ಭಾನುವಾರ, ಆಗಸ್ಟ್ 1, 2021
23 °C

ಒಳಾಂಗಣ ಚಿತ್ರೀಕರಣಕ್ಕೆ ಅನುಮತಿ ನೀಡಲು ಮುಖ್ಯಮಂತ್ರಿಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ಎರಡನೇ ಅಲೆ ನಿಯಂತ್ರಿಸಲು ಜಾರಿಗೊಳಿಸಲಾಗಿದ್ದ ಲಾಕ್‌ಡೌನ್‌ ಕ್ರಮೇಣವಾಗಿ ಸಡಿಲಗೊಳಿಸಲಾಗುತ್ತಿದ್ದು, ಒಳಾಂಗಣದಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾದ ಮಂಡಳಿ ಅಧ್ಯಕ್ಷ ಡಿ.ಆರ್‌.ಜೈರಾಜ್‌ ಈ ಮನವಿ ಸಲ್ಲಿಸಿದ್ದಾರೆ. ‘ಕೋವಿಡ್‌ –19 ಎರಡನೇ ಅಲೆ ಹಿನ್ನೆಲೆಯಲ್ಲಿ ಚಲನಚಿತ್ರೋದ್ಯಮದ ಪರವಾಗಿ ವಾಣಿಜ್ಯ ಮಂಡಳಿಯು ಮಾಡಿಕೊಂಡ ಮನವಿಯ ಮೇರೆಗೆ ತಾವು ಸ್ಪಂದಿಸಿ, ಹೊರಾಂಗಣ ಚಲನಚಿತ್ರ ಚಿತ್ರೀಕರಣಕ್ಕೆ ಅನುಮತಿ ನೀಡಿರುವಿರಿ. ಅದಕ್ಕಾಗಿ ವಾಣಿಜ್ಯ ಮಂಡಳಿಯ ಪರವಾಗಿ ತಮಗೆ ಧನ್ಯವಾದಗಳು’.

‘ಚಿತ್ರೋದ್ಯಮದಲ್ಲಿ ಈಗಾಗಲೇ ಸಾಕಷ್ಟು ಚಲನಚಿತ್ರಗಳ ಚಿತ್ರೀಕರಣವು ಅರ್ಧಕ್ಕೆ ನಿಂತುಹೋಗಿದ್ದು, ಮತ್ತಷ್ಟು ಚಲನಚಿತ್ರಗಳ ನಿರ್ಮಾಪಕರು ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಒಳಾಂಗಣದಲ್ಲಿ ಚಿತ್ರೀಕರಿಸಲು ಸೆಟ್‌ಗಳನ್ನು ಅಳವಡಿಸಿಕೊಂಡಿದ್ದು, ಆ ಸೆಟ್‌ಗಳೆಲ್ಲವೂ ದುಃಸ್ಥಿತಿಗೆ ಬರುತ್ತಿವೆ. ಈ ಹಿಂದೆ ಲಾಕ್‌ಡೌನ್‌ ಸಂದರ್ಭದಲ್ಲಿಯೂ ಕೂಡಾ ಸರ್ಕಾರವು ಕೆಲವು ಮಾರ್ಗಸೂಚಿಗಳನ್ನು ಅಳವಡಿಸಿ ಒಳಾಂಗಣ ಚಿತ್ರೀಕರಣಕ್ಕೆ ಅವಕಾಶ ನೀಡಿರುವಂತೆ ಈಗಲೂ ಅವಕಾಶ ನೀಡಬೇಕು. ಈ ರೀತಿ ಅನುವು ಮಾಡಿಕೊಟ್ಟರೆ ನಿರ್ಮಾಪಕರು ಮತ್ತು ಉದ್ಯಮವನ್ನೇ ನಂಬಿಕೊಂಡಿರುವ ಸಾವಿರಾರು ಕಾರ್ಮಿಕರುಗಳಿಗೆ ಉದ್ಯೋಗ ದೊರೆಯುವುದಲ್ಲೇ ಜೀವನ ನಿರ್ವಹಣೆ ಮಾಡಲು ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ. ಸರ್ಕಾರದ ಷರತ್ತುಗಳಿಗೆ ಒಳಪಟ್ಟು ಒಳಾಂಗಣ ಚಿತ್ರೀಕರಣ ಮಾಡಲು ನಾವು ಬದ್ಧರಾಗಿರುತ್ತೇವೆ’ ಎಂದು ಜೈರಾಜ್‌ ಅವರು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು