ಭಾನುವಾರ, ಸೆಪ್ಟೆಂಬರ್ 19, 2021
23 °C

ಪ್ರೀತಿಯಿಂದ, ಪ್ರೀತಿಗಾಗಿ... ‘ಬೇಬಿ’!

ನಿರೂಪಣೆ: ಕೆ.ಎಂ.ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

Prajavani

ಪಂಚಭಾಷಾ ತಾರೆ ಎಸ್ತರ್‌ ನೊರೊನ್ಹಾ ಅವರು ಜನಪ್ರಿಯ ನಟ, ರಾಪರ್ ನೋಯೆಲ್ ಅವರನ್ನು ಕೈ ಹಿಡಿದ ನಂತರ ಅವರ ಬದುಕಿನ ಪುಟಗಳಲ್ಲಿ ಈಗ ಮಿಡಿಯುತ್ತಿರುವುದು ಬರೀ ಪ್ರೇಮ ರಾಗ! ಇವರಿಬ್ಬರಿಗೂ ನಟನೆಗಿಂತಲೂ ಸಂಗೀತವೇ ಅಚ್ಚುಮೆಚ್ಚು. ಪ್ರೀತಿಸಿ, ಮದುವೆಯಾದ ನಂತರ ಇಬ್ಬರೂ ಕೂಡಿ ಮಾಡಿದ ಮೊದಲ ಆಲ್ಬಂ ಸಾಂಗ್‌ ‘ಬೇಬಿ’. ಕೊಂಕಣಿ, ತೆಲುಗು ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿರುವ ಆಲ್ಬಂ ಸಾಂಗ್‌ಗೆ ‘ಬೇಬಿ’ ಎಂಬ ಶೀರ್ಷಿಕೆಯಯ್ನು ಏಕೆ ಇಡಲಾಗಿದೆ ಎಂಬುದನ್ನು ಎಸ್ತರ್‌ ಇಲ್ಲಿ ಹೇಳಿಕೊಂಡಿದ್ದಾರೆ.

––––

ಕಳೆದ ವರ್ಷದ ಈಸ್ಟರ್‌ ಹಬ್ಬದ ಸಂದರ್ಭದಲ್ಲಿ ‘ಡೆಸ್ಪಾಸಿಟೊ’ ಎಂಬ ಸ್ಪ್ಯಾನಿಶ್‌ ಗೀತೆಯನ್ನು ಕವರ್‌ ಸಾಂಗ್‌ ಆಗಿ ತೆಲುಗು ಮತ್ತು ಕೊಂಕಣಿಯಲ್ಲಿ ಬಿಡುಗಡೆ ಮಾಡಿದ್ದೆವು. ನಾನು ಮತ್ತು ನೋಯೆಲ್‌ ಪರಿಚಯ ಆದ ಮೇಲೆ, ನಮ್ಮಿಬ್ಬರ ನಡುವೆ ಪ್ರೇಮ ಚಿಗುರಿದ ನಂತರ ನಾವಿಬ್ಬರೂ ಕೂಡಿ ಮಾಡಿದಂತಹ ಮೊದಲ ಪ್ರಾಜೆಕ್ಟ್‌ ಅದು. ‘ಡೆಸ್ಪಾಸಿಟೊ’ ಗೀತೆಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ತೆಲುಗಿನಲ್ಲಿ ಈವರೆಗೆ 25 ಲಕ್ಷಕ್ಕೂ ಅಧಿಕ ಜನರು ಆ ಗೀತೆಯನ್ನು ವೀಕ್ಷಿಸಿದ್ದಾರೆ. ಎರಡೂ ಭಾಷೆಗಳಿಂದ ಹೆಚ್ಚು ಕಡಿಮೆ 60 ಲಕ್ಷ ಜನರು ಗೀತೆಯನ್ನು ನೋಡಿ ಆನಂದಿಸಿದ್ದಾರೆ.

‘ಡೆಸ್ಪಾಸಿಟೊ’ ಗೀತೆಗೆ ಸಿಕ್ಕ ಜನಪ್ರಿಯತೆ ನಮ್ಮಿಬ್ಬರಲ್ಲೂ ಹೊಸ ಉತ್ಸಾಹ ಮೂಡಿಸಿತ್ತು. ಇನ್ನೊಂದು ಗೀತೆಯನ್ನು ಮಾಡಬೇಕು ಎಂಬ ಸ್ಫೂರ್ತಿ ತುಂಬಿತು. ಅದಕ್ಕಾಗಿ ಇಬ್ಬರೂ ಕುಳಿತು ಪ್ಲ್ಯಾನ್‌ ಕೂಡ ಮಾಡಿಕೊಂಡಿದ್ದೆವು. ಆದರೆ, ಹೋದ ಈಸ್ಟರ್‌ನಿಂದ ಈ ಈಸ್ಟರ್‌ ಹಬ್ಬದವರೆಗೆ ಹಲವಾರು ಪ್ರಾಜೆಕ್ಟ್‌ಗಳಲ್ಲಿ ಇಬ್ಬರೂ ಬ್ಯುಸಿ ಆದೆವು. ಸಿನಿಮಾ, ಶೂಟಿಂಗ್‌, ಗೀತೆ–ಗಾಯನ ಇವುಗಳ ನಡುವೆಯೇ ನಮ್ಮ ಮದುವೆ ಕೂಡ ಆಯಿತು. ಮದುವೆ ನಂತರ ಮತ್ತೇ ಇಬ್ಬರೂ ನಮ್ಮ ನಮ್ಮ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿ ಆದೆವು.

ಇದೇ ವೇಳೆ ಆರಂಭಗೊಂಡ ‘ಕಾಂತಾರ್‌’ ಕೊಂಕಣಿ ಸಿನಿಮಾದಲ್ಲಿ ನನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕಾಯಿತು. ಈ ಎಲ್ಲ ಕಾರಣಗಳಿಂದಾಗಿ ನಾನು ಮತ್ತು ನೋಯೆಲ್‌ ಒಟ್ಟಾಗಿ ಕೆಲಸ ಮಾಡುವುದಕ್ಕೆ ಸಾಧ್ಯ ಆಗಲೇ ಇಲ್ಲ. ಅಷ್ಟರಲ್ಲಿ ಒಂದು ವರ್ಷ ಕಳೆಯಿತು. ಈ ಸಲದ ಈಸ್ಟರ್‌ಗೆ ಒಂದು ಆಲ್ಬಂ ಸಾಂಗ್‌ ಬಿಡುಗಡೆ ಮಾಡಲೇಬೇಕು ಅಂದುಕೊಂಡು ‘ಬೇಬಿ’ ಎನ್ನುವ ಹಾಡನ್ನು ಶೂಟ್‌ ಮಾಡಿದೆವು. ಆದರೆ, ಗೀತೆಯನ್ನು ಈಸ್ಟರ್‌ ಹಬ್ಬದಂದು ಬಿಡುಗಡೆ ಮಾಡುವುದಕ್ಕೆ ಆಗಲಿಲ್ಲ. ಅದಕ್ಕಾಗಿ ಈಸ್ಟರ್‌ನಂದು ಗೀತೆಯ ಟೀಸರ್‌ ಅನ್ನು ಬಿಡುಗಡೆ ಮಾಡಿದೆವು.

ಈ ಬಾರಿ ಕೂಡ ನಮ್ಮ ಹೊಸ ಆಲ್ಬಂ ಗೀತೆ ‘ಬೇಬಿ’ಯನ್ನು ಎರಡು ಭಾಷೆಗಳಲ್ಲಿ ನಿರ್ಮಿಸಿದ್ದೇವೆ. ನೋಯೆಲ್‌ ಪ್ರೊಡಕ್ಷನ್‌ ಹೌಸ್‌ ಹಾಗೂ ಜಾನೆಟ್‌ ನೊರೊನ್ಹಾ ಪ್ರೊಡಕ್ಷನ್‌ನಿಂದ ಸಾಂಗ್‌ ಅನ್ನು ನಿರ್ಮಾಣ ಮಾಡಲಾಗಿದೆ. ಹೈದರಾಬಾದ್‌ ಮತ್ತು ಕರ್ನಾಟಕ ಎರಡೂ ಕಡೆಗಳಲ್ಲಿ ಗೀತೆಯ ಟೀಸರ್‌ ಬಿಡುಗಡೆ ಮಾಡಿದ್ದೇವೆ. ಟೀಸರ್‌ ನೋಡಿದ ಜನರು ‘ಡೆಸ್ಪಾಸಿಟೊ’ ಗೀತೆಗೆ ಕೊಟ್ಟಂತಹ ಪ್ರೀತಿಯನ್ನೇ ಈಗಲೂ ವ್ಯಕ್ತಪಡಿಸುತ್ತಿದ್ದಾರೆ. ಗೀತೆಯನ್ನು ಇದೇ ತಿಂಗಳು ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ.

ಗೀತೆಗೆ ‘ಬೇಬಿ’ ಎಂಬ ಶೀರ್ಷಿಕೆಯನ್ನು ಏಕೆ ಇಡಲಾಗಿದೆ ಎಂಬುದಕ್ಕೆ ನೋಯೆಲ್‌ ಕೊಡುವ ವಿವರಣೆಯನ್ನು ಕೇಳಲು ನನಗೆ ತುಂಬ ಹಿತ ಎನಿಸುತ್ತದೆ. ದಾಂಪತ್ಯಕ್ಕೆ ಕಾಲಿಟ್ಟ ನಂತರ ಇಬ್ಬರೂ ಒಂದಾಗಿ ದುಡಿದ ಪ್ರಾಜೆಕ್ಟ್‌ ಇದು. ಇಬ್ಬರೂ ಇಷ್ಟಪಟ್ಟು ಮಾಡಿರುವ ಗೀತೆ ಇದಾದ್ದರಿಂದ ಈ ಆಲ್ಬಂ ಸಾಂಗ್‌ಗೆ ‘ಬೇಬಿ’ ಎಂಬ ಹೆಸರು ಇಟ್ಟಿದ್ದೇವೆ. ‘ಬೇಬಿ’ ನಮ್ಮಿಬ್ಬರ ಪ್ರೇಮದ ಸಂಕೇತ. ಪ್ರೀತಿಯಿಂದ ಪ್ರೀತಿಗಾಗಿ ಮಾಡಿರುವ ಗೀತೆ ಇದು. ಆಲ್ಬಂ ಸಾಂಗ್‌ನ ಸಂಗೀತ ಹಾಗೂ ಸ್ವರ ಸಂಯೋಜನೆ ನೋಯಲ್‌ ಅವರದ್ದೇ. ತೆಲುಗು ಗೀತೆಯ ಸಾಹಿತ್ಯವನ್ನು ನೋಯೆಲ್‌ ಬರೆದಿದ್ದರೆ; ಕೊಂಕಣಿ ಗೀತೆಗೆ ನಾನೇ ಸಾಹಿತ್ಯ ರಚಿಸಿದ್ದೇನೆ. ಎರಡೂ ಭಾಷೆಗಳಲ್ಲಿ ನಾವಿಬ್ಬರೇ ಹಾಡಿದ್ದೇವೆ. ವಿಡಿಯೊದಲ್ಲಿ ಕೂಡ ನಾವಿಬ್ಬರೇ ಕಾಣಿಸಿಕೊಂಡಿದ್ದೇವೆ. ‘ಡೆಸ್ಪಾಸಿಟೊ’ ರೀತಿಯಲ್ಲಿ ಈ ಗೀತೆಗೂ ಕೂಡ ಜನರು ಮೆಚ್ಚುಗೆಯ ರುಜು ಹಾಕುತ್ತಾರೆ ಎಂಬ ನಿರೀಕ್ಷೆಯಲ್ಲಿ ನಾನು ಮತ್ತು ನೋಯೆಲ್‌ ಇದ್ದೇವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.