ಭಾನುವಾರ, ಜುಲೈ 25, 2021
25 °C

45ನೇ ಹುಟ್ಟುಹಬ್ಬ ಆಚರಿಸಿಕೊಂಡ ಶಿಲ್ಪಾ ಶೆಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಳುನಾಡಿನ ಕುವರಿ, ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಕುಂದ್ರಾಗೆ 45ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ಬಾರಿ ಮೂರೂವರೆ ತಿಂಗಳ ಮುದ್ದು ಮಗಳು ಸಮೀಶಾ ಶೆಟ್ಟಿ ಕುಂದ್ರಾ ಜೊತೆ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಳ್ಳುತ್ತಿದ್ದಾರೆ.

ಪತಿ ರಾಜ್‌ ಕುಂದ್ರಾ ಹಾಗೂ ತಂಗಿ ಶಮಿತಾ ಶೆಟ್ಟಿ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ವಿಶೇಷ ವಿಡಿಯೊ ಹಂಚಿಕೊಂಡಿದ್ದಾರೆ. ಈ ವಿಡಿಯೊದಲ್ಲಿ ಶಿಲ್ಪಾ ಜೊತೆಗೆ ಕಳೆದ ಸುಂದರ ನೆನಪುಗಳಿವೆ. ‘ನನ್ನ ಪ್ರೀತಿಯ ಹೆಂಡ್ತಿ, ನಿನ್ನ ಪ್ರೀತಿಯಿಂದ ನನ್ನ ಎಲ್ಲಾ ಅಪೂರ್ಣತೆಗಳನ್ನು ಪರಿಪೂರ್ಣಗೊಳಿಸಿರುವೆ. ನಿನ್ನ ನಗುವೇ ನನ್ನಲ್ಲಿ ಬೆಳಕು ಮೂಡಿಸುತ್ತದೆ. ನೀನು ನನ್ನ ಮಕ್ಕಳ ತಾಯಿ ಮಾತ್ರ ಅಲ್ಲ, ನನ್ನ ಜೀವನ, ಹೃದಯದ ರಾಣಿ’ ಎಂದು ಬರೆದುಕೊಂಡಿದ್ದಾರೆ. 

ಶಮಿತಾ ಶೆಟ್ಟಿ ಕೂಡ ತನ್ನ ಅಕ್ಕನಿಗೆ ಸುಂದರ ವಿಡಿಯೊ ಮೂಲಕ ಶುಭಾಶಯ ಕೋರಿದ್ದಾರೆ. ‘ಅಕ್ಕ– ತಂಗಿ ಒಂದೇ ಮರದ ಬೇರೆ ಬೇರೆ ಕೊಂಬೆಗಳು. ಬೇರೆ ಬೇರೆ ದಿಕ್ಕಿನಲ್ಲಿ ಹೋದರೂ, ಬೇರು ಮಾತ್ರ ಒಂದೇ ಆಗಿರುತ್ತದೆ. ಈ ಶಕ್ತಿಯೇ ಕಳೆದು ಹೋದ ನಗು, ಭರವಸೆ ವಾಪಸ್‌ ತಂದುಕೊಡುತ್ತದೆ’ ಎಂದು ಅಕ್ಕನ ಬಗೆಗಿನ ತನ್ನ ಪ್ರೀತಿಯನ್ನು ಹಂಚಿಕೊಂಡಿದ್ದಾರೆ. 

1993ರಲ್ಲಿ ‘ಬಾಜಿಗರ್’‌ ಚಿತ್ರದ ಮೂಲಕ ಬಾಲಿವುಡ್‌ ಪ್ರವೇಶಿಸಿದ ಶಿಲ್ಪಾ ಶೆಟ್ಟಿ, ಆ ಚಿತ್ರದಲ್ಲಿ ಶಾರುಕ್‌ ಖಾನ್‌ ಹಾಗೂ ಕಾಜೊಲ್‌ ಜೊತೆ ನಟಿಸಿದ್ದರು. ಅಲ್ಲಿಂದ ಶುರುವಾದ ಅವರ ಸಿನಿಮಾಯಾನ, ಮನೋಜ್ಞ ನಟನೆಯ ಮೂಲಕ ಹಿಂದಿ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನದೇ ಛಾಪು ಮೂಡಿಸಿದರು. ಮಗ ವಿಹಾನ್‌ ಹುಟ್ಟಿದ ಬಳಿಕ ಸಿನಿಕ್ಷೇತ್ರದಿಂದ ಅಂತರ ಕಾಯ್ದುಕೊಂಡಿದ್ದ ಅವರು, ಯೋಗ  ಹಾಗೂ ಅಡುಗೆ ಕಾರ್ಯಕ್ರಮಗಳ ಮೂಲಕ ಮನೆಮಾತಾಗಿದ್ದಾರೆ. ಈಗ ಲಾಕ್‌ಡೌನ್‌ ಅವಧಿಯಲ್ಲಿ ಟಿಕ್‌ಟಾಕ್ ವಿಡಿಯೊ‌ ಮೂಲಕ ಹೆಚ್ಚು ಸದ್ದು ಮಾಡುತ್ತಿದ್ದಾರೆ. 

ಸೂಪರ್‌ವುಮೆನ್‌ ಎಂದು ಗುರುತಿಸಿಕೊಂಡಿರುವ ಅವರು, ಮಕ್ಕಳಾದ ವಿಹಾನ್‌ ಕುಂದ್ರಾ, ಸಮೀಶಾ ಶೆಟ್ಟಿ ಕುಂದ್ರಾ, ಪತಿ ರಾಜ್‌ ಕುಂದ್ರಾ ಜೊತೆ ಸಂತಸದ ಜೀವನ ನಡೆಸುತ್ತಿದ್ದಾರೆ. 

ಶಾರುಕ್‌ ಖಾನ್‌, ಶ್ರೇಯಾ ಘೋಷಾಲ್, ರಿಧಿಮಾ ಕಪೂರ್‌‌ ಸೇರಿದಂತೆ ಬಾಲಿವುಡ್‌ ಮಂದಿ ಶಿಲ್ಪಾ ಶೆಟ್ಟಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು