ಅದಲಾಬದಲಿನ ಅದೃಷ್ಟದಾಟ ‘ಫಾರ್ಚುನರ್’

7
ಸಿನಿಮಾ ವಿಮರ್ಶೆ

ಅದಲಾಬದಲಿನ ಅದೃಷ್ಟದಾಟ ‘ಫಾರ್ಚುನರ್’

Published:
Updated:
Prajavani

ಸಿನಿಮಾ: ಫಾರ್ಚುನರ್ 
ನಿರ್ಮಾಪಕ
: ರಾಜೇಶ್‌ ಆನಂದ್‌ ಹಾಗೂ ಸುರೇಂದ್ರ ವಿಮಲ್‌ ಗೊಲೇಚ
ನಿರ್ದೇಶಕ: ಮಂಜುನಾಥ್‌ ಜೆ. ಅನಿವಾರ್ಯ
ತಾರಾಗಣ: ದಿಗಂತ್ ಮಂಚಾಲೆ, ಸ್ವಾತಿ ಶರ್ಮ, ಸೋನು ಗೌಡ, ರಾಜೇಶ್‌ ನಟರಂಗ, ರತನ್‌ ರಾಂ, ರಾಜಾ ಬಾಲ್ವಾಡಿ

‘ಫಾರ್ಚುನರ್‌’ ಅದ್ದೂರಿ ಕಾರಿನ ಬ್ರ್ಯಾಂಡ್‌. ಆ ಕಾರನ್ನು ತಮ್ಮ ಸ್ಟೇಟಸ್‌ ಪ್ರದರ್ಶನದ ಸಾಧನವಾಗಿ ಇರಿಸಿಕೊಳ್ಳುವವರೇ ಹೆಚ್ಚು. ಆದರೆ ಹೊರಜಗತ್ತಿಗೆ ತೋರಿಸುವ ಸ್ಟೇಟಸ್‌ನ ಇಂಥ ಪ್ರತೀಕಗಳು ಒಳಬದುಕಿನ ಸುಖಕ್ಕೆ ನೀಡುವ ಕೊಡುಗೆ ಎಷ್ಟು? ಬದುಕಿನ ನಿಜವಾದ ಸುಖ ಇರುವುದು– ದೊರೆಯುವುದು ಎಲ್ಲಿ? ಈ ಹಲವು ಪ್ರಶ್ನೆಗಳನ್ನು ಒಂದೊಂದು ಚುಕ್ಕಿಗಳನ್ನಾಗಿಸಿಕೊಂಡು ಕುತೂಹಲಕಾರಿ ಪ್ರಯತ್ನ ಮಾಡಿದ್ದಾರೆ ಮಂಜುನಾಥ ಜೆ. ಅನಿವಾರ್ಯ.

ಇಲ್ಲಿರುವ ನಾಲ್ಕು ಮುಖ್ಯ ಪಾತ್ರಗಳೂ ವೈರುದ್ಧ್ಯ ಮನಃಸ್ಥಿತಿಯವರು. ಪಾರ್ಥ ಎಂಎಲ್‌ಎ ಮಗ. ಮಹಾ ಸೋಮಾರಿ. ಅಪ್ಪನ ಹಣದಲ್ಲಿ ಅಲೆದಾಡಿಕೊಂಡು ಇರುವವ. ಅನು ಎಂಬ ಟೆಕ್ಕಿಗೆ ಸುಳ್ಳು ಹೇಳಿ ಮದುವೆಯಾಗುತ್ತಾನೆ. ಅನು ಕೆಲಸ ಮಾಡುವ ಕಂಪೆನಿಯಲ್ಲಿಯೇ ಇರುವ ಸ್ವಾಮಿಗೆ ಮಾಡರ್ನ್‌ ಹುಡುಗಿಯನ್ನು ಮದುವೆಯಾಗುವ ಆಸೆ. ಆದರೆ ಅಮ್ಮನ ಒತ್ತಾಯಕ್ಕೆ ಮಣಿದು ಹಳ್ಳಿ ಹುಡುಗಿ ಶ್ರುತಿಯನ್ನು ಮದುವೆಯಾಗಿದ್ದಾನೆ. ಈ ಎರಡೂ ದಂಪತಿ ನೆರೆಹೊರೆಯವರು. 

ಮಹಾನಗರದ ಕ್ಯಾನ್ವಾಸಿನಲ್ಲಿ ಸಂಸಾರವೆಂಬ ವ್ಯವಸ್ಥೆಯ ಒಳಸುಳಿಗಳನ್ನು ಶೋಧಿಸುವ ನಿರ್ದೇಶಕರ ಪ್ರಯತ್ನ ಪ್ರಶಂಸನಾರ್ಹ. ಅಲ್ಲದೆ ಇದನ್ನು ಅವರು ಅತ್ಯಂತ ಲವಲವಿಕೆಯಿಂದಲೇ ನಿರ್ವಹಿಸಿದ್ದಾರೆ ಎನ್ನುವುದನ್ನೂ ಗಮನಿಸಬೇಕು. 

ಆದರೆ ಪ್ರಥಮಾರ್ಧದಲ್ಲಿ ಹಲವು ಕುತೂಹಲಕಾರಿ ಸಾಧ್ಯತೆಗಳ ಕಿಟಕಿ ಬಾಗಿಲುಗಳನ್ನು ತೆರೆಯುತ್ತ ಹೋಗುವ ನಿರ್ದೇಶಕರು ದ್ವಿತೀಯಾರ್ಧದಲ್ಲಿ ಅವುಗಳನ್ನೆಲ್ಲ ಮುಚ್ಚುತ್ತ ಬರುತ್ತಾರೆ. ಸಂಕೀರ್ಣವಾಗಿದ್ದ ಕಥೆಯ ಹೆಣಿಗೆ ಸಡಿಲಗೊಳ್ಳುತ್ತ ಹೋಗಿ ಒಂದು ಸರಳ ಮೆಲೊಡ್ರಾಮಾಕ್ಕೆ ಬಂದು ನಿಂತುಬಿಡುತ್ತದೆ. ಮಾರುಕಟ್ಟೆಯಲ್ಲಿ ಸೋಲುವ ಭಯ ಸಿನಿಮಾದಲ್ಲಿ ಹಲವು ಕ್ಲಿಷೆಗಳನ್ನು ತಂದಿಕ್ಕಿದೆ. ಕಥನದ ಮಧ್ಯಭಾಗದಲ್ಲಿ ಇದ್ದಕ್ಕಿದ್ದಂತೆಯೇ ಪಾತ್ರಗಳು ಕಪ್ಪು–ಬಿಳುಪು ಆಗಿ ಬದಲಾಗಿಬಿಡುತ್ತದೆ. ಕೆಲವು ದೃಶ್ಯಗಳು– ಸುದೀರ್ಘ ಮೆಲೊಡ್ರಾಮಾಗಳು, ಧಾರಾವಾಹಿಯನ್ನು ನೆನಪಿಸುವಂತಿವೆ. ಮಧುಸೂದನ್ ಛಾಯಾಗ್ರಹಣ ಭರವಸೆ ಮೂಡಿಸುವಂತಿದೆ. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತವು ರೂಢಿಗತ ಜಾಡಿನಿಂದ ಬೇರೆಯೇ ನಿಂತು ಗಮನ  ಸೆಳೆಯುತ್ತವೆ. ಆದರೆ ಎರಡು ಹಾಡುಗಳು ಕಥೆಯ ಚೌಕಟ್ಟಿನಾಚೆಯಿಂದ ಎಳೆದು ತಂದು ತುರುಕಿದಂತಿದೆ.

ಹಳ್ಳಿಯಿಂದ ಬಂದ ಹುಡುಗಿ ಬಿ.ಎ., ಎಂ.ಎ. ಪದವಿಗಳ ಕುರಿತೂ ತಿಳಿಯದ ಅಜ್ಞಳು ಎಂಬಂತೆ ಚಿತ್ರಿಸಿರುವುದೂ ನಿರ್ದೇಶಕರು ಮಾರುಕಟ್ಟೆ ಸೂತ್ರಗಳ ಜತೆ ಮಾಡಿಕೊಂಡ ‘ರಾಜಿ’ಗೆ ನಿದರ್ಶನ. ಇಂಥ ಹಲವು ಕ್ಲಿಷೆಗಳು ಸಿನಿಮಾದ ಹದವನ್ನು ಕೆಡಿಸಿವೆ. ಆದರೆ ಈ ಪಾತ್ರದಲ್ಲಿ ಸ್ವಾತಿ ಶರ್ಮ ನಟನೆ ಖುಷಿ ಕೊಡುತ್ತದೆ. ತಾನೊಬ್ಬ ಸಮರ್ಥ ನಟ ಎನ್ನುವುದನ್ನು ದಿಗಂತ್ ಇಲ್ಲಿ ಮತ್ತೊಮ್ಮೆ ಸಾಬೀತುಗೊಳಿಸಿದ್ದಾರೆ. ಸೋನು ಗೌಡ ಕೂಡ ತಮ್ಮ ಪಾತ್ರವನ್ನು ಉತ್ತಮವಾಗಿಯೇ ನಿರ್ವಹಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 4

  Happy
 • 2

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !