ಶನಿವಾರ, ಅಕ್ಟೋಬರ್ 24, 2020
18 °C

ಕನ್ನಡ, ತೆಲುಗು, ತಮಿಳಿನ 75 ಸಿನಿಮಾಗಳಿಗೆ ಬಣ್ಣ ಹಚ್ಚಿದ್ದ ಎಸ್‌ಪಿಬಿ

ಪ್ರಜಾವಾಣಿ ಫೀಚರ್ ಡೆಸ್ಕ್ Updated:

ಅಕ್ಷರ ಗಾತ್ರ : | |

Prajavani

ಮೂಲತಃ ಗಾಯಕರಾಗಿದ್ದ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ನಟನೆ ಮೂಲಕ ಪ್ರೇಕ್ಷಕರನ್ನು ಮನಸೂರೆಗೊಳಿಸಿದ್ದು ಉಂಟು. ತೆಲುಗು, ತಮಿಳು ಮತ್ತು ಕನ್ನಡದಲ್ಲಿ ಅವರು 75 ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಪೈಕಿ ಕೆಲವು ಚಿತ್ರಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಎಸ್‌ಪಿಬಿ ನಟಿಸಿದ ಮೊದಲ ಚಿತ್ರ ತೆಲುಗಿನ ‘ಪೆಲ್ಲಂಟೆ ನೊರೆಲ್ಲಾ ಪಂಟಾ’. ಇದು ತೆರೆಕಂಡಿದ್ದು 1969ರಲ್ಲಿ. ಅವರು ಪರದೆ ಮೇಲೆ ಕಾಣಿಸಿಕೊಂಡ ಕೊನೆಯ ಚಿತ್ರ ‘ದೇವದಾಸ್‌’. ಅಂದಹಾಗೆ ಇದು ತೆರೆಕಂಡಿದ್ದು 2018ರಲ್ಲಿ.

ಎಸ್‌ಪಿಬಿ ಕನ್ನಡದ ‘ಬಾಳೊಂದು ಚದುರಂಗ’ ಚಿತ್ರದ ಮೂಲಕ ಚಂದನವನದಲ್ಲೂ ನಟನೆಯ ಪಯಣ ಆರಂಭಿಸಿದರು. ಈ ಸಿನಿಮಾ ಬಿಡುಗಡೆಯಾಗಿದ್ದು 1981ರಲ್ಲಿ. ಅದಾದ ಎರಡೇ ವರ್ಷಗಳಲ್ಲಿ ‘ತಿರುಗುಬಾಣ’ದಲ್ಲಿ ನಟಿಸಿದರು. ಇದಾದ ಒಂದು ದಶಕದ ಅವಧಿಯಲ್ಲಿ ತೆಲುಗು ಮತ್ತು ತಮಿಳಿನ ಹಲವು ಸಿನಿಮಾಗಳಲ್ಲಿ ನಟಿಸಿದರೂ ಕನ್ನಡದ ಯಾವೊಂದು ಸಿನಿಮಾದಲ್ಲೂ ಅವರು ನಟಿಸಲಿಲ್ಲ.

1993ರಲ್ಲಿ ತೆರೆಕಂಡ ‘ಮುದ್ದಿನ ಮಾವ’ ಚಿತ್ರದ ಮೂಲಕ ಮತ್ತೆ ಕನ್ನಡದಲ್ಲಿ ನಟನೆಯ ಯಾನ ಆರಂಭಿಸಿದರು. ಶಶಿಕುಮಾರ್‌, ಶ್ರುತಿ, ತಾರಾ ಅನುರಾಧಾ, ದೊಡ್ಡಣ್ಣ, ದ್ವಾರಕೀಶ್‌ ನಟಿಸಿದ್ದ ಇದರಲ್ಲಿ ಅವರ ಮಜೋಜ್ಞ ನಟನೆಗೆ ಪ್ರೇಕ್ಷಕರು ತಲೆದೂಗಿದ್ದರು.

ಬಳಿಕ 1997ರಲ್ಲಿ ‘ಸಂದರ್ಭ’ ಚಿತ್ರಕ್ಕೆ ಬಣ್ಣ ಹಚ್ಚಿದರು. 1998ರಲ್ಲಿ ‘ಕ್ರೇಜಿಸ್ಟಾರ್‌’ ರವಿಚಂದ್ರನ್‌ ಅವರ ತಂದೆ ಪಾತ್ರದಲ್ಲಿ ನಟಿಸಿದ ‘ಮಾಂಗಲ್ಯಂ ತಂತು ನಾನೇನ’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸೂಪರ್‌ಹಿಟ್‌ ಆಯಿತು. ಇದರಲ್ಲಿ ರಮ್ಯಾ ಕೃಷ್ಣ ಹೀರೊಯಿನ್‌ ಆಗಿ ನಟಿಸಿದ್ದರು. ಎಸ್‌ಪಿಬಿ ನಟಿಸಿದ ಜವಾಬ್ದಾರಿ ಅಪ್ಪನ ಮಾತ್ರ ಸಿನಿಪ್ರಿಯರಿಗೆ ಮೋಡಿ ಮಾಡಿತ್ತು.

1999ರಲ್ಲಿ ಅವರು ಅಭಿನಯಿಸಿದ ‘ಮಾಯ’ ಸಿನಿಮಾ ಕನ್ನಡ ಸೇರಿದಂತೆ ತೆಲುಗು, ತಮಿಳಿನಲ್ಲೂ ಬಿಡುಗಡೆಯಾಯಿತು. 2003ರಲ್ಲಿ ‘ಮಹಾಎಡಬಿಡಂಗಿ’ ಚಿತ್ರದಲ್ಲಿ ನಟಿಸಿದರು. 2007ರಲ್ಲಿ ‘ಕಲ್ಯಾಣೋತ್ಸವ’ ಚಿತ್ರದ ಮೂಲಕ ಪ್ರೇಕ್ಷಕರನ್ನು ಮನಸೂರೆಗೊಳಿಸಿದರು. ಇದೇ ವರ್ಷ ತೆರೆಕಂಡ ‘ಹೆತ್ತರೆ ಹೆಣ್ಣನ್ನೇ ಹೆರಬೇಕು’ ಅವರು ಕನ್ನಡದಲ್ಲಿ ನಟಿಸಿದ ಕೊನೆಯ ಚಿತ್ರವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು