ಗುರುವಾರ , ಸೆಪ್ಟೆಂಬರ್ 24, 2020
28 °C

ಸಿನಿಮಾ ವಿಮರ್ಶೆ: ನಮ್‌ ಗಣಿ ಬಿ.ಕಾಂ ಪಾಸ್‌, ಹಾಸ್ಯವೂ ಫಸ್ಟ್‌ ಕ್ಲಾಸ್‌

ಕೆ.ಎಂ. ಸಂತೋಷ್‌ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರ: ನಮ್‌ ಗಣಿ ಬಿ.ಕಾಂ ಪಾಸ್‌

ನಿರ್ಮಾಣ: ಯು.ಎಸ್. ನಾಗೇಶ್‍ಕುಮಾರ್‌

ನಿರ್ದೇಶನ: ಅಭಿಷೇಕ್‌ ಶೆಟ್ಟಿ 

ತಾರಾಗಣ: ಅಭಿಷೇಕ್‌ ಶೆಟ್ಟಿ, ಐಶಾನಿ ಶೆಟ್ಟಿ, ನಾಟ್ಯರಂಗ, ಪಲ್ಲವಿಗೌಡ, ರಚನಾ ದಶರಥ, ಸುಚೇಂದ್ರ ಪ್ರಸಾದ್‌, ಮಂಜುನಾಥ ಹೆಗಡೆ, ಸುಧಾ ಬೆಳವಾಡಿ.

ಮೊದಲ ಪ್ರೀತಿ, ಮೊದಲ‌‌ ಉದ್ಯೋಗ, ಮೊದಲ‌ ಸಂಬಳ ಇದೆಲ್ಲದರ ಸವಿನೆನಪುಗಳನ್ನು ಪ್ರೇಕ್ಷಕನೂ ಮೆಲುಕು ಹಾಕುವಂತೆ ಮಾಡುತ್ತದೆ ‘ನಮ್‌ ಗಣಿ ಬಿ.ಕಾಂ ಪಾಸ್‌’ ಚಿತ್ರ.

ಗಣಿ ಅಲಿಯಾಸ್‌ ಗಣೇಶ ಬಿ.ಕಾಂ ಪದವೀಧರ. ಸೂಕ್ತ ಉದ್ಯೋಗ ಸಿಗದೆ ನಿರುದ್ಯೋಗಿಯೆಂಬ ಹಣೆಪಟ್ಟಿಕೊಂಡು ಹೆತ್ತವರು ಮತ್ತು ಸ್ನೇಹಿತರಿಂದಲೂ ತಿರಸ್ಕಾರಕ್ಕೆ ಒಳಗಾಗಿರುತ್ತಾನೆ. ಆಪ್ತ ಸ್ನೇಹಿತನ ಜತೆ ಸೇರಿ ಪೆಟ್‌ ಬ್ಯುಸಿನೆಸ್‌ ಆರಂಭಿಸುವ ಆಲೋಚನೆ ಮಾಡುತ್ತಾನೆ. ಅದಕ್ಕೆ ಬೇಕಿದ್ದ ₹10 ಲಕ್ಷ ಬಂಡವಾಳವನ್ನು ಅಪ್ಪ ಕೊಡದಿದ್ದಾಗ, ಹಣ ಹೊಂದಿಸಲು ವಿಧವೆಯೊಬ್ಬಳನ್ನು ಮದುವೆಯಾಗಲು ಹೋಗಿ ಯಾಮಾರಿ ಪೊಲೀಸರಿಂದ ಪೆಟ್ಟು ತಿನ್ನುತ್ತಾನೆ. ಉದ್ಯೋಗವಿದ್ದವರಿಗೇ ಹೆಣ್ಣು ಕೊಡುವುದು ಕಷ್ಟವಿರುವಾಗ ನಿರುದ್ಯೋಗಿಗೆ ಇನ್ನೆಲ್ಲಿ ಸುಲಭವಾಗಿ ಹೆಣ್ಣು ಸಿಗಬೇಕು? ಇಂತಹ ಕಥೆಯನ್ನು ನಿರ್ದೇಶಕ ಅಭಿಷೇಕ್‌ ಶೆಟ್ಟಿ ತೆರೆಯ ಮೇಲೆ ರಸವತ್ತಾಗಿ ನಿರೂಪಿಸಿದ್ದಾರೆ.

ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆಯ ಜವಾಬ್ದಾರಿ ಹೊತ್ತಿರುವ ಜತೆಗೆ ನಾಯಕ ನಟನಾಗಿಯೂ ಅದೃಷ್ಟ ಪರೀಕ್ಷೆಯಲ್ಲಿ ಅಭಿಷೇಕ್‌ ಶೆಟ್ಟಿ, ಮೊದಲ ಪ್ರಯತ್ನದಲ್ಲೇ ಫಸ್ಟ್‌ ಕ್ಲಾಸಿನಲ್ಲಿ ಪಾಸಾಗಿದ್ದಾರೆ ಎನ್ನಲು ಅಡ್ಡಿ ಇಲ್ಲ. ರಂಗಭೂಮಿ, ಕಿರುಚಿತ್ರ, ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಪಡೆದ ಅನುಭವ ಈ ಸಿನಿಮಾದ ಸ್ವತಂತ್ರ ನಿರ್ದೇಶನದಲ್ಲಿ ಪ್ರತಿಫಲಿಸಿದೆ.

ಚಿತ್ರದ ನಾಯಕಿ ಐಶಾನಿ ಶೆಟ್ಟಿ ಹೈಸ್ಕೂಲ್‌ ಹುಡುಗಿ ಮತ್ತು ಪತ್ನಿಯಾಗಿ ಎರಡು ಛಾಯೆಯಲ್ಲಿ ಕಾಣಿಸಿಕೊಂಡಿದ್ದು, ಅವರ ನಟನೆ ಮುದ್ದುಮುದ್ದಾಗಿದೆ. ಇನ್ನೂ ನಾಯಕನನ್ನು ಸಂಕಷ್ಟಕ್ಕೆ ಸಿಲುಕಿಸಿ ಪೇರಿ ಕೀಳುವ ಖಳನಾಯಕಿ ಪಾತ್ರದಲ್ಲಿ ಪಲ್ಲವಿಗೌಡ ನಟನೆಯೂ ಗಮನ ಸೆಳೆಯುತ್ತದೆ. ನಾಯಕನ ಗೆಳೆಯ ಮಂಜನ ಪಾತ್ರದಲ್ಲಿ ನಾಟ್ಯರಂಗ ಸಹಜ ನಟನೆಯಿಂದ ಹಾಸ್ಯದ ಹೊನಲು ಹರಿಸಿದ್ದಾರೆ. ರಚನಾ ದಶರಥ, ಸುಚೇಂದ್ರ ಪ್ರಸಾದ್‌, ಮಂಜುನಾಥ ಹೆಗ್ಡೆ ಪೋಷಕ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.

ನಾಗರಾಜ್‌ ‌ಅವರ ಛಾಯಾಗ್ರಹಣ ಸೊರಗಿದಂತೆ ಕಾಣಿಸುತ್ತದೆ. ವಿಕಾಸ್‌ ವಸಿಷ್ಠ ಸಂಗೀತ ಸಂಯೋಜನೆ ಮತ್ತು ಋತ್ವಿಕ್‍ ಮುರಳೀಧರ್ ಹಿನ್ನೆಲೆ ಸಂಗೀತವೂ ಪ್ರೇಕ್ಷಕನನ್ನು ತಟ್ಟುವುದಿಲ್ಲ. ಧ್ವನಿ ಮಿಶ್ರಣವೂ ಅಷ್ಟೇನು ಪರಿಣಾಮಕಾರಿ ಎನಿಸುವುದಿಲ್ಲ. 

ಚಿತ್ರಕಥೆಯಲ್ಲಿ ಹದವಾಗಿ ಬೆರೆತ ನವಿರು ಹಾಸ್ಯ, ಒಂದಿಷ್ಟು ಭಾವುಕತೆಯ ಜೆತೆಗೆ ಸಸ್ಪೆನ್ಸ್‌ ಅಂಶಗಳಿಂದಲೂ ಚಿತ್ರ ಕುತೂಹಲದಿಂದ ನೋಡಿಸಿಕೊಳ್ಳುತ್ತದೆ. ಹಾಡು, ಆ್ಯಕ್ಷನ್‌ ದೃಶ್ಯಗಳ ಅಬ್ಬರವಿಲ್ಲ. ಮನಕ್ಕೆ ನಾಟುವ ಸಂಭಾಷಣೆ, ಕಚಗುಳಿ ಇಡುವ ಹಾಸ್ಯವೇ ಚಿತ್ರದ ಜೀವಾಳ. ಮೊದಲಾರ್ಧವು ಉದ್ಯೋಗ ಅರಸುವಿಕೆಯಲ್ಲಿ ಮುಗಿದರೆ, ದ್ವಿತಿಯಾರ್ಧದ ಕಥೆಯು ಕುತೂಹಲ ಹುಟ್ಟಿಸುತ್ತದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು