ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರ ಕಣ್ಣೂ ತಲಾಖ್‌ ಮೇಲೆ!

Last Updated 3 ಮಾರ್ಚ್ 2020, 19:45 IST
ಅಕ್ಷರ ಗಾತ್ರ
ADVERTISEMENT
""

ಮುಸ್ಲಿಮರ ಜೀವನದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಸಿನಿಮಾಗಳ ಬಗ್ಗೆ ಕನ್ನಡದ ನಿರ್ಮಾಪಕ, ನಿರ್ದೇಶಕರಿಗೆ ವಿಶೇಷ ಒಲವು ಇದ್ದಂತಿದೆ. ಹಾಗೆಂದೇ ಮುಸ್ಲಿಂ ಸಮುದಾಯದ ಕಥೆಯಿರುವ ಸಿನಿಮಾಗಳು ಸಾಲುಸಾಲಾಗಿ ಬರುತ್ತಿವೆ. ಆದರೆ ಬಹುತೇಕ ಎಲ್ಲ ಸಿನಿಮಾಗಳೂ ಮುಸ್ಲಿಮರ ತಲಾಖ್‌ ಪದ್ಧತಿಯ ಕಥೆಗಳನ್ನೇ ಹೊಂದಿರುವುದು ವಿಚಿತ್ರ ಎನ್ನಿಸಿದರೂ ಸತ್ಯ.

ಈ ಸಲದ ಬೆಂಗಳೂರು ಚಿತ್ರೋತ್ಸವದಲ್ಲಿ ತಲಾಖ್‌ ಕಥೆ ಆಧಾರಿತ ಎರಡು ಸಿನಿಮಾಗಳು ಪ್ರದರ್ಶನ ಕಂಡಿವೆ. ಮೊದಲನೆಯದ್ದು ಯಾಕೂಬ್‌ ಖಾದರ್‌ ಗುಲ್ವಾಡಿ ನಿರ್ದೇಶನದ ‘ಟ್ರಿಪಲ್‌ ತಲಾಖ್‌’, ಎರಡನೆಯದ್ದು ಎನ್‌.ವೈದ್ಯನಾಥ ನಿರ್ದೇಶನದ ‘ತಲಾಖ್‌ ತಲಾಖ್‌ ತಲಾಖ್‌’. ವಿಶೇಷವೆಂದರೆ ಕನ್ನಡಿಗರ ಈ ಎರಡೂ ಸಿನಿಮಾಗಳು ಕರಾವಳಿ ಮುಸ್ಲಿಮರ ಬ್ಯಾರಿ ಭಾಷೆಯದ್ದು.

ಸರಿಯಾಗಿ 20 ವರ್ಷಗಳ ಹಿಂದೆ ಪಿ.ಶೇಷಾದ್ರಿ ನಿರ್ದೇಶನದ ‘ಮುನ್ನುಡಿ’ ಸಿನಿಮಾ ತೆರೆಗೆ ಬಂತು. ಬೊಳುವಾರು ಮಹಮದ್‌ ಕುಂಞಿ ಕಥೆ ‘ಮುತ್ತುಚ್ಚೇರ’ ಆಧಾರಿತ ಈ ಸಿನಿಮಾ ತಲಾಖ್‌ ಸಮಸ್ಯೆಯ ಮೇಲೆ ಬೆಳಕು ಚೆಲ್ಲಿತು. ಅತ್ಯುತ್ತಮ ಸಾಮಾಜಿಕ ಪರಿಣಾಮ ಬೀರುವ ಚಿತ್ರ ಎಂಬ ರಾಷ್ಟ್ರಪ್ರಶಸ್ತಿ, ಮತ್ತು ದತ್ತಾತ್ರೇಯ ಅವರಿಗೆ ಉತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿತು.

2005ರಲ್ಲಿ ಗಿರೀಶ್‌ ಕಾಸರವಳ್ಳಿ ನಿರ್ದೇಶನದ ‘ಹಸೀನಾ’ ತೆರೆಕಂಡಿತು. ತಲಾಖ್‌ ಪಡೆದ ಹೆಣ್ಣೊಬ್ಬಳ ಬವಣೆ ಹೇಳಿದ ಸಿನಿಮಾ ಕಥೆ ಬಾನು ಮುಷ್ತಾಖ್‌ ಅವರದ್ದು. ಈ ಸಿನಿಮಾ ಕೂಡಾ ಅತ್ಯುತ್ತಮ ಕುಟುಂಬ ಕಲ್ಯಾಣ ಆಶಯದ ಚಿತ್ರ ಎಂದು ರಾಷ್ಟ್ರೀಯ ಪ್ರಶಸ್ತಿ ಪಡೆಯಿತು.

ಐದು ವರ್ಷಗಳ ಬಳಿಕ ‘ಬ್ಯಾರಿ’ ಸಿನಿಮಾ ಬಿಡುಗಡೆಯಾಗಿ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಸಿನಿಮಾ ‘ಸ್ವರ್ಣಕಮಲ’ ಪ್ರಶಸ್ತಿ ಗೆದ್ದಿತು. ಖ್ಯಾತ ಕಥೆಗಾರ್ತಿ ಸಾರಾ ಅಬೂಬಕರ್‌ ಅವರು ಮೊಕದ್ದಮೆ ಹೂಡಿದ್ದರಿಂದ ಹೆಚ್ಚು ಸುದ್ದಿ ಮಾಡಿದ ಚಿತ್ರವಿದು. ಅಲ್ತಾಫ್‌ ಹುಸೇನ್‌ ನಿರ್ಮಾಣದ, ಸುವೀರನ್‌ ನಿರ್ದೇಶನದ ಈ ಚಿತ್ರಕ್ಕೆ ತಮ್ಮ ‘ಚಂದ್ರಗಿರಿಯ ತೀರದಲ್ಲಿ’ ಎನ್ನುವ ಕಥೆಯೇ ಆಧಾರ ಎನ್ನುವುದು ಸಾರಾ ಅವರ ಮೊಕದ್ದಮೆಯ ತಿರುಳು. ಕೋರ್ಟ್‌ ಚಿತ್ರಪ್ರದರ್ಶನಕ್ಕೆ ತಡೆಯಾಜ್ಞೆಯನ್ನೂ ನೀಡಿತ್ತು. ಈ ಚಿತ್ರದ್ದೂ ತಲಾಖ್‌ ಕಥೆಯೇ.

ಎರಡು ವರ್ಷಗಳ ಹಿಂದೆ ಪಿ.ಶೇಷಾದ್ರಿ ‘ಬೇಟಿ’ ಕನ್ನಡ ಚಿತ್ರ ಬೆಂಗಳೂರು ಚಿತ್ರೋತ್ಸವದಲ್ಲಿ ತೆರೆಕಂಡಿದ್ದು, ಅದರ ಕಥೆ ಹೆಣ್ಣುಮಗುವಿನ ಗೀಳಿನ ಕುರಿತದ್ದು. ಹಾಗೆಯೇ ಕಳೆದ ವರ್ಷ ಎಂ.ಜಿ.ರಹೀಂ ನಿರ್ದೇಶನದ ‘ಅಬ್ಬ’ ಚಿತ್ರ ಬಿಡುಗಡೆಯಾಗಿದ್ದು ಇದರ ಕಥೆ ಅಪ್ಪ–ಅಮ್ಮನ ಬಗ್ಗೆ ಮಗನ ಅವಜ್ಞೆಯ ಕುರಿತಾಗಿತ್ತು.

ಈಗ ಬೆಂಗಳೂರು ಚಿತ್ರೋತ್ಸವದಲ್ಲಿ ಎರಡು ಬ್ಯಾರಿ ಚಿತ್ರಗಳು ಪ್ರದರ್ಶನ ಕಂಡಿದ್ದು, ಎರಡರ ಕಥೆಯೂ ಮತ್ತೆ ತಲಾಖ್‌ ಕೇಂದ್ರಿತ! ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಟ್ರಿಪಲ್‌ ತಲಾಖ್‌ ನಿಷೇಧದ ಕಾಯ್ದೆಯ ಸುತ್ತ ತಿರುಗುವ ಕಥೆ ‘ಟ್ರಿಪಲ್‌ ತಲಾಖ್‌’ನದ್ದು. ಈ ಚಿತ್ರದ ನಿರ್ದೇಶಕ ಯಾಕೂಬ್‌ ಖಾದರ್‌, ಎರಡು ವರ್ಷಗಳ ಹಿಂದೆ ನಿರ್ಮಿಸಿದ ‘ರಿಸರ್ವೇಷನ್‌’ ಬೆಂಗಳೂರು ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯಲ್ಲದೆ ರಾಷ್ಟ್ರೀಯ ಪ್ರಶಸ್ತಿಯನ್ನೂ ಗೆದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT