ಮಂಗಳವಾರ, ಜನವರಿ 25, 2022
24 °C

Gandhada Gudi Teaser: ಗಂಧದಗುಡಿಯ ಅಪ್ಪಾಜಿ ನೆನಪಿನಲ್ಲಿ ಅಪ್ಪು ಅದ್ಭುತ ಪಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ನಿನಗೆ ಕೈಮುಗಿದು ಕೇಳ್ಕೊತ್ತೀನಿ, ಕಾಲಿಗೆ ಬಿದ್ದು ಕೇಳ್ಕೊತ್ತೀನಿ..ಅಭಯಾರಣ್ಯನ ಉಳಿಸು, ಪ್ರಾಣಿಗಳನ್ನು ಉಳಿಸು..ಈ ಗಂಧದಗುಡಿಯನ್ನು ಉಳಿಸು...’

ಇದು ‘ಗಂಧದಗುಡಿ’ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ವರನಟ ಡಾ.ರಾಜ್‌ಕುಮಾರ್‌ ಅವರ ಡೈಲಾಗ್‌. ಇದೇ ಕನ್ನಡಿಗರ ನೆಚ್ಚಿನ ನಟ ‘ಅಪ್ಪು’ವಿನ ಮನವಿಯೂ, ಕನಸೂ. ಅಮ್ಮ, ಪಾರ್ವತಮ್ಮ ರಾಜ್‌ಕುಮಾರ್‌ ಅವರ ಜನ್ಮದಿನದಂದೇ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ಕನಸು ತೆರೆಯ ಮೇಲೆ ಜನ್ಮತಾಳಿದೆ. ಕರ್ನಾಟಕದ ಅದ್ಭುತ ತಾಣಗಳನ್ನು, ವನ್ಯಲೋಕವನ್ನು ಪರಿಚಯಿಸುವ ಹಾಗೂ ಅವುಗಳನ್ನು ಕಾಪಾಡುವ ಸಂದೇಶ ನೀಡುವ ನಿಟ್ಟಿನಲ್ಲಿ ಅಪ್ಪುವಿನ ಪಯಣ ಹೊಸ ‘ಗಂಧದಗುಡಿ’.

ಪಿಆರ್‌ಕೆ ಪ್ರೊಡಕ್ಷನ್ಸ್‌ನಡಿ, ರಾಷ್ಟ್ರಪ್ರಶಸ್ತಿ ವಿಜೇತ ‘ವೈಲ್ಡ್‌ ಕರ್ನಾಟಕ’ ಖ್ಯಾತಿಯ ಅಮೋಘವರ್ಷ ಜೆ.ಎಸ್‌. ಅವರ ಜೊತೆಗೂಡಿ ಪುನೀತ್‌ ಈ ಡಾಕ್ಯೂಫಿಲಂ ತಯಾರಿಸಿದ್ದು, ಇದರ ಶೀರ್ಷಿಕೆ ಟೀಸರ್‌ನಲ್ಲಿ ಅಪ್ಪು, ಅಪ್ಪಾಜಿ ಇಬ್ಬರೂ ಪುನಃ ಜನ್ಮತಾಳಿದ್ದಾರೆ. ನೈಜ ಘಟನೆಗಳನ್ನು ಆಧರಿಸಿ ಇದರ ಚಿತ್ರೀಕರಣ ನಡೆಸಲಾಗಿದ್ದು, ವಿಶ್ವವಿಖ್ಯಾತ ಜೋಗ ಜಲಪಾತ, ಕಾಳಿ ನದಿ, ನಾಗರಹೊಳೆ ಪರಿಸರದ ಸುತ್ತಮುತ್ತಲಿನ ಪ್ರದೇಶವನ್ನು ಅದ್ಭುತವಾಗಿ ಸೆರೆಹಿಡಿಯಲಾಗಿದೆ. ಅಜನೀಶ್ ಲೋಕನಾಥ್‌ ಹಿನ್ನೆಲೆ ಸಂಗೀತ ಡಾಕ್ಯೂಫಿಲಂಗೆ ಜೀವತುಂಬಿದೆ. ಕೊನೆಯಲ್ಲಿ ತುಂತುರು ಮಳೆಯಲ್ಲಿ ನೆನಯುತ್ತಾ, ಅದೇ ಮುಗ್ಧ ನಗುವಿನೊಂದಿಗೆ ‘ಗಂಧದಗುಡಿ’ಗೆ ಪುನೀತ್‌ ಪ್ರೇಕ್ಷಕರನ್ನು ಸ್ವಾಗತಿಸಿದ್ದಾರೆ. 2022ರಲ್ಲಿ ಚಿತ್ರಮಂದಿರಗಳಲ್ಲಿ ಇದು ತೆರೆಕಾಣಲಿದೆ. ಪಿಆರ್‌ಕೆ ಪ್ರೊಡಕ್ಷನ್ಸ್‌ ಹೊಣೆ ಹೊತ್ತಿರುವ ಪುನೀತ್‌ ಅವರ ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಶೀಘ್ರದಲ್ಲೇ ಬಿಡುಗಡೆ ದಿನಾಂಕ ಘೋಷಿಸಲಿದ್ದಾರೆ.

 

ಈ ಕುರಿತು ಟ್ವೀಟ್‌ ಮಾಡಿರುವ ಅಶ್ವಿನಿ, ‘ಅಪ್ಪು ಅವರ ಕನಸಿದು, ಅದ್ಭುತ ಪಯಣ. ನಮ್ಮ ನೆಲದ ಘನತೆಯನ್ನು ಮೆರೆಸುವ ಕಥನ, ಮರುಕಳಿಸಿದ ಚರಿತ್ರೆಯಿದು ‘ಗಂಧದ ಗುಡಿ’ ಎಂದಿದ್ದಾರೆ. ನಟ ಶಿವರಾಜ್‌ ಕುಮಾರ್‌ ಅವರೂ ಅಪ್ಪುವಿನ ಈ ಪಯಣದ ಕುರಿತು ಪ್ರತಿಕ್ರಿಯೆ ನೀಡಿದ್ದು, ‘ಅಪ್ಪುವಿನ ಕನಸು, ಇದೊಂದು ಅದ್ಭುತ ಪಯಣ, ನಮ್ಮ ನೆಲ ಹಾಗೂ ಗಂಧದಗುಡಿಯ ಸಂಭ್ರಮಾಚರಣೆ’ ಎಂದಿದ್ದಾರೆ.

 

‘ಈ ಪ್ರೊಜೆಕ್ಟ್‌ ಕುರಿತು ತಾವು ಪ್ರತಿ ಬಾರಿಯೂ ನನ್ನೊಂದಿಗೆ ಮಾತನಾಡುತ್ತಿದ್ದಾಗ ನಿಮ್ಮ ಕಣ್ಣುಗಳಲ್ಲಿನ ಚೈತನ್ಯವನ್ನು, ಆಸಕ್ತಿಯನ್ನು ನಾನು ಗಮನಿಸಿದ್ದೆ. ನಿಮ್ಮ ಹೃದಯಕ್ಕೆ ಇದು ಎಷ್ಟು ಹತ್ತಿರವಾಗಿತ್ತು ಎಂದು ಇದರಿಂದಲೇ ನಾನು ಅರ್ಥೈಸಿಕೊಂಡಿದ್ದೆ. ನಿಮ್ಮ ಕಣ್ಣುಗಳ ಮೂಲಕ ಈ ಗಂಧದಗುಡಿಯನ್ನು ತೋರಿಸಿರುವುದಕ್ಕೆ ಧನ್ಯವಾದ. ಇದೇ ನಿಜವಾಗಿಯೂ ಸ್ವರ್ಗ’ ಎಂದಿದ್ದಾರೆ ನಟ ಯಶ್‌.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು