‘ಫಸ್ಟ್ ರ‍್ಯಾಂಕ್ ರಾಜು’ ಖ್ಯಾತಿಯ ನಟ ಗುರುನಂದನ್ ವಿರಾಮದ ಬಳಿಕ ಮತ್ತೆ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ಅವರ ನಟನೆಯ ಹೆಸರಿಡದ ಚಿತ್ರವೊಂದು ಇತ್ತೀಚೆಗಷ್ಟೇ ಸೆಟ್ಟೇರಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಚಿತ್ರಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು.
ಗುರುನಂದನ್ ನಟನೆಯ ಜೊತೆಗೆ ಮಂಡಿಮನೆ ಟಾಕೀಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸುಮಂತ್ ಗೌಡ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಅವರ ಮೊದಲ ಚಿತ್ರವಿದು. ಶಿವಸೇನಾ ಛಾಯಾಚಿತ್ರಗ್ರಹಣ, ಕಿರಣ್ ರವೀಂದ್ರನಾಥ್ ಸಂಗೀತ ನಿರ್ದೇಶನವಿದೆ.
‘ಶೀಘ್ರದಲ್ಲಿಯೇ ಚಿತ್ರದ ಶೀರ್ಷಿಕೆ ಘೋಷಿಸುತ್ತೇವೆ. ಮೊದಲ ಹಂತದಲ್ಲಿ 15 ದಿನ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಬಳಿಕ ಚಿಕ್ಕಮಗಳೂರು, ಲಡಾಖ್‌ನಲ್ಲಿ ಚಿತ್ರೀಕರಿಸುವ ಯೋಜನೆಯಿದೆ. ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಕುರಿತಾದ ಸಿನಿಮಾವಿದು’ ಎಂದು ಗುರುನಂದನ್ ಮಾಹಿತಿ ನೀಡಿದರು.
‘ಹರಿಕಥೆ ಅಲ್ಲ ಗಿರಿಕಥೆ’ ಖ್ಯಾತಿಯ ತಪಸ್ವಿನಿ ಪೂಣ್ಣಚ್ಚ ನಾಯಕಿಯಾಗಿದ್ದಾರೆ. ತಬಲ ನಾಣಿ, ಧರ್ಮಣ್ಣ ಸೇರಿದಂತೆ ದೊಡ್ಡ ತಾರಾಬಳಗವಿದೆ.