ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಣೇಶ್ ಸಂದರ್ಶನ: ಕೃಷ್ಣಂ ಪ್ರಣಯ ಸಖಿಯಲ್ಲಿ ಸಿದ್ಧ ಮಾದರಿ ಬ್ರೇಕ್‌ ಮಾಡಿದ್ದೇನೆ

Published 15 ಆಗಸ್ಟ್ 2024, 23:36 IST
Last Updated 15 ಆಗಸ್ಟ್ 2024, 23:36 IST
ಅಕ್ಷರ ಗಾತ್ರ
ನಟ ಗಣೇಶ್‌ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರ ಆ.15ರಂದು ತೆರೆ ಕಂಡಿದೆ. ಹಾಡುಗಳಿಂದ ಗಮನ ಸೆಳೆದಿರುವ ಈ ಚಿತ್ರ ಕುರಿತು ಅವರು ಮಾತನಾಡಿದ್ದಾರೆ.
ಪ್ರ

ಈ ಚಿತ್ರದಲ್ಲಿ ನಿಮ್ಮ ಪಾತ್ರವೇನು?

ದೊಡ್ದ ಕುಟುಂಬದ ಶ್ರೀಮಂತ ಹುಡುಗನೊಬ್ಬನ ಕಥೆ. ‘ಕೃಷ್ಣ’ ನನ್ನ ಪಾತ್ರದ ಹೆಸರು. ಕುಟುಂಬ, ಜೀವನ, ಪ್ರೀತಿ ಇವುಗಳ ಜೊತೆಗೆ ನಾಯಕನ ಬದುಕಿನ ಪಯಣವನ್ನು ನಿರ್ದೇಶಕರು ಭಿನ್ನ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಗಣೇಶ್‌ ಸಿನಿಮಾ ಎಂದರೆ ಸಾಮಾನ್ಯವಾಗಿ ಒಂದು ಕಲ್ಪನೆ ಇರುತ್ತದೆ. ಆದರೆ ಹಿಂದಿನ ಸಿನಿಮಾಗಳಲ್ಲಿ ನೋಡಿರದಂತಹ ಗಣೇಶ್‌ ಇಲ್ಲಿದ್ದಾರೆ. ಅದಕ್ಕೆ ಕಾರಣ ಪಾತ್ರ ಪೋಷಣೆ. ಇದೊಂದು ಎಮೋಷನಲ್‌ ಕಥೆ. ಹಾಗಂತ ನಾಯಕ ಕಣ್ಣೀರು ಹಾಕುವುದಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಭಾವನೆಯ ಅಭಿವ್ಯಕ್ತಿ ಭಿನ್ನವಾಗಿರುತ್ತದೆ. ಅದನ್ನು ಇಲ್ಲಿ ಕಾಣಬಹುದು.

ಪ್ರ

ಇಲ್ಲಿತನಕ ನೀವು ಮಾಡಿದ ಪಾತ್ರಗಳಿಗಿಂತ ಎಷ್ಟು ಭಿನ್ನವಾಗಿದೆ?

ಪ್ರೀತಿಗಾಗಿ ಅಳುವ, ಅಲೆಯುವ ಸಾಕಷ್ಟು ಪಾತ್ರಗಳನ್ನು ಮಾಡಿರುವೆ. ಆದರೆ ಇಲ್ಲಿ ಎಮೋಷನ್‌ ಬೇರೆಯದೇ ರೀತಿಯಲ್ಲಿದೆ. 2 ಗಂಟೆ 40 ನಿಮಿಷ ನಗಿಸುತ್ತ ಒಂದು ನವಿರಾದ ಕಥೆಯನ್ನು ಹೇಳುತ್ತದೆ. ನಾಯಕಿಗೆ ಅಳುವಿದೆ. ಹೀಗಾಗಿ ನೀವು ನಿರೀಕ್ಷೆ ಮಾಡುವ ರೆಗ್ಯಲುರ್‌ ಗಣೇಶ್‌ ಇಲ್ಲಿ ಕಾಣಿಸುವುದಿಲ್ಲ. ಆ ಮಾದರಿಯನ್ನು ಬ್ರೇಕ್‌ ಮಾಡಿದ್ದೇವೆ.

ಪ್ರ

ಇದೊಂದು ತ್ರಿಕೋನ ಪ್ರೇಮಕಥೆಯೇ?

ಕೇವಲ ಪ್ರೇಮಕಥೆಯಲ್ಲ. ಕೌಟಂಬಿಕ ಚಿತ್ರ. ಹೊಸ ಆಯಾಮದ ಕಥೆಯನ್ನು ನಿರ್ದೇಶಕರು ಹೆಣೆದಿದ್ದಾರೆ. ಅದನ್ನು ಈಗಲೇ ಹೇಳಿದರೆ ಚಿತ್ರದ ಕಥೆಯನ್ನು ಬಿಟ್ಟುಕೊಟ್ಟಂತೆ ಆಗುತ್ತದೆ. ಮುಖ್ಯವಾಗಿ ಇಬ್ಬರು ನಾಯಕಿಯರು. ಹಾಡುಗಳು ಚಿತ್ರದ ಪ್ಲಸ್‌ ಪಾಯಿಂಟ್‌. ‘ದ್ವಾಪ‍ರ’ ಹಾಡು ಈಗಾಗಲೇ ಸೂಪರ್‌ ಹಿಟ್‌ ಆಗಿದೆ. ಹಾಡುಗಳು ದೊಡ್ಡ ಹಿಟ್‌ ಆಗದೆ ಬಹಳ ಕಾಲವಾಗಿತ್ತು. ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಈ ಹಾಡಿಗೆ ರೀಲ್ಸ್‌ ಮಾಡುತ್ತಿದ್ದಾರೆ. ಈ ಹಾಡು ಸಹಜವಾಗಿ 2 ಕೋಟಿ ಜನರನ್ನು ತಲುಪಿದೆ. ಚಿತ್ರದ ನಾಲ್ಕೂ ಹಾಡುಗಳು ಹಿಟ್‌. ಈ ಹಾಡುಗಳು ಚಿತ್ರಕ್ಕೆ ಆಹ್ವಾನ ಪತ್ರಿಕೆಯಿದ್ದಂತೆ.

ಪ್ರ

ಯಾವುದೇ ಚಿತ್ರ ಬಿಡುಗಡೆಗೆ ಮುನ್ನ ಎಷ್ಟೇ ಭರವಸೆ ಮೂಡಿಸಿದರೂ ಪ್ರೇಕ್ಷಕರು ಚಿತ್ರಮಂದಿರಗಳತ್ತ ಬರದಿರಲು ಕಾರಣ ಏನಿರಬಹುದು?

ಈ ವಿಷಯದಲ್ಲಿ ನಾವು ಪ್ರೇಕ್ಷಕರನ್ನು ದೂರುವುದು ತಪ್ಪಾಗುತ್ತದೆ. ಗುಣಮಟ್ಟ, ಕಂಟೆಂಟ್‌ನೊಂದಿಗೆ ಸಿನಿಮಾ ಚೆನ್ನಾಗಿ ಮಾಡುವುದು ಬಹಳ ಮುಖ್ಯ. ಮೇಕಿಂಗ್‌ ಕೂಡ ಮಹತ್ವದ್ದು. ಜನರಿಗೆ ಕಥೆ ಕನೆಕ್ಟ್‌ ಆಗಬೇಕು. ಇಲ್ಲವಾದರೆ ಮನೆ ಬಾಗಿಲಿಗೆ ಹೋಗಿ ಕರೆದರೂ ಜನ ಬರುವುದಿಲ್ಲ. ಸಿನಿಮಾ ವ್ಯಾಪ್ತಿ ಹೆಚ್ಚಾಗಿದೆ. ಇವತ್ತು ನಾವು ಜಾಗತಿಕವಾಗಿ ಸ್ಪರ್ಧೆ ಮಾಡುತ್ತಿದ್ದೇವೆ. ಒಟಿಟಿ, ಬೇರೆ ಭಾಷೆ ಸಿನಿಮಾಗಳ ಪೈಪೋಟಿ ಎಲ್ಲವನ್ನೂ ಮೀರಿ ನಿಲ್ಲುವಂತಹ ಸಿನಿಮಾಗಳು ಬೇಕಿವೆ.

ಪ್ರ

ಈ ವಾರ 15 ಸಿನಿಮಾಗಳಿವೆ. ಕೆಲ ದೊಡ್ಡ ಸಿನಿಮಾಗಳಿಂದ ಬಹಳ ಪೈಪೋಟಿ ಇದೆ ಅನ್ನಿಸುತ್ತಿಲ್ಲವೇ?

ಯಾವಾಗ ಬಂದರೂ ಈ ಪೈಪೋಟಿ ಇದ್ದೇ ಇದೆ. ಬಿಡುಗಡೆಗೆ ಮುನ್ನ ಎಲ್ಲವೂ ಕೇವಲ ಸಿನಿಮಾ ಅಷ್ಟೆ. ಬಿಡುಗಡೆ ನಂತರ ಸಣ್ಣ, ದೊಡ್ಡ ಎಂಬುದು. ತುಂಬ ಸಿನಿಮಾಗಳಿಂದ ಪ್ರೇಕ್ಷಕರು ಸ್ಪ್ಲಿಟ್‌ ಆಗಬಹುದು. ಆದರೆ ಇವತ್ತಿನ ಡಾರ್ಕ್‌ ಸಿನಿಮಾಗಳ ನಡುವೆ ನಮ್ಮದು ಕಲರ್‌ಫುಲ್‌ ಸಿನಿಮಾ. ರಾಮ್‌ಕಾಮ್‌ ಕಥೆ. ಹೀಗಾಗಿ ಫ್ಯಾಮಿಲಿ ಆಡಿಯನ್ಸ್‌ ಬಂದೇ ಬರುತ್ತಾರೆ ಎಂಬ ನಂಬಿಕೆಯಿದೆ.

ಪ್ರ

ನಿಮ್ಮ ಮುಂದಿನ ಸಿನಿಮಾಗಳು...

ವಿಖ್ಯಾತ್‌ ನಿರ್ದೇಶನದಲ್ಲಿ ರಮೇಶ್‌ ಅರವಿಂದ್‌ ಜೊತೆ ಒಂದು ಸಿನಿಮಾ ಈಗಾಗಲೇ ಘೋಷಣೆಯಾಗಿದೆ. ಇದಲ್ಲದೇ ಇನ್ನೆರಡು ಸಿನಿಮಾಗಳು ಪ್ರಗತಿಯಲ್ಲಿವೆ. ಸದ್ಯ ‘ಕೃಷ್ಣಂ...’ ಮೇಲೆ ಗಮನವಿದೆ. ಸಿನಿಮಾಗಳು ಕಮರ್ಷಿಯಲ್‌ ಆಗಿಯೂ ಗೆಲ್ಲಬೇಕು. ಆಗ ಮಾತ್ರ ಸದಭಿರುಚಿಯ ಸಿನಿಮಾಗಳನ್ನು ಮಾಡಲು ಮತ್ತಷ್ಟು ಧೈರ್ಯ ಬರುತ್ತದೆ.

ಪ್ರ

ನೀವು ಡಾರ್ಕ್‌, ಪ್ಯಾನ್‌ ಇಂಡಿಯಾ ಸಿನಿಮಾ ಮಾಡುವ ಆಲೋಚನೆಯಲ್ಲಿ ಇದ್ದೀರಾ?

ಇವತ್ತು ಡಾರ್ಕ್‌ ಸಿನಿಮಾಗಳ ಯುಗ. ಪ್ರತಿ 5–6 ವರ್ಷಕ್ಕೆ ಒಂದೊಂದು ಜಾನರ್‌ನ ಸಿನಿಮಾಗಳು ಓಡುತ್ತವೆ. ‘ರೂಟ್‌ ಚೆನ್ನಾಗಿರಬೇಕು, ಆಗ ಫ್ರೂಟ್‌ ಚೆನ್ನಾಗಿರುತ್ತೆ’ ಅಂತಾರೆ. ‘ನುಡಿ ಬಿಟ್ಟರೆ ನಾಡು ಬಿಟ್ಟಂತೆ’ ಎಂದು ಕುವೆಂಪು ಅವರು ಸೊಗಸಾಗಿ ಹೇಳಿದ್ದಾರೆ. ಹೀಗಾಗಿ ಮೊದಲು ನಮ್ಮ ಪ್ರೇಕ್ಷಕರನ್ನು ಗೆಲ್ಲಬೇಕು. ನಂತರ ತಾನಾಗಿಯೇ ಉಳಿದ ಪ್ರೇಕ್ಷಕರನ್ನು ತಲುಪುತ್ತದೆ. ಪ್ಯಾನ್‌ ಇಂಡಿಯಾದಲ್ಲಿಯೂ ಎಲ್ಲವೂ ಗೆಲ್ಲುತ್ತದೆ ಎನ್ನಲು ಸಾಧ್ಯವಿಲ್ಲ. ‘ಕೃಷ್ಣಂ ಪ್ರಣಯ ಸಖಿ’ಯೇ ಯಾಕೆ ಪ್ಯಾನ್‌ ಇಂಡಿಯಾ ಸಿನಿಮಾ ಆಗಬಾರದು? ಇಲ್ಲಿ ಗೆದ್ದರೆ ನಂತರ ಉಳಿದ ಭಾಷೆಗಳಿಗೆ ಡಬ್‌ ಮಾಡಬಹುದು. ಇವತ್ತು ನಾವು ಕೊರಿಯನ್‌, ಇರಾನಿ ಸಿನಿಮಾಗಳನ್ನು ಸಬ್‌ಟೈಟಲ್‌ ಜೊತೆಗೆ ನೋಡುವುದಿಲ್ಲವೇ? ಹಾಗೆಯೇ ಇಲ್ಲಿ ಗೆದ್ದ ಸಿನಿಮಾಗಳು ಜಗತ್ತಿನ ಬೇರೆ ಭಾಗಗಳನ್ನು ತಲುಪುತ್ತದೆ. ನಾನು ಯಾವತ್ತು ನನ್ನ ಫ್ಯಾಮಿಲಿ ಆಡಿಯನ್ಸ್‌ ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡುತ್ತೇನೆ. ಪ್ಯಾನ್‌ ಇಂಡಿಯಾ ಎಂಬುದು ಅವರವರ ದೃಷ್ಟಿಕೋನವಷ್ಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT