಮಾಡ್ತೀಯಾ’ ಅಂತ. ನಾನು ಈವತ್ತಿಗೂ ಅದನ್ನೇ ಮಾಡ್ತಿದೀನಿ. ನನಗೆ ಗೊತ್ತಿರುವ ಸಂಗತಿ ಇಟ್ಕೊಂಡು ವ್ಯಾಪಾರಿ ಮಾಡ್ತಿದೀನಿ. ಅಷ್ಟೆ.

* ‘ಟಗರು’ ಸಿನಿಮಾ ಮತ್ತು ‘ಕೆಂಡಸಂಪಿಗೆ’ ಇವೆರಡೂ ಒಂದೇ ಬಗೆಯ ವ್ಯಾಪಾರ ಅನಿಸುತ್ತಾ ನಿಮಗೆ?

ನನಗೆ ಈ ಎರಡು ಸಿನಿಮಾ ಮಾಡುವಾಗಲೂ ತುಂಬ ಕ್ಲಾರಿಟಿ ಇತ್ತು. ‘ಕೆಂಡಸಂಪಿಗೆ’ ಸಿನಿಮಾ ಮಾಡುತ್ತಿರುವುದು ನನ್ನ ಸ್ನೇಹಬಳಗಕ್ಕಾಗಿ ಎಂಬ ಕ್ಲಾರಿಟಿ ನನಗಿತ್ತು. ಆದರೆ ‘ಜಾಕಿ’ ಸಿನಿಮಾ ಮಾಡುವಾಗ ‘ಇದು ಪಕ್ಕಾ ಪುನೀತ್‌ ರಾಜ್‌ಕುಮಾರ್ ಸಿನಿಮಾ, ಹಿಂಗೇ ಆಗತ್ತೆ ಇದು. ಇಂಥದ್ದೇ ಪ್ಯಾಕೇಜ್‌ ಎಂಬ ಕ್ಲಾರಿಟಿ ಇತ್ತು. ನೋಡಿ ‘ಪ್ಯಾಕೇಜ್‌’ ಎಂಬ ಶಬ್ದ ಬಂತು. ಹೌದು, ಅದು ಪ್ಯಾಕೇಜ್ ಎಂಬ ಕ್ಲಾರಿಟಿ ಇತ್ತು. ಟಗರು, ಕಡ್ಡಿಪುಡಿ ಸಿನಿಮಾ ಮಾಡುವಾಗಲೂ ನನಗೆ ಇದೇ ಕ್ಲಾರಿಟಿ ಇತ್ತು. ಈಗ ನಾನು ಮಾಡ್ತಿರೋ ‘ಪಾಪ್‌ಕಾರ್ನ್‌ ಮಂಕಿ ಟೈಗರ್‌’ ಸಿನಿಮಾದ ಒಂದೊಂದು ಶಾಟ್‌ ಬೇಕಾದ್ರೂ ಹೇಳ್ತೀನಿ. ನೀವು ಬೇಕಾದ್ರೆ ಸಿನಿಮಾ ಬಿಡುಗಡೆಯಾದ ಮೇಲೆ ನೋಡಿ.

ತರಕಾರಿ ಹೆಚ್ಚೋವಾಗಲೇ ನಾನು ಉಪ್ಪಿಟ್ಟು ಮಾಡ್ತೀನಾ, ಬೇಳೆಬಾತ್‌ ಮಾಡ್ತೀನಾ, ಬಿರಿಯಾನಿ ಮಾಡ್ತೀನಾ ಅನ್ನೋದು ಪಕ್ಕಾ ಇರ್ಬೇಕು. ಸುಮ್ನೆ ಪ್ಲೇಟಿಗೆ ಹಾಕ್ಕೊಟ್ಟು ‘ಏನನಿಸತ್ತೆ ನೋಡಿ’ ಅಂತೆಲ್ಲ ಹೇಳ್ಬೇಡಿ. ಅದು ಹೊಸ ತಿನಿಸಾಗಿದ್ದರೆ ಅದನ್ನಾದರೂ ಹೇಳಿ, ‘ಹೊಸ ರೀತಿ ತಿಂಡಿ ಸಾರ್. ಮೊಟ್ಟೆಯಲ್ಲಿ ಮಾಡೋದು. ಕಂಡುಹಿಡಿದುಬಿಟ್ಟಿದೀನಿ’ ಅಂತಾದ್ರೂ ಹೇಳಿ. ಜನ ತಿಂದ್ಬಿಟ್ಟು ಹೇಗಿದೆ ಅಂತ ಹೇಳ್ತಾರೆ. ಆದರೆ ಈ ಕ್ಲಾರಿಟಿ ಇಲ್ಲದೇನೆ ಯಾವ ಪ್ರೊಡ್ಯೂಸರ್‌ ಹಾಳುಮಾಡೋಕೆ ಸಿನಿಮಾ ಮಾಡಲಿ ನಾನು?

‘ಕೆಂಡಸಂಪಿಗೆ’ ಸಿನಿಮಾ ನಾನೇ ನಿರ್ಮಾಣ ಮಾಡಿದೆ. ಯಾಕೆಂದರೆ ಬೇರೆ ನಿರ್ಮಾಪಕರಿಗೆ ನಾನು ಆ ‘ಥಾಟ್‌’ ಅನ್ನು ಅರ್ಥ ಮಾಡಿಸಲ್ಲ. ಯಾವತ್ತೂ ಮಾಡಿಸಲ್ಲ. ‘ಕಾಗೆಬಂಗಾರ’ ಸಿನಿಮಾ ನಿರ್ಮಾಣ ಮಾಡೋಕೆ ಮುಂದೆ ಬಂದ ಎಷ್ಟೋ ನಿರ್ಮಪಕರಿಗೆ ನಾನೇ ಬೇಡ ಅಂತ ಹೇಳಿದೀನಿ. ‘ಟಗರು’ ನಿರ್ಮಾಪಕ ಶ್ರೀಕಾಂತ್ – ‘ಕಾಗೆ ಬಂಗಾರ ನಿಮ್ಮ ಆಸೆಯ ಸಿನಿಮಾ ಅಲ್ವಾ. ಅದನ್ನು ಮಾಡಿ’ ಅಂದ್ರು. ನಾನು ಒಪ್ಪಲಿಲ್ಲ. ಮತ್ತೆ ನಾನು ಕಮರ್ಷಿಯಲ್‌ ಸಿನಿಮಾ ಮಾಡ್ಬೇಕು. ನನಗಿನ್ನೂ ಫುಡ್‌ ಬೇಕು.

ನಾನು ಇನ್ನೇನೋ ಬಿಡಿಸೋದಕ್ಕೆ ಒಂದಿಷ್ಟು ಪರಿಕರಗಳು ಬೇಕು. ಬಣ್ಣಗಳು, ಕ್ಯಾನ್ವಾಸು ಬೇಕು. ಅದನ್ನು ಮೋಸ ಮಾಡಿ ತಗೋಬೇಕಿಲ್ಲ. ಆ ಪರಿಕರಗಳನ್ನು ಹೊಂದಿಸಿಕೊಳ್ಳಲು ನಾನು ನೀಡುವ ಮನರಂಜನೆಗೆ ಏನು ಬೇಕೋ ಅದನ್ನು ಕೊಡ್ತೀನಿ. ಬಿರಿಯಾನಿಗೆ ಬೇಡಿಕೆ ಇದ್ದಾಗ ಅದನ್ನೇ ಕೊಡ್ಬೇಕು ನೀವು. ಬಿರಿಯಾನಿ ಆರ್ಡರ್ ತಗೊಂಡು, ‘ಇಲ್ಲ ಸರ್, ಚಿತ್ರಾನ್ನ ಇದೆ. ಅದರಲ್ಲಿ ಒಂದೊಂದು ಪೀಸ್‌ ಇಟ್ಟು ಕೊಟ್ಬಿಡ್ತೀನಿ’ ಅಂದ್ರೆ ಹೊಡಿಯಲ್ವಾ ನನ್ನ? ಬೇಕಾದ್ರೆ ಅದಕ್ಕೆ ದನಿಯಾ ಪೌಡರ್ ಹಾಕಿಕೊಡ್ತೀನಿ. ಗೊತ್ತೇ ಆಗಲ್ಲ ಯಾರಿಗೂ ಅಂದ್ರೆ? ಗೊತ್ತಾಗಲ್ವಾ ಜನರಿಗೆ?

‘ಕಾಗೆ ಬಂಗಾರ’ವೂ ಒಂದು ಮನರಂಜನೆಯೇ. ಆದರೆ ಅದು ಈ ಕಮರ್ಷಿಯಲ್‌ ಸಿನಿಮಾಗಳ ಪ್ರಪಂಚಕ್ಕೆ ಒಗ್ಗಿಕೊಳ್ಳದ ಮನರಂಜನೆ. ಅದು ಒಂದು ಹೊಸ ಬಗೆಯ ತಿನಿಸನ್ನು ಮಾಡಿ ತಿನ್ನಿಸುವುದು.

‘ಟಗರು’ ಚಿತ್ರಕ್ಕೆ ಚರಣ್‌ ರಾಜ್‌ ಸಿನಿಮಾ ಮ್ಯೂಸಿಕ್ ಮಾಡಿದೋರು. ಆದರೆ ನಾರ್ಮಲ್ ಇಸ್ತ್ರಿ ಮಾಡುವ ಮನುಷ್ಯ ನನ್ನ ಸಿನಿಮಾದ ಅಷ್ಟೂ ಹಾಡುಗಳನ್ನು ಗೆಲ್ಲಿಸುತ್ತಾನಲ್ಲಾ, ಸಂಗೀತ ಗೊತ್ತಿರೋದು ಚರಣ್‌ಗಾ ಅಥವಾ ಆ ಇಸ್ತ್ರಿ ಮಾಡುವ ಮನುಷ್ಯನಿಗಾ? ಚಿತ್ರಕಥೆ ಯಾರಿಗೆ ಗೊತ್ತು? ಸೂರಿಗೆ ಗೊತ್ತಾ? ನನ್ ತಾಯಾಣೆ ಗೊತ್ತಿಲ್ಲ. ಚಾರ್ಲಿ ಚಾಪ್ಲಿನ್‌ನಿಂದ ಹಿಡಿದು ಮಣಿರತ್ನಂವರೆಗೆ ಎಷ್ಟೆಲ್ಲ ಜನರು ಸಿನಿಮಾಗೆ ಸರಿಯಾದ ಪಾಯ ಹಾಕಿಕೊಟ್ಟವ್ರೆ. ಸುಮ್ನೆ ಅಲ್ಲ ಸಿನಿಮಾ. ಗಟ್ಟಿಮುಟ್ಟಾದ ಪಾಯ ಇದೆ. ನಿಂತ್ ಆಡಕ್ಕೆ ಬರ್ಬೇಕು. ಅಂದ್ರೆ ಕನಿಷ್ಠ ಆ ಪ್ರಜ್ಞೆ, ಸ್ಪಷ್ಟತೆ ಇರಬೇಕು.

ಇದನ್ನೂ ಓದಿ: ಬಬ್ಲಿ ಬಬ್ಲಿ ಜಗತ್ತಿನ ಬುದ್ಧಿವಂತೆ ಶೃತಿ ಹರಹರನ್

* ಸಿನಿಮಾ ಸ್ಕ್ರಿಪ್ಟ್‌ ಗೊತ್ತಿಲ್ಲ ಅಂತೀರಿ. ಸಿನಿಮಾ ಗೊತ್ತಿಲ್ಲ ಅಂತೀರಿ. ಕ್ಲಾರಿಟಿ ಇರಬೇಕು ಅಂತ್ಲೂ ಹೇಳ್ತೀರಿ. ವೈರುಧ್ಯ ಅಲ್ವಾ ಇದು?

ಅಲ್ಲಲ್ಲ, ಅಡುಗೆ ಕಲಿಯೋಕೆ ಹೋಗ್ಬೇಕು. ಹಾಗೆ ಹೋಗ್ಬೇಕಾದ್ರೆ ನನಗೆ ಅಡುಗೆಯ ಹುಚ್ಚು ಮೊದಲಿನಿಂದಲೂ ಇರಬೇಕು. ಹಾಗೆ ಹುಚ್ಚಿದ್ದಾಗ ಮಾತ್ರ ಅಲ್ಲಿ ಬೆಳೆಯಲು, ಉಳಿಯಲು ಸಾಧ್ಯ. ‘ಈ ಹುಡುಗನಿಗೆ ಈರುಳ್ಳಿ ಕಟ್‌ ಮಾಡೋದು ಗೊತ್ತಿದೆ’ ಅಂತ ಆ ಕೆಲಸ ಕೊಡ್ತಾರೆ. ಆದರೆ, ಎಲ್ಲವನ್ನೂ ಕತ್ತರಿಸಿಕೊಟ್ಟವರು ಬೇರೆಯವರೇ. ಒಲೆ ಮುಂದೆ ನಿಂತುಕೊಂಡು ಅವನ್ನೆಲ್ಲ ಬೆರೆಸಿ ಬಿರಿಯಾನಿ ಮಾಡುವ ಜಾದೂ ಇದೆ ನೋಡಿ. ಆ ಉರಿ, ಎಣ್ಣೆ.. ಯಾವ ಟೈಮಲ್ಲಿ ಏನು ಹಾಕಿ ಎಷ್ಟು ತಿರುವಬೇಕು ಎಂಬ ಹದ ಇರ್ತದಲ್ಲಾ? ಅದು ಅಡುಗೆ. ಇದಕ್ಕೆ ಯಾವ ಎಜುಕೇಶನ್ ಬೇಕು ಹೇಳಿ? ಯಾವ ಟೆಕ್ಸ್ಟ್‌ಬುಕ್‌ ಇದನ್ನು ಕಲಿಸಿಕೊಡ್ಲಿಕ್ಕೆ ಸಾಧ್ಯ ಹೇಳಿ? ನಾನೂ ಹೀಗೆ ಈರುಳ್ಳಿ ಕಟ್‌ ಮಾಡುವ ಕೆಲಸದಿಂದಲೇ ಶುರುಮಾಡಿ ಬಿರಿಯಾನಿ ಮಾಡಲು ಕಲಿತಿದ್ದು.

ಸಿನಿಮಾದಲ್ಲಿಯೂ ಹಂಗೆ. ಸಿನಿಮಾ ಮಾಡೋಕೆ ಲೆನ್ಸ್‌ ಕಂಡುಹಿಡಿದೋನು ಯಾರು ಅನ್ನೋದು ನನಗೆ ಬೇಕಾ? ನಾನು ಬುಕ್‌ ಇಟ್ಕೊಂಡು ಏನೂ ಕಲಿಯಲಿಲ್ಲ ಎಂದು ಹೇಳಿದೆ ಅಷ್ಟೆ.

ನಾನು ಕಲಿತಿದ್ದು ಬಿರಿಯಾನಿ ಮಾಡುವುದನ್ನು. ನಾನು ಕಾವೇರಿ ನಗರದ ಕುರಿತಷ್ಟೇ ಮಾತಾಡಬಲ್ಲೆ. ಡಾಲರ್ಸ್‌ ಕಾಲೋನಿ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಜೀವನದೃಷ್ಟಿ ಇದು. ಇನ್ನೊಬ್ಬರದಲ್ಲ, ಎಲ್ಲೋ ಓದಿದ್ದಲ್ಲ. ಯಾಕೆ ಓದ್ಕೊಂಡಿಲ್ಲ ಅಂತ ಕೇಳ್ಬೋದು. ನನಗದರ ಅವಶ್ಯಕತೆ ಇಲ್ಲ. ಸುಮ್ನೆ ಥಿಯರಿಯನ್ನೇ ನೆಚ್ಚಿಕೊಳ್ಳೋದ್ರಿಂದ ಏನೂ ಆಗೋದಿಲ್ಲ. ಅದರ ಅವಶ್ಯಕತೆ ಇಲ್ಲ. ಮತ್ತೆ ತಿರುಗಾ ಅಲ್ಲಿಗೇ ಬರುವುದಾದರೆ, ಅನ್ನಕ್ಕೋಸ್ಕರ ಕೆಲಸ ಮಾಡಿ, ಆಗ ಅದರ ಫಲಿತಾಂಶವೇ ಬೇರೆ ಇರುತ್ತೆ. ಆದರೆ ನಾನು ಹೇಳ್ತಿರೋದು ಯಾರಿಗೂ ಅರ್ಥ ಆಗ್ತಿಲ್ಲ.

* ಫುಡ್ಡಿಗೋಸ್ಕರ ಮಾಡ್ತೀರಿ ಅನ್ನೋದು ಸರಿ. ‘ಟಗರು’ವಿನಂಥ ಇನ್ನಷ್ಟು ಸಿನಿಮಾ ಮಾಡಿದರೆ ಇನ್ನೂ ಒಳ್ಳೆಯ ಫುಡ್‌ ಸಿಗುತ್ತೆ ನಿಮಗೆ. ಆದ್ರೂ ಅದರ ನಂತರ ಫುಲ್‌ ಮೀಲ್ಸ್‌ ಫುಡ್‌ ಕೊಡಲಾಗದ ‘ಕೆಂಡಂಪಿಗೆ’, ಒಂದು ‘ಕಾಗೆಬಂಗಾರ’ ಮಾಡಬೇಕು ಅಂತ ಅನಿಸುತ್ತದಲ್ಲ. ಯಾಕೆ? 

ನಾನು ಹೋಟೆಲಲ್ಲಿ ಮಾರುವ ಅಡುಗೆಯೇ ಬೇರೆ, ಮನೆಗೆ ಫ್ರೆಂಡ್ಸ್‌ ಬಂದಾಗ ಮಾಡುವ ಅಡುಗೆಯೇ ಬೇರೆ. ಮನೆಯಲ್ಲಿ ಮಾಡುವ ಅಡುಗೆ ನನ್ನಿಷ್ಟದ್ದು. ಅದನ್ನು ನನ್ನ ಫ್ರೆಂಡ್ಸಿಗೆ ಮಾಡಿ ಬಡಿಸುತ್ತೇನೆ, ಅಷ್ಟೇ. ಆದರೆ ಕಮರ್ಷಿಯಲ್‌ ಆಗಿ ದುಡಿಯುತ್ತಿರುವವರ ಬಳಿ ಹೋಗಿ ಆ ಅಡುಗೆ ಮಾಡಬಾರದು. ಅವನಿಗೆ ಮೋಸ ಮಾಡಲಿಕ್ಕೆ ನಂಗಿಷ್ಟ ಇಲ್ಲ. ಇದರಲ್ಲಿಯೂ ನನಗೆ ಗೊತ್ತಿರುವ ಒಂದು ಸತ್ಯ – ಹಸಿವಾದಾಗಲೇ ಎಲ್ಲ ಪ್ರತಿಭೆಗಳೂ ಆಚೆ ಬರುವುದು. ಹಸಿವೆ ಎನ್ನುವುದಕ್ಕೆ ಬೇರೆ ಬೇರೆ ಅರ್ಥಗಳಿವೆ ಬಿಡಿ.

* ಆಗ ನೀವು ಮಾತನಾಡುತ್ತ ‘ಕೆಂಡಸಂಪಿಗೆ’ ಬೇರೆ, ‘ಜಾಕಿ’ ಸಿನಿಮಾ ಬೇರೆ ಅಂತ ಹೇಳಿದ್ರಿ. ನಿಜವಾಗ್ಲೂ ಅವು ಬೇರೆ ಬೇರೆಯೇ?

ಕೆಲಸ ಒಂದೇ. ಫಂಕ್ಷನ್‌ ಬೇರೆ. ‘ಜಾಕಿ’ ಸಿನಿಮಾದಲ್ಲಿ ಪುನೀತ್‌ ರಾಜ್‌ಕುಮಾರ್‌ಗೆ ಒಂದು ಇಮೇಜ್‌ ಅಂತಿದೆ. ಹೀರೊಯಿಸಂ ಇದೆ. ಅದಕ್ಕೆ ಮಾರುಕಟ್ಟೆಯಲ್ಲಿ ಇಷ್ಟು ಬೆಲೆ ಇದೆ ಅಂತಾನೇ ಒಬ್ಬ ನಿರ್ಮಾಪಕ ನನ್ನ ಹತ್ರ ಬಂದಿರ್ತಾನೆ. ಪುನೀತ್‌ ರಾಜ್‌ಕುಮಾರ್‌ ಅವರ ಡೇಟ್ಸ್‌ ತಗೊಂಡು ನಿರ್ಮಾಪಕ ಯಾಕೆ ನನ್ನತ್ರ ಬರ್ತಾರೆ ಹೇಳಿ? ಪುನೀತ್‌ ಅವರು ‘ಅಪ್ಪು’ವಿನಿಂದ ಇಲ್ಲಿಯವರೆಗೆ ಎಷ್ಟ್ ಸಿನಿಮಾ ಮಾಡಿದಾರೆ, ಎಂಥ ಸಿನಿಮಾ ಮಾಡಿದಾರೆ, ನನ್ನ ಕ್ಯಾನ್ವಾಸ್‌ಗೆ ಅವರ ಇಮೇಜ್‌ ಅನ್ನು ಹೇಗೆ ಒಗ್ಗಿಸಿಕೊಳ್ಳಬಹುದು ಎಂಬ ಸ್ಪಷ್ಟತೆ ನನಗಿರ್ಬೇಕು. ಈ ಕಲರ್‌ನ ನನ್ನ ಸ್ಟೈಲ್‌ಗೆ ಹೆಂಗೆ ಬಳಸಿಕೊಳ್ಳಬಹುದು ಎಂಬುದು ತಿಳಿದಿರಬೇಕು.

ಈವರೆಗೆ ನಾನು ಮಾಡಿರುವ ಒಂಬತ್ತು ಸಿನಿಮಾಗಳಲ್ಲಿ ನನ್ನದು ಅಂತ ಒಂದು ಸ್ಟೈಲ್‌ ರೂಪುಗೊಂಡಿದೆ. ತೆರೆಮೇಲೆ ಬರುವ ಸಿನಿಮಾ ನೋಡಿ ‘ಈ ಸೂರಿ ಗೊತ್ತು ನಂಗೆ’ ಅಂತ ಹೇಳೋ ಜನ ಇದಾರಲ್ವಾ. ಗೊತ್ತು ಅಂದ್ರೆ ಹೇಗೆ ಗೊತ್ತು? ನನ್ನ ಆಸ್ತಿ, ನನ್ನ ಹಿನ್ನೆಲೆ ಅಥವಾ ಯಾವ್ದೇ ಎಜುಕೇಷನ್‌ ಹಾಳು ಮೂಳೂ ಅಲ್ಲ ಗೊತ್ತಿರೋದು. ನನ್ನ ಕೆಲಸ ಮಾತ್ರ ಗೊತ್ತಿರುತ್ತೆ ಅವರಿಗೆ. ಅದೇ ರೀತಿ ಪುನೀತ್‌ ರಾಜ್‌ಕುಮಾರ್‌ ಅವರೂ ಪ್ರೇಕ್ಷಕರಿಗೆ ಒಂದು ಬಗೆಯಲ್ಲಿ ಪರಿಚಯ ಆಗಿದ್ದಾರೆ. ನಾವಿಬ್ರೂ ಸೇರಿ ಏನು ಮಾಡ್ತೀವಿ ಎನ್ನುವ ಕ್ಲಾರಿಟಿ ಇರಬೇಕು. ಅವ್ರನ್ನು ತಗೊಂಡುಬಂದು, ‘ನನ್ನ ಕನಸು ಅಂತ್ಹೇಳಿ’ ಅವರ ಇಮೇಜಿಗೆ ಸಂಬಂಧವೇ ಇಲ್ದೆ ಇರೋದಕ್ಕೆ ಮ್ಯಾಚ್‌ ಮಾಡೋದಿದ್ಯಲ್ಲಾ, ಅದು ತಪ್ಪು. ಈಗ ಆಗ್ತಿದರೋದೇ ಅದು. ಸಾರಿ, ದೇವ್ರಾಣೆ... ಕನ್ಸು ಗಿನ್ಸು ಎಲ್ಲಾ ಮಾರುಕಟ್ಟೇಲಿ ನಡ್ಯಲ್ಲ..

ನಿಮ್ಮ ಯಾವ ಪ್ರಶಸ್ತಿಯೂ ನನ್ನ ಯಾವ್ದೇ ಹೋಟೆಲಲ್ಲಿ ಹೋದ್ರೆ ತಗೋಣಲ್ಲ. ಎಸ್‌ಎಲ್‌ವಿ ಹೋಟೆಲ್‌ಗೆ ಹೋಗಿ ಇಡ್ಲಿ ಕೇಳಿದ್ರೆ ಅವನು ಕೇಳೋದು ದುಡ್ಡು. ತಿರುಗಾ ಅಲ್ಲಿಗೇ ಬರ್ತಿದೀನಿ, ಎಲ್ಲರೂ ಬದುಕೋಕೆ ದುಡ್ಡು ಬೇಕು. ಎಷ್ಟು ಬೇಕು ಎಂಬುದು ಗೊತ್ತಿರಬೇಕು. ನನಗೆ ಗೊತ್ತಿದೆ, ನನ್ನ ಬದುಕಿಗೆ ಎಷ್ಟು ದುಡ್ಡು ಬೇಕು ಅಂತ. ಅದೇ ಕಾರಣಕ್ಕೆ ನನಗೆ ಪುನೀತ್ ರಾಜ್‌ಕುಮಾರ್ ಯಾವಾಗ ಬೇಕೋ ಆವಾಗ ಅವರ ಜತೆ ಸಿನಿಮಾ ಮಾಡ್ತೀನಿ. ಬಿಕಾಸ್‌ ದಿಸ್‌ ಈಸ್ ಮೈ ಲೈಫ್‌.  ನನಗೊಂದಿನ ಇದರಿಂದ ಫುಡ್‌ ಬೇಡ ಅನ್ನಿಸಿದ್ರೆ ಕ್ಯಾನ್ಸಲ್ ಮಾಡ್ತೀನಿ. ಚಿತ್ರಕಲೆಯಲ್ಲಿ ನನಗೆ ಬೇಕಾದಷ್ಟು ದುಡ್ಡು ಸಿಗುತ್ತೆ ಅಂದ್ರೆ ಸಿನಿಮಾ ಬಿಟ್ಟು ಅಲ್ಲಿಗೇ ಹೋಗ್ತೀನಿ. ಇಲ್ಲಿ ನನ್ನ ಯೋಚನೆಯನ್ನು ನೂರೈವತ್ತು ಜನರಿಗೆ ಒಪ್ಪಿಸ್ಬೇಕು, ಇಡೀ ಕರ್ನಾಟಕದ ಜನರಿಗೆ ಒಪ್ಪಿಸ್ಬೇಕು. ಆ ಜವಾಬ್ದಾರಿಯಿಂದ ತಪ್ಪಿಸ್ಕೋತೀನಿ.

ಎಲ್ಲಿಗೂ ಅಂಟಿಕೊಳ್ಳಲು ನನಗೆ ಸಾಧ್ಯಾನೇ ಇಲ್ಲ. ಇದಾದ್ಮೇಲೆ ಅದು ಮಾಡ್ತೀನಿ. ಆಮೇಲೆ ಆ ಥರದ್ದೊಂದು ಕೆಲಸ ಮಾಡಿಬಿಟ್ರೆ ನನ್ನ ಕೊನೆ ಅಂತ ಸಾಧ್ಯವೇ ಇಲ್ಲ. ‘ಪಾಪ್‌ ಕಾರ್ನ್‌ ಮಂಕಿ ಟೈಗರ್‌’ ಸಿನಿಮಾನೇ ನನ್ನ ಕೊನೆಯ ಸಿನಿಮಾ ಆಗುತ್ತಾ... ಗೊತ್ತಿಲ್ಲ. ನಾಲ್ಕು ಜನ ಸ್ನೇಹಿತರನ್ನು ಹಿಡ್ಕೊಂಡು ಅಡುಗೆ ಮಾಡ್ಕೊಂಡು ಹೋದ್ರೂ ಹೋದೆ.

ಸಿನಿಮಾಗೂ ಹೀಗೇ ಬಂದಿದ್ದೆ. ನೋ ಕನ್ಸರ್ನ್‌, ನಥಿಂಗ್‌. ಫುಡ್ಡಿಗೋಸ್ಕರ ಇಲ್ಲಿಗೆ ಬಂದಿದ್ದು. ‘ದುನಿಯಾ’ ಮಾಡಬೇಕಾದರೆ ತಿಂಗಳ ನಂತರ ಒಂದು ರೂಪಾಯಿ ಇರ್ಲಿಲ್ಲ ನನ್ನತ್ರ. ಅದಕ್ಕೋಸ್ಕರ ಮಾಡಿದ್ದು. ಒಂದೊಮ್ಮೆ ಆ ಸಿನಿಮಾ ದಬ್ಬಾಕ್ಕೊಂಡುಬಿಟ್ಟಿದ್ರೆ ನನಗೆ ಗೊತ್ತಿರೋ ಚಿತ್ರಕಲೆಯನ್ನು ಮತ್ತೆ ಫುಡ್ಡಿಗೆ ಬಳಸೋಕೆ ಶುರುಮಾಡ್ತಿದ್ದೆ. ಯಾವ್ದೋ ಆರ್ಟ್‌ ಡಿಪಾರ್ಟ್‌ಮೆಂಟಲ್ಲಿ ಕೆಲಸ ಮಾಡ್ಕೊಂಡು ಇರ್ತಿದ್ದೆ. ಅಲ್ಲೂ ಇದಕ್ಕಿಂತ ಚೆನ್ನಾಗಿರ್ತಿದ್ದೆ.

ನನ್ನ ನೋಡಿ ಸುಮಾರು ಜನ ‘ವೋ ಇವ್ನು ವೆರಿ ಲಕ್ಕಿ’ ಅಂತೆಲ್ಲ ಅಂದ್ಕೋತಾರೆ. ಅಲ್ವೇ ಅಲ್ಲ. ನಾನು ಲಕ್ಕಿ ಎನ್ನೋದೆಲ್ಲ ಸುಳ್ಳು. ಈವತ್ತಿಗೆ ನನ್ನ ಬದುಕನ್ನು ಇದು ನಡೆಸ್ತಿದೆ ಅಷ್ಟೆ. ಲಕ್ಕಿ ಎನ್ನೋದೆಲ್ಲ ನಂಬೋದೇ ಇಲ್ಲ ನಾನು. ನೀನು ನಿರಂತರವಾಗಿ ಕೆಲಸ ಮಾಡ್ತಾ ಹೋಗು, ಏನು ಬೇಕಾದ್ರೂ ಆಗುತ್ತೆ ಅನ್ನೋದು ನನ್ನ ನಂಬಿಕೆ.

* ನೀವು ಚಿತ್ರಕಲೆಯಿಂದ ಸಿನಿಮಾಗೆ ಬಂದ ಸಂದರ್ಭ ಯಾವುದು?

ಐದು ವರ್ಷ ಚಿತ್ರಕಲೆ ಅಭ್ಯಾಸ ಮಾಡಿದ ನಂತರ, ಚೆನ್ನೈಗೆ ಹೊರಟೆ. ಅಲ್ಲಿ ಎರಡು ವರ್ಷ ಇದ್ದೆ. ಅಲ್ಲಿ ‘ಕಲರಿಸಂ’ ಅಂತ ಒಂದು ತಂಡ ಶುರುಮಾಡಿದೆವು. ನಾನು ನನ್ನ ಸ್ನೇಹಿತರಾದ ಡೇವಿಡ್‌ ಮತ್ತು ಫೈಸಲ್‌ ಮೂವರೂ ಸೇರಿ ಶುರು ಮಾಡಿದ ತಂಡ ಅದು. ಶಾಪರ್‌ಸ್ಟಾಪ್, ನೈಕಿ, ರೇಮಂಡ್ ಕಂಪನಿಗಳಿಗೆಲ್ಲ ವಿಂಡೊ ಡಿಸ್‌ಪ್ಲೇ ಮಾಡುತ್ತಿದ್ದೆವು.

ಒಂದೊಂದು ವರ್ಷದ ಡೆಕೊರೆಷನ್ ನಮ್ಮ ಕೈಯಲ್ಲಿರುತ್ತಿತ್ತು. ಅವತ್ತಿಗೆ ಹದಿನೈದು ಲಕ್ಷದಿಂದ ಇಪ್ಪತ್ತು ಲಕ್ಷದವರೆಗೆ ವ್ಯವಹಾರ ಇತ್ತು ನಮ್ಮ ಕಂಪನಿಗೆ. ನಾವೇ ನಷ್ಟ ಮಾಡ್ಕೊಂಡ್ವಿ. ವಯಸ್ಸು ಅಂಥದ್ದು. ಕೆಲಸ ಗೊತ್ತಿತ್ತಲ್ಲ, ತುಂಬ ಕೊಬ್ಬು. ಅದರಿಂದಾಗೇ ಲಾಸ್‌ ಮಾಡ್ಕೊಂಡ್ವಿ. ಶೋಕಿಗೆ ಬಿದ್ವಿ. ಚೆನ್ನೈ ಸುತ್ತುತಿದ್ವಿ. ಸಿಕ್ಕಾಪಟ್ಟೆ ಸಿನಿಮಾ ಹುಚ್ಚು. ಸಿನಿಮಾಗೆ ಬರಬೇಕು ಅಂತಿರ್ಲಿಲ್ಲ. ಆದ್ರೆ ತುಂಬ ಸಿನಿಮಾಗಳನ್ನು ನೋಡ್ತಿದ್ವಿ. ಬಾಯಿಗೆ ಬಂದಂಗೆ ಬೈತಿದ್ವಿ. ಎಲ್ಲ ಸಿನಿಮಾಗಳಿಗೂ ಬೈತಿದ್ವಿ. ‘ಈ ನನ್ಮಕ್ಳಿಗೆ ಏನೂ ಮಾಡೋಕೆ ಬರಲ್ಲ, ನಮಗೆ ಬರತ್ತೆ’ ಅಂತ. ಏನ್‌ ಬರುತ್ತೆ... ಗೊತ್ತಿಲ್ಲ.

ಚೆನ್ನೈನ ಬದುಕು ನನಗೀವತ್ತಿಗೂ ತುಂಬ ಇಷ್ಟ. ಅಲ್ಲಿನ ಬೆವರಿಗೋ ಜನಸಂಖ್ಯೆಗೋ ಗೊತ್ತಿಲ್ಲ. ಅಲ್ಲಿ ಒಬ್ಬ ಕಾರ್ಪೆಂಟರಿಗೆ ಒಂದು ಆರ್ಡರ್‌ ಬಂತು ಅಂದ್ರೆ ಅವನು ಅವನ ನಾಲ್ಕು ಜನ ಸ್ನೇಹಿತರಿಗೆ ಕಾಲ್‌ ಮಾಡಿ ಹೇಳ್ತಾನೆ. ‘ಮಚ್ಚಿ, ಇದೊಂದು ಕೆಲಸ ಬಂದಿದೆ. ಇದನ್ನು ನೀನು ಮಾಡು. ನಾನೂ ಸಹಾಯ ಮಾಡ್ತೀನಿ’ ಅಂತ ಹೇಳ್ತಾನೆ. ನಾನು ಕಣ್ಣಾರೆ ನೋಡಿದೀನಿ. ಅಲ್ಲಿ ಯಾರ ಕೆಲಸಾನೂ ಯಾರೂ ಕಿತ್ಕೊಳಲ್ಲ.

ಇಲ್ಲಿ ಬೆಂಗಳೂರಿನ ಗೂಡ್‌ಶೆಡ್‌ ರೋಡ್ ಇದ್ಯಲ್ಲಾ, ಆ ಥರದ ಏರಿಯಾದಲ್ಲಿ ನಾನಿದ್ದೆ. ತುಂಬ ಚೆನ್ನಾಗಿತ್ತು. ಎದ್ದೇಳ್ತಾ ಇದ್ದಿದ್ದು ಬೆಳಿಗ್ಗೆ ಹನ್ನೊಂದೂವರೆಗೆ. ಅಷ್ಟೊತ್ತಿಗೆ ಎದ್ರೆ ಟೀ ಬಿಸ್ಕೆಟ್‌ನಿಂದ ಶುರುವಾಗಿ ಕರೆಕ್ಟಾಗಿ ಎರಡು ಗಂಟೆಗೆ ಒಂದು ಪೂರ್ತಿ ಊಟ. ಪೂರ್ತಿ ಊಟ ಅಂದ್ರೆ ಬಿರಿಯಾನಿ ತಿಂದ್ಕೋತಿಯಾ, ಏನು ತಿಂದ್ಕೋತಿಯಾ ತಿಂದ್ಕೊ. ಅಷ್ಟೆ ಅದು. ಅಲ್ಲಿಂದ ಮತ್ತೆ ಊಟ ಮಾಡೋದು ರಾತ್ರಿ ಒಂದು ಗಂಟೆಗೆ. ಅಲ್ಲಿವರೆಗೂ ಬರೀ ಟೀ ಸಿಗರೇಟ್‌, ಸಿಗರೇಟ್‌ ಟೀ... ಕೆಲಸ ಕೆಲಸ ಕೆಲಸ... ಬಿಸ್ಲಲ್ಲಿ ಮಾಡ್ತಿದ್ವಿ.

ರಾತ್ರಿ ಹನ್ನೆರಡು ಗಂಟೆಗೆ ಸಣ್ಣ ಡ್ರಿಂಕ್‌ ಸೆಶನ್‌ ಶುರುವಾಗುತ್ತಿತ್ತು. ಮಜಾ ಅಂದ್ರೆ ಅಲ್ಲಿ ಕುಡಿಯೋಕೆ ಎಲ್ಲೂ ಅವಕಾಶಗಳಿಲ್ಲ. ಬಾರುಗಳಿರಲಿಲ್ಲ. ಹೋಗಿ ಕೂತು ನಾಲ್ಕು ಜನ ಕೂತು ಕುಡಿವಂಥ ಜಾಗ ಇಡೀ ಸಿಟಿಯಲ್ಲಿ ಇರ್ಲಿಲ್ಲ. ಎಲ್ಲರೂ ಪಾರ್ಸಲ್ ತಗೊಂತಾರೆ, ಅವರವರ ಜಾಗದಲ್ಲಿ ಬಂದು ಕುಡೀತಾರೆ. ಕುಡಿತಾ ಕುಡಿತಾ ಚರ್ಚೆ ಶುರು. ಆ ಚರ್ಚೆಯಲ್ಲಿ ರಾತ್ರಿ ಮೂರು ಗಂಟೆ ಆದ್ರೂ ಆಯ್ತು ಮಲಗೋಕೆ.. ಗೊತ್ತಿಲ್ಲ. ಮಾತು ಮಾತು ಮಾತು... ಜೀವನದ ಬಗ್ಗೆ ಇರಬೋದು, ಕೆಲಸದ ಬಗ್ಗೆ ಇರಬೋದು...

ಇದನ್ನೂ ಓದಿ: ಸುದೀರ್ಘ ಸಂವಾದ; ಮೂರು ದಾರಿಗಳು ನೂರು ಬಿಂಬಗಳು

ಚೆನ್ನೈನಲ್ಲಿನ ಆ ಬದುಕು ನನಗೆ ಬೇಸ್‌. ಅಲ್ಲಿಂದ ಬೆಂಗಳೂರಿಗೆ ಬಂದ ಮೇಲೆ ನನಗೆ ತುಂಬ ಈಸಿ ಆಗೋಯ್ತು. ಸುಮ್ನೇ ಏನ್ಮಾಡ್ತಾರೆ ಅಂತ ಕುತೂಹಲಕ್ಕೆ ಸೀರಿಯಲ್‌ ಜಗತ್ತಿಗೆ ನುಗ್ಗಿದೆ. ‘ಸಾಧನಾ’ ಧಾರಾವಾಹಿಗೆ ಕಲಾ ನಿರ್ದೇಶಕನಾಗಿ ಸೇರಿಕೊಂಡಾಗ ನನಗೆ ಐದು ಸಾವಿರ ಸಂಬಳ. ಮುನ್ನೂರೈವತ್ತು ನಾನ್ನೂರು ಎಪಿಸೋಡು ಕೆಲಸ ಮಾಡಿದೆ. ಅದಕ್ಕೆ ಬಿ. ಸುರೇಶ್ ನಿರ್ದೇಶಕರು. ನನಗೆ ಯೋಗರಾಜ ಭಟ್‌, ಸಕ್ರೆಬೈಲ್ ಶ್ರೀನಿವಾಸ ಅವರೆಲ್ಲ ಪರಿಚಯ ಆಗಿದ್ದು ಅಲ್ಲಿಯೇ. ಯೋಗರಾಜ ಭಟ್ ಅವರು ಎಪಿಸೋಡು ಡೈರೆಕ್ಟರ್ ಆಗಿದ್ರು. ಆಗ ನನಗೆ ಆರ್ಟ್‌ ಡಿಪಾರ್ಟ್‌ಮೆಂಟ್‌ ಜತೆಗೆ ನಿರ್ದೇಶನದ ಮೇಲ್ವಿಚಾರಣೆಯ ಜವಾಬ್ದಾರಿಯನ್ನೂ ಕೊಡೋರು. ಅವರು ಯಾರೂ ನನ್ನನ್ನು ಸಹಾಯಕನಾಗಿ ನೋಡ್ತಿರ್ಲಿಲ್ಲ. ನಾನೂ ಅಲ್ಲಿ ನನಗೆ ಬೇಕಾದ್ದನ್ನು ಬೇಗ ಕಲಿತುಕೊಂಡು ಬರಿಯೋಕೆ ಶುರುಮಾಡಿದೆ. ಯೋಗರಾಜ ಅವರು ನನಗೊಂದಿಷ್ಟು ಪುಸ್ತಕ ಕೊಟ್ಟಿದ್ರು, ಅವನ್ನು ಓದಿಕೊಂಡಿದ್ದೆ.

ಕಲಾಮಂದಿರದಲ್ಲಿ ಐದು ವರ್ಷಗಳ ಅಭ್ಯಾಸದಲ್ಲಿ ನನಗೆ ಒಳ್ಳೆಯ ಗುರುಗಳು ಸಿಕ್ಕಿದ್ದರು. ಮೊದಲು ಅರಸು ಅಂತ ಒಬ್ಬರು ಎರಡು ವರ್ಷ ಇದ್ದರು. ಪ್ರಕಾಶ ಅಂತ ಇನ್ನೊಬ್ಬರು. ಆ ಐದುವರ್ಷಗಳ ಕಾಲ ಮತ್ತು ಈಗಲೂ ನನ್ನ ಗುರುಗಳು ಅಂತ ತಿಳಿದುಕೊಂಡಿರುವುದು ರಾಜು ಮಾಸ್ಟ್ರರ್‌ ಅನ್ನು. ಅವರು ನನ್ನ ಬದುಕಿನ ಒಂದಿಷ್ಟು ತಿರುವುಗಳಿಗೆ ಕಾರಣರಾದವರು.

ಈಗ ಯೋಗರಾಜ ಭಟ್ ಮತ್ತು ಜಯಂತ ಕಾಯ್ಕಿಣಿ ಕೂಡ ಆಪ್ತರ ಸಾಲಿಗೆ ಸೇರಿದವರು. ಅವರು ಗುರುಗಳು, ಸ್ನೇಹಿತರು ಅಪಾಪೋಲಿಗಳು ಎಲ್ಲಾ ಹೌದು. ಯಾವ ಕೆಟಗರಿಗೆ ಬೇಕಾದ್ರೂ ಕೂಡಿಸಬಹುದು ಅವರನ್ನು. ನನ್ನಂಥವರ ಬದುಕನ್ನು ಒಂದು ಹದಕ್ಕೆ ತಂದವರು. ಯೋಗರಾಜ ಸರ್‌ ಅವರ ಒಂದು ರೀತಿ ಉಡಾಫೆಯ ಮೂಲಕವೇ ದಾರಿ ತೋರಿಸಿದವರು. ಅವರು ಯಾರಿಗಾದ್ರೂ ‘ಏ ಮಾಡು ಹೋಗ’ ಅಂದ್ಬಿಡ್ತಾರೆ. ಅದನ್ನು ಇಂದು ಹಲವರು ಮಿಸ್‌ಯೂಸ್ ಮಾಡ್ಕೋತಾರೆ. ಅದು ತಪ್ಪು. ‘ಮಣಿ’ ಸಿನಿಮಾ ಮಾಡುವಾಗಲೇ ‘ನೀ ಸಿನಿಮಾ ಮಾಡು ಹೋಗು’ ಅಂದಿದ್ರು ನನಗೆ. ಆದ್ರೆ ಅದು ಅಷ್ಟು ಸುಲಭ ಅಲ್ಲ. ಒಂದಿಷ್ಟು ಸಿದ್ಧತೆ ಬೇಕೇ ಬೇಕು. ಅದು ಇಂದಿನ ಹಲವರಿಗೆ ಗೊತ್ತಾಗ್ತಿಲ್ಲ. ಒಬ್ಬ ಸಂಗೀತಗಾರ ಕಛೇರಿ ಕೊಡಬೇಕಾದ್ರೆ ಸಾಕಷ್ಟು ಸಿದ್ಧತೆ ಮಾಡ್ಕೊಂಡಿರ್ತಾನಲ್ವಾ? ಸಿನಿಮಾದಲ್ಲಿ ಅದ್ಹೇಗೆ ಸಿದ್ಧತೆ ಇಲ್ಲದೆ ಮಾಡಿಬಿಡೋಕೆ ಸಾಧ್ಯ?

* ಇಂದಿನ ಕನ್ನಡ ಸಿನಿಮಾ ಸನ್ನಿವೇಶದ ಬಗ್ಗೆ ಏನನಿಸುತ್ತದೆ?

ಇಂದು ಧ್ರುವ, ಮುರಳಿ ಅವರಂಥ ಹುಡುಗರು ಬಂದು ನಿಂತ ರೀತಿ ಇದೆಯಲ್ಲ, ಅದರ ಬಗ್ಗೆ ನನಗೆ ಖುಷಿಯಿದೆ. ಆದರೆ ನಾವು ಕೊಂಚ ಹಿಂದಕ್ಕೆ ನೋಡಬೇಕು. ವಿಷ್ಣುವರ್ಧನ್‌, ಅಂಬರೀಶ್‌ ಅವರೆಲ್ಲ ವರ್ಷಕ್ಕೆ ಎಷ್ಟು ಸಿನಿಮಾ ಮಾಡ್ತಿದ್ರು ಎಂದು ನೋಡಿದರೆ ಹೆದರಿಕೆಯಾಗಿಬಿಡುತ್ತೆ. ಆ ಕಾಲಘಟ್ಟದಲ್ಲಿ ಒಂದು ವರ್ಷಕ್ಕೆ ಒಬ್ಬ ಹೀರೊ ಎಂಟು–ಒಂಬತ್ತು ಸಿನಿಮಾ ಹೇಗೆ ಮಾಡ್ತಿದ್ದ? ಇವತ್ತು ಇಷ್ಟು ಫಾಸ್ಟ್‌ ತಂತ್ರಜ್ಞಾನ ಇದೆ. ಸೌಕರ್ಯ ಇದೆ. ಡಿಜಿಟಲ್ ಆಗಿದೆ. ಆದರೆ ಇಂದಿನ ಹೀರೊಗಳಿಗೆ ಅದು ಯಾಕೆ ಸಾಧ್ಯ ಆಗ್ತಿಲ್ಲ?

ನನಗೆ ಚೆನ್ನಾಗಿ ನೆನಪಿದೆ. ಒಂದು ಕಡೆ ಅಂಬರೀಶ್ ಅವರ ಸಾಲು ಸಾಲು ಸಿನಿಮಾಗಳು, ಮತ್ತೊಂದು ಕಡೆ ವಿಷ್ಣು ಸಿನಿಮಾಗಳು, ಇನ್ನೊಂದೆಡೆ ರಾಜ್‌ಕುಮಾರ್ ಸಿನಿಮಾಗಳು, ಮತ್ತೆ ಶಂಕರ್‌ನಾಗ್ ಸಿನಿಮಾಗಳು... ಸಿನಿಮಾ ಸಿನಿಮಾ ಸಿನಿಮಾ... ಅದರ ಮಧ್ಯೆ ಚಿರಂಜೀವಿ... ಎಲ್ಲ ಸಿನಿಮಾಗಳೂ ಗಲಾಟೆಮಯ... ಇಷ್ಟು ಪೈಪೋಟಿ...

ಯಾರೋ ಹೇಳ್ತಾರೆ, ಇವತ್ತು ಸಿನಿಮಾ ಪೈಪೋಟಿ ಹೆಚ್ಚಾಗಿದೆ, ವಾರಕ್ಕೆ ಎಂಟು ಸಿನಿಮಾ ಬಿಡುಗಡೆ ಆಗ್ತಿದೆ ಅಂತೆಲ್ಲ... ಸಾರಿ, ಇವತ್ತು ಪೈಪೋಟಿ ಇಲ್ಲಾರೀ... ಅವತ್ತಿನ ಪೈಪೋಟಿಯ ಒಂದಂಶವೂ ಇಂದಿಲ್ಲ.

* ಹೀಗಾಗಲು ಕಾರಣ ಏನು?

ಯಾಕೆಂದರೆ ತಮಗನಿಸಿದ್ದನ್ನು ಮಾಡ್ತಿಲ್ಲ ಯಾರೂ. ಬರೀ ಚರ್ಚೆಗಳು ನಡೀತಿವೆ. ನಂಬರ್ ಒನ್‌ ಆಗ್ಬೇಕು ಅನ್ನೋದು ನನ್ನ ಸ್ಕೂಲ್‌ ದಿನಗಳಿಂದಲೂ ಇರುವ ಛಲ. ಒಮ್ಮೆ ನೀವು 1 ಅಂತ ಬರೆದುಕೊಂಡ ಮೇಲೆ ಸೊನ್ನೆಗಳನ್ನು ಆ ಅಂಕೆಯ ಮುಂದೆ ಹಾಕೋಕೆ ಶುರುಮಾಡ್ರೀ... ಆಗ ಬೆಲೆ ಬದಲಾಗುತ್ತದೆ. ಮೊದಲು ನಾನು ಹತ್ತು ರೂಪಾಯಿ ತಗೊಂಡೆ. ಮತ್ಯಾರೋ ನೂರು ರೂಪಾಯಿ ಕೊಟ್ರು, ನಂದಿನಿಯವನು ಒಂದು ಲಕ್ಷ ರೂಪಾಯಿ ಕೊಟ್ಟ... ನಾನೀವಾಗ ನಾಲ್ಕೋ ಐದೋ ಕೋಟಿ ಬೆಲೆ ಬರ್ಕೋತೀನಿ. ಹೌದು ಬರ್ಕೋತೀನಿ. ನಾನು ಸೊನ್ನೆ ಮುಂದಕ್ಕೆ ಹಾಕ್ಕೊಂಡು ಹೋಗ್ಬೇಕು.

ಇಂದು ನನ್ನತ್ರ ಒಂದು ಐಡಿಯಾ ಇದೆ ಅಂತಿಟ್ಕೊಳ್ಳಿ. ಅದನ್ನು ಇಪ್ಪತ್ತು ಜನಕ್ಕೆ ಹೇಳೋದು. ಇದು ಈಗ ಪ್ಯಾಷನ್ನು. ಚರ್ಚೆ ಮಾಡೋದಂತೆ! ಆಗ ಎಷ್ಟು ಜನ ಒಳ್ಳೆಯ ಬರಹಗಾರರಿದ್ದರು. ಕುಣಿಗಲ್‌, ಚಿ. ಉದಯಶಂಕರ್, ಹಂಸಲೇಖ... ಈಗ ನನಗೆ ಅಂಥ ಒಬ್ಬ ಬರಹಗಾರನನ್ನು ತೋರಿಸಿ ನೋಡೋಣ. ‘ನಾನು ಬಂದ್ರೆ ಎರಡು ವರ್ಷಕ್ಕೊಂದ್ಸಲ ಬರ್ತೀನಿ’ ಅಂತಾರೆ. ಹೆಂಗಾರ ಬನ್ನಿ ನಂಗೇನು?

‘ಇಷ್ಟೆಲ್ಲ ಮಾತಾಡ್ತೀರಲ್ಲಾ, ಒಂದು ಸ್ಕ್ರಿಪ್ಟ್ ತಂದ್ಬಿಡಿ ನೋಡೋಣ...’ ಅಂತ ನನ್ನ ಕೇಳಬಹುದು. ಖಂಡಿತ ಲೈನ್‌ಅಪ್‌ ಆಗಲ್ಲ. ಯಾಕೆಂದ್ರೆ ನಮ್ಮ ಯಾರ ಥಾಟ್‌ಗೂ ಕ್ಲಾರಿಟಿ ಇಲ್ಲ. ಒಂದು ಥಾಟ್‌ ಕೇಳಿಸ್ಕೊಂಡ್ರೆ ನಲ್ವತ್ತು ಜನಕ್ಕೆ ಹೋಗತ್ತೆ. ಸರೀನಾ? ನಾವು ಹೀಗೆ ಹೆಜ್ಜೆ ಇಡೋದು ಸರೀನಾ? ಅಂದು ಪ್ರತಿಯೊಬ್ಬರಿಗೂ ಕ್ಲಾರಿಟಿ ಇತ್ತು. ಇಂದು ನನಗೆ ಕ್ಲಾರಿಟಿ ಇಲ್ಲ. ಇಷ್ಟೆಲ್ಲ ಮಾಡಿದ ಮೇಲೂ ನಾನೂ ಸೈಕಲ್‌ ಹೊಡಿತಾನೇ ಇದೀನಿ. ಇಷ್ಟೆಲ್ಲಾ ಮಾತಾಡ್ತಾ ಇದೀನಲ್ಲಾ... ‘ಟಗರು’ ರಿಲೀಸ್ ಆಗಿ ಇಷ್ಟು ದಿನ ಆಗಿದೆ. ಏನಾಗ್ತಾ ಇದೆ ನಂಗೆ? ಆರು ತಿಂಗಳು ಅಲ್ಲ, ಒಂದು ವರ್ಷ ತರಕಾರಿ ಹೆಚ್ಚಿದ್ರೂನು ಬಿರಿಯಾನಿಯನ್ನೇ ತಾನೇ ಮಾಡೋದು? ಯಾಕೆ ಆಗ್ತಿಲ್ಲ? ಯಾಕಂದ್ರೆ ಪುಡ್ಡಿನ ಅವಶ್ಯಕತೆ ನನಗೆ ಗುದ್ಕೊಂಡು ಬಂದಿಲ್ಲ. ಐದೈದು ಬಿರಿಯಾನಿ ರೆಡಿಯಾಗಿದ್ರೆ ನನಗೆ ಎದ್ದೋಗೋಕೆ ಎಲ್ಲಿಂದ ಮನಸ್ಸು ಬರತ್ತೆ? ಅನಿವಾರ್ಯತೆ ಇಲ್ದೆ ಪೈಪೋಟಿ ಹುಟ್ಟಲ್ಲ. ಆಗ ಆ ಅನಿವಾರ್ಯತೆ ಇತ್ತು. ಉಪೇಂದ್ರ ಥರ ಎಷ್ಟು ಜನ ರೋಡಲ್ಲಿ ಸಿಗ್ತಿದ್ರು ಆಗ? ಶಿವಣ್ಣ ಬಂದಾಕ್ಷಣ ಹೇರ್‌ಸ್ಟೈಲ್‌ ಚೇಂಜಾಗಿಬಿಡ್ತಿತ್ತಲ್ಲ. ರವಿಚಂದ್ರನ್‌ ಥರದ ಸ್ಟಾರ್‌ಡಮ್‌ ಇವತ್ತಿನ ಯಾವ ನಟನಾದ್ರೂ ನೋಡೋಕೆ ಸಾಧ್ಯವಾ?

* ವೈಯಕ್ತಿಕವಾಗಿಯೂ ಇಂದು ನಿಮಗೆ ಪೈಪೋಟಿ ನೀಡುವವರು ಇಲ್ಲ ಅನಿಸಿದೆಯಾ?

ಗುಂಪಲ್ಲಿ ಇದ್ದ ಮೇಲೆ ಪೈಪೋಟಿ ಇಲ್ಲ ಅಂದ್ರೆ ವೇಸ್ಟು. ನಾವು ಕಾಡಲ್ಲಿ ನಿಂತಿದೀವಿ. ಸೂರಿ ಹೋದ ಅಂದ್ರೆ ಒಂದೆರಡು ಜಿಂಕೆ ಹೊಡ್ಕೊಂಡು ಬರ್ತಾನೆ ಅಂದ್ರೆ ಟ್ಯಾಲೆಂಟಲ್ವಾ ಅದು? ಹೋದೋರು ಕೆಲವರು ವಾಪಸ್ಸೇ ಬರಲ್ಲ, ಅಂಥದ್ರಲ್ಲಿ ಯಾರೋ ಹಂದಿ ಹೊಡ್ಕೊಂಡು ಬರ್ತಾರೆ ಅಂದ್ರೆ, ಅವನ ರೀತಿ ನಾನೂ ಹೊಡಿತೀನಿ ಅನ್ನೋ ಚಾಲೆಂಜ್‌ ಬೇಕು. ಚಾಲೆಂಜ್‌ ಇಲ್ಲ ಅಂದ್ರೆ ಸತ್ತೋದ ಹಾಗೆ ನಾವು.

ಈಗೇನಿದೆಯೋ ಇದ್ಕಿಂತ ಜಾಸ್ತಿ ಬೇಕು ಅಂತ ಹೇಳ್ತಿದೀನಿ, ಆಯಮ್ ಸಾರಿ. ಇದು ಕಡಿಮೆ ಆಯ್ತು ಅಂತ ಹೇಳ್ತಿದೀನಿ. ತುಂಬ ಕಡಿಮೆ. ಪೈಪೋಟಿ ಅಂದ್ರೆ ಹೆವ್ವಿ ಇರ್ಬೇಕು, ಸ್ಟೇಜ್‌ ಮೇಲೆ ಹೋಗೋಕೆ ಉಚ್ಚೆ ಹೊಯ್ಕೋಬೇಕು ನಾನು. ಕಮಾನ್‌... ಅದನ್ನು ಯುದ್ಧ ಅನ್ನೋದು, ಅದಕ್ಕೆ ತಯಾರಿ ನಡೆಯೋದು. ಏನೂ ಬೇಡ ಎಲ್ರೂ ಮನೆಗೋಗ್ಬಿಡ್ರೋ ಅಂದ್ರೆ? ಏನಕ್ಕೆ ನಾವು ಎದುರಾಬದುರು ಗಾಡಿ ಓಡಿಸ್ತೀವಿ. ಎಲ್ರೂ ಒನ್‌ವೇದಲ್ಲೇ ಓಡಿಸ್ಬೋದಿತ್ತಲ್ಲ? ನನಗೆ ಎದುರುಗಡೆಯಿಂದಲೂ ಗಾಡಿ ಬರಬೇಕು. ಇಲ್ಲಾಂದ್ರೆ ಡ್ರೈವಿಂಗ್‌ ಕಲಿತು ಏನು ಪ್ರಯೋಜನ?

ನಾವು ಬರೀ ಪ್ರಶ್ನೆ ಕೇಳ್ಕೊಂಡು ಟೈಮ್‌ ವೇಸ್ಟ್ ಮಾಡ್ತಿದ್ದೇವೆ. ಸಿನಿಮಾ ಮಾಡೋಕೆ ಪ್ರಶ್ನೆ, ಜೀವನ ಮಾಡೋಕೂ ಪ್ರಶ್ನೆ ಕೇಳ್ತಿದ್ದೀವಿ. ಬೆಳಿಗ್ಗೆ ಎದ್ದು ಎರಡು ಇಡ್ಲಿ ತಿನ್ನೋಕೆ ಯಾವನಾದ್ರೂ ಪ್ರಶ್ನೆ ಕೇಳ್ತಾನೆ ಅಂದ್ರೆ ಅವನಂಥ ಮುಠ್ಠಾಳನಿಗೆ ನಾನ್‌ ಏನ್‌ ಮಾಡ್ಬೇಕು? ಗೆಟ್‌ಔಟ್‌ ಅನ್ಬೇಕಷ್ಟೆ.

ನಾನು ಪ್ರತಿದಿನ ಬೆಳಿಗ್ಗೆ ಎದ್ದೇಳ್ತೀನಿ. ಎದ್ದಿಲ್ಲ ಅಂದ್ರೆ ನಿಮಗೆಲ್ಲ ಫೋನ್‌ ಹೋಗುತ್ತೆ. ಯಾರಾದರೂ ಹೇಳದೆ ಹೋದರೆ ತಗೊಂಡು ಹೋಗಿ ಹೂತಾಕ್ತೀವಿ, ಇಲ್ಲಾ ಸುಟ್ಟಾಕ್ತೀವಿ. ಮಮ್ಮಿ ಥರ ಬಟ್ಟೆ ಸುತ್ತಿ ಇಡಕ್ಕಾಗಲ್ಲ ಅಲ್ವಾ? ಯಾವ್ದೋ ಥರದಲ್ಲಿ ಪ್ರಕೃತಿಗೆ ಹೊರಟುಹೋಯ್ತು. ಆಗ ನಿಮ್ಮ ಜತೆ ನಿಮ್ಮ ಸಿನಿಮಾ, ಪೇಂಟಿಂಗ್‌ ಅಥವಾ ನೀವು ಇಷ್ಟಪಟ್ಟ ವಸ್ತುಗಳನ್ನು ಹಾಕಿ ಮಣ್ಣು ಮಾಡ್ತಾರಾ? ಇಲ್ವಲ್ಲ... ಹಾಗಾದ್ರೆ ಇಷ್ಟೆಲ್ಲ ಸೈಕಲ್ ಹೊಡಿಯೋದು ಯಾಕೆ?

ಸುಮ್ನೆ ಸಿನಿಮಾ ಮಾಡಿ. ಕಾಂಪಿಟೇಷನ್‌ಗೆ ಸಿನಿಮಾ ಮಾಡಿ.

ನಾಲ್ಕು ಜನ ಇರೋ ರೂಮಲ್ಲಿ ದಾರಕ್ಕೊಂದು ಬಾಲ್ ಕಟ್ಟಿ ನೇತುಬಿಕಿ. ಒಬ್ಬ ಎಗರಿ ಹೊಡೀಲಿ. ಉಳಿದವರು ಟ್ರೈ ಮಾಡ್ಲಿಲ್ಲಾಂದ್ರೆ ಕೇಳಿ... ಕುಂಟ ಗಂಟೆ ಹೊಡೆದಿದ್ದನ್ನು ನೋಡಿದೀನಿ ನಾನು. ಅದನ್ನು ನೋಡಿ ನನ್ನ ಬಾಯಲ್ಲಿ ಒಂದು ಮಾತೂ ಹೊರಡಲಿಲ್ಲ. ‘ಈ ನನ್ಮಕ್ಳು ಹೊಡೀತಾರೆ. ನಾನೂ ಹೊಡಿತೀನಿ’ ಅಂದ್ಕೊಂಡು ಹಿಂದಕ್ಕೆ ಹೋಗಿ ಓಡಿ ಬಂದು ಎಗರಿ ಢಮಾರ್‌ ಅಂತ ಹೊಡೆದ. ಉಳಿದವರಿಗಿಂತ ಹೈಟ್‌ಗೆ ಹೊಡೆದ ಅವನು. ಪೈಪೋಟಿಗೆ ಬಿದ್ದಾಗ ಸಾಧ್ಯ ಅದು.

ಒಂದು ಕಥೆ ಹೇಳ್ತೀನಿ: ನೀವೇ ಅಂದ್ಕೊಳ್ಳಿ. ಒಂದು ಬಾವೀಲಿ ಬಿದ್ದು ಬಿಟ್ಟಿದೀರಿ. ಒಬ್ಬ ಚಿಕ್ಕ ಹುಡುಗ ಹಗ್ಗ ಹಾಕಿ ನಿಮ್ಮನ್ನು ಹೊರಗೆ ಎಳೀತಾನೆ. ಊರಲ್ಲಿ ಯಾರೂ ನಂಬಲ್ಲ. ಅಷ್ಟು ಚಿಕ್ಕ ಹುಡುಗ ಇಷ್ಟು ಭಾರ ಇರೋರನ್ನು ಎತ್ತೋಕೆ ಸಾಧ್ಯನೇ ಇಲ್ಲ ಅಂತಾರೆ. ಸ್ವತಃ ನೀವೇ ಹೇಳಿದ್ರೂ ನಂಬಲ್ಲ. ಆ ಹುುಗನ್ನ ಕೇಳ್ತಾರೆ – ‘ಏ ಹೆಂಗೋ ಎಳೆದೆ?’ ಅಂತ. ಅವನು ಹೇಳ್ತಾನೆ, ‘ಕೂಗ್ತಿದ್ರು... ಬಾವೀಲಿ ಜೋರಾಗಿ ಕೂಗ್ತಿದ್ರು... ಕೂಗು ಕೇಳಿಸ್ತು... ಕೈಗೆ ಸಿಕ್ಕ ಹಗ್ಗ ಎಸೆದೆ. ಹಿಡ್ಕೊಂಡ್ರು. ಎಳ್ದು ಹಾಕ್‌ಬಿಟ್ಟೆ’ ಅಂತಾನೆ. ಹಂಗೆ ಆಗೋದು ತುಂಬ ಸಲ. ಬದುಕು ಹಾಕಿ ಹೊಡೆದ್ರೆ ಎಲ್ಲಾ ಆಗುತ್ತೆ. 

* ಕನ್ನಡ ಸಿನಿಮಾಗಳಲ್ಲಿ ನಿರ್ದೇಶಕರ ಒಂದು ಪರಂಪರೆ ಇದ್ಯಲ್ಲಾ. ಪುಟ್ಟಣ್ಣ, ಲಕ್ಷ್ಮೀನಾರಾಯಣ, ಕಾಸರವಳ್ಳಿ ಹೀಗೆ... ನಿಮ್ಮನ್ನು ಯಾರ ಜತೆಯಲ್ಲಿಯೂ ಇಟ್ಟು ನೋಡೋಕೆ ಸಾಧ್ಯ ಇಲ್ಲ. ಒಂಥರ ಗುಂಪಿಗೆ ಸೇರದ ಪದದ ಥರಾನೇ ಕಾಣ್ತೀರಿ. ಕನ್ನಡ ಸಿನಿಮಾ ಪರಂಪರೆಯಲ್ಲಿ ನಿಮ್ಮನ್ನು ನೀವು ಎಲ್ಲಿ ಇಟ್ಟುಕೊಳ್ಳಲಿಕ್ಕೆ ಬಯಸ್ತೀರಿ?

ನೀವು ಹೇಳಿದ ಎಲ್ಲರೂ ಒಟ್ಟಿಗೇ ಊಟ ಮಾಡಿದ್ರೆ ನಮ್ಮ ಎಲೆ ಬೇರೆ ಅವರ ಎಲೆ ಬೇರೆಯೇ. ಅವರ ಬದುಕು, ಸಂಬಂಧಗಳು ಬೇರೆ. ನನ್ನ ಬದುಕು, ನನ್ನ ಸೆಕ್ಸು, ನನ್ನ ಸಂಬಂಧಗಳು ಬೇರೆಯೇ... ನನ್ನ ದೃಷ್ಟಿಕೋನವೇ ಬೇರೆ. ಇಲ್ಲಿ ಒಂದೇ ಥರ ಇರೋಕೆ ಸಾಧ್ಯವೇ ಇಲ್ಲ.

ಇಲ್ಲೂ ಕ್ಲಾರಿಟಿ ಬೇಕು. ಸಿನಿಮಾ ಮಾಡೋಕೆ ಕ್ಲಾರಿಟಿ ಬೇಕು. ಸ್ನೇಹಕ್ಕೆ ಕ್ಲಾರಿಟಿ ಬೇಕು, ಯಾರ ಜತೆ ಕುಡಿತೀಯಾ, ಯಾರ ಜತೆ ಮಲಗ್ತೀಯಾ... ಕ್ಲಾರಿಟಿ ಬೇಕು. ಇಲ್ಲಾಂದ್ರೆ ವೇಸ್ಟು... ಕಣ್ಣಿಗೆ ಬಟ್ಟೆ ಕಟ್ಟಿ ಏನನ್ನು ಕೈಗೆ ಕೊಟ್ರೂ ತಿಂತೀರಾ ನೀವು? ಸಾಧ್ಯ ಇಲ್ಲ. ನನ್ನ ದೃಷ್ಟಿಕೋನವನ್ನು ನಾನು ಬದುಕುತ್ತಿದ್ದೀನಿ. ಕೊನೆಗೂ ನಾನು ಮಾಡ್ತಿರೋದೆಲ್ಲ ಪುಡ್ಡಿಗಾಗಿ. ಸಿನಿಮಾದಿಂದ ಸಮಾಜ ಸೇವೆ ಮಾಡ್ತಿದ್ದೀಯಾ? ಕನ್ನಡ ಸೇವೆ ಮಾಡ್ತಿದ್ದೀಯಾ? ನೋ ನೋ...  ನನಗೆ, ನನ್ನ ಮಗುವಿನ ಸ್ಕೂಲ್‌ ಫೀಸ್‌ಗೆ, ನನ್ನ ಕಾಯಿಲೆಗಳಿಗೆ ದುಡ್ಡು ಬೇಕು, ನನ್ನ ಒಂದಿಷ್ಟು ಅವಶ್ಯಕತೆಗಳಿಗೆ ದುಡ್ಡು ಬೇಕು. ಅದಕ್ಕಾಗಿ ಸಿನಿಮಾ ಮಾಡ್ತಿದೀನಿ.

ನನಗೆ ಸಿನಿಮಾ ಮಾಡೋದು ಗೊತ್ತು. ಒಂದು ರೂಪಾಯಿ ಹಾಕಿದ್ರೆ ಎರಡು ರೂಪಾಯಿ ಮಾಡಿಕೊಡುವುದು ಗೊತ್ತು ನಂಗೆ. ಅಷ್ಟೆ. ಹಾಕಿದ ಒಂದು ರೂಪಾಯಿಯನ್ನೂ ಮುಂಡಾಮೋಚಿ ಕಳ್ಸೋದು ನನಗಿಷ್ಟ ಇಲ್ಲ. ಹಾಕಿದ ಒಂದು ರೂಪಾಯಿಯನ್ನು ಎರಡು ರೂಪಾಯಿ ಮಾಡೋಕೆ ದೇವ್ರಾಣೆ ಪ್ರಯತ್ನ ಪಡ್ತೀನಿ. ನಲ್ವತ್ತು ರೂಪಾಯಿ ಸಿಕ್ರೆ ಸಿಕ್ಕಲಿ, ತಗೊಂಡು ಹೋಗು, ಚೆನ್ನಾಗಿರು. ನನ್ನ ಕೂಲಿ ನನಗೆ ಕೊಡು. ಮತ್ತು ನಿರ್ಮಾಪಕರ ಆಯ್ಕೆ ನಾನೇ ಮಾಡಿಕೊಳ್ತೀನಿ. ಮತ್ಯಾರೋ ನನ್ನನ್ನು ಸೆಲೆಕ್ಟ್ ಮಾಡಿಕೊಳ್ಳುವ ಹಾಗೆ ಲೈಫಲ್ಲಿ ನಾನು ಮಾಡಿಕೊಳ್ಳಲ್ಲ. ನನ್ನ ಜೀವನದಲ್ಲಿ ನನ್ನ ನಿರ್ಮಾಪಕರನ್ನು ನಾನೇ ಆಯ್ಕೆ ಮಾಡಿಕೊಳ್ಳಲು ಸಾಧ್ಯವಿರುವವರೆಗೆ ಮಾತ್ರ ನಾನು ಸಿನಿಮಾ ಮಾಡ್ತೀನಿ.

* ನಿಮ್ಮ ಸಿನಿಮಾಗಳನ್ನು ನೋಡಿದರೆ ಒಂದು ಕಂಫರ್ಟ್‌ ಜೋನ್‌ನಿಂದ ತಪ್ಪಿಸಿಕೊಳ್ಳಲು ಸದಾ ಹಪಹಪಿಸುತ್ತಿರುವ ಹಾಗೆ ಕಾಣ್ತೀರಿ...

ಈ ಕ್ಷಣದಿಂದ ನಾನು ನಿರ್ದೇಶಕ ಅಲ್ಲ ಅಂದರೂ ಈ ಬದುಕನ್ನು ಬದುಕೋದು ಗೊತ್ತು ನಂಗೆ. ಆ ಕಾರಣಕ್ಕಾಗಿಯೇ ನಾನು ಸಿನಿಮಾವನ್ನು ನನ್ನ ಮುಖ್ಯವಾಹಿನಿಯ ವೃತ್ತಿ ಎಂದು ಪರಿಗಣಿಸುವುದಿಲ್ಲ. ಅದನ್ನೇ ಮುಖ್ಯವಾಹಿನಿಗೆ ತಗೊಂಡ್ರೆ ನೀವು ಹೇಳುತ್ತಿರುವ ಯಾವ ಪ್ರಯೋಗಗಳನ್ನೂ ಮಾಡಕ್ಕಾಗಲ್ಲ. ನನ್ನ ಬದುಕು ನಡೆಯಲು ಏನು ಬೇಕಿದೆಯೋ ಅದನ್ನು ಈಗಾಗಲೇ ಸಿನಿಮಾ ಕೊಟ್ಟಿದೆ. ನನಗೊಂದು ಮನೆ ಇದೆ, ಮಗು ಸ್ಕೂಲಿಗೆ ಸೇರ್ಸಿದೀನಿ. ನನ್ನತ್ರ ಒಂದಿಷ್ಟು ದುಡ್ಡಿದೆ.

ನನಗೆ ಗೊತ್ತಿರುವ ಚಿತ್ರಕಲೆಯನ್ನು ಈ ಕ್ಷಣದಿಂದ ಶುರುಮಾಡಿದ್ರೂ ನನಗೆ ಸಿನಿಮಾ ಬೇಕಿಲ್ಲ. ಅದರಲ್ಲಿಯೇ ಇದಕ್ಕಿಂತ ಅದ್ಭುತವಾಗಿ ಬದುಕ್ತೀನಿ. ಸಿನಿಮಾನೂ ಅಷ್ಟೇ. ನನಗಿಷ್ಟವಾದ ಸಿನಿಮಾವನ್ನೇ ಮಾಡುವುದು ನಾನು. ಇನ್ನೊಂದು ಬಗೆಯ ಸಿನಿಮಾಗಳನ್ನೂ ಮಾಡ್ತೀನಿ. ಅದು ಸ್ಟಾರ್‌ ನಟರ ಜತೆ ಮಾಡುವ ಸಿನಿಮಾಗಳು. ಅಲ್ಲಿರುವ ಸವಾಲು ನನಗಿಷ್ಟ. ಅದಕ್ಕಾಗಿ ನನಗೆ ದರ್ಶನ್ ಜೊತೆ ಸಿನಿಮಾ ಮಾಡಬೇಕು ಅಂತ ಇಷ್ಟ ಇದೆ. ಪುನೀತ್ ಜೊತೆ ಮಾಡಿದೀನಿ. ಯಶ್‌ ಜೊತೆಗೂ ಮಾಡಲು ಆಸೆ ಇದೆ. ಸುದೀಪ್‌ ಅವರಿಗೆ ಎಷ್ಟು ಅಭಿಮಾನಿಗಳಿದ್ದಾರಲ್ಲಾ, ಅವರನ್ನು ಗುರಿಯಾಗಿಟ್ಕೊಂಡು ಸಿನಿಮಾ ಮಾಡುವ ಸವಾಲು ನನಗೆ ಬೇಕು. ಆ ಚಾಲೆಂಜ್‌ ಎದುರಿಗಿಟ್ಕೊಂಡು ವರ್ಷಾನೋ ಆರು ತಿಂಗಳೋ ಒದ್ದಾಡ್ತೀನಿ. ಆಮೇಲೆ ತಿರುಗಿ ಬಂದುಬಿಡ್ತೀನಿ. ಮತ್ತೆ ನನ್ನಿಷ್ಟದ ಸಿನಿಮಾ ಮಾಡ್ತೀನಿ. ಹಾಗೆ ವಾಪಸ್‌ ಬರುವ ಕ್ಲಾರಿಟಿ ಇದೆ.

* ಚಿತ್ರಕಲೆ ಮತ್ತು ಸಿನಿಮಾಕ್ಕೆ ಇರುವ ಸಂಬಂಧ ಎಂಥದ್ದು?

ಕಲೆ ಎಲ್ಲವೂ ಒಂದೇ, ಒಳ್ಳೆಯ ಅಡುಗೆ ಮಾಡುವವರೂ ಒಳ್ಳೆಯ ಸಿನಿಮಾ ಮಾಡಬಹುದು. ನನಗೆ ಚಿತ್ರಕಲೆ–ಸಿನಿಮಾ ಎರಡೂ ಬೇರೆ ಬೇರೆ ಅಲ್ಲ. ಒಳ್ಳೆಯದು ಎಂದರೆ ನಾವು ಮಾಡುವ ಆಹಾರವನ್ನು ಯಾರು ತಿನ್ನುತ್ತಾರೆ, ಎಷ್ಟು ಜನ ತಿನ್ನುತ್ತಾರೆ ಎನ್ನುವುದು ಗೊತ್ತಿರಬೇಕು.

 * ನಿಮಗೆ ನಿಮ್ಮ ಶೈಲಿಯ ಚಿತ್ರಗಳನ್ನು ಬಿಟ್ಟು ಪೂರ್ತಿ ಬೇರೆ ಥರ ಸಿನಿಮಾ ಮಾಡಬಲ್ಲೆ ಎಂದು ಅನಿಸಿಲ್ಲವೇ?

ನಾನು ನನಗೆ ಗೊತ್ತಿರುವುದನ್ನೆಲ್ಲ ತೋರಿಸಿ ಹೋಗುವ ಅವಶ್ಯಕತೆ ಏನಿದೆ? ‘ಇಂಥ ಪ್ರಕಾರದ ಸಿನಿಮಾ ಮಾಡಿಲ್ಲ, ಅದನ್ನು ಮಾಡಬೇಕು’ ಎಂಬ ಹಟ ಇಲ್ಲ. ನಾನು ಕಾಮಿಡಿ ಸಿನಿಮಾ ಮಾಡಿಲ್ಲ, ದೆವ್ವದ ಪಿಚ್ಚರ್ ಮಾಡಿಲ್ಲ, ಮಾಡಿಬಿಡೋಣ ಎಂದೆಲ್ಲ ನನಗೆ ಅನಿಸುವುದಿಲ್ಲ. ನನಗೆ ಸಂಗೀತ ಗೊತ್ತಿದೆ, ಅದನ್ನು ನಾನು ಕಲಿತಿದ್ದೀನಿ ಎಂಬುದನ್ನು ತೋರಿಸಿಕೊಳ್ಳಲಿಕ್ಕೆ ಯಾವಾಗಲೂ ಹಿಂದೂಸ್ತಾನಿ ಹಾಡನ್ನು ಪ್ಲೇ ಮಾಡ್ತಾ ಇರಬೇಕಾ? ಜನ ನನ್ನನ್ನು... ಎಲ್ಲವನ್ನೂ ನೋಡ್ತಿದ್ದಾರೆ, ಆದ್ದರಿಂದ ನನಗೆ ಏನೇನು ಬರತ್ತೋ ಎಲ್ಲವನ್ನೂ ಅವರಿಗೆ ಮಾಡಿ ತೋರಿಸಬೇಕಾ?

ಹಾಗೆಲ್ಲ ಏನೂ ಇಲ್ಲ. ಆಯಾ ಕ್ಷಣಕ್ಕೆ ಏನು ಅನಿವಾರ್ಯತೆ ಇರುತ್ತದೆಯೋ ಅದನ್ನು ಮಾಡಿ ಸಾಯುವುದು ಅಷ್ಟೇ. ಊಟ ಕೊಡುವವರು ಯಾರಾದ್ರೂ ಬಂದು ಸ್ವಲ್ಪ ಡಾನ್ಸ್ ಮಾಡು ಅಂದ್ರೆ ಡಾನ್ಸ್ ಮಾಡ್ತೀನಿ ನಾನು. ಊಟ ಕೊಡು, ಕಮಾನ್, ತಿಂದ್ಬಿಟ್ಟು ಹೋಗ್ತೀನಿ ನಾನು.

 * ನಿಮ್ಮ ಸಿನಿಮಾಗಳಲ್ಲಿ ನಾಯಕರ ಕಥೆಗಳನ್ನೇ ಹೇಳ್ಕೊಂಡು ಬಂದಿದ್ದೀರಿ. ಆದರೆ ಅದಕ್ಕೆ ಪರ್ಯಾಯವಾಗಿ ನಾಯಕಿಯರ ಪಾತ್ರಗಳೂ ತುಂಬ ಗಟ್ಟಿಯಾದ ಪಾತ್ರಗಳು. ಮಹಿಳಾ ಪಾತ್ರಗಳನ್ನು ಅಷ್ಟು ಘನತೆಯಿಂದ ಚಿತ್ರಿಸಲು ಸಾಧ್ಯವಾಗಿದ್ದು ಹೇಗೆ?

ನಾನೇನೂ ಓದಿಲ್ಲ, ನಮ್ಮಮ್ಮನ್ನ ನೋಡಿದೀನಿ ಅಷ್ಟೆ! ನನ್ನ ತಾಯಿ ನನ್ನ ನಂಬಿಕೆಯ ಮೂಲ. ನನ್ನ ಅಕ್ಕ, ಅತ್ತಿಗೆ, ನನ್ನ ಪ್ರೇಯಸಿಯರು, ನನ್ನ ಹೆಂಡತಿ, ಗೆಳತಿಯರು ಎಲ್ಲರಲ್ಲಿಯೂ ನಾನು ಕಾಣುವುದು ಪ್ಯೂರ್ ಹೆಣ್ಣು. ಅವರ ಪರಿಸ್ಥಿತಿಗೆ ತಕ್ಕಂಗೆ ಮಾತಾಡ್ತಾರೆ ಅವರು. ಅವರಾರೂ ಕೆಟ್ಟವರಲ್ಲ. ಬದುಕಿಗೆ ಅಡ್ಜೆಸ್ಟ್‌ ಆಗ್ತಾ ಹೋಗ್ತಾರೆ. ನನ್ನ ತಾಯಿಯನ್ನೇ ಎಲ್ಲ ಹೆಣ್ಣು ಪಾತ್ರಗಳಲ್ಲಿಯೂ ಹುಡುಕಲು ಪ್ರಯತ್ನಿಸ್ತೀನಿ. ಕೆಲವೊಮ್ಮೆ ಸಿಗತ್ತೆ, ಇನ್ನು ಕೆಲವು ಸಲ ಸಿಗಲ್ಲ. ಮಿಕ್ಸ್‌ ಮಸಾಲಾ ಅದು. ಆದರೆ ನಾನು ನನ್ನ ಸಿನಿಮಾಗಳಲ್ಲಿ ಮಹಿಳಾ ಪಾತ್ರಗಳನ್ನು ಬೇಕಾದಾಗ ಬಳಸಿ ಬಿಸಾಕುವುದಿಲ್ಲ. ನನ್ನ ತಾಯಿ, ಅಕ್ಕ, ಅತ್ತಿಗೆ, ಹೆಂಡತಿ ಯಾರೂ ನನ್ನ ಬದುಕಲ್ಲಿ ಬೇಕಾದಾಗಿ ಬಳಸಿ ಬಿಸಾಕುವ ಕ್ಯಾರೆಕ್ಟರುಗಳಲ್ಲ! ಸಿನಿಮಾದಲ್ಲಿಯೂ ಹಾಗೆ.‌

* ನಿಮ್ಮ ಪ್ರಕಾರ ಒಂದು ಸಿನಿಮಾ ಒಳ್ಳೆಯದು ಅಥವಾ ಕೆಟ್ಟದ್ದು ಎಂದು ನಿರ್ಧರಿಸುವ ಅಂಶಗಳು ಯಾವುವು?

ಇಲ್ಲಿ ಒಳ್ಳೆಯ ಮೇಕರು ಕೆಟ್ಟ ಮೇಕರು ಅಂತ ಇರಲ್ಲ. ಅವರವರಿಗೆ ಅನಿಸಿದ್ದನ್ನು ಮಾಡ್ತಿರ್ತಾರೆ ಪಾಪ. ಅದನ್ನೇ ಒಳ್ಳೆಯದ್ದು ಕೆಟ್ಟದ್ದು ಅಂತ ಸ್ಕೇಲಲ್ಲಿ ಹಾಕಿ ಅಳೆಯುವುದು. ಯಾರಿಗೆ ಗೊತ್ತು ಒಳ್ಳೆಯದು ಯಾವುದು ಅಂತ? ಪಬ್ಲಿಕ್‌ ಹೇಳುತ್ತೆ – ಒಳ್ಳೆಯದು ಕೆಟ್ಟದ್ದು ಯಾವುದು ಅಂತ. ಐರನ್ ಮಾಡುವವನು ಚೆನ್ನಾಗಿದ್ಯಾ ಚೆನ್ನಾಗಿಲ್ವಾ ಹೇಳ್ಬಿಟ್ಟು ಎದ್ದೋಗ್ತಾನಪ್ಪಾ... ಅವನೇನು ಓದಿದ್ದಾನೆ? ಅವನೇನು ಕಲಿತಿದ್ದಾನೆ?

ಅವನಿಗೆ ಗೊತ್ತಿರೋದು ಒಂದೇ. ಶುದ್ಧವಾದ ನೀರು ಯಾವುದು ಎನ್ನುವುದು. ನೀರಿಗೆ ಒಂದೇ ಒಂದು ಹನಿ ನಿಂಬೆಹುಳಿ ಹಿಂಡಿ ಕೊಡಿ, ಅವನು ತಕ್ಷಣ ಹೇಳ್ತಾನೆ ‘ಸಾರ್, ಯಾರೋ ನಿಂಬೆ ಹಿಂಡಿಬಿಟ್ಟಿದಾರೆ’ ಅಂತ. ಹೆಂಗ್ ಗೊತ್ತಾಗ್ಬಿಡ್ತು ಅವನಿಗೆ? ಗೊತ್ತಾಗುತೆ ಅವನಿಗೆ. ‘ಸಾರ್ ನೀರು ಕಚಡ ಆಗಿದೆ, ಕುಡೀಬೇಡಿ’ ಅಂತಾನೆ. ರಿಸಲ್ಟ್‌ ಅಷ್ಟೇನೆ. ಶುದ್ಧವಾಗಿಲ್ಲ ಎನ್ನುವುದಷ್ಟೆ. ಸರಿ ತಪ್ಪು ಅಂತಲ್ಲ. ಫಸ್ಟು–ಸೆಕೆಂಡು ಅಂತಲ್ಲ. ಟಾಪ್‌ ಒನ್‌, ಟೂ ಅಲ್ಲ. ಅವರಿಗೆ ಶುದ್ಧವಾಗಿರುವುದು ಗೊತ್ತಿದೆ. ಸತ್ಯ ಏನು ಅಂತ ಗೊತ್ತಿದೆ. ಅವರು ಕೂತು ಒಂದೇ ಮಾತು ಹೇಳ್ತಾರೆ ‘ಸೂರಿ ನೆಟ್ಗವ್ನಾ ನೆಟ್ಗಿಲ್ವಾ...’ ತೆಗ್ದು ಎತ್ತಿ ಬಿಸಾಕ್ತಾರೆ ಅಷ್ಟೇ.

ನೀವು ಬೇಕಾದ್ರೆ ರೇಣುಕಾಂಬಾ ಥಿಯೇಟರ್‌ನಲ್ಲಿ ಇಟ್ಟು ತೋರ್ಸಿ ಅಥವಾ ಐಸಿಯೂನಲ್ಲಿ ಇಟ್ಟೇ ತೋರ್ಸಿ. ಐಸಿಯೂದಲ್ಲಿ ಇಟ್ಟಾಗ ನೋಡಲು ಬರುವವರೆಲ್ಲ ‘ಎದ್ದೇಳ್ತಾರೆ, ಆರಾಮಾಗ್ತಾರೆ ಅಂತ್ಲೇ ಹೇಳೋದು’. ‘ಇಂತಿ ನಿನ್ನ ಪ್ರೀತಿಯ’ ಸಿನಿಮಾ ನಾನು ಹಂಗೇ ತೋರ್ಸಿದ್ದೆ ಸುಮಾರು ಜನರಿಗೆ. ಎಲ್ರೂ ಚೆನ್ನಾಗಾಗತ್ತೆ ಅಂತ್ಲೇ ಹೇಳಿ ಹೋಗಿದ್ದು. ಏನೂ ಆಗ್ಲಿಲ್ಲ. ಹಾಗೆ ಏನೂ ಆಗುವುದಿಲ್ಲ. ನೀರಿನಲ್ಲಿ ಹಾಕಿದ ಒಂದು ಹನಿ ನಿಂಬೆಹುಳಿಯನ್ನು ವಾಪಸ್‌ ತೆಗೆದುಕೊಳ್ಳೋಕೆ ಸಾಧ್ಯವೇ ಇಲ್ಲ. ನಿರ್ಧರಿಸುವುದು ಜನ. ಹಣ ಕೊಡುವುದು ಅವರೇ.

* ಬಹುಜನ ನೋಡಿದ ಸಿನಿಮಾವೇ ಶುದ್ಧ ಸಿನಿಮಾ ಅಂತ ಹೇಗೆ ಹೇಳೋದು? ನಿಮ್ಮ ‘ಟಗರು’ ಸಿನಿಮಾ ಜನರ ಪ್ರಕಾರ ಶುದ್ಧ ಸಿನಿಮಾ. ಹಾಗಾದರೆ ಕನ್ನಡದ ಯಾವುದೋ ಒಳ್ಳೆಯ ಕಲಾತ್ಮಕ ಚಿತ್ರ ಬಿಡುಗಡೆಯಾದರೆ ನಿಮ್ಮ ಸಿನಿಮಾ ನೋಡಿದ ಒಂದಂಶ ಜನರೂ ಅದನ್ನು ನೋಡುವುದಿಲ್ಲ. ಹಾಗಾದರೆ ಅದು ಅಶುದ್ಧ ಸಿನಿಮಾವೇ?

ಖಂಡಿತಾ ಅಲ್ಲ. ಗಿರೀಶ ಕಾಸರವಳ್ಳಿ ಒಳ್ಳೆಯ ಸಿನಿಮಾಗಳನ್ನು ಮಾಡಿದ್ದಾರೆ. ಅವರ ಸಿನಿಮಾ ಅಶುದ್ಧ ಅಲ್ಲ. ಆದರೆ ಅವರಿಗೆ ತಮ್ಮ ಸಿನಿಮಾವನ್ನು ಯಾರು ನೋಡಬೇಕು, ನೋಡ್ತಾರೆ ಅನ್ನುವ ಬಗ್ಗೆ ಕ್ಲಾರಿಟಿ ಇದೆ. ನಿಮಗಿರುವ ಪ್ರಶ್ನೆಗಳು ಅವರಿಗಿಲ್ಲ. ಅಪ್ಪು ಸಿನಿಮಾ ಪಕ್ಕಕ್ಕೆ ಕಾಸರವಳ್ಳಿ ಸಿನಿಮಾ ಇಟ್ಟು ಯಾಕೆ ಓಡುವುದಿಲ್ಲ ಎಂಬ ಪ್ರಶ್ನೆ, ಪತ್ರಿಕೆಯವರಿಗೆ ಬುದ್ದಿಜೀವಿಗಳಿಗೆ ಇದೆಯಷ್ಟೆ, ಅವರಿಗಿಲ್ಲ. 
ನಾನು ಮಾತಾಡ್ತಾ ಇರೋದು ಕಮರ್ಷಿಯಲ್ ಸಿನಿಮಾದ ಕುರಿತು. ನನಗೆ ಗೊತ್ತಿರುವುದು ಅದು. ಏನು ಮಾಡಿದರೆ ಜನ ಚಪ್ಪಾಳೆ ಹೊಡೀತಾರೆ ಎನ್ನುವುದು ನನಗೆ ಗೊತ್ತಿದೆ. ಅದನ್ನು ಮಾಡ್ತೀನಿ. ಕಾಸರವಳ್ಳಿ ಅವರಿಗೂ ತಮ್ಮ ಸಿನಿಮಾಗಳಲ್ಲಿ ಏನನ್ನು ಹೇಳಬೇಕು ಎನ್ನುವುದು ಗೊತ್ತಿದೆ. ಅವರು ಹಾಗೆಯೇ ಮಾಡ್ತಿದ್ದಾರೆ. ಯಾರದು ಸರಿ, ಯಾರದು ತಪ್ಪು ಎನ್ನುವ ಪ್ರಶ್ನೆಯೇ ಬರುವುದಿಲ್ಲ ಇಲ್ಲಿ. ಅವರು ಮಾಡಿರುವ ಎಲ್ಲ ಸಿನಿಮಾಗಳಲ್ಲಿಯೂ ತುಂಬ ವಿಷಯಗಳಿವೆ. ನಾನು ಮಾಡಿರುವ ಸಿನಿಮಾಗಳಲ್ಲಿಯೂ ತುಂಬ ವಿಷಯಗಳಿವೆ. ಅವು ಯಾರ್‍ಯಾರಿಗೆ ತಲುಪಬೇಕೋ ತಲುಪಿದೆ, ಅಷ್ಟೆ.

ನಾನು ಎಲ್ಲಿಯೋ ಏನೋ ತಿಂತಿರಬೇಕಾದರೆ ಯಾರೋ ಜನ ಸಿಕ್ಕು ‘ಸಾರ್ ನಿಮ್ಮ ಸಿನಿಮಾ ಚೆನ್ನಾಗಿದೆ. ಇನ್ನೊಂದಿಷ್ಟು ಸಿನಿಮಾ ಮಾಡಿ’ ಸಾರ್ ಅಂತಾರಲ್ಲಾ, ಆಗ ಆಗುವ ಖುಷಿಯೇ ಬೇರೆ. ಆ ಜನರಿಗೋಸ್ಕರ ಸಿನಿಮಾ ಮಾಡ್ತೀನಿ ನಾನು.

* ಇತ್ತೀಚೆಗೆ ಒಂದು ಸಂದರ್ಶನದಲ್ಲಿ ‘ಒಬ್ಬ ನಿರ್ದೇಶಕ ಹೊಸ ಸಿನಿಮಾ ಮಾಡಬೇಕಾದರೆ ಅವನ ಅಹಂಗಳನ್ನೆಲ್ಲ ಬಿಟ್ಟು ಹೋಗಬೇಕು’ ಎಂದು ಹೇಳಿದ್ದೀರಿ. ಹಾಗೆ ಅಹಂ ಇಲ್ಲದಿದ್ದರೆ ಸಿನಿಮಾ ಮಾಡಲಿಕ್ಕೆ ಆಗುತ್ತಾ?

ಅಹಂಕಾರ ಇದ್ದರೆ ಇರಲಿಬಿಡಿ.

* ಮತ್ತೆ ನೀವು ಹೇಳಿದ ಮಾತಿಗೇ ವಿರುದ್ಧ ಆಯ್ತಲ್ಲಾ ಇದು..?

ಅದು ಆ ಕ್ಷಣಕ್ಕೆ ಹೇಳಿದ್ದು. ಅದನ್ನು ಯಾರಾದ್ರೂ ಶಾಸನದ ಥರ ಕಲ್ಲಿನ ಮೇಲೆ ಕೆತ್ತಿದ್ದಾರಾ? ಬುದ್ಧ ಹೇಳಿದ್ನಲ್ಲಾ, ‘ಆಸೆಯೇ ದುಃಖಕ್ಕೆ ಮೂಲ’ ಅಂತ. ಹಾಗಾ ನನ್ನ ಮಾತು? ನನ್ನ ಬಾಯಿಯಲ್ಲಿ ಬರುವ ಮಾತುಗಳ್ಯಾವುವೂ ಶಾಸನಗಳಲ್ಲ. ಅವಕ್ಕೆ ಅಷ್ಟೊಂದು ಮಹತ್ವ ಇಲ್ಲ. ಅವತ್ತಿಗೆ ನಂಗೆ ಹಾಗೆ ಅನಿಸಿರಬಹುದು. ಈಗಲೂ ಈ ಕ್ಷಣಕ್ಕೆ ಏನನ್ನಿಸುತ್ತಿದೆಯೋ ಹಾಗೆ ಮಾತಾಡ್ತಿದೀನಿ. ಮಧ್ಯಾಹ್ನದ ಮೇಲೆ, ಸಂಜೆ ಹೊತ್ತಿಗೆ ನೀವು ಕಾಲ್ ಮಾಡಿದ್ರೆ ನನ್ನ ದೃಷ್ಟಿಕೋನ ಬದಲಾಗಿರಬಹುದು. ಗೊತ್ತಿಲ್ಲ ನಂಗೆ. ಈ ಕ್ಷಣಕ್ಕೆ ಹೀಗೆ ಅನ್ನಿಸುತ್ತಿದೆ ಅಷ್ಟೇ.

ಕೆಲಸ ಮಾಡುವಾಗ ಕ್ಲಾರಿಟಿ ಬರುತ್ತದೆ. ಕ್ಲಾರಿಟಿ ಎನ್ನುವುದು ಆ ಕ್ಷಣಕ್ಕೆ ಸಂಬಂಧಿಸಿದ್ದು.

 * ನಿಮ್ಮ ದಿನಚರಿ ಹೇಗಿರುತ್ತದೆ?

ಬೆಳಿಗ್ಗೆ ನಾನು ಹಾಸಿಗೆಯಿಂದ ಎದ್ದಾಗ ಬದುಕಿದ್ದೀನಿ ಅಂತ ಖಾತ್ರಿಯಾಗುತ್ತೆ. ತಿಂಡಿ ತಿಂದು ಆಫೀಸಿಗೆ ಬರ್ತೇನೆ. ಈ ಆಫೀಸು ಅನ್ನೋ ಕಲ್ಚರು ಸರಿಯಿಲ್ಲ. ಆದ್ರೆ ಚಿಕ್ಕಂದಿನಿಂದ ಬೆಳಿಗ್ಗೆ ಎದ್ದು ಮನೆಯಿಂದ ಹೊರಗೆ ಹೋಗಿ ರೂಢಿಯಾಗಿದೆಯಲ್ಲ. ಹಾಗಾಗಿ ಬ್ಯಾಗ್ ಎತ್ಕೊಂಡು ಹೊರಗೆ ಬರ್ತೀನಿ. ದೇಹ ಕೇಳಿದ್ದನ್ನು ಮಾಡ್ತಾ ಹೋಗ್ತೀನಿ. ಸಾಧ್ಯವಾದಷ್ಟೂ ಬರೀತೀನಿ. ಯಾಕೆಂದರೆ ಅದೇ ನನಗೆ ಆಹಾರ. ಚರ್ಚೆ ಮಾಡ್ತೀನಿ. ಚಿತ್ರ ಬರೀತೀನಿ. ಸಾಧ್ಯವಾದಷ್ಟೂ ಕಡಿಮೆ ಗಾಸಿಫ್ ಮಾತಾಡ್ತೀನಿ. ಅಷ್ಟೇ.

* ನಿಮ್ಮ ಚಿತ್ರಕಥೆ ಬರವಣಿಗೆಯ ಕುರಿತು ಸ್ವಲ್ಪ ಹೇಳಿ.

ಚಿತ್ರಕಥೆ ಬರವಣಿಗೆ ಬಗ್ಗೆ ನನಗೇನೂ ಗೊತ್ತಿಲ್ಲ. ಹೊಸ ಸಿನಿಮಾಗೆ ಜಾಸ್ತಿ ಬರವಣಿಗೆ ನಡೀತಿದೆ. ಕಲಾವಿದರ ಆಯ್ಕೆ ನಡೆದಿದೆ. ಒಂದು ಮೂವತ್ತು ದಿನಗಳ ಚಿತ್ರೀಕರಣ ಪ್ಲ್ಯಾನ್ ಮಾಡುತ್ತಿದ್ದೇವೆ. ಬರವಣಿಗೆ ಎನ್ನುವುದು ನನ್ನ ಪಾಲಿಗೆ ಪ್ರಾಪರ್ಟಿ ಅಷ್ಟೆ. ಸೆಟ್‌ಗೆ ಹೋದಾಗ ಅಲ್ಲಿ ಏನೋ ಬದಲಾಗುತ್ತದೆ. ಹೊಸದೇನೋ ಸಂಭವಿಸುತ್ತದೆ. ಹಾಗಾಗದಿದ್ರೆ ಅದು ಸಿನಿಮಾನೇ ಅಲ್ಲ.

ಅಡುಗೆ ಗೊತ್ತಿದೆ. ಬಿರಿಯಾನಿನೇ ಮಾಡೋದು. ಇದು ಧಮ್ ಬಿರಿಯಾನಿ. ಒಂದಿಷ್ಟು ಹೊಸ ಬಗೆಯ ಸೈಡ್ಸ್‌ಗಳೂ ಇವೆ. ಅಷ್ಟು ಗೊತ್ತಿದೆ. ನೋ ವೆಜ್‌. ಇದು ನಾನ್‌ವೆಜ್‌. ಇನ್ವಿಟೇಷನ್ ಪಕ್ಕಾ.

* ಎಷ್ಟು ದಿನ ಬಿರಿಯಾನಿಯನ್ನೇ ಮಾಡ್ತಾ ಇರ್ತೀರಿ?

ನನಗೆ ಬರುವುದು ಅದೊಂದೇ. ನಾನು ಸಾಯುವವರೆಗೂ ಬಿರಿಯಾನಿಯನ್ನೇ ಮಾಡಿ ಸಾಯೋದು. ಮಧ್ಯದಲ್ಲಿ ಯಾವುದೇ ಪೂಜೆ ಅಂತ ಅದರ ಪ್ರಸಾದ ಮಾಡಲ್ಲ ನಾನು. ಬೇಳೆ ಬಾತ್ ಮಾಡ್ಕೊಡು ಅಂದ್ರೂ ಮಾಡಲ್ಲ. ನಾನು ನಿರಂತರವಾಗಿ ಹಲವು ರುಚಿಗಳ ಬಿರಿಯಾನಿಗಳನ್ನೇ ಮಾಡುವುದು. ನಾನು ಹೋಗ್ಬೇಕಾದ್ರೆ ಜನರಿಗೆ ಅದೇ ಕಾಣಿಸ್ಬೇಕು. ಹಾಗಾದ್ರೆ ವೆಜ್‌ನವರಿಗೆ ಏನು ಮಾಡ್ತೀರಾ ಅಂತ ಕೇಳಿದ್ರೆ ಐಯಾಮ್ ಸಾರಿ... ನಾನು ಇಡೀ ಮನುಷ್ಯಕುಲಕ್ಕೆ ಸಿನಿಮಾ ಮಾಡ್ತೀನಿ. ಅದರಲ್ಲಿ ವೆಜ್ಜು ನಾನ್ವೆಜ್ಜು ಅನ್ನೋದನ್ನು ನೀವು ಡಿಸೈಡ್ ಮಾಡ್ಕೊಳ್ಳಿ.

ಸೂರಿ ಈಸ್ ಎ ಬಿರಿಯಾನಿ ಸ್ಪೆಷಲಿಸ್ಟ್‌! ಥ್ಯಾಂಕ್ಯೂ..

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.