ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಂಡಲ್​ವುಡ್​ನ ಖ್ಯಾತ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನ

Last Updated 7 ಜೂನ್ 2020, 19:18 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಚಿತ್ರನಟ ಚಿರಂಜೀವಿ ಸರ್ಜಾ(39) ತೀವ್ರ ಹೃದಯಾಘಾತದಿಂದ ಭಾನುವಾರ ಸಂಜೆ ಬೆಂಗಳೂರಿನ ಜಯನಗರದ ಅಪೊಲೊ ಆಸ್ಪತ್ರೆಯಲ್ಲಿ ನಿಧನರಾದರು.

ಇವರು ಹಿರಿಯ ನಟ ದಿವಂಗತ ಶಕ್ತಿಪ್ರಸಾದ್ ಮತ್ತು ಲಕ್ಷ್ಮಿದೇವಮ್ಮ ಅವರ ಮೊಮ್ಮಗ. ಶಕ್ತಿಪ್ರಸಾದ್‌ ಅವರ ಮಗಳು ಅಮ್ಮಾಜಿ ಹಾಗೂ ವಿಜಯಕುಮಾರ್ ಹಿರಿಯ ಪುತ್ರ. ಬಹುಭಾಷಾ ನಟ ಅರ್ಜುನ್‌ ಸರ್ಜಾ ಅವರ ಅಕ್ಕನ ಮಗ. ಇವರ ಸೋದರ ಧ್ರುವ ಸರ್ಜಾ ಕೂಡ ಸಿನಿಮಾ ನಟರಾಗಿದ್ದಾರೆ.

ಚಿರಂಜೀವಿ ಸರ್ಜಾ ಎರಡು ವರ್ಷಗಳ ಹಿಂದೆಯಷ್ಟೇ ಹಿರಿಯ ಕಲಾವಿದರಾದ ಸುಂದರ್‌ರಾಜ್‌ ಮತ್ತು ಪ್ರಮೀಳಾ ಜೋಷಾಯ್‌ ಅವರ ಪುತ್ರಿ ಮೇಘನಾ ರಾಜ್‌ ಅವರನ್ನು ಮದುವೆಯಾಗಿದ್ದರು. ಈ ಜೋಡಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿತ್ತು.

ಚಿರಂಜೀವಿ ‘ವಾಯುಪುತ್ರ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ‘ಗಂಡೆದೆ’, ‘ಚಿರು’, ‘ದಂಡಂ ದಶಗುಣಂ’, ‘ವರದನಾಯಕ’, ‘ಆಟಗಾರ’, ‘ಆಕೆ’, ‘ಸಂಹಾರ’, ‘ಅಮ್ಮ ಐ ಲವ್‌ ಯು’ ಸೇರಿದಂತೆ 22 ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಇವರ ನಟನೆಯಲ್ಲಿ ತೆರೆಕಂಡಿದ್ದ ಕೊನೆಯ ಚಿತ್ರ ‘ಶಿವಾರ್ಜುನ’. ಇತ್ತೀಚೆಗೆ ಇವರು ರಮೇಶ್‌ ರಾಜ್‌ ನಿರ್ದೇಶನದ ‘ಧೀರಂ’ ಚಿತ್ರದಲ್ಲಿ ನಟಿಸಲು ಸಹಿ ಹಾಕಿದ್ದರು. ಇವರು ನಟಿಸುತ್ತಿದ್ದ ‘ಏಪ್ರಿಲ್’, ‘ರಾಜಮಾರ್ತಾಂಡ’ ಮತ್ತು ‘ಕ್ಷತ್ರಿಯ’ ಸಿನಿಮಾಗಳ ಶೂಟಿಂಗ್‌ ಕೊರೊನಾದಿಂದಾಗ ಸ್ಥಗಿತಗೊಂಡಿದ್ದವು.

ಅಂತ್ಯಕ್ರಿಯೆ: ಬಸವನಗುಡಿಯಲ್ಲಿರುವ ನಿವಾಸದಲ್ಲಿ ಸೋಮವಾರ ಅಂತಿಮ ದರ್ಶನಕ್ಕೆ ಅವಕಾಶ ಇದೆ.ಕನಕಪುರ ರಸ್ತೆಯಲ್ಲಿರುವ ಧ್ರುವ ಸರ್ಜಾಅವರ ಫಾರ್ಮ್‌ಹೌಸ್‌ನಲ್ಲಿ ಮಧ್ಯಾಹ್ನ 1 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.

ಚಿರು ಅವರಿಗೆ ಕೊರೊನಾ ಸೋಂಕು ತಗುಲಿತ್ತಾ ಎಂಬ ಬಗ್ಗೆ ಪರೀಕ್ಷೆ ನಡೆಸಿದ್ದು ವರದಿ ಬರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT