ಸೋಮವಾರ, ಜನವರಿ 20, 2020
19 °C

ಫಿಲಂಫೇರ್ ಪ್ರಶಸ್ತಿ ಸೌತ್ 2019: ಪ್ರಶಸ್ತಿ ಗೆದ್ದ ಕನ್ನಡ ಸಿನಿಮಾಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಶಾಂತ್ ನೀಲ್ ನಿರ್ದೇಶನದ ಮತ್ತು ಯಶ್‌ ನಟನೆಯ ‘ಕೆಜಿಎಫ್ ಚಾಪ್ಟರ್‌– 1’ ಕನ್ನಡದ ಅತ್ಯುತ್ತಮ ಚಿತ್ರವಾಗಿ ಫಿಲಂಫೇರ್ ಪ್ರಶಸ್ತಿ ಬಾಚಿಕೊಂಡಿದೆ. ಈ ಚಿತ್ರದ ಅಭಿನಯಕ್ಕಾಗಿ ರಾಕಿಂಗ್ ಸ್ಟಾರ್ ಯಶ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದ್ದು, ‘ಟಗರು’ ಚಿತ್ರದ ನಾಯಕಿ ಮಾನ್ವಿತಾ ಹರೀಶ್‌ಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ.

ಅತ್ಯುತ್ತಮ ನಿರ್ದೇಶಕ ಸೇರಿ ನಾಲ್ಕು ಫಿಲಂಫೇರ್ ಪ್ರಶಸ್ತಿಗಳನ್ನು ‘ನಾತಿಚರಾಮಿ’ ಚಿತ್ರ ಬಾಚಿಕೊಂಡಿದೆ. ಈ ಚಿತ್ರದ ನಿರ್ದೇಶಕ ಮಂಸೋರೆಗೆ ಅತ್ಯುತ್ತಮ ನಿರ್ದೇಶಕ, ಶರಣ್ಯಾಗೆ ಅತ್ಯುತ್ತಮ ಪೋಷಕ ನಟಿ ಹಾಗೂ ಶ್ರುತಿ ಹರಿಹರನ್‌ಗೆ ಅತ್ಯುತ್ತಮ ಕ್ರಿಟಿಕ್ಸ್ ಅವಾರ್ಡ್, ಇದೇ ಚಿತ್ರಕ್ಕೆ ಹಾಡಿದ ಬಿಂದುಮಾಲಿನಿ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಸಿಕ್ಕಿದೆ. 

ಚೆನ್ನೈನಲ್ಲಿ ಶನಿವಾರ (ಡಿಸೆಂಬರ್ 21) ರಾತ್ರಿ ಅತ್ಯಂತ ವರ್ಣರಂಜಿತವಾಗಿ ನಡೆದ ‘66ನೇ ಯಮಹಾ ಫ್ಯಾಸಿನೋ ಫಿಲಂಫೇರ್ ಅವಾರ್ಡ್ಸ್ ಸೌತ್ 2019’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಅದ್ಧೂರಿ ಕಾರ್ಯಕ್ರಮದಲ್ಲಿ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳದ ಹಲವು ಮಂದಿ ಚಿತ್ರತಾರೆಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತುಂಬಿದರು.

‘ಅಯೋಗ್ಯ’ ಸಿನಿಮಾದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ನೀನಾಸಂ ಸತೀಶ್ ಅವರಿಗೆ ‘ಅತ್ಯುತ್ತಮ ಕ್ರಿಟಿಕ್ಸ್ ಅವಾರ್ಡ್’ ಮತ್ತು ‘ಟಗರು’ ಚಿತ್ರದ ಧನಂಜಯ್ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ನೀಡಲಾಯಿತು.

‘ಸರ್ಕಾರಿ ಹಿರಿಯ ಪ್ರಾಥಮಿಕಪಾಠ ಶಾಲೆ ಕಾಸರಗೋಡು’ ಚಿತ್ರಕ್ಕೆ ಸಂಗೀತ ನೀಡಿದ ವಾಸುಕಿ ವೈಭವ್‌ಗೆ ಅತ್ಯುತ್ತಮ ಸಂಗೀತ ನಿರ್ದೇಶಕ, ಯುವ ಗಾಯಕ ಸಂಚಿತ್ ಹೆಗಡೆಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ಹಾಗೂ ಹಿರಿಯ ಕವಿ ಡಾ.ಎಚ್.ಎಸ್. ವೆಂಕಟೇಶ್ ಮೂರ್ತಿ ಅವರಿಗೆ ಅತ್ಯುತ್ತಮ ಸಾಹಿತ್ಯ ರಚನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಕನ್ನಡತಿ ರಶ್ಮಿಕಾ ಮಂದಣ್ಣ ತೆಲುಗಿನ (ಗೀತ ಗೋವಿಂದಂ) ಚಿತ್ರದಲ್ಲಿನ ನಟನೆಗಾಗಿ ವಿಮರ್ಶಕರ ಮೆಚ್ಚುಗೆ ಪಡೆದ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಾಸುಕಿ ವೈಭವ್ ಪರವಾಗಿ ಅವರ ತಾಯಿಯ ಪ್ರಶಸ್ತಿ ಸ್ವೀಕರಿಸಿದರೆ, ಯಶ್ ಪರವಾಗಿ ಯಾರೂ ಹಾಜರಾಗಿರಲಿಲ್ಲ. ‘ಕವಲುದಾರಿ’ ಖ್ಯಾತಿಯ ನಟ ರಿಷಿ, ನಟಿಯರಾದ ಮೇಘನಾ ಗಾಂವಕರ್‌, ಪಾರುಲ್ ಯಾದವ್, ರಾಶಿ ಪೊನ್ನಪ್ಪ ಸೇರಿ ಹಲವು ಕಲಾವಿದರು ಪ್ರಶಸ್ತಿ ಪ್ರದಾನ ಮಾಡಿದರು.

ಫಿಲಂಫೇರ್ ಪ್ರಶಸ್ತಿ ಸೌತ್ 2019– ಕನ್ನಡ ಸಿನಿಮಾಗಳ ಪಟ್ಟಿ

ಅತ್ಯುತ್ತಮ ಚಿತ್ರ: ಕೆಜಿಎಫ್ ಚಾಪ್ಟರ್‌– 1
ಅತ್ಯುತ್ತಮ ನಿರ್ದೇಶಕ: ಮಂಸೋರೆ (ನಾತಿಚರಾಮಿ)
ಅತ್ಯುತ್ತಮ ನಾಯಕ ನಟ: ಯಶ್ (ಕೆಜಿಎಫ್ ಚಾಪ್ಟರ್‌– 1 )
ವಿಮರ್ಶಕರ ಮೆಚ್ಚುಗೆಗೆ ಪಾತ್ರರಾದ ಅತ್ಯುತ್ತಮ ನಟ: ಸತೀಶ್ ನೀನಾಸಂ (ಅಯೋಗ್ಯ)

ಅತ್ಯುತ್ತಮ ನಾಯಕ ನಟಿ: ಮಾನ್ವಿತಾ ಹರೀಶ್‌ (ಟಗರು)
ವಿಮರ್ಶಕರ ಮೆಚ್ಚುಗೆಗೆ ಪಾತ್ರರಾದ ಅತ್ಯುತ್ತಮ ನಟಿ: ಶ್ರುತಿ ಹರಿಹರನ್ (ನಾತಿಚರಾಮಿ)
ಅತ್ಯುತ್ತಮ ಹಿನ್ನೆಲೆ ಗಾಯಕ: ಸಂಜಿತ್ ಹೆಗಡೆ (ಶಾಕುಂತಲೆ ಸಿಕ್ಕಳು- ನಡುವೆ ಅಂತರವಿರಲಿ)
ಅತ್ಯುತ್ತಮ ಹಿನ್ನೆಲೆ ಗಾಯಕಿ: ಬಿಂದುಮಾಲಿನಿ (ಭಾವಲೋಕದ- ನಾತಿಚರಾಮಿ)

ಅತ್ಯುತ್ತಮ ಸಾಹಿತ್ಯ: ಡಾ.ಎಚ್.ಎಸ್.ವೆಂಕಟೇಶಮೂರ್ತಿ (ಸಕ್ಕರೆಯ ಪಾಕದಲ್ಲಿ - ಹಸಿರು ರಿಬ್ಬನ್)
ಅತ್ಯುತ್ತಮ ಮ್ಯೂಸಿಕ್ ಆಲ್ಬಂ: ವಾಸುಕಿ ವೈಭವ್ (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು)

***

‘ಪ್ರಶಸ್ತಿ ಬಂದಿದ್ದಕ್ಕಿಂತಲೂ ಈ ಸ್ಥಾನಕ್ಕೆ ಬಂದುನಿಲ್ಲಲು ಜನರು ನೀಡಿರುವ ಸಾಥ್‌ ತುಂಬಾ ದೊಡ್ಡದು. ಅದರಲ್ಲೂ ಹಸಿವು ಮತ್ತು ಅವಮಾನ ಯಾರನ್ನೂ ಕೆಳಕ್ಕೆ ಬೀಳಲು ಬಿಡುವುದಿಲ್ಲ. ಹಾಗಂತ ನಾವು ಏನೇ ಮಾಡಬೇಕೆಂದರೂ ಶ್ರಮ ಹಾಕಲೇಬೇಕು. ನನ್ನಂತೆ ಎಲ್ಲಿಂದಲೋ ಬಂದು ನಾಯಕನಾಗಬೇಕೆಂದು ಕನಸುಕಟ್ಟಿಕೊಂಡು ಶ್ರಮಿಸುತ್ತಿರುವ ಎಲ್ಲರಿಗೂ ಈ ಪ್ರಶಸ್ತಿ ಸಲ್ಲಿಸುತ್ತೇನೆ’

– ನೀನಾಸಂ ಸತೀಶ್‌, ನಟ

***

ದುರದೃಷ್ಟವಶಾತ್‌ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅಂತಹ ಯಶಸ್ಸು ಕಾಣಲಿಲ್ಲ. ಆದರೆ ಪ್ರಶಸ್ತಿ ವಿಚಾರದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನಮ್ಮ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಚಿಕ್ಕ ಚಿತ್ರವಾದರೂ ರಾಷ್ಟ್ರಮಟ್ಟದಲ್ಲೂ ಚಿತ್ರ ಸದ್ದು ಮಾಡಿದೆ. ತುಂಬಾ ಖುಷಿಯಾಗಿದೆ.

–ಶ್ರುತಿ ಹರಿಹರನ್‌, ನಟಿ 

***

ಟಗರು ಚಿತ್ರಕ್ಕೆ ಪ್ರಶಸ್ತಿ ಬಂದಿರುವುದು ಖುಷಿ ನೀಡಿದೆ. ಅದರಲ್ಲೂ ಡಾಲಿ ಪಾತ್ರಕ್ಕೂ ಪ್ರಶಸ್ತಿ ಸಿಕ್ಕಿರುವುದು ತುಂಬಾನೆ ಖುಷಿ ನೀಡಿದೆ. ಡಾಲಿ ಇಂಟೆನ್ಸ್‌ ಇರುವ ಪಾತ್ರವದು. ಪ್ರತಿಯೊಬ್ಬ ಕಲಾವಿದ ಕೂಡ ಇಂಥ ಪಾತ್ರ ಮಾಡಲು ಕಾಯುತ್ತಿರುತ್ತಾನೆ. ಡಾಲಿ ಪಾತ್ರವನ್ನು ಹೊತ್ತು ಮೆರೆಸಿದ ಎಲ್ಲ ಕನ್ನಡಿಗರಿಗೂ ಪ್ರಶಸ್ತಿ ಸಲ್ಲುತ್ತದೆ.

– ಡಾಲಿ ಧನಂಜಯ್‌, ನಟ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು