ಶುಕ್ರವಾರ, ಡಿಸೆಂಬರ್ 3, 2021
25 °C

ಸಂದರ್ಶನ: ಗರುಡ ಗಮನ–ವೃಷಭ ವಾಹನ ನಟ, ನಿರ್ದೇಶಕ ರಾಜ್‌ ಬಿ ಶೆಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗರುಡ ಗಮನ–ವೃಷಭ ವಾಹನ ಪರಿಕಲ್ಪನೆ ಹುಟ್ಟಿಕೊಂಡಿದ್ದು ಹೇಗೆ?

ಬಾಲ್ಯದಿಂದಲೂ ಹಲವು ಬಾರಿ ‘ದೇವಿ ಮಹಾತ್ಮೆ’ ಯಕ್ಷಗಾನವನ್ನು ನೋಡುತ್ತಾ ಬೆಳೆದವನು ನಾನು. ಇದರಲ್ಲಿ ಆದಿಮಾಯೆಯು ಬ್ರಹ್ಮ, ವಿಷ್ಣು, ಮಹೇಶ್ವರನ್ನು ಸೃಷ್ಟಿ ಮಾಡುತ್ತಾಳೆ. ನಂತರದಲ್ಲಿ ‘ನಮ್ಮಿಬ್ಬರಲ್ಲಿ ಯಾರು ದೊಡ್ಡವರು’ ಎಂದು ಬ್ರಹ್ಮನಿಗೂ, ವಿಷ್ಣುವಿಗೂ ಜಗಳವಾಗುತ್ತದೆ. ‘ದೇವರಲ್ಲೂ ತಾನು ದೊಡ್ಡವ ನಾನು ದೊಡ್ಡವ ಎನ್ನುವ ಜಗಳ ಇರುತ್ತದೆಯೇ?’ ಎನ್ನುವ ಪ್ರಶ್ನೆ ಸಣ್ಣ ವಯಸ್ಸಿನಿಂದಲೇ ಕಾಡುತ್ತಿತ್ತು. ಬಹುಶಃ ಏಳನೇ ತರಗತಿಯಲ್ಲಿರುವಾಗ ಹುಟ್ಟಿಕೊಂಡ ಪ್ರಶ್ನೆ ಇದು. ಪ್ರಸ್ತುತ ಸಮಾಜದಲ್ಲಿ ಜೊತೆಗೇ ಇರುವ ಜನರ ನಡುವೆ ಇರುವ ಅಹಂ ನೋಡುತ್ತಾ ಬಂದಾಗ ಈ ವಿಷಯವನ್ನು ಸಿನಿಮಾ ಮಾಡುವ ಆಲೋಚನೆ ಮಾಡಿದೆ. ಈ ಸಿನಿಮಾವನ್ನು ನೋಡಿದರೆ ಇಬ್ಬರ ಗೆಳೆತನವೂ ಹೌದು, ಎರಡು ತತ್ವಗಳ ಹೊಡೆದಾಟವೂ ಆಗಿದೆ. ಚಿತ್ರೀಕರಣದ ಜಾಗ ದೇವಿಯ ನೆಲೆಯಾಗಿದ್ದರೆ, ಇಬ್ಬರು ಮನುಷ್ಯರು ಆ ತತ್ವಗಳಾಗಿ ನಿಂತರೆ, ಅದು ಹೇಗಿರಲಿದೆ ಎನ್ನುವುದು ನನ್ನನ್ನು ಸೆಳೆಯಿತು. ಹೀಗಾಗಿ ಮಂಗಳಾದೇವಿಯಲ್ಲೇ ಚಿತ್ರೀಕರಣ ಮಾಡಿದೆವು. 

ಚಿತ್ರದ ಪೋಸ್ಟರ್‌ನಲ್ಲಿ ನೀವು ಗಮನಿಸಿರಬಹುದು. ಕೆಂಪು ಮತ್ತು ನೀಲಿ ಬಣ್ಣವನ್ನು ಬಳಸಿದ್ದೇವೆ. ಇವೆರಡೂ ಬಣ್ಣಗಳು ಒಂದಕ್ಕೊಂದು ವಿರುದ್ಧ. ಆದರೆ ಒಂದಕ್ಕೊಂದು ಪೂರಕವಾಗಿದೆ. ಅದೇ ರೀತಿ ಎರಡು ವಿರುದ್ಧವಾದ ತತ್ವಗಳು ಒಟ್ಟಿಗೆ ಸೇರಿದಾಗ ಬಹಳ ಸದೃಢವಾಗುತ್ತವೆ.

ಹಿಂದೆಂದೂ ನೋಡದ ರಾಜ್‌ ಬಿ.ಶೆಟ್ಟಿ ಅವರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಅಲ್ಲವೇ?

ನಾನೊಬ್ಬ ಮುಚ್ಚುಮರೆಯಿಲ್ಲದ ವ್ಯಕ್ತಿ. ನಾನು ಸ್ವಲ್ಪ ಜಾಸ್ತಿನೇ ಹುಚ್ಚ. ಕೋಪ ಸ್ವಲ್ಪ ಜಾಸ್ತಿ. ‘ಒಂದು ಮೊಟ್ಟೆಯ ಕಥೆ’ ನೋಡಿದ ಪ್ರೇಕ್ಷಕರು ನನ್ನನ್ನು ಗುರುತಿಸಿದ್ದು ಆ ಪಾತ್ರದ ಜೊತೆಗೆ. ಹಾಗಾಗಿಯೇ ನನಗೆ ಇರದ ಸರಳತೆ, ಸಂಕೋಚವನ್ನು ಅವರು ನನ್ನ ವ್ಯಕ್ತಿತ್ವಕ್ಕೆ ನೀಡಿದ್ದರು. ನಿಜವಾಗಿಯೂ ‘ಒಂದು ಮೊಟ್ಟೆಯ ಕಥೆ’ಯ ಪಾತ್ರಕ್ಕೆ ಹೊಂದಿಕೊಳ್ಳಲು ನನಗೆ ಕಷ್ಟವಾಗಿತ್ತು. ಅದು ನನ್ನ ವ್ಯಕ್ತಿತ್ವಕ್ಕೆ ತದ್ವಿರುದ್ಧವಾಗಿತ್ತು. ‘ಗರುಡ ಗಮನ ವೃಷಭ ವಾಹನ’ದಲ್ಲಿನ ಶಿವನ ಪಾತ್ರಕ್ಕೆ ಹೊಂದಿಕೊಳ್ಳಲು ನನಗೆ ಕಷ್ಟವಾಗಿಲ್ಲ. ಚಿತ್ರದಲ್ಲಿನ ನನ್ನ ಪಾತ್ರ ಬಹಳ ರಿಯಾಕ್ಟಿವ್‌. ರೀಲ್‌ನಲ್ಲಿ ಈ ಪಾತ್ರವನ್ನು ಮಾಡುತ್ತಾ ಮಾಡುತ್ತಾ ರಿಯಲ್‌ನಲ್ಲೂ ನಾನು ‘ಶಿವ’ನಾಗುತ್ತಿದ್ದೆ. ಸಣ್ಣಪುಟ್ಟ ವಿಚಾರಕ್ಕೂ ರೇಗಾಡುತ್ತಿದ್ದೆ. ಇದು ನನ್ನ ಗಮನಕ್ಕೆ ಬರದಿದ್ದರೂ ಸುತ್ತಮುತ್ತಲಿನವರ ಪ್ರತಿಕ್ರಿಯೆಯಿಂದ ತಿಳಿಯುತ್ತಿತ್ತು.

ಮುಗ್ಧವಾಗಿರುವ ಪಾತ್ರಗಳು ಇಷ್ಟವೇ ಅಥವಾ ಕ್ರೌರ್ಯ ತುಂಬಿರುವ ಪಾತ್ರಗಳೇ?

ಈ ರೀತಿಯ ಪಾತ್ರ ಬಹಳ ಇಷ್ಟ ಎಂದು ಹೇಳಲು ಕಷ್ಟ. ನಾವು ಆ ಪಾತ್ರದಂತೆ ಬದುಕಿರಬಾರದು, ನೋಡಿರಲೂಬಾರದು ಅಂತಹ ಪಾತ್ರಗಳನ್ನು ಮಾಡಲು ನನಗೆ ಹೆಚ್ಚಿನ ಆಸಕ್ತಿ. ನಟನಿಗೆ ಆಗ ಅದು ಸವಾಲು. ಹೊಸ ಪಾತ್ರವೊಂದು ಹೊಸ ಮನುಷ್ಯನ ಪರಿಶೋಧನೆಯಾಗಬೇಕೇ ಹೊರತು ಈಗಾಗಲೇ ಮಾಡಿರುವ ಒಂದು ಪಾತ್ರದ ವಿಸ್ತರಣೆ ಆಗಿರಬಾರದು. ಈಗಾಗಲೇ ಮಾಡಿದ ಪಾತ್ರದಂಥ ಪಾತ್ರವನ್ನೇ ಮಾಡುತ್ತಾ ಹೋದರೆ ಕಲೆ ಎಂಬುವುದಕ್ಕೆ ಮರ್ಯಾದೆ ಇರುವುದಿಲ್ಲ. ಅದು ನಮ್ಮ ಅಹಂನ ವೈಭವೀಕರಣಕ್ಕೆ ಅಷ್ಟೇ.

‘ಗರುಡ ಗಮನ ವೃಷಭ ವಾಹನ’ ಚಿತ್ರದಲ್ಲಿನ ‘ಶಿವ’ನ ಪಾತ್ರ ಹೇಗಿದೆ ಎಂದರೆ ಕಿರುಚಿ, ಮೇಲೆ ಬಿದ್ದು ಜಗಳ ಆಡುವ ಹಿಂಸೆಯೂ ಅವನಲ್ಲಿದೆ. ಇನ್ನೊಂದೆಡೆ ಸ್ವಾಭಾವಿಕನೂ ಹೌದು. ಒಂದೆಡೆ ಸಾಮಾನ್ಯ ಮತ್ತೊಂದೆಡೆ ಅಸಾಮಾನ್ಯ. ಇದಕ್ಕಾಗಿ ಈ ಪಾತ್ರ ನನಗೆ ಇಷ್ಟ. ಯಾವುದೇ ಪಾತ್ರ ಮನುಷ್ಯನಾಗಿರಬೇಕು. ಹೀಗಿದ್ದಾಗ ಕಲೆಗೆ ಸಾರ್ಥಕತೆ.

ಪಾತ್ರಗಳ ಆಯ್ಕೆಯಲ್ಲಿ ಬಹಳ ಸೂಕ್ಷ್ಮವಾದ ಆಯ್ಕೆ ನಡೆದಂತಿದೆ?

ಚಿತ್ರದಲ್ಲಿ ನನ್ನ ಪಾತ್ರವಾದ ‘ಶಿವ’ನ ಬಾಲ್ಯದ ಪಾತ್ರವನ್ನು ಮಾಡಿದ ಮಂಗಳೂರಿನ ಹರ್ಷದೀಪ್‌ ನನ್ನಂತೆಯೇ ಕಾಣಿಸಿದ. ನನ್ನ ಬಾಲ್ಯವನ್ನೇ ಅವನಲ್ಲಿಯೂ ನಾನು ನೋಡಿದೆ. ಅದೇ ರೀತಿ ರಿಷಬ್‌ ಶೆಟ್ಟಿ ಅವರ ಪಾತ್ರ ‘ಹರಿ’ಯ ಪಾತ್ರವನ್ನೂ ಮಾಡಿದ ಹುಡುಗ ಚಿಂತನ್‌ ಕೂಡಾ ರಿಷಬ್‌ನಂತೆಯೇ ಕಂಡ. ಚಿತ್ರದ ಯಶಸ್ಸು ಅಡಗಿರುವುದೇ ಪಾತ್ರಗಳ ಆಯ್ಕೆಯಲ್ಲಿ. ಶಿವನ ಯೌವನದ ಪಾತ್ರದಲ್ಲಿ ಯಶ್ವಿನ್‌ ಅದ್ಭುತವಾಗಿ ನಟಿಸಿದ್ದಾರೆ. ಈ ಪಾತ್ರಗಳು ಬಹಳ ಹೊತ್ತು ತೆರೆಯ ಮೇಲೆ ಕಾಣಿಸಿಕೊಳ್ಳುವುದಿಲ್ಲ. ಆದರೆ ಕಾಣಿಸಿಕೊಂಡಷ್ಟು ಹೊತ್ತು ಪ್ರೇಕ್ಷಕರ ಮೇಲೆ ಬಹಳ ಪರಿಣಾಮ ಬೀರುವುದು ಖಚಿತ. 

ಟ್ರೇಲರ್‌ನಲ್ಲಿ ಇಂಗ್ಲಿಷ್‌ ಹಾಡನ್ನು ಬಳಸಿಕೊಂಡಿರುವುದಕ್ಕೆ ಕಾರಣ?

ಒಂದು ರೂಢಿ ಇದೆ. ಮಂಗಳೂರು ಕಡೆ ರೌಡಿ ಬಂದರೆ ಚೆಂಡೆ ಶಬ್ದ, ಹುಲಿವೇಷದ ತಾಸೆ ಬರಬೇಕು ಎಂದು. ಆದರೆ ನಾವು ಸಿನಿಮಾ ಮಾಡುತ್ತಿರುವುದೇ ಇಂತಹ ಕಲ್ಪನೆಯನ್ನು ಬದಲಾಯಿಸಲು. ಟ್ರೇಲರ್‌ ಅನ್ನು ಸೂಕ್ಷ್ಮವಾಗಿ ಗಮನಿಸಿ. ಅಲ್ಲಿರುವ ಭಾಷೆ, ಪಾತ್ರ, ಬಟ್ಟೆ, ಸಂಸ್ಕೃತಿ ಎಲ್ಲವೂ ಸ್ಥಳೀಯ. ಅದರೆ ಸಿನಿಮಾದ ವಿಷಯ ಜಾಗತಿಕ. ಇದನ್ನು ಪ್ರತಿನಿಧಿಸುವ ಹಾಡನ್ನು ನಾವು ಬಳಸಿದ್ದೇವೆ. ಹಾಡನ್ನು ಗಮನವಿಟ್ಟು ಕೇಳಿದರೆ ಇದು ಅರ್ಥವಾಗುತ್ತದೆ. ಶೀಘ್ರದಲ್ಲೇ ಲಿರಿಕಲ್‌ ವಿಡಿಯೊ ಬಿಡುಗಡೆಯಾಗಲಿದೆ.

ಇಡೀ ಸಿನಿಮಾದಲ್ಲಿ ದೃಶ್ಯಕ್ಕೂ ಅದರ ಹಿನ್ನೆಲೆ ಸಂಗೀತಕ್ಕೂ ಭಿನ್ನತೆ ಇದೆ. ಟ್ರೇಲರ್‌ನಲ್ಲೂ ಇದನ್ನು ನೀವು ಗಮನಿಸಬಹುದು. ತುಂಬಾ ಕೋಲ್ಡ್‌ ಆಗಿರುವ ಇಂಗ್ಲಿಷ್‌ ಹಾಡಿನೊಂದಿಗೆ ಟ್ರೇಲರ್‌ ಇರಬೇಕು ಎಂದು ನಾನು ನಿರ್ಧರಿಸಿದಾಗ ಹಲವರು ಪ್ರಶ್ನಿಸಿದರು. ಮೊದಲು ಟ್ರೇಲರ್‌ ಕಳಿಸಿದ್ದು ರಿಷಬ್‌ ಅವರಿಗೆ. ಅವರು ಕರೆ ಮಾಡಿ ‘ಶೆಟ್ರೆ..ಅದು...ಚೆನ್ನಾಗಿದೆ...ಆದರೆ..ಅದು ಅದು...’ ಎಂದರು. ಮೊದಲ ಬಾರಿಗೆ ಅವರೂ ಗೊಂದಲದಲ್ಲಿದ್ದರು. ಮತ್ತೆ ಅವರ ದೃಷ್ಟಿಕೋನವೇ ಬದಲಾಯಿತು.

ಈ ಸಿನಿಮಾವನ್ನು ಕೇವಲ ತುಳು ಭಾಷೆಯಲ್ಲಿ ಮಾಡಿದ್ದರೂ ಯಶಸ್ಸು ಕಾಣುತ್ತಿತ್ತು. ತುಳು ಎನ್ನುವುದು ಕೇವಲ ಭಾಷೆಯಲ್ಲ ಅದೊಂದು ಸಂಸ್ಕೃತಿ. ಇತ್ತೀಚೆಗಿನ ಕೆಲವು ಕನ್ನಡ, ತುಳು ಸಿನಿಮಾಗಳು ಕೇವಲ ಭಾಷೆಯಲ್ಲಷ್ಟೇ ಆಯಾ ಭಾಷೆಯ ಸಿನಿಮಾಗಳಾಗುತ್ತಿವೆಯೇ ಹೊರತು ಸಂಸ್ಕೃತಿಯಲ್ಲಿ ಅಲ್ಲ. ಒಂದು ಭಾಷೆಯ ಕಾರಣಕ್ಕೆ ಸಂಸ್ಕೃತಿಗೆ ನಿರ್ಬಂಧವಾಗಬಾರದು. ಹೀಗಾಗಿ ಕನ್ನಡದಲ್ಲೇ ಈ ಸಿನಿಮಾ ಮಾಡಿದೆ.   

ರಿಷಬ್‌ ಶೆಟ್ಟಿ ಅವರನ್ನು ‘ಹರಿ’ ಪಾತ್ರಕ್ಕೆ ಆಯ್ಕೆ ಮಾಡಿದ್ದು ಏಕೆ?

ಕನ್ನಡದಲ್ಲಿ ಯಾರನ್ನಾದರೂ ‘ಹರಿ’ಯ ಪಾತ್ರಕ್ಕೆ ಆಯ್ಕೆ ಮಾಡಬೇಕು ಎಂದರೆ ರಿಷಬ್‌ ಅವರನ್ನು ಬಿಟ್ಟು ಕಣ್ಣ ಮುಂದೆ ಯಾರೂ ಬರಲಿಲ್ಲ. ಮಂಗಳೂರು ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಬೇಕು ಎನ್ನುವುದು ಮೊದಲ ಆದ್ಯತೆಯಾಗಿತ್ತು. ‘ಹರಿ’ಯ ಪಾತ್ರಕ್ಕೆ ಎರಡು ಶೇಡ್‌ ಇದೆ. ಗಡ್ಡ ಮೀಸೆ ತೆಗೆದಾಗ ಮಂಗಳೂರಿನ ಮುಗ್ಧ ಹುಡುಗನ ಹಾಗೆ ರಿಷಬ್‌ ಕಾಣಿಸುತ್ತಾರೆ. ಗಡ್ಡ ಮೀಸೆ ಬಿಟ್ಟು ಬಹಳ ವಿಭಿನ್ನವಾಗಿ ರಿಷಬ್‌ ಕಾಣಿಸುತ್ತಾರೆ. ಪಾತ್ರಕ್ಕೆ ಜೀವತುಂಬುವ ಸಾಮರ್ಥ್ಯ ರಿಷಬ್‌ ಅವರಲ್ಲಿದೆ. ಇದು ಸಿನಿಮಾಗೂ ಪೂರಕವಾಗಿದೆ.

ಚಿತ್ರದಲ್ಲಿ ತುಳು ರಂಗಭೂಮಿಯ ಕಲಾವಿದರೂ ಇದ್ದಾರೆ. ಇವರು ಕೇವಲ ಹಾಸ್ಯಕ್ಕೆ ಸೀಮಿತ ಎಂಬ ಮಾತಿದೆ. ಇವರನ್ನು ಬೇರೆ ವಿಭಿನ್ನವಾದ ಪಾತ್ರಕ್ಕೆ ನಾವು ಬಳಸಿಕೊಂಡಿರಲಿಲ್ಲ. ದೀಪಕ್‌ ರೈ ಪಾಣಾಜೆ ಅವರಿಗೆ ನಟನೆಯಲ್ಲಿ 20 ವರ್ಷ ಅನುಭವ ಇದೆ. ಇವರಿಗೆಲ್ಲರಿಗೂ ನಾವು ಅವಕಾಶ ನೀಡಿಲ್ಲ, ಬದಲಾಗಿ ಅವರ ಅನುಭವವನ್ನು ಬಳಸಿಕೊಳ್ಳುತ್ತಿದ್ದೇವೆ. ಅವರೆಲ್ಲರೂ ಬಂದ ಕಾರಣ ಚಿತ್ರದ ಬಣ್ಣ ಮತ್ತಷ್ಟು ಹೆಚ್ಚಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು