ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಪ್ತವಾಗಿ ರಾಜಕೀಯ ಪ್ರಜ್ಞೆ ಕಟ್ಟಿಕೊಡುತ್ತಿದ್ದ ಸತ್ಯಜಿತ್‌ ರೇ’: ಕಾಸರವಳ್ಳಿ

‘ಸತ್ಯಜಿತ್ ರೇ 100; ಅವರ ಚಲನಚಿತ್ರಗಳ ಹೊರಳು ನೋಟ’ ಆನ್‌ಲೈನ್‌ ಸಂವಾದ ಸರಣಿಗೆ ಚಾಲನೆ
Last Updated 22 ಆಗಸ್ಟ್ 2021, 9:31 IST
ಅಕ್ಷರ ಗಾತ್ರ

ಬೆಂಗಳೂರು: ‘ಸತ್ಯಜಿತ್‌ ರೇ ಸಿನಿಮಾಗಳಲ್ಲಿ ರಾಜಕೀಯ ಪ್ರಜ್ಞೆ ಕಾಣಬರುವುದಿಲ್ಲ ಎಂದು ಬಹುತೇಕರು ಅಭಿಪ್ರಾಯಪಡುತ್ತಾರೆ. ಇದು ತಪ್ಪು ಗ್ರಹಿಕೆ. ಅವರ ಕೃತಿಗಳಲ್ಲಿ ರಾಜಕೀಯ ಧೋರಣೆಯು ನದಿ ನೀರಿನ ಒಳಹರಿವಿನಂತೆ ಸುಪ್ತವಾಗಿ ಹರಿಯುತ್ತಿರುತ್ತದೆ’ ಎಂದು ಹಿರಿಯ ಚಿತ್ರ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ತಿಳಿಸಿದರು.

ಸಮುದಾಯ ಕರ್ನಾಟಕವು ಸಹಯಾನ, ಋತುಮಾನ, ಮನುಜಮತ ಸಿನಿಯಾನ ಹಾಗೂ ಜನಶಕ್ತಿ ಮೀಡಿಯಾ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಸತ್ಯಜಿತ್ ರೇ 100; ಅವರ ಚಲನಚಿತ್ರಗಳ ಹೊರಳು ನೋಟ’ ಆನ್‌ಲೈನ್‌ ಸಂವಾದ ಸರಣಿಗೆ ಚಾಲನೆ ನೀಡಿ ಭಾನುವಾರ ಮಾತನಾಡಿದರು.

‘ಸತ್ಯಜಿತ್‌ ರೇ ಅವರ ರಾಜಕೀಯ ಪ್ರಜ್ಞೆ ಹೇಗಿತ್ತು. ಅವರ ಸೌಂದರ್ಯ ಪ್ರಜ್ಞೆಯು ಕೃತಿಗಳಲ್ಲಿ ಹೇಗೆ ಅಭಿವ್ಯಕ್ತಗೊಳ್ಳುತ್ತಿತ್ತು. ರಸಾನುಭೂತಿ ಎಲ್ಲಿ ಉತ್ಪತ್ತಿಯಾಗುತ್ತಿತ್ತು. ಪಾತ್ರ, ಸನ್ನಿವೇಶ, ಸಂದರ್ಭ, ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಯಾವ ರೀತಿಯ ಅನುಭೂತಿಗಳಿಂದ ಅವರು ಸಿನಿಮಾ ಕಟ್ಟುತ್ತಿದ್ದರು. ಅವರ ವೈಚಾರಿಕ ಪ್ರಜ್ಞೆ, ನಮ್ಮ ಇರುವಿಕೆಯ ಬಗ್ಗೆ ಅವರು ಅರಿವು ಹುಟ್ಟಿಸುತ್ತಿದ್ದ ರೀತಿಯ ಬಗ್ಗೆ ವ್ಯಾಖ್ಯಾನ ಮಾಡುವ ಕೆಲಸ ಆಗುತ್ತಿಲ್ಲ’ ಎಂದರು.

‘ರೇ ಅವರ ಚಿತ್ರಗಳಲ್ಲಿ ಮೇಲ್ನೋಟಕ್ಕೆ ಗೋಚರಿಸುವುದೆಲ್ಲ ಅವರ ನಿಲುವು, ರಾಜಕೀಯ ಧೋರಣೆ, ವಿಶ್ಲೇಷಣೆಗಳಲ್ಲ. ಇದು ಅವರು ಕಂಡುಕೊಂಡ ಹದವಾದ ಪಾಕ. ಮೇಲ್ಮಟ್ಟದಲ್ಲಿ ಅದು ಕಥಾನಕವಾಗಿ ಹರಿಯುತ್ತಿರುತ್ತದೆ. ನೋಡುಗರಿಗೆ ಬಹಳ ರುಚಿಸುತ್ತದೆ. ಸಿನಿಮಾದ ಒಳಹೊಕ್ಕು ನೋಡಿದವರಿಗೆ ಬೇರೊಂದು ದೃಷ್ಟಿಕೋನ ಕಂಡುಬರುತ್ತದೆ. ಅದು ಕಾಲ, ದೇಶ ಹೀಗೆ ಎಲ್ಲವನ್ನೂ ಮೀರಿ ಆ ಕೃತಿಯನ್ನು ಸಾರ್ವತ್ರಿಕಗೊಳಿಸುತ್ತಿರುತ್ತದೆ. ಇದನ್ನು ಗ್ರಹಿಸಿದರೆ ರೇ ಅವರ ಸೃಜನಶೀಲತೆ ಮನದಟ್ಟಾಗುತ್ತದೆ’ ಎಂದು ಹೇಳಿದರು.

‘ಕಾಂಚನಜುಂಗಾ, ಸತ್ಯಜಿತ್‌ ಅವರೇ ಚಿತ್ರಕಥೆ ಬರೆದು ನಿರ್ದೇಶಿಸಿದ್ದ ಮೊದಲ ಚಿತ್ರ. ಇದರ ಕಥಾ ಹಂದರ ಬಹಳ ಸರಳವಾಗಿತ್ತು. ನಾಲ್ಕು ಕುಟುಂಬಗಳ ಸದಸ್ಯರ ಉದಾಹರಣೆ ಇಟ್ಟುಕೊಂಡು ಕಥೆಯಲ್ಲೇ ಆಗುತ್ತಿರುವ ರಾಜಕೀಯ ತಲ್ಲಣ, ತಿಕ್ಕಾಟಗಳನ್ನು ಅವರು ಕಟ್ಟಿಕೊಡುವ ಪ್ರಯತ್ನ ಮಾಡಿದ್ದರು. ರಾಜಕೀಯವು ನಮ್ಮ ದೈನಂದಿನ ಬದುಕಿನಲ್ಲೇ ಹಾಸು ಹೊಕ್ಕಾಗಿದೆ ಎಂಬುದನ್ನು ಸೂಕ್ಷ್ಮವಾಗಿ ಹೇಳಿದ್ದರು. ಇದು ಅವರ ಸಿನಿಮಾದ ದೊಡ್ಡ ಶಕ್ತಿ’ ಎಂದರು.

‘ಭಾರತವು ಔದ್ಯಮಿಕ ಜಗತ್ತಿಗೆ ತೆರೆದುಕೊಳ್ಳುತ್ತಾ ಹೋದಂತೆ ಮಾನವೀಯ ಸಂಬಂಧ ತನ್ನ ಮಾರ್ದವತೆಯನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ ಎಂಬುದನ್ನು ಪಥೇರ್‌ ಪಾಂಚಾಲಿ, ಅಪರಾಜಿತೊ ಮತ್ತು ಅಪೂರ್‌ ಸಂಸಾರ್‌ ಚಿತ್ರಗಳ ಮೂಲಕ ಕಟ್ಟಿಕೊಟ್ಟಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT