ಸೋಮವಾರ, ಮಾರ್ಚ್ 27, 2023
32 °C

'ಡ್ರ್ಯಾಗನ್‌' ಲೋಕಕ್ಕೆ ರಾಮ್‌ಗೋಪಾಲ್‌ ವರ್ಮಾ ಎಂಟ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ವಿವಾದಗಳ ಮೂಲಕವೇ ಜನರ ಮನಸ್ಸಿನಲ್ಲಿ ನೆಲೆಯೂರಿರುವ ತೆಲುಗಿನ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಸಾಲು ಸಾಲು ಸಿನಿಮಾಗಳ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

ವರ್ಷಗಳ ಹಿಂದೆ ಘೋಷಿಸಿಕೊಂಡಿದ್ದ ವರ್ಮಾ ಅವರ ‘ಎಂಟರ್‌ ದಿ ಗರ್ಲ್‌ ಡ್ರ್ಯಾಗನ್’ ಸಮರ ಕಲೆ ಆಧಾರಿತ ನಾಯಕಿ ಪ್ರಧಾನ ಸಿನಿಮಾಕ್ಕೆ ಈಗ ಜೀವ ಬಂದಿದೆ. ಇದು ಬ್ರೂಸ್‌ ಲೀ ಅವರೇ ರಚಿಸಿ, ನಿರ್ದೇಶಿಸಿದ್ದ ಪ್ರಖ್ಯಾತ  ‘ಎಂಟರ್‌ ದಿ ಡ್ರ್ಯಾಗನ್‌’ ಸಿನಿಮಾವನ್ನು ನೆನಪಿಸುತ್ತದೆ.

‘ನನ್ನ ವೃತ್ತಿ ಬದುಕಿನಲ್ಲೇ ಅತ್ಯಂತ ಮಹತ್ವಾಕಾಂಕ್ಷೆಯ ಚಿತ್ರವಿದು. ಇಂಡೊ– ಚೀನಾ ಸಹಭಾಗಿತ್ವದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ ಸಮರಕಲೆ ಆಧಾರಿತ ಮೊದಲ ಚಿತ್ರ’ ಎಂದು ಹೇಳಿಕೊಂಡಿರುವ ವರ್ಮಾ, ಚಿತ್ರದ ಪೋಸ್ಟರ್‌ ಮತ್ತು ತಾವು ಹರೆಯದಲ್ಲಿದ್ದಾಗ ಸಮರ ಕಲೆಯಲ್ಲಿ ಅಭ್ಯಾಸ ಮಾಡುತ್ತಿದ್ದ ಹಳೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟರ್‌ ಚಿತ್ರರಸಿಕರ ಗಮನ ಸೆಳೆಯುತ್ತಿದೆ. 

ಈ ಚಿತ್ರದ ಟೀಸರ್‌ ಅನ್ನು ಬ್ರೂಸ್‌ ಲೀ ಅವರ 80ನೇ ವರ್ಷದ ಹುಟ್ಟುಹಬ್ಬದ ನಿಮಿತ್ತ ನವೆಂಬರ್‌ 27ರಂದು ಮಧ್ಯಾಹ್ನ 3.12ಕ್ಕೆ ಬಿಡುಗಡೆ ಮಾಡಲಾಗುತ್ತದೆ. ಚಿತ್ರದ ಟ್ರೇಲರ್‌ ಬ್ರೂಸ್‌ ಲೀ ಅವರ ಹುಟ್ಟೂರಾದ ಚೀನಾದ ಫೋಶನ್‌ ಸಿಟಿಯಲ್ಲಿ ಡಿಸೆಂಬರ್‌ 13ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಈ ಚಿತ್ರದಲ್ಲಿ ನಟಿಸುತ್ತಿರುವ ತಾರಾಗಣದ ಬಗ್ಗೆ ವರ್ಮಾ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಎ ಬಿಗ್‌ ಪೀಪಲ್‌ ಮತ್ತು ಟೈಗರ್‌ ಕಂಪನಿ ಬ್ಯಾನರ್‌ಗಳಡಿ ಜಿಂಗ್‌ ಲಿಯು, ನರೇಶ್‌ ಕುಮಾರ್‌ ಟಿ. ಮತ್ತು ಶ್ರೀಧರ್‌ ಟಿ. ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ವರ್ಮಾ ಅವರ ಟ್ವೀಟ್‌ಗೆ ಅನೇಕರು ಪ್ರತಿಕ್ರಿಯಿಸಿದ್ದು, ಸದ್ಯ ಈಗಲಾದರೂ ಇದು ಸಿದ್ಧವಾಗಿದೆ ಎಂದು ಕುಟಕಿದ್ದಾರೆ. ಮತ್ತೆ ಕೆಲವರು ಆಲ್‌ ದಿ ಬೆಸ್ಟ್‌ ಹೇಳಿದ್ದಾರೆ.

ಸಂದೀಪ್ ಮಾಧವ್ ಅವರೊಂದಿಗೆ ‘ದಾದಾಸ್ ಆಫ್ ಹೈದರಾಬಾದ್’ ಹೊಸ ಚಿತ್ರವನ್ನು ಇತ್ತೀಚೆಗಷ್ಟೇ ವರ್ಮಾ ಘೋಷಿಸಿದ್ದರು. ಈಗ, ಆ ಚಿತ್ರ ತಡವಾಗುತ್ತಿರುವ ಕಾರಣಕ್ಕೆ  ತಮ್ಮ ‘ಎಂಟರ್ ದಿ ಗರ್ಲ್ ಡ್ರ್ಯಾಗನ್‌’ ಕೈಗೆತ್ತಿಕೊಂಡಿದ್ದು ಮತ್ತೆ ಸುದ್ದಿಯಲ್ಲಿದ್ದಾರೆ. ಅವರ ನಿರ್ದೇಶನದ ‘ಲಕ್ಷ್ಮಿಸ್‌ ಎನ್‌ಟಿಆರ್‌’ ಚಿತ್ರವು ವಿವಾದಕ್ಕೆ ಕಾರಣವಾಗಿದ್ದು, ಅಂಥದ್ದೇ ಮತ್ತೊಂದು ವಿವಾದಾತ್ಮಕ ಚಿತ್ರ ‘ಕಮ್ಮ ರಾಜ್ಯಮ್ಲೊ ಕಡಪ ರೆಡ್ಲು’ ಶೀಘ್ರದಲ್ಲೇ ತೆರೆಗೆ ಬರಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು