ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಜಾರರ ಬಂಡಾಯದ ಕತೆ

ಉತ್ಸವದಲ್ಲಿ ಏಕೈಕ ಲಂಬಾಣಿ ಚಿತ್ರ– ಗೋರ್‌ ಇತಿಹಾಸ್‌
Last Updated 3 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ನಡೆಯುತ್ತಿರುವ12ನೇ ಚಲನಚಿತ್ರೋತ್ಸವದಲ್ಲಿ ದೇಶ, ವಿದೇಶಗಳ ಜತೆ ಬಂಜಾರ ಭಾಷೆಯ ಏಕೈಕ ಚಿತ್ರ ‘ಗೋರ್‌ ಇತಿಹಾಸ್‌’ ಪ್ರದರ್ಶನಗೊಳ್ಳುತ್ತಿದೆ.

ಬ್ರಿಟಿಷ್‌ ಸಾಮ್ರಾಜ್ಯಶಾಹಿ ವ್ಯವಸ್ಥೆಯ ವಿರುದ್ಧ ಬಂಡಾಯ ಸಾರಿದ ಬಂಜಾರ ಸಮುದಾಯದ ಕತೆ ಇದು. 1860ರಲ್ಲಿ ಬ್ರಿಟಿಷ್ ಭಾರತದಲ್ಲಿ ನಡೆದ ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ತೆಗೆದ ಚಿತ್ರ ಇದು.‘ಗೋರ್‌ ಇತಿಹಾಸ್‌’ ಎಂದರೆ, ಲಂಬಾಣಿ ಭಾಷೆಯಲ್ಲಿ ಘೋರ ಇತಿಹಾಸ ಎಂದರ್ಥ.

ಭಾರತದಲ್ಲಿ ಅಂದಾಜು 10 ಕೋಟಿಯಷ್ಟು ಬಂಜಾರ (ಲಂಬಾಣಿ) ಸಮುದಾಯವಿದೆ. ದೇಶದ ಉದ್ದಗಲಕ್ಕೂ ಚದುರಿ ಹೋಗಿದ್ದರೂ ಈ ಸಮುದಾಯ ಶತಮಾನಗಳಿಂದ ತನ್ನದೇ ಆದ ಭಾಷೆಯನ್ನು ಜತನದಿಂದ ಕಾಪಾಡಿಕೊಂಡು ಬಂದಿದೆ. ರಾಜ್ಯದಲ್ಲೂ ದೊಡ್ಡ ಸಂಖ್ಯೆಯಲ್ಲಿ ಲಂಬಾಣಿ ಸಮುದಾಯವಿದ್ದು,ಹತ್ತಾರು ಬಂಜಾರ ಭಾಷೆಯ ಚಿತ್ರಗಳು ತೆರೆಕಂಡಿವೆ.

ಇದೇ ಸಮುದಾಯಕ್ಕೆ ಸೇರಿದ ಚಿತ್ರನಟ ಹೇಮಂತ ಕುಮಾರ್‌ 1996ರಲ್ಲಿ ಲಂಬಾಣಿ ಭಾಷೆಯಲ್ಲಿ ‘ಝಾಡಿರೊ ಪಂಖೇರು’ (ಕಾಡಿನ ಹಕ್ಕಿ) ಎಂಬ ಸಿನಿಮಾ ಮಾಡಿದರು. ಇದು ದೇಶದ ಮೊದಲ ಬಂಜಾರ ಚಿತ್ರವಂತೆ. ಆ ನಂತರ ಐದಾರು ಸಾಲು, ಸಾಲು ಬಂಜಾರ ಚಿತ್ರಗಳು ತೆರೆ ಕಂಡವು. 2017ರಲ್ಲಿ ತೆರೆಕಂಡ ಇವರದೇ ‘ಸೋನೆಸರಿಕ್‌ ಬೇಟಿ’ (ಬಂಗಾರದ ಮಗಳು) ಬೆಂಗಳೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು.

ರೈತರ ಆತ್ಮಹತ್ಯೆ ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣದ ಅಗತ್ಯದ ಸಂದೇಶ ಸಾರುವ ಗಂಭೀರ ವಿಷಯಗಳನ್ನು ಈ ಚಿತ್ರ ಹೊಂದಿತ್ತು. ಕಳೆದ ವರ್ಷ ತೆರೆಕಂಡ (2019) ಹೇಮಂತ್‌ ಕುಮಾರ್‌ ನಟಿಸಿ, ನಿರ್ದೇಶಿಸಿದ ‘ಗೋರ್‌ ಇತಿಹಾಸ್’ ಬುಧವಾರ (ಮಾರ್ಚ್‌ 4) ಪ್ರದರ್ಶನಗೊಳ್ಳುತ್ತಿದೆ.

ಒಂದು ಕಾಲಕ್ಕೆ ಬಂಜಾರ ಸಮುದಾಯ ದೇಶದ ಸರಕು ಸಾಗಾಟ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿರ್ವಹಿಸುತ್ತಿತ್ತು. ಅಂತಹ ಸಮುದಾಯ ಬ್ರಿಟಿಷರನ್ನು ಎದುರು ಹಾಕಿಕೊಂಡು ಹೇಗೆ ಕಾಡು ಪಾಲಾಯಿತು ಎಂಬ ಐತಿಹಾಸಿಕ ಘಟನೆಯನ್ನು ಈ ಸಿನಿಮಾ ಹೇಳುತ್ತದೆ. ಪೋರ್ಚುಗೀಸರೊಂದಿಗೆ ಸಂಬಾರ ಪದಾರ್ಥಗಳ ವ್ಯಾಪಾರ ಮಾಡುತ್ತಿದ್ದ ಬಂಜಾರ ಜನಾಂಗವನ್ನು ಬಗ್ಗು ಬಡಿಯಲು ಬ್ರಿಟಿಷರು ಭಾರತದಲ್ಲಿ ಮೊದಲ ಬಾರಿಗೆ ಜಾರಿಗೆ ತಂದ ರೈಲ್ವೆ ವ್ಯವಸ್ಥೆ ಮತ್ತು ಬುಡಕಟ್ಟು ಅಪರಾಧ ಕಾನೂನು ಹೇಗೆ ಆ ಸಮುದಾಯದ ಆರ್ಥಿಕ ಅವನತಿಗೆ ಹೇಗೆ ಕಾರಣವಾಯಿತು ಎಂಬ ಘಟನೆಗಳನ್ನು ‘ಗೋರ್‌ ಇತಿಹಾಸ್’ ತೆರೆದಿಡುತ್ತದೆ.

ಬ್ರಿಟಿಷರು ಭಾರತಕ್ಕೆ ಬರುವ ಮುಂಚಿನಿಂದಲೂ ದೇಶದ ಸರಕು ಸಾಗಣೆ ವ್ಯವಸ್ಥೆಬಂಜಾರ ಸಮುದಾಯದ ಕೈಯಲ್ಲಿತ್ತು. ಇದಕ್ಕಾಗಿ ಆ ಕಾಲದಲ್ಲೇ ಸಾವಿರಾರು ಕುದುರೆ, ಒಂಟೆ, ಎತ್ತು, ಎಮ್ಮೆ, ಕತ್ತೆ ಮತ್ತು ಬಂಡಿ ಹೊಂದಿದ್ದ ಬಂಜಾರರು ಶ್ರೀಮಂತ ಸಮುದಾಯವಾಗಿತ್ತು. ರಾಜಮಹಾರಾಜರು ಮಾತ್ರವಲ್ಲ, ಆರಂಭದಲ್ಲಿ ಬ್ರಿಟಿಷರು ಕೂಡ ಸರಕು ಸಾಗಾಟಕ್ಕೆ ಈ ಜನಾಂಗವನ್ನೇ ಅವಲಂಬಿಸಿದ್ದರು.

ಬಂಜಾರರು ಪೋರ್ಚುಗೀಸರ ಜತೆ ಹೊಂದಿದ್ದ ಸಂಬಾರ ಪದಾರ್ಥಗಳ ವ್ಯಾಪಾರದ ಮೇಲೆ ಬ್ರಿಟಿಷರ ಕಣ್ಣು ಬಿತ್ತು. ಪೋರ್ಚುಗೀಸರ ಜತೆ ವ್ಯಾಪಾರ ಸಂಬಂಧ ಕಡಿದುಕೊಳ್ಳುವಂತೆ ತಾಕೀತು ಮಾಡುತ್ತಾರೆ. ಬ್ರಿಟಿಷರ ಬೆದರಿಕೆಗೆ ಮಣಿಯದ ಜೈಸಿಂಗ್ ಎಂಬ ಬಂಜಾರ ಯುವಕ ಪೋರ್ಚುಗೀಸರ ಜತೆ ವ್ಯಾಪಾರ ಮುಂದುವರಿಸುತ್ತಾನೆ. ಆತನನ್ನುಬಗ್ಗು ಬಡಿಯಲು ಬ್ರಿಟಿಷರು, ಗೌಳಿಗ ಜನಾಂಗ ಬಳಸಿಕೊಳ್ಳಲು ಮುಂದಾಗುತ್ತಾರೆ. ಗೌಳಿಗರು ಕಾಡಿನೊಳಗೆ ಪ್ರವೇಶಿಸಲು ಹಿಂಜರಿಯುತ್ತಾರೆ. ಆಗ ಬ್ರಿಟಿಷರು ಅನಿವಾರ್ಯವಾಗಿ ತಮ್ಮಸರಕು ಸಾಗಾಟಕ್ಕೆಭಾರತದಲ್ಲಿ ಮೊದಲ ಬಾರಿಗೆ
ರೈಲ್ವೆ ವ್ಯವಸ್ಥೆ ಜಾರಿಗೆ ತರುತ್ತಾರೆ.

ಬದುಕಿಗಾಗಿ ಸರಕು ಸಾಗಾಟವನ್ನೇ ಅವಲಂಬಿಸಿದ್ದ ಬಂಜಾರರ ಬದುಕು ಮತ್ತು ಆರ್ಥಿಕ ಸ್ಥಿತಿ ದಿಢೀರ್‌ ಕುಸಿಯುತ್ತದೆ. ದಾರಿ ಕಾಣದೆ ಕಾಡು ಸೇರುವ ಬಂಜಾರರು ಸೇಡು ತೀರಿಸಿಕೊಳ್ಳಲು ಬ್ರಿಟಿಷರನ್ನು ಮತ್ತು ರೈಲುಗಳಲ್ಲಿ ಸಾಗಿಸುವ ಸರಕು ದೋಚುವ ಕೆಲಸಕ್ಕೆ ಇಳಿಯುತ್ತಾರೆ. ಆಗ ಬ್ರಿಟಿಷರು 1872ರಲ್ಲಿ ಬುಡಕಟ್ಟು ಅಪರಾಧ ತಡೆ ಕಾಯ್ದೆ ಜಾರಿಗೆ ತರುತ್ತಾರೆ. ಈ ಕಾನೂನನ್ನು ಅಸ್ತ್ರವಾಗಿ ಬಳಸಿಕೊಂಡು ಬಂಜಾರ ಸಮುದಾಯವನ್ನು ಬಗ್ಗು ಬಡಿಯಲು ಹೊರಡುತ್ತದೆ.

ಆಗ ಬ್ರಿಟಿಷ್‌ ವ್ಯವಸ್ಥೆಯ ವಿರುದ್ಧ ಜೈಸಿಂಗ್‌ ಆತನ ಸಹಚರರು ಕೆಚ್ಚೆದೆಯ ಹೋರಾಟ ನಡೆಸುತ್ತಾರೆ. ಸ್ಥಳೀಯ ಸಾಮಂತಅರಸರಾದ ದೇಶಮುಖ್‌ ಮನೆತನದ ಸಹಾಯದಿಂದ ಜೈಸಿಂಗ್‌ ಮತ್ತು ಆತನ ಸಹಚರರನ್ನು ಬ್ರಿಟಿಷರು ಹಿಡಿದು ಗಲ್ಲಿಗೇರಿಸುತ್ತಾರೆ.ಆಗ ಬಂಜಾರರು ಕಾಡು ಸೇರುತ್ತಾರೆ. ಶ್ರೀಮಂತರಾಗಿದ್ದವರು ಕಾಡುಮೇಡು ಅಲೆಯುವ ಅಲೆಮಾರಿಗಳಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT