ಮಂಗಳವಾರ, ಅಕ್ಟೋಬರ್ 20, 2020
23 °C

‘ಸ್ವರ ಸಾಮ್ರಾಟ’, ಸಂಗೀತ ನಿರ್ದೇಶಕ ರಾಜನ್ ಚಿತ್ರಸಂಗೀತ ಪಯಣ

ಕೆ.ಎಂ. ಸಂತೋಷ್‌ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಕನ್ನಡ ಚಿತ್ರರಂಗದ ಚಿತ್ರಸಂಗೀತದ ದೃಷ್ಟಿಯಲ್ಲಿ 1950ರ ದಶಕ ಅತ್ಯಂತ ಮಹತ್ವದ್ದು. ಹೊಸ ಪ್ರಯೋಗಳಿಗೆ ಸಾಕ್ಷಿಯಾದ ಮತ್ತು ನಾಲ್ವರು ಅಭಿಜಾತ ಸಂಗೀತ ನಿರ್ದೇಶಕ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಕೊಡುಗೆ ನೀಡಿದ ದಶಕವೆಂದೇ ಇದನ್ನು ಕನ್ನಡ ಚಿತ್ರರಂಗದಲ್ಲಿ ಗುರುತಿಸಲಾಗುತ್ತದೆ. ಆ ನಾಲ್ವರು ಪ್ರತಿಭೆಗಳೆಂದರೆ ರಾಜನ್‌– ನಾಗೇಂದ್ರ, ವಿಜಯಭಾಸ್ಕರ್‌, ಜಿ.ಕೆ.ವೆಂಕಟೇಶ್ ಹಾಗೂ ಟಿ.ಜಿ. ಲಿಂಗಪ್ಪ ಅವರು.

ಕನ್ನಡ ಚಿತ್ರರಂಗದ ಸಂಗೀತ ಲೋಕವನ್ನು 1950ರಿಂದ ಸುಮಾರು ನಾಲ್ಕೂವರೆ ದಶಕಗಳ ಕಾಲ ಅಕ್ಷರಶಃ ಆಳಿದ ’ಸಂಗೀತ ಸಾಮ್ರಾಟ‘ರೆಂದರೆ ರಾಜನ್‌ –ನಾಗೇಂದ್ರ ಜೋಡಿ. ಇವರು ಮೂಲತಃ ಮೈಸೂರಿನವರು. ಇವರ ತಂದೆ ಬಿ.ರಾಜಪ್ಪ ದೊಡ್ಡ ಸಂಗೀತ ವಿದ್ವಾಂಸರಾಗಿದ್ದವರು. ತಮ್ಮ ಮಕ್ಕಳನ್ನು ಸಂಗೀತದ ಸಹಚರ್ಯದಲ್ಲೇ ಬೆಳೆಸಿದರು. ನಾಗೇಂದ್ರ ಅವರು ತಂದೆ ಮತ್ತು ತಾಯಿಂದ ಹಾಡುಗಾರಿಕೆ ಕಲಿತರೆ, ರಾಜನ್‌ ಪಿಟೀಲು, ವೀಣಾ ವಾದನದಲ್ಲಿ ಪರಿಣತಿ ಗಳಿಸಿಕೊಂಡಿದ್ದರು.

ಇದನ್ನೂ ಓದಿ: ಖ್ಯಾತ ಸಂಗೀತ ನಿರ್ದೇಶಕ ರಾಜನ್ ಇನ್ನಿಲ್ಲ

ಬೆಂಗಳೂರಿನ ಜಯಮಾರುತಿ ವಾದ್ಯ ವೃಂದದಲ್ಲಿ ಸೇರಿ ಅಲ್ಲಿ ಉತ್ತರಾದಿ ಸಂಗೀತ, ನೃತ್ಯ ಸಂಗೀತ ಹಾಗೂ ಲಘು ಸಂಗೀತಗಳನ್ನು ಅಭ್ಯಸಿಸಿ ರಾಜ್ಯದಾದ್ಯಂತ ಅನೇಕ ಸಂಗೀತ ಕಛೇರಿಗಳನ್ನು ನಡೆಸಿ ಹೆಸರುವಾಸಿಯಾಗಿದ್ದರು. ನಂತರ ಜಯಮಾರುತಿ ವಾದ್ಯವೃಂದದ ಜತೆ ಮದರಾಸಿಗೆ ಹೋಗಿ, ಚಲನಚಿತ್ರ ಸಂಗೀತ ನಿರ್ದೇಶಕ ಎಚ್‌.ಆರ್‌. ಪದ್ಮನಾಭಶಾಸ್ತ್ರಿ ಅವರ ನೇತೃತ್ವದಲ್ಲಿ ಸಂಗೀತ ನಿರ್ದೇಶನವನ್ನು ವೃತ್ತಿಯಾಗಿ ಆರಂಭಿಸಿದರು. ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಅವರ ತಂದೆ ಎಸ್‌.ವಿ. ಶಂಕರ್‌ ಸಿಂಗ್‌ ಮತ್ತು ಶಂಕರ್‌ ಸಿಂಗ್‌ ಅವರ ಸ್ನೇಹಿತ ಬಿ.ವಿಠ್ಠಲಾಚಾರ್ಯರು ಹುಟ್ಟುಹಾಕಿದ ‘ಮಹಾತ್ಮ’ ಪಿಕ್ಚರ್ಸ್ ಸಂಸ್ಥೆ ನಾಡಿಗೆ ಪರಿಚಯಿಸಿದ ಪ್ರತಿಭೆಗಳಲ್ಲಿ ಈ ‘ಸಂಗೀತ ಸಾಮ್ರಾಟ'ರು ಪ್ರಮುಖರು.

ಈ ಇಬ್ಬರು ಸಹೋದರರು ಎರಡು ದೇಹ ಮತ್ತು ಒಂದು ಆತ್ಮ ಎನ್ನುವಂತಿದ್ದರು. ಬಿ. ವಿಠ್ಠಲಾಚಾರ್ಯರ ನಿರ್ದೇಶನದ ಮಹಾತ್ಮ ಸಂಸ್ಥೆಯ ‘ಸೌಭಾಗ್ಯಲಕ್ಷ್ಮಿ’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುವ ಮೂಲಕ ರಾಜನ್– ನಾಗೇಂದ್ರ ಜೋಡಿ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಹೊರಹೊಮ್ಮಿದರು. ಕನ್ನಡ ಚಿತ್ರಗಳ ನಿರ್ಮಾಣ ಚಟುವಟಿಕೆ ಮದರಾಸು ಕೇಂದ್ರೀತವಾಗಿರುವವರೆಗೂ ಅಲ್ಲೇ ನೆಲೆ ನಿಂತು ಕನ್ನಡ ಮತ್ತು ತೆಲುಗಿನ ನೂರಾರು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದರು. ಹಲವು ತಮಿಳು ಮತ್ತು ಒಂದು ಸಿಂಹಳೀಯ ಭಾಷೆಯ ಚಿತ್ರಕ್ಕೂ ಇವರು ಸಂಗೀತ ನಿರ್ದೇಶನ ಮಾಡಿದ್ದಾರೆ.

1974ರಲ್ಲಿ ತೆರೆಕಂಡ ದೊರೈರಾಜ್- ಎಸ್.ಕೆ ಭಗವಾನ್ ಜೋಡಿ ನಿರ್ದೇಶ ಮತ್ತು ಡಾ ರಾಜ್‍ಕುಮಾರ್, ಮಂಜುಳಾ. ಕಲ್ಪನಾ ನಟನೆಯ  'ಎರಡು ಕನಸು' ಚಿತ್ರದ ಸಂಗೀತ ನಿರ್ದೇಶನಕ್ಕೆ 1973-74ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು. ರಾಜನ್‌ ನಾಗೇಂದ್ರ ಸಂಯೋಜನೆಯ ಹಾಡುಗಳಿಗೆ ಧ್ವನಿಯಾದ ಪ್ರಮುಖ ಗಾಯಕರೆಂದರೆ ಲತಾ ಮಂಗೇಷ್ಕರ್‌, ಎಸ್‌. ಜಾನಕಿ, ಎಸ್‌.ಬಿ. ಬಾಲಸುಬ್ರಹ್ಮಣ್ಯಂ, ಪಿ.ಬಿ. ಶ್ರೀನಿವಾಸ್‌, ಅನುರಾಧಾ ಪೊದ್ವಾಳ್‌ ಅವರು.

ಡಾ.ರಾಜ್‌ಕುಮಾರ್‌, ವಿಷ್ಣುವರ್ಧನ್‌, ಅನಂತ್‌ನಾಗ್‌, ಶ್ರೀನಾಥ್‌, ದ್ವಾರಕೀಷ್‌ ಸೇರಿದಂತೆ ಕನ್ನಡದ ಹಲವು ನಟರ ಚಿತ್ರಗಳಿಗೆ ಇವರು ರಾಜನ್‌– ನಾಗೇಂದ್ರ ಜೋಡಿ ಸಂಗೀತ ನಿರ್ದೇಶನ ನೀಡಿದೆ. ಅದರಲ್ಲೂ ಚಿ. ಉದಯ್‌ ಶಂಕರ್‌ ಸಾಹಿತ್ಯದ ಹಾಡುಗಳಿಗೆ ಹೆಚ್ಚು ಸಂಗೀತ ನೀಡಿದ ಹೆಗ್ಗಳಿಕೆ ಇವರದು.

ಇವರ ಸಂಗೀತ ನಿರ್ದೇಶನದ ‘ನಾ ನಿನ್ನ ಮರೆಯಲಾರೆ’ ಚಿತ್ರದ ‘ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ, ಕಣ್ಣಲ್ಲೇ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ’, ‘ಸಿಹಿಮುತ್ತು ಸಿಹಿಮುತ್ತು ಇನ್ನೊಂದು’, ‘ನನ್ನಾಸೆಯಾ ಹೂವೆ ಬೆಳದಿಂಗಳಾ ಚೆಲುವೆ’, ‘ಎರಡು-ಕನಸು ಚಿತ್ರದ’ದ ‘ಎಂದೆಂದೂ ನಿನ್ನನು ಮರೆತು ಬದುಕಿರಲಾರೆ’, ‘ನಾನಿನ್ನ ಬಿಡಲಾರೆ ಚಿತ್ರ’ದ ‘ಎಂದೆಂದಿಗೂ ನಾ ನಿನ್ನ ಬಿಡಲಾರೆ ಬಾ ಚಿನ್ನ’, ಗಾಳಿಮಾತು ಚಿತ್ರದ ‘ಬಯಸದೆ ಬಳಿ ಬಂದೆ’, ‘ಹೊಂಬಿಸಿಲು’ ಚಿತ್ರದ ‘ಜೀವವೀಣೆ ನೀಡು ಮಿಡಿತದ ಸಂಗೀತ’ ಅಥವಾ ‘ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು’, ‘ಬಂಗಾರದ ಹೂವು‘ ಚಿತ್ರದ ‘ಓಡುವ ನದಿ ಸಾಗರವ ಸೇರಲೆ ಬೇಕು’, ‘ಮೇಯರ್‌ ಮುತ್ತಣ್ಣ’ ಚಿತ್ರದ ‘ಹಳ್ಳಿಯಾದರೇನು ಶಿವಾ... ದಿಲ್ಲಿಯಾದರೇನು ಶಿವಾ...’, ‘ನ್ಯಾಯವೇ ದೇವರು’ ಚಿತ್ರದ ‘ಆಕಾಶವೆ ಬೀಳಲಿ ಮೇಲೆ ನಾನೆಂದು ನಿನ್ನವನು’, ‘ಗಂಧದಗುಡಿ’ ಚಿತ್ರದ ‘ನಾವಾಡುವ ನುಡಿಯೇ ಕನ್ನಡ ನುಡಿ’, ‘ಶ್ರೀನಿವಾಸ ಕಲ್ಯಾಣ’ದ ‘ಪವಡಿಸು ಪರಮಾತ್ಮ ಶ್ರೀ ವೆಂಕಟೇಶ’, ‘ಭಾಗ್ಯವಂತರು’ ಚಿತ್ರದ ‘ನಿನ್ನ ನನ್ನ ಮನವು ಸೇರಿತು, ನನ್ನ ನಿನ್ನ ಹೃದಯ ಹಾಡಿತು’, ‘ಗಿರಿಕನ್ಯೆ’ ಚಿತ್ರದ ‘ನಗು ನಗುತಾ ನೀ ಬರುವೆ’, ‘ಚಂದನದ ಗೊಂಬೆ’ ಚಿತ್ರದ ‘ಆಕಾಶದಿಂದ ಧರೆಗಿಳಿದ ರಂಭೆ’,  ‘ಬೆಂಕಿಯಬಲೆ’ ಚಿತ್ರದ ‘ಬಿಸಿಲಾದರೇನು ಮಳೆಯಾದರೇನು’, ‘ಬಯಲು ದಾರಿ’ ಚಿತ್ರದ  ‘ಎಲ್ಲಿರುವೇ ಮನವ ಕಾಡುವ ರೂಪಸಿಯೇ’, ‘ಬಾನಲ್ಲೂ ನೀನೆ... ಬುವಿಯಲ್ಲೂ ನೀನೆ...’, ‘ಕನಸಲೂ ನೀನೆ... ಮನಸಲೂ ನೀನೆ...’ ಗೀತೆಗಳು....  ಹೀಗೆ ಉಲ್ಲೇಖಿಸುತ್ತಾ ಹೋದರೆ ಒಂದಕ್ಕಿಂತ ಒಂದು ಚೆಂದನೆಯ ಗೀತೆಗಳು. ಒಂದು ಚಿತ್ರದಲ್ಲಿ ಐದು ಹಾಡುಗಳಿದ್ದರೇ ಐದೂ ಹಾಡುಗಳೂ ಹಿಟ್‌ ಆಗುವಂತೆ ಮಾಡಿದ ಯಶಸ್ಸಿನ ಜೋಡಿ ಇವರದು. ರಾಜನ್‌– ನಾಗೇಂದ್ರ ಜೋಡಿಯಲ್ಲಿ ಮೂಡಿಬಂದ ಚಿತ್ರ ಸಂಗೀತವನ್ನು ಚಿತ್ರರಸಿಕರು ಮತ್ತು ಸಂಗೀತ ಪ್ರಿಯರು ಎಂದೆಂದಿಗೂ ಆಸ್ವಾದಿಸುತ್ತಲೇ ಇರುತ್ತಾರೆ.

ರಾಜನ್‌ ಅವರಿಗಿಂತ ವಯಸ್ಸಿನಲ್ಲಿ ಚಿಕ್ಕವರಾದ ನಾಗೇಂದ್ರ ಅವರು ಎರಡು ದಶಕಗಳ ಹಿಂದೆಯೇ ಇಹಲೋಕ ತ್ಯಜಿಸಿದ್ದರು. ಸಹೋದರನ ನಿಧನದ ನಂತರ ರಾಜನ್‌ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡುವುದನ್ನು ಬಹುತೇಕ ನಿಲ್ಲಿಸಿಯೇ ಬಿಟ್ಟರು. ನಂತರದ ದಿನಗಳಲ್ಲಿ ಸಪ್ತಸ್ವರಾಂಜಲಿ ಇನ್‌ಸ್ಟಿಟ್ಯೂಟ್ ಮೂಲಕ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡ ರಾಜನ್ ಹಲವು ಪ್ರತಿಭೆಗಳಿಗೆ ತಮ್ಮ ವಿದ್ಯೆ ಧಾರೆ ಎರೆಯುವ ಕಾಯಕ ನಡೆಸಿದರು. ‘ಸಂಗೀತ ಸಮಾಜಮುಖಿ ಯಾಗಬೇಕು’ ಎಂಬ ರಾಜನ್‌ ಆಶಯದಂತೆ ‘ರಾಜನ್–ನಾಗೇಂದ್ರ ಟ್ರಸ್ಟ್’ ಹುಟ್ಟುಹಾಕಿ, ಈ ಟ್ರಸ್ಟ್‌ನ ಮೊದಲನೆಯ ಯೋಜನೆಯಾಗಿ ‘ದಾಸಗೀತಾಮೃತ’ ಡಿವಿಡಿಯನ್ನು ಹೊರತಂದಿದ್ದರು. ಪುರಂದರದಾಸರ ಕೃತಿಗಳಿಗೆ ಭಗವದ್ಗೀತೆಯ ಶ್ಲೋಕಗಳನ್ನು ಸಮೀಕರಿಸಿರುವ ಈ ಡಿವಿಡಿ ಶಾಸ್ತ್ರೀಯ ಸಂಗೀತ ಪ್ರಿಯರ ಮನಗೆದ್ದಿತ್ತು.

ಅನಾರೋಗ್ಯದಿಂದಾಗಿ ಈಗ ರಾಜನ್‌ ಬದುಕಿನ ಪಯಣ ಮುಗಿಸಿದ್ದು, 50ರ ದಶಕದಲ್ಲಿ ಉದಯಿಸಿದ ಚಿತ್ರಸಂಗೀತದ ಧ್ರುವತಾರೆಗಳಲ್ಲಿನ ಕೊನೆಯ ಕೊಂಡಿ ಕಳಚಿಕೊಂಡಂತಾಗಿದೆ. ಆದರೆ, ಈ ಸ್ವರ ಸಾಮ್ರಾಟರು ನೀಡಿರುವ ಚಿತ್ರಸಂಗೀತದ ಮಹಾಸಾಗರದಲ್ಲಿ ಸಂಗೀತಪ್ರಿಯರ ಪಯಣ ಎಂದಿಗೂ ಮುಗಿಯಲಾರದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು