ಸಾಮಾಜಿಕ ಜಾಗೃತಿ ಮೂಡಿಸುವ ಚಿಕ್ಕಪುಟ್ಟ ವಿಡಿಯೊಗಳು, ಹಾಡುಗಳ ನಿರ್ಮಾಣಕ್ಕೆ ಸೀಮಿತ ಆಗಿದ್ದ ‘ಸಂತತ’ ಎಂಬ ಸಮಾನ ಮನಸ್ಕರ ಬಳಗ ಈಗ ‘ಸ್ವಲ್ಪ ದೊಡ್ಡಮಟ್ಟದಲ್ಲಿ ಏನಾದರೂ ಮಾಡಬೇಕು’ ಎಂದು ಒಂದು ಹೆಜ್ಜೆ ಮುಂದಿಟ್ಟಿದೆ. ಅದರ ಫಲವಾಗಿ ‘ಎಂದೆಂದಿಗೂ’ ಕಿರುಚಿತ್ರ ನಿರ್ಮಾಣ ಆಗಿದೆ.
ಲಾಕ್‌ಡೌನ್ ತೆರವಿನ ನಂತರ ಆರಂಭವಾದ ‘ಎಂದೆಂದಿಗೂ’ ಕಿರುಚಿತ್ರದ ಕೆಲಸ ಈಗ ಕೊನೆಯ ಹಂತದಲ್ಲಿದೆ. ಚಿತ್ರದ ಮೋಷನ್ ಪೋಸ್ಟರ್ ಅನ್ನು ನಿರ್ದೇಶಕ ಪ್ರೇಮ್ ಡಿ.1ರಂದು ಬಿಡುಗಡೆ ಮಾಡಿದ್ದಾರೆ.
‘ನಲವತ್ತೈದು ನಿಮಿಷಗಳ ಕಿರುಚಿತ್ರವಾದರೂ ನಾಲ್ಕು ಹಾಡುಗಳು ಬರುತ್ತವೆ. ಇದೊಂದು ಸಂಗೀತಮಯ ಕಿರುಚಿತ್ರ. ಪ್ರೇಮ್ ಅವರು ನಮ್ಮ ಹಾಡುಗಳನ್ನು ನೋಡಿ ತುಂಬಾ ಖುಷಿಯಾಗಿ ಹಾರೈಸಿದ್ದಾರೆ’ ಎಂದು ಪ್ರಯತ್ನಕ್ಕೆ ಸಿಕ್ಕ ಮೊದಲ ಮೆಚ್ಚುಗೆಯನ್ನು ಸಂಭ್ರಮಿಸುತ್ತಾರೆ ನಿರ್ದೇಶಕ ನಾಗರಾಜ ಪಾಟೀಲ.
ಚಿತ್ರಕ್ಕೆ ಅಂದಾಜು ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡಿರುವ ನಾಗರಾಜ, ಭವಿಷ್ಯಕ್ಕೆ ಇದೊಂದು ಬಂಡವಾಳ ಎಂಬ ನಂಬಿಕೆಯಲ್ಲಿ ಇದ್ದಾರೆ. ಈ ಕಿರುಚಿತ್ರ ನೋಡಿ ಮುಂದೆ ಖಂಡಿತ ಸಿನಿಮಾ ನಿರ್ದೇಶನಕ್ಕೆ ಗಾಂಧಿನಗರದಿಂದ ಕರೆ ಬರುತ್ತದೆ ಎಂಬ ನಿರೀಕ್ಷೆ ಅವರದ್ದು.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬಿ.ಕಾಂ. ಪದವಿ ಪಡೆದ ನಾಗರಾಜ ಬದುಕು ಕಂಡುಕೊಂಡಿದ್ದು ಕಲಾಲೋಕದಲ್ಲಿ. ಹತ್ತು ವರ್ಷ ರಂಗಾಯಣದಲ್ಲಿ, ರಂಗಕರ್ಮಿ ಯಶವಂತ ಸರದೇಶಪಾಂಡೆ ಅವರ ಹತ್ತಿರ ಕೈ ಪಳಗಿಸಿಕೊಂಡಿದ್ದಾರೆ.
ಒಂದೆರಡು ದಿನಗಳಲ್ಲಿ ಹಾಡುಗಳನ್ನೂ ಬಿಡುಗಡೆ ಮಾಡುವ ಉತ್ಸಾಹದಲ್ಲಿ ತಂಡವಿದೆ. ಝನ್‌ಕಾರ್ ಆಡಿಯೊದವರ ಜೊತೆಗೆ ಹಾಡುಗಳ ಹಕ್ಕುಗಳನ್ನು ಹಂಚಿಕೊಳ್ಳುವ ಮಾತುಕತೆ ನಡೆದಿದೆ. ಕಿರುಚಿತ್ರವನ್ನು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆ ಮಾಡುವ ಪ್ರಯತ್ನವೂ ನಡೆದಿದೆ.
ಐದು ಜನರ ‘ಸಂತತ’ ತಂಡವು ಐದು ವರ್ಷಗಳಲ್ಲಿ ಚುನಾವಣಾ ಜಾಗೃತಿ, ಕೊರೊನಾ ಜಾಗೃತಿ ಹಾಗೂ ಎಂಟ್ಹತ್ತು ಹಾಡುಗಳ ವಿಡಿಯೊಗಳನ್ನು ಹೊರತಂದಿದೆ.
ಕೊರೊನಾ ಸವಾಲು: ಕೊರೊನಾ ಕಾಲದಲ್ಲಿ ಕಿರುಚಿತ್ರ ನಿರ್ಮಾಣವು ನಾಗರಾಜ ಅವರಿಗೆ ಸುಲಭದ ಮಾತಾಗಿರಲಿಲ್ಲ. ಚಿತ್ರೀಕರಣ ಸ್ಥಳದಲ್ಲಿ ಸ್ಯಾನಿಟೈಸ್ ಮಾಡುವುದು, ಅಂತರ ಕಾಪಾಡಿಕೊಳ್ಳುವುದು ಕಷ್ಟವಾಗಿತ್ತು. ಜೊತೆಗೆ ಚಿತ್ರೀಕರಣಕ್ಕೆ ಪರವಾನಗಿ ಪಡೆಯುವುದೂ ಸವಾಲೇ ಆಗಿತ್ತು.
ಹುಬ್ಬಳ್ಳಿ–ಧಾರವಾಡ ಮಂದಿ...
‘ಸಂತತ’ ತಂಡದ ಸದಸ್ಯರೆಲ್ಲ ಧಾರವಾಡ ಜಿಲ್ಲೆಯವರು. ತಾರಾಗಣದಲ್ಲಿ ಇರುವವರು ಹಾಗೂ ಸಂಗೀತ (ಪ್ರಸನ್ನ ಭೋಜಶೆಟ್ಟರ್), ಛಾಯಾಗ್ರಹಣ (ಆಸೀಫ್ ನದಾಫ್), ಸಂಕಲನ (ಉದಯ್ ಹಬೀಬ್) ಹೀಗೆ ಕಿರುಚಿತ್ರದ ಹಿನ್ನೆಲೆಯಲ್ಲಿ ಕೆಲಸ ಮಾಡಿದ ಬಹುತೇಕರು ಹುಬ್ಬಳ್ಳಿ–ಧಾರವಾಡದವರು.
ನಾಯಕ–ನಾಯಕಿ ಪಾತ್ರದಲ್ಲಿರುವ ಯು.ಜೆ. ವಿನಯ್ ಹಾಗೂ ಐಶ್ವರ್ಯಾ ಸಾಲಿಮಠ ಇಬ್ಬರೂ ಮಹಾಸತಿ, ಕನ್ನಡತಿ, ಸೇವಂತಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ರಂಗಾಯಣದ ಆವರಣ ಹೀಗೆ ಧಾರವಾಡದಲ್ಲೇ ಸಂಪೂರ್ಣ ಚಿತ್ರೀಕರಣ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.