ಶುಕ್ರವಾರ, ಜೂಲೈ 3, 2020
22 °C

‘ಹಂಗಾಮ 2’ರ ಅಸಲಿ ಕಥೆ ಬಿಚ್ಚಿಟ್ಟ ಪ್ರಿಯದರ್ಶನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಒಂದೂವರೆ ದಶಕದ ಹಿಂದೆ ಬಾಲಿವುಡ್‌ನಲ್ಲಿ ಯಶಸ್ಸು ಕಂಡಿದ್ದ ಕಾಮಿಡಿ ಚಿತ್ರ ‘ಹಂಗಾಮ’. ಇದರ ಸೀಕ್ವೆಲ್‌ ಆದ ‘ಹಂಗಾಮ 2’ ಚಿತ್ರದಲ್ಲಿ ಆಯುಷ್ಮಾನ್ ಖುರಾನಾ, ಕಾರ್ತಿಕ್ ಆರ್ಯನ್, ಸಿದ್ಧಾರ್ಥ್ ಮಲ್ಹೋತ್ರಾ ನಟಿಸಲು ನಿರಾಕರಿಸಿದ ಸಂಗತಿಯನ್ನು ಚಿತ್ರದ ನಿರ್ದೇಶಕ ಪ್ರಿಯದರ್ಶನ್‌ ಬಹಿರಂಗಪಡಿಸಿದ್ದಾರೆ.

‘ಹಂಗಾಮ 2’ ನಿರ್ದೇಶನಕ್ಕೆ ಮುಂದಾದ ಅವರಿಗೆ ಆರಂಭದಲ್ಲೇ ಸ್ಟಾರ್‌ ನಟರಿಂದ ಭಾರಿ ನಿರಾಸೆಯ ಅನುಭವವಾಗಿದೆ. ‘ನಾನು ಐದು ವರ್ಷ ಚಿತ್ರೋದ್ಯಮದಿಂದ ದೂರ ಉಳಿದಿದ್ದೆ. ಇದಕ್ಕಾಗಿಯೇ ಸ್ಟಾರ್‌ ನಟರು ನನ್ನನ್ನು ಔಟ್‌ಡೇಟೆಡ್ ಎಂದು ಭಾವಿಸಿರಬಹುದು. ‘ಹಂಗಾಮ 2’ರ ಪರಿಕಲ್ಪನೆ ಬಗ್ಗೆ ಆಯುಷ್ಮಾನ್, ಕಾರ್ತಿಕ್ ಮತ್ತು ಸಿದ್ಧಾರ್ಥ್ ಸೇರಿದಂತೆ ಬಹಳಷ್ಟು ನಟರಿಗೆ ವಿವರಿಸಿದ್ದೆ. ಅವರೆಲ್ಲರೂ ನಟಿಸಲು ನಿರಾಕರಿಸಿದರು. ಈಗ ಮೀಜಾನ್‌ ಜೆಫ್ರಿ, ಪರೇಶ್‌ ರಾವಲ್‌, ಶಿಲ್ಪಾ ಶೆಟ್ಟಿ, ಪ್ರಣೀತಾ ಸುಭಾಷ್ ಜೊತೆಗೆ ಖುಷಿಯಿಂದ ಚಿತ್ರ ಮಾಡುತ್ತಿದ್ದೇನೆ’ ಎಂಬುದು ಅವರ ವಿವರಣೆ.

‘ಯಾವುದೇ ನಟ– ನಟಿಯರನ್ನು ನನ್ನ ಸಿನಿಮಾದಲ್ಲಿ ನಟಿಸಿ ಎಂದು ಬೇಡುವುದಿಲ್ಲ. ನನ್ನನ್ನು ನಂಬುವವರ ಜತೆ ಸಿನಿಮಾ ಮಾಡುತ್ತೇನೆ’ ಎನ್ನುವುದು ಅವರ ದೃಢವಾದ ಮಾತು.

‘ಮೊದಲ ಭಾಗದ ಕಥೆಗಿಂತ ಎರಡನೇ ಭಾಗದ ಕಥೆ ವಿಭಿನ್ನವಾಗಿದೆ. ಈಗಾಗಲೇ ಶೇಕಡ 80ರಷ್ಟು ಚಿತ್ರೀಕರಣ ಪೂರ್ಣವಾಗಿದೆ. ಹನ್ನೆರಡು ದಿನಗಳ ಚಿತ್ರೀಕರಣ ಬಾಕಿಯಿದೆ. ಕುಲುಮನಾಲಿಯಲ್ಲಿ ಒಂದು ಹಾಡು ಮತ್ತು ಕೆಲವು ದೃಶ್ಯಗಳ ಚಿತ್ರೀಕರಣ ಮಾಡುವ ಯೋಜನೆಯಿದೆ. ಲಾಕ್‌ಡೌನ್‌ ಇರದಿದ್ದರೆ ಇಷ್ಟೊತ್ತಿಗೆ ಚಿತ್ರೀಕರಣ ಮುಗಿಯುತ್ತಿತ್ತು’ ಎಂದಿದ್ದಾರೆ ಪ್ರಿಯದರ್ಶನ್‌.

‘ಹಂಗಾಮ’ದಲ್ಲಿ ಪರೇಶ್ ರಾವಲ್ ಜತೆಗೆ ಶೋಮಾ ಆನಂದ್, ಅಕ್ಷಯ್ ಖನ್ನಾ, ಅಫ್ತಾಬ್ ಶಿವದಾಸಾನಿ ಮತ್ತು ರಿಮಿ ಸೇನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ‘ಹಂಗಾಮ 2’ ಚಿತ್ರಕ್ಕೆ ರತನ್‌ ಜೈನ್‌ ಬಂಡವಾಳ ಹೂಡಿದ್ದಾರೆ. ಆಗಸ್ಟ್‌ 14ಕ್ಕೆ ಚಿತ್ರ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡದ್ದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು