ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಗಂಗೂಬಾಯಿ ಕಾಠಿಯಾವಾಡಿ'ಗೆ ಸಂಕಷ್ಟ: ಚಿತ್ರದ ವಿರುದ್ಧ ಬಾಂಬೆ ಹೈಕೋರ್ಟ್ ಮೊರೆ

Last Updated 22 ಫೆಬ್ರುವರಿ 2022, 9:56 IST
ಅಕ್ಷರ ಗಾತ್ರ

ನಟಿ ಆಲಿಯಾ ಭಟ್‌ ಪ್ರಧಾನ ಪಾತ್ರದಲ್ಲಿ ನಟಿಸಿರುವ ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ 'ಗಂಗೂಬಾಯಿ ಕಾಠಿಯಾವಾಡಿ' ಚಿತ್ರಕ್ಕೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. ಮಹಾರಾಷ್ಟ್ರ ಶಾಸಕ ಅಮಿನ್ ಪಟೇಲ್ ಮತ್ತು ದಕ್ಷಿಣ ಮುಂಬೈನ ಕಾಮಾಟಿಪುರ ಪ್ರದೇಶದ ನಿವಾಸಿಯೊಬ್ಬರು ಚಿತ್ರದಲ್ಲಿ ಬಳಸಿಕೊಂಡಿರುವ ಪ್ರದೇಶವೊಂದರ ಹೆಸರನ್ನು ಸೆನ್ಸಾರ್ ಅಥವಾ ಡಿಲೀಟ್ ಮಾಡಬೇಕು ಎಂದು ಒತ್ತಾಯಿಸಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಈ ಮೊದಲು ವೇಶ್ಯಾಗೃಹಗಳನ್ನು ನಡೆಸುತ್ತಿದ್ದ ಕಾಮಾಟಿಪುರ ನಿವಾಸಿ ಶ್ರದ್ಧಾ ಸುರ್ವೆ ಎಂಬುವವರು ಅರ್ಜಿ ಸಲ್ಲಿಸಿದ್ದು, ಚಿತ್ರವು ಶುಕ್ರವಾರ ತೆರೆಕಾಣಲಿರುವುದರಿಂದ ಶೀಘ್ರವಾಗಿ ವಿಚಾರಣೆ ಕೈಗೆತ್ತಿಕೊಳ್ಳಬೇಕೆಂದು ನ್ಯಾಯಮೂರ್ತಿ ಗೌತಮ್ ಪಟೇಲ್ ಮತ್ತು ಮಾಧವ್ ಜಾಮದಾರ್ ಅವನ್ನೊಳಗೊಂಡ ವಿಭಾಗೀಯ ಪೀಠದ ಮುಂದೆ ಮನವಿ ಸಲ್ಲಿಸಿದ್ದಾರೆ.

ಬುಧವಾರ ಅರ್ಜಿಯ ವಿಚಾರಣೆ ನಡೆಸುವುದಾಗಿ ವಿಭಾಗೀಯ ಪೀಠವು ತಿಳಿಸಿದೆ.

ಇದೇ ರೀತಿಯ ಆಕ್ಷೇಪಣೆಯನ್ನು ಎತ್ತಿ ಶಾಸಕ ಅಮೀನ್ ಪಟೇಲ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದು, ಬುಧವಾರ ಅರ್ಜಿಯನ್ನು ಆಲಿಸುವುದಾಗಿ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಎಂಎಸ್ ಕಾರ್ಣಿಕ್ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿದೆ.

ಮುಂಬೈನ ಕಾಮಾಟಿಪುರದ ವೇಶ್ಯೆಯರು ಹಾಗೂ ಅವರ ಮಕ್ಕಳ ಹಕ್ಕುಗಳಿಗಾಗಿ ಹೋರಾಡುವ ಗಂಗೂಬಾಯಿಯ ಜೀವನವನ್ನು ಆಧರಿಸಿ ಚಿತ್ರವಾಗಿದೆ. ಚಿತ್ರದಲ್ಲಿ ಸೀಮಾ ಫಹ್ವಾ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅತಿಥಿ ಪಾತ್ರದಲ್ಲಿ ನಟ ಅಜಯ್‌ ದೇವಗನ್‌ ಮತ್ತು ಹುಮಾ ಖುರೇಷಿ ಕಾಣಿಸಿಕೊಂಡಿದ್ದಾರೆ.

ಸುರ್ವೆ ಸಲ್ಲಿಸಿರುವ ಅರ್ಜಿಯಲ್ಲಿ, ಚಿತ್ರದಲ್ಲಿ ಕಾಮಾಟಿಪುರ ಪ್ರದೇಶವನ್ನು ಕೆಟ್ಟದಾಗಿ ತೋರಿಸಲಾಗಿದೆ. ಇದು ಅಲ್ಲಿನ ನಿವಾಸಿಗಳಿಗೆ ಅಗೌರವ ಉಂಟುಮಾಡುತ್ತದೆ. 'ಒಂದು ವೇಳೆ ಕಾಮಾಟಿಪುರ ಹೆಸರನ್ನು ಒಳಗೊಂಡಂತೆ ಚಿತ್ರವನ್ನು ಬಿಡುಗಡೆಯಾಗಲು ಬಿಟ್ಟರೆ ಆ ಪ್ರದೇಶಕ್ಕೆ ಹಾನಿ ಉಂಟುಮಾಡುತ್ತದೆ ಮತ್ತು ಅಲ್ಲಿನ ನಿವಾಸಿಗಳಿಗೆ ಮುಖ್ಯವಾಗಿ ಮಹಿಳೆಯರಿಗೆ ಅಗೌರವ ತೋರಿದಂತಾಗುತ್ತದೆ' ಎಂದು ಹೇಳಿದ್ದಾರೆ.

'ಕಾಮಾಟಿಪುರವು ವೇಶ್ಯಾವಾಟಿಕೆಯ ತಾಣವಾಗಿತ್ತು ಎಂಬುದಕ್ಕೆ ಯಾವುದೇ ಆಧಾರವಿಲ್ಲ. ಹೀಗಾಗಿ ಕೂಡಲೇ ಅದರ ಹೆಸರನ್ನು ಮಾಯಾಪುರಿ ಅಥವಾ ಮಾಯಾನಗರಿ ಎಂದೋ ಬದಲಿಸಬೇಕು. ಸದ್ಯ ಕಾಮಾಟಿಪುರದಲ್ಲಿ ಶೇ 5ರಷ್ಟು ಕೂಡ ವೇಶ್ಯಾವೃತ್ತಿ ಜಾರಿಯಲ್ಲಿಲ್ಲ. ಚಿತ್ರ ಬಿಡುಗಡೆಯಾದ ಬಳಿಕ ಆ ಪ್ರದೇಶದ ಒಳ್ಳೆಯ ಹೆಸರು ಹಾಳಾಗುತ್ತದೆ. ಚಿತ್ರ ನಿರ್ಮಾಣ ಶುರುವಾದಾಗಿನಿಂದಲೇ ಆ ಪ್ರದೇಶದ ಮೂಲ ಗುಣ ಬದಲಾಗಿದ್ದು, ವೇಶ್ಯಾವಾಟಿಕೆ ತಾಣ ಎಂಬಂತೆ ಬಿಂಬಿತವಾಗುತ್ತಿದೆ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT