ಬುಧವಾರ, ಮಾರ್ಚ್ 3, 2021
29 °C

ಪರಮ್ ಅಲ್ಲ, ಪಾಪು ಗಾಂಧಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಾಂಧೀಜಿ ಪಾತ್ರ ವಹಿಸುವ ನಟನ ಬದುಕಿನ ಕಥನವನ್ನು ಇಟ್ಟುಕೊಂಡು ಕೆಲವು ವರ್ಷಗಳ ಹಿಂದೆ ಗಿರೀಶ ಕಾಸರವಳ್ಳಿ ‘ಕೂರ್ಮಾವತಾರ’ ಎಂಬ ಸಿನಿಮಾ ನಿರ್ದೇಶಿಸಿದ್ದರು. ಈಗ ಗಾಂಧಿ ಬದುಕನ್ನೇ ನೇರವಾಗಿ ಬಿಂಬಿಸುವ ಸಿನಿಮಾವೊಂದು ಕನ್ನಡದ ಜೊತೆಗೆ ಇಂಗ್ಲಿಷ್‌ ಮತ್ತು ಹಿಂದಿ ಭಾಷೆಗಳಲ್ಲಿಯೂ ನಿರ್ಮಾಣ ಆಗುತ್ತಿದೆ. ಪಿ. ಶೇಷಾದ್ರಿ ನಿರ್ದೇಶನದ ಈ ಸಿನಿಮಾ ಹೆಸರು ‘ಮೋಹನದಾಸ’.

ಬಹುತೇಕ ಕನ್ನಡ ನಟರೇ ಅಭಿನಯಿಸಿರುವ ಈ ಚಿತ್ರದಲ್ಲಿ ಬಾಲಗಾಂಧಿಯ ಪಾತ್ರದಲ್ಲಿ ಇಬ್ಬರು ಬಾಲನಟರು ಅಭಿನಯಿಸುತ್ತಿದ್ದಾರೆ. ನಾಲ್ಕು ವರ್ಷದಿಂದ 14 ವರ್ಷದ ಬಾಲ್ಯದವರೆಗಿನ ಪಾತ್ರದಲ್ಲಿ ಬೆಂಗಳೂರಿನ ಏಳು ವರ್ಷದ ಪರಮ್‌ಸ್ವಾಮಿ ನಟಿಸಿದ್ದಾರೆ. 13ರಿಂದ 15 ವರ್ಷದ ಬಾಲ್ಯದ ಪಾತ್ರವನ್ನು ಸಂಚಾರಿ ತಂಡದ ಬಾಲಕಲಾವಿದ ಸಮರ್ಥ ನಿರ್ವಹಿಸುತ್ತಿದ್ದಾರೆ. 

ಮೊದಲ ಭಾಗದಲ್ಲಿ ನಟಿಸುತ್ತಿರುವ ಬಾಲಕಲಾವಿದ ಪರಮ್‌ ಸ್ವಾಮಿಗೆ ಇದು ಮೊದಲ ಚಿತ್ರ. ಈ ಹಿಂದೆ ನಾಟಕವೊಂದರಲ್ಲಿ ಬಣ್ಣ ಹಚ್ಚಿದ್ದು ಬಿಟ್ಟರೆ, ನಟನೆ ಬಗ್ಗೆ ಯಾವುದೇ ಅನುಭವವಿಲ್ಲ. ಬೆಂಗಳೂರಿನ ಶಾಲೆಯಲ್ಲಿ. ಮೂರನೇ ತರಗತಿ ಓದುತ್ತಿರುವ ಪರಮ್‌ ಕಳೆದ ವರ್ಷ ಬೇಸಿಗೆ ರಜೆಯಲ್ಲಿ ಮೈಸೂರಿನ ರಂಗಾಯಣಕ್ಕೆ ರಂಗಶಿಬಿರಕ್ಕೆ ಹೋಗಿದ್ದಾಗ ಅಲ್ಲಿಗೆ ಚಿತ್ರತಂಡ ಮೋಹನದಾಸನ ಪಾತ್ರದ ಆಡಿಷನ್‌ ನಡೆಸಿತ್ತು. ಸುಮಾರು 800 ಬಾಲಕರು ಆಡಿಷನ್‌ನಲ್ಲಿದ್ದರು. ಪರಮ್‌ ಸ್ವಾಮಿ ಮೊದಲ ಸುತ್ತಿನಲ್ಲಿ ಆಯ್ಕೆಯಾಗಿದ್ದ. 

ಈ ಸಿನಿಮಾ ಕನ್ನಡ, ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ತಯಾರಾಗುತ್ತಿರುವುದರಿಂದ ಪರಮ್‌ಗೆ ಮೂರು ಭಾಷೆಗಳಲ್ಲಿ ಸಂಭಾಷಣೆ ಒಪ್ಪಿಸಲು ಹೇಳಲಾಗಿತ್ತು. ಮೂರೂ ಭಾಷೆಗಳಲ್ಲಿ ಈ ಹುಡುಗ ಸಂಭಾಷಣೆಗಳನ್ನು ಒಪ್ಪಿಸುವ ಪರಿಗೆ ಬೆರಗಾಗಿ ಚಿತ್ರತಂಡ ಅವಕಾಶ ನೀಡಿದೆಯಂತೆ.  

ಪರಮ್‌ಗೆ ನಟನೆ ಬಗ್ಗೆ ಅರಿವಿಲ್ಲದ್ದರಿಂದ ಸಿನಿಮಾ ತಂಡ ಒಂದು ವಾರ ತರಬೇತಿ ನೀಡಿದೆ. ಚಿತ್ರೀಕರಣಕ್ಕೆ ಗುಜರಾತ್‌ಗೆ ತೆರಳುವ ಮೊದಲು ಸಹಾಯಕ ನಿರ್ದೇಶಕ ಜೀವನ್‌ ಅವರು ‘ಪಾತ್ರಕ್ಕೆ  ಹೇಗೆ ನಡೆಯಬೇಕು, ಯಾವ ರೀತಿ ಸಂಭಾಷಣೆ ಒಪ್ಪಿಸಬೇಕು ಎಂಬಿತ್ಯಾದಿ ಬಗ್ಗೆ ಹೇಳಿಕೊಟ್ಟಿದ್ದರು. ಇವೆಲ್ಲವೂ ಚಿತ್ರೀಕರಣ ಸಮಯದಲ್ಲಿ ಸಹಾಯಕ್ಕೆ ಬಂತು’ ಎನ್ನುತ್ತಾನೆ ಈ ಬಾಲಕ. 

ಪರಮ್‌ ನಟಿಸಿರುವ ಭಾಗದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಗುಜರಾತ್‌ನ ಪೋರಬಂದರಿನಲ್ಲಿರುವ ಗಾಂಧಿ ಹುಟ್ಟಿದ ಮನೆಯಲ್ಲಿ, ಸಮುದ್ರ ತೀರದಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಇದರಲ್ಲಿ ಅಪ್ಪ– ಅಮ್ಮನ ಜೊತೆಗಿನ ಬಾಂಧವ್ಯ, ಸಹೋದರರ ಜೊತೆ ಮೋಹನದಾಸನ ತುಂಟಾಟ, ಆಯಿ ರಂಭಾದೇವಿ ಜೊತೆಗಿನ ಬಾಂಧವ್ಯ, ಗೆಳೆಯರು, ಮೋಹನದಾಸ ಮಹಾತ್ಮನಾಗಲು ಪ್ರೇರಣೆ ನೀಡಿದ ಅಂಶಗಳ ಬಗ್ಗೆ ಈ ಭಾಗದಲ್ಲಿದೆ. 

ಈ ಚಿತ್ರದಲ್ಲಿ ಮೋಹನದಾಸನ ಅಪ್ಪನ ಪಾತ್ರದಲ್ಲಿ ಪ್ರಸಿದ್ಧ ನಿರ್ದೇಶಕ, ನಟ ಅನಂತ್‌ ಮಹಾದೇವನ್‌ ಹಾಗೂ ಅಮ್ಮ ಪುತಲೀಬಾಯಿಯಾಗಿ ಶ್ರುತಿ ನಟಿಸುತ್ತಿದ್ದಾರೆ. ಭಾಸ್ಕರ್ ಛಾಯಾಗ್ರಹಣ ಮಾಡಿದ್ದಾರೆ. ಅಕ್ಟೋಬರ್ 2ರಂದು ಮೂರೂ ಭಾಷೆಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಆಲೋಚನೆಯಲ್ಲಿ ಚಿತ್ರತಂಡವಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು