ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೌರವ ಯಾವಾಗಲೂ ಪರಸ್ಪರ ಅಲ್ವಾ?’: ಯುವ ರಾಜ್‌ಕುಮಾರ್‌ ಪ್ರಶ್ನೆ

Last Updated 22 ಡಿಸೆಂಬರ್ 2022, 14:29 IST
ಅಕ್ಷರ ಗಾತ್ರ

ಹೊಸಪೇಟೆಯಲ್ಲಿ ಕೆಲ ದಿನಗಳ ಹಿಂದೆ ನಟ ದರ್ಶನ್‌ ಅವರ ಮೇಲೆ ಚಪ್ಪಲಿ ಎಸೆದ ಕೃತ್ಯವನ್ನು ಖಂಡಿಸಿ ಚಂದನವನದ ಹಲವು ಕಲಾವಿದರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಮಾಡಿದ್ದರು. ಇದರ ಬೆನ್ನಲ್ಲೇ ಕೆಲ ಸ್ಟಾರ್‌ ನಟರ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪ, ಪ್ರತ್ಯಾರೋಪಗಳು, ನಿಂದನೆಯ ಪೋಸ್ಟ್‌ಗಳನ್ನು ಅಪ್‌ಲೋಡ್‌ ಮಾಡುತ್ತಿರುವುದು ಪ್ರತಿನಿತ್ಯವೂ ಹೆಚ್ಚುತ್ತಿವೆ. ಇಂತಹ ಪೋಸ್ಟ್‌ಗಳ ಕುರಿತು ನಟರಾದ ಯುವ ರಾಜ್‌ಕುಮಾರ್‌ ಹಾಗೂ ‘ದುನಿಯಾ’ ವಿಜಯ್‌ ಬೇಸರವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಯುವ ರಾಜ್‌ಕುಮಾರ್‌, ‘ನಡೆಯುತ್ತಿರುವ ಘಟನೆಗಳ ಬಗ್ಗೆ ಮಾತನಾಡಲು ನಾನು ತುಂಬ ಚಿಕ್ಕವನು. ಆದರೆ, ಗೌರವ ಯಾವಾಗಲೂ ಪರಸ್ಪರ ಅಲ್ವಾ? ಅಪ್ಪು ಚಿಕ್ಕಪ್ಪನ ನಡವಳಿಕೆ, ಸಾಮಾಜಿಕ ಪ್ರಜ್ಞೆ, ಮಹಿಳೆಯರನ್ನು ಗೌರವಿಸುವುದು, ಎಲ್ಲರನ್ನೂ ಪ್ರೀತಿಸುವ ಅವರ ವ್ಯಕ್ತಿತ್ವದ ಬಗ್ಗೆ ಪ್ರತಿಯೊಬ್ಬರಿಗೂ ಚೆನ್ನಾಗಿಯೇ ತಿಳಿದಿದೆ. ಅವರ ವ್ಯಕ್ತಿತ್ವ ಎಂದೆಂದಿಗೂ ಎಲ್ಲರಿಗೂ ಮಾದರಿಯಾಗಿ ಇರುತ್ತದೆ. ಅವರ ಬಗ್ಗೆ ಅಗೌರವದಿಂದ ಅವಹೇಳನಕಾರಿಯಾಗಿ ಮಾತನಾಡಿ ಅವರ ಅಭಿಮಾನಿಗಳನ್ನು ಕೆಣಕಿದರೆ, ಅವರ ಭಾವನೆಗಳನ್ನು ನೋಯಿಸಿದರೆ, ಅಭಿಮಾನಿಗಳು ನಿರ್ದಿಷ್ಟ ರೀತಿಯಲ್ಲಿ ಪ್ರತಿಕ್ರಿಯಿಸುವುದು ‘ಬಹಿರಂಗವಾಗಿಯೇ’ ವಿನಃ ನಡೆಯುವ ಪ್ರತಿಯೊಂದು ಘಟನೆಗೂ ಅವರೇ ಕಾರಣಕರ್ತರು ಆಗೋದಿಲ್ಲ. ನಡೆದಿರುವ ಕೃತ್ಯ ಖಂಡನೀಯ. ಯಾರೋ ಮಾಡಿದ ತಪ್ಪನ್ನು ಮತ್ತೊಬ್ಬರ ಮೇಲೆ ಹಾಕುವುದರಿಂದ ಸುಳ್ಳು ಸತ್ಯವಾಗುವುದಿಲ್ಲ. ಪೊಲೀಸ್ ತನಿಖೆ ನಡೆಯುತ್ತಿದೆ, ತಪ್ಪಿತಸ್ಥ ಯಾರೇ ಆಗಿದ್ದರೂ ಶಿಕ್ಷೆ ಖಂಡಿತ ಆಗುತ್ತದೆ. ಕಾಣದ ಕೈಗಳು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದರೂ, ಕಾಣುವ ಬುದ್ಧಿ ನಮ್ಮದಾಗಿರಲಿ. ನನ್ನ ಚಿಕ್ಕಪ್ಪನ ಧ್ವನಿ ಎಂದಿಗೂ ಸತ್ಯದ ಪರವೇ, ಅವರ ಧ್ವನಿ ನಮ್ಮೆಲ್ಲರ ಶಕ್ತಿ’ ಎಂದಿದ್ದಾರೆ.

ನಟ ವಿಜಯ್‌ ಕೂಡಾ ಪತ್ರವೊಂದನ್ನು ಅಪ್‌ಲೋಡ್‌ ಮಾಡಿದ್ದಾರೆ. ‘ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದರೆ ಒಬ್ಬನ ಅಚಾತುರ್ಯವನ್ನು ನೇರವಾಗಿ ಅಣ್ಣಾವ್ರ ಪುತ್ರ ಮತ್ತು ನಮ್ಮ ಕರುನಾಡಿನ ಹೆಮ್ಮೆಯ ಕುಡಿ ದಿವಂಗತ ಅಪ್ಪು ಅವರನ್ನು ಗುರಿಯಾಗಿಸುತ್ತಿದ್ದಾರೆ. ಇದು ಅತ್ಯಂತ ನೋವಿನ ಸಂಗತಿ, ಇಲ್ಲಿಗೇ ನಿಲ್ಲಿಸದೇ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಕೆಟ್ಟ ಭಾಷೆಯ ಪದಪ್ರಯೋಗಿಸುತ್ತಿದ್ದಾರೆ. ಇದಂತೂ ಯಾರೂ ಕ್ಷಮಿಸಲಾರದಂತಹ ಕೆಟ್ಟ ನಡೆ. ಒಂದಂತೂ ಸತ್ಯ. ನಾವು ಮನುಷ್ಯರಾಗಿ ಎಷ್ಟೇ ಜನುಮವೆತ್ತಿದರೂ ಆ ದೇವತಾಮನುಷ್ಯನ ಬಗ್ಗೆಯಾಗಲಿ ಅವರ ಕುಟುಂಬದವರ ಬಗ್ಗೆಯಾಗಲಿ ಮಾತಾಡೋ ಯೋಗ್ಯತೇನೂ ಇಲ್ಲದವರು. ನಾನು ದರ್ಶನ್ ಅವರಲ್ಲಿ ಕೇಳಿಕೊಳ್ಳುವುದು ಒಂದೇ ಮಾತು. ಅಂತಹ ಪರಿಸ್ಥಿತಿಯಲ್ಲೂ ‘ಪರ್ವಾಗಿಲ್ಲ ಬಿಡು ಚಿನ್ನ’ ಎಂಬ ಸಹನೆಯ ಮಾತಾಡಿ ಹೃದಯವನ್ನೇ ಗೆದ್ದಿದ್ದೀರಿ. ಇನ್ನೊಂದು ಮಾತು ನಿಮ್ಮನ್ನು ಇಷ್ಟಪಡುವ ಮತ್ತು ನಿಮ್ಮ ಮಾತನ್ನು ಎಂದೂ ದಾಟದ ನಿಮ್ಮ ಅಭಿಮಾನಿಗಳಿಗೆ ಹೇಳಿದರೆ ಎಲ್ಲವೂ ಸರಿಹೋಗುತ್ತದೆ’ ಎಂದು ವಿಜಯ್‌ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT