ತಿರುವನಂತಪುರ: ಪಶ್ಚಿಮ ಬಂಗಾಳದ ನಟಿ ಮೇಲೆ ಅಸಭ್ಯ ವರ್ತನೆ ತೋರಿರುವ ಆರೋಪ ಎದುರಿಸುತ್ತಿರುವ ಖ್ಯಾತ ನಿರ್ದೇಶಕ ರಂಜಿತ್, ಕೇರಳ ಚಲಚಿತ್ರ (ಚಲನಚಿತ್ರ) ಅಕಾಡೆಮಿ (ಕೆಸಿಎ) ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ರಾಜೀನಾಮೆ ಸಲ್ಲಿಸಿದ್ದಾರೆ.
'ನನ್ನ ಮೇಲಿನ ಆರೋಪವು ರಾಜ್ಯ ಸರ್ಕಾರದ ಪ್ರತಿಷ್ಠೆಯ ಮೇಲೂ ಪರಿಣಾಮ ಬೀರುವ ಕಾರಣ, ಈ ಸ್ಥಾನದಲ್ಲಿ ಮುಂದುವರಿಯಲು ಬಯಸುವುದಿಲ್ಲ' ಎಂದು ಅವರು ಹೇಳಿದ್ದಾರೆ.
'ನನ್ನ ವಿರುದ್ಧದ ಆರೋಪಗಳಿಗೆ ಕಾನೂನಿನ ಮುಖಾಂತರ ಹೋರಾಡಲಿದ್ದೇನೆ. ಪ್ರಕರಣದ ನಿಜವಾದ ಬಲಿಪಶು ನಾನು' ಎಂದು ಅವರು ಹೇಳಿದ್ದಾರೆ.
ರಂಜಿತ್ ನಿರ್ದೇಶನದ ಚಿತ್ರದಲ್ಲಿ ನಟಿಸಲು ಕೇರಳಕ್ಕೆ ಬಂದಿದ್ದಾಗ ನನ್ನ ಮೇಲೆ ಆಪಾದಿತ ನಿರ್ದೇಶಕ ಅಸಭ್ಯವಾಗಿ ವರ್ತಿಸಿದ್ದರು ಎಂದು ಬಂಗಾಳದ ನಟಿ ಆರೋಪಿಸಿದ್ದರು.
ಬಂಗಾಳದ ನಟಿಯ ಆರೋಪದ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಕೇರಳ ಚಲಚಿತ್ರ (ಚಲನಚಿತ್ರ) ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ರಂಜಿತ್ ರಾಜೀನಾಮೆ ನೀಡಬೇಕು ಎಂದು ವಿಪಕ್ಷಗಳು ಬಯಸಿತ್ತು. ಪ್ರಕರಣ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆದಿದ್ದವು.
ನಟ ಸಿದ್ದೀಕ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ...
ಮತ್ತೊಂದು ಪ್ರಕರಣದಲ್ಲಿ ನಟಿಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನಟ ಸಿದ್ದೀಕ್ ರಾಜೀನಾಮೆ ಸಲ್ಲಿಸಿದ್ದಾರೆ.
'ನನ್ನ ಮೇಲೆ ಆರೋಪ ಇರುವ ಹಿನ್ನೆಲೆಯಲ್ಲಿ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದೇನೆ. 'ಅಮ್ಮ' ಸಂಘಟನೆಯ ಅಧ್ಯಕ್ಷ ನಟ ಮೋಹನ್‌ಲಾಲ್‌ಗೆ ಈ ಕುರಿತು ತಿಳಿಸಿದ್ದೇನೆ' ಎಂದು ಅವರು ಹೇಳಿದ್ದಾರೆ.
ಕೇರಳದ ನಟಿಯೊಬ್ಬರು ನಟ ಸಿದ್ದೀಕ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು.
ಮಲಯಾಳಂ ಚಲಚಿತ್ರೋದ್ಯಮದಲ್ಲಿ ಲೈಂಗಿಕ ದೌರ್ಜನ್ಯದ ಹಲವು ಘಟನೆಗಳು ನಡೆದಿವೆ ಎಂದು ಜಸ್ಟಿಸ್ ಹೇಮಾ ಸಮಿತಿಯ ವರದಿ ಬಿಡುಗಡೆಯ ಬೆನ್ನಲ್ಲೇ ಈ ಎಲ್ಲ ಬೆಳವಣಿಗೆಗಳು ನಡೆದಿವೆ.