ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಗ್ಗುತ್ತಿರುವ ಎಫ್‌ಯುಸಿ ಬಳಗ

Last Updated 7 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಸಿನಿಮಾ ಬಗೆಗಿನ ಜ್ಞಾನ, ಮಾಹಿತಿ ವಿನಿಮಯ ಹಾಗೂ ಕನ್ನಡ ಸಿನಿಮಾಗಳಿಗೆ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ನಿರ್ದೇಶಕ ಪವನ್‌ ಕುಮಾರ್‌ ರೂಪಿಸಿದ ‘ಎಫ್.‌ಯು.ಸಿ’ (ಫಿಲ್ಮ್‌ ಮೇಕರ್ಸ್ ಯುನೈಟೆಡ್‌ ಕ್ಲಬ್‌) ಬಳಗ ಈಗ ದೊಡ್ಡದಾಗುತ್ತಾ ಸಾಗಿದೆ.

ಕೊರೊನಾ ಲಾಕ್‌ಡೌನ್‌ ಅವಧಿಯಲ್ಲಿ ಶುರುವಾದ ಅವರ ಕನಸಿನ ಕೂಸು ಎನಿಸಿದ ಈ ಕ್ಲಬ್‌ಗೆ ನಿರ್ದೇಶಕರಾದ ಕೆ.ಎಂ. ಚೈತನ್ಯ, ಜಯತೀರ್ಥ, ಬಿ.ಎಂ. ಗಿರಿರಾಜ್‌, ಅರವಿಂದ ಶಾಸ್ತ್ರಿ, ಮಂಸೋರೆ, ಹಿರಿಯ ನಿರ್ದೇಶಕ ಗಿರೀಶ ಕಾಸರವಳ್ಳಿ, ಪಿ.ಶೇಷಾದ್ರಿ, ಯೋಗರಾಜ್‌ ಭಟ್‌ ಸೇರಿದಂತೆ ಹಲವು ಮಂದಿ ಕನ್ನಡ ನಿರ್ದೇಶಕರು ಸಾಥ್‌ ನೀಡಿದರು. ಜುಲೈನಲ್ಲಿ ಆರಂಭವಾದ ಈ ಕ್ಲಬ್‌ಸದಸ್ಯರ ಸಂಖ್ಯೆ ಸದ್ಯ 45 ದಾಟಿದೆ. ಈಗ ಕನ್ನಡ ಚಿತ್ರರಂಗವಷ್ಟೇ ಅಲ್ಲ, ತೆಲುಗಿನ ತರುಣ್‌ ಭಾಸ್ಕರ್‌, ನಂದಿನಿ ರೆಡ್ಡಿ, ತಮಿಳಿನ ವಸಂತ ಬಾಲನ್‌ ಹಾಗೂ ಮಲಯಾಳದ ಲಿಜೊ ಸೇರಿದಂತೆ ಅನ್ಯ ಭಾಷೆಯ ನಿರ್ದೇಶಕರು ಎಫ್‌ಯುಸಿ ಸೇರಿಕೊಂಡಿದ್ದಾರೆ.

ವಾರದಿಂದ ವಾರಕ್ಕೆ ವಿಭಿನ್ನ ಕಾರ್ಯಕ್ರಮಗಳನ್ನು‘ಎಫ್.‌ಯು.ಸಿ’ ನಡೆಸುತ್ತಿದೆ.ಸಂಡೆ ರೌಂಡ್‌ ಟೇಬಲ್‌, ಶನಿವಾರದ ಸಿನಿಮಾ ನೈಟ್‌, ರೆಟ್ರೊಸ್ಪೆಕ್ಟ್ ಶೀರ್ಷಿಕೆಯಲ್ಲಿ ವಾರಕ್ಕೆ ಮೂರು ಬಾರಿ ಆಸಕ್ತಿದಾಯಕ ವಿಷಯಗಳೊಂದಿಗೆ ವೀಕ್ಷಕರೊಂದಿಗೆ ಯೂಟ್ಯೂಬ್‌ ಚಾನೆಲ್‌ನಲ್ಲಿ ವೀಕ್ಷಕರೊಂದಿಗೆ ಸಂವಾದ ನಡೆಸುತ್ತಿದೆ.

ಸಿನಿಮಾ ಪರಿಣತರು, ನಟ–ನಟಿಯರು, ನಿರ್ದೇಶಕರು, ತಂತ್ರಜ್ಞರನ್ನು ಒಟ್ಟುಗೂಡಿಸಿ ವರ್ಚ್ಯುವಲ್‌ ಪ್ಯಾನೆಲ್‌ ಚರ್ಚೆ ನಡೆಸಲಾಗುತ್ತಿದೆ. ಕೆ.ಎಂ. ಚೈತನ್ಯ, ಅರವಿಂದಶಾಸ್ತ್ರಿ, ಗೌತಮ್‌ ಅಯ್ಯರ್‌,ಕವಿತಾ ಲಂಕೇಶ್‌, ವೃಂದಾ ಸಮರ್ಥ ಸೇರಿದಂತೆ ಆರು ಮಂದಿ ನಿರ್ದೇಶಕರು ಈ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ. ಈ ಭಾನುವಾರ ನಡೆದಸಂಡೆ ರೌಂಡ್‌ ಟೇಬಲ್‌ನಲ್ಲಿಪ್ರಯೋಗಗಳಿಗೆ ಒಡ್ಡಿಕೊಂಡಿರುವ ನಟರಾದ ಬಹುಭಾಷಾ ನಟ ಪ್ರಕಾಶ್‌ ರಾಜ್‌, ರಕ್ಷಿತ್‌ ಶೆಟ್ಟಿ, ಡಾಲಿ ಧನಂಜಯ ಹಾಗೂ ಅಚ್ಯುತ್‌ಕುಮಾರ್‌ ಭಾಗವಹಿಸಿದ್ದರು.ಈ ತಿಂಗಳು ಎಲ್‌ಜಿಬಿಟಿಗೆ ಸಂಬಂಧಿಸಿದ ಸಿನಿಮಾಗಳು, ನಟಿಯರ ಸವಾಲುಗಳು, ಪುರುಷ ಪ್ರಧಾನ ಸಿನಿರಂಗದಲ್ಲಿ ಮಹಿಳಾ ತಂತ್ರಜ್ಞರ ಪಾಲ್ಗೊಳ್ಳುವಿಕೆಕುರಿತು ರೌಂಡ್‌ ಟೇಬಲ್‌ಚರ್ಚೆ ನಡೆಯಲಿವೆ.

ಜತೆಗೆ ಕನ್ನಡ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ತಮ್ಮ ಸಿನಿಮಾಗಳನ್ನು ವೀಕ್ಷಕರಿಗೆ ತಲುಪಿಸಲು ವೇದಿಕೆಯೊಂದನ್ನು ಒದಗಿಸಿದ್ದು, ಎಫ್‌ಯುಸಿ ಆ್ಯಪ್‌ ಆರಂಭಿಸಿದೆ. ಸಿನಿಮಾಗಳನ್ನು ಈ ಆ್ಯಪ್‌ನಲ್ಲಿ ನೇರವಾಗಿ ಬಿಡುಗಡೆ ಮಾಡುವ, ತಮ್ಮ ಶ್ರಮಕ್ಕೆ ತಕ್ಕಷ್ಟು ಆದಾಯವನ್ನು ಇಲ್ಲಿ ಕಂಡುಕೊಳ್ಳುವ ದಾರಿಯನ್ನು ಮಾಡಿಕೊಟ್ಟಿದೆ.

ಅಮೆಜಾನ್‌, ನೆಟ್‌ಫ್ಲಿಕ್ಸ್‌ನಂತಹ ಒಟಿಟಿಗಳು ಸಿನಿಮಾಗಳನ್ನು ಖರೀದಿಸುವಂತೆಎಫ್‌ಯುಸಿ ಸಿನಿಮಾಗಳನ್ನು ಖರೀದಿಸುವುದಿಲ್ಲ. ಆದರೆ, ಎಫ್‌ಯುಸಿ ಆ್ಯಪ್‌ನಲ್ಲಿ ಒಟಿಟಿಯಂತೆಯೇಬಿಡುಗಡೆ ಮಾಡಿ ಬರುವ ಆದಾಯವನ್ನು ನೇರವಾಗಿ ಪಡೆದುಕೊಳ್ಳುವ ವ್ಯವಸ್ಥೆ ಮಾಡಿದೆ. ಈ ಆ್ಯಪ್‌ನಲ್ಲಿ ಪಿ.ಶೇಷಾದ್ರಿ ಅವರ ‘ಮೂಕಜ್ಜಿಯ ಕನಸುಗಳು’ ಚಿತ್ರ ಬಿಡುಗಡೆಯಾಗಿದೆ. ಎಫ್‌ಯುಸಿಯಲ್ಲಿ ಬಿಡುಗಡೆಯಾದ ಮೊದಲ ಚಿತ್ರ ಎನ್ನುವ ಶ್ರೇಯವೂ ಇದಕ್ಕೆ ಸಂದಿದೆ.

‘ಸಿನಿಮಾ ಕಲಿಕೆ ಮತ್ತು ಜ್ಞಾನ ಪ್ರಸಾರದ ಜೊತೆಗೆ, ನಮ್ಮೆಲ್ಲರಿಗೂ ಇದೊಂದು ದುಡಿಮೆಯ ದಾರಿ ಆಗಬೇಕು ಎನ್ನುವುದು ಎಫ್‌ಯುಸಿ ಆಶಯ.ಕನ್ನಡದಲ್ಲಿ ಇಂತಹದ್ದೊಂದು ಪ್ರಯೋಗ ಬಹಳ ಹಿಂದೆಯೇ ಆಗಬೇಕಿತ್ತು. ಜನರ ಜೊತೆಗೆ ಮುಖಾಮುಖಿಯಾಗಲು ಇದೊಂದು ಒಳ್ಳೆಯ ವೇದಿಕೆಯು ಹೌದು. ಸಿನಿಮಾ ಮಾಡುವಾಗ ಆಗುವ ತಪ್ಪುಗಳನ್ನು ತಿದ್ದಿಕೊಳ್ಳಲು ಇಲ್ಲಿನ ಚರ್ಚೆಗಳುನೆರವಾಗಲಿವೆ’ ಎನ್ನುವ ಮಾತು ಸೇರಿಸಿದರು ನಿರ್ದೇಶಕ ಕೆ.ಎಂ. ಚೈತನ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT