ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮನರಂಜನಾ ವಲಯದಲ್ಲಿ ₹3,000 ಕೋಟಿ ಹೂಡಿಕೆ: ಹೊಂಬಾಳೆ ಫಿಲ್ಮ್ಸ್‌ ಘೋಷಣೆ

Last Updated 3 ಜನವರಿ 2023, 7:13 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ‘ರಾಜಕುಮಾರ’, ‘ಕೆ.ಜಿ.ಎಫ್‌’, ‘ಯುವರತ್ನ’, ‘ಕಾಂತಾರ’ ಹೀಗೆ ಸಾಲು ಸಾಲು ಹಿಟ್‌ ಚಿತ್ರಗಳನ್ನು ನೀಡಿರುವ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌, ಹೊಸ ವರ್ಷದ ಆರಂಭದಲ್ಲೇ ಚಿತ್ರರಂಗಕ್ಕೆ ಸಿಹಿಸುದ್ದಿ ನೀಡಿದೆ.

ಮನರಂಜನಾ ವಲಯದ ಸುಸ್ಥಿರ ಅಭಿವೃದ್ಧಿಗಾಗಿ ಮುಂದಿನ ಐದು ವರ್ಷ ₹3,000 ಕೋಟಿ ಹೂಡಿಕೆ ಮಾಡುವುದಾಗಿ ಹೊಂಬಾಳೆ ಗ್ರೂಪ್‌ ಸಂಸ್ಥಾಪಕ ವಿಜಯ್‌ ಕಿರಗಂದೂರು ಸೋಮವಾರ ಘೋಷಿಸಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಈ ಕುರಿತ ಪತ್ರವೊಂದನ್ನು ವಿಜಯ್‌ ಪೋಸ್ಟ್‌ ಮಾಡಿದ್ದಾರೆ. ಕೋವಿಡ್‌ ಸಂಕಷ್ಟದಿಂದ ತತ್ತರಿಸಿ, ಕಳೆದ ವರ್ಷ ಮೈಕೊಡವಿ ಎದ್ದು ನಿಂತಿದ್ದ ಕನ್ನಡ ಚಿತ್ರೋದ್ಯಮಕ್ಕೆ ಈ ಘೋಷಣೆ ಮತ್ತಷ್ಟು ಇಂಬು ನೀಡಿದೆ. ಹೊಂಬಾಳೆ ಫಿಲ್ಮ್ಸ್‌ನ ಈ ಘೋಷಣೆಯನ್ನು ನಿರ್ದೇಶಕರು, ಕಲಾವಿದರು ಹಾಗೂ ನಿರ್ಮಾಣ ಸಂಸ್ಥೆಗಳು ಸ್ವಾಗತಿಸಿವೆ.

‘ಹೊಂಬಾಳೆ ಫಿಲ್ಮ್ಸ್‌ ಪರವಾಗಿ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ನಮ್ಮ ಮೇಲಿಟ್ಟ ಪ್ರೀತಿ ಹಾಗೂ ಬೆಂಬಲಕ್ಕೆ ಧನ್ಯವಾದ. 2022, ಹೊಂಬಾಳೆ ಫಿಲ್ಮ್ಸ್‌ಗೆ ಒಂದು ಅದ್ಭುತವಾದ ವರ್ಷವಾಗಿತ್ತು. ಇದು ಸಾಧ್ಯವಾಗಿದ್ದು ನಿಮ್ಮ ಪ್ರೀತಿ ಮತ್ತು ಬೆಂಬಲದಿಂದಾಗಿ. ಮನರಂಜನಾ ವಲಯದಲ್ಲಿ ಸಿನಿಮಾ ಎನ್ನುವುದು ಪ್ರತಿಯೊಬ್ಬರ ಹರ್ಷದ ಮತ್ತು ಒತ್ತಡವನ್ನು ನಿವಾರಿಸುವ ವೇದಿಕೆಯಾಗಿದೆ. ಜೊತೆಯಲ್ಲಿ ನಮ್ಮ ಸಂಸ್ಕೃತಿ, ಸಂಪ್ರದಾಯ ಹಾಗೂ ಇತಿಹಾಸವನ್ನು ತೋರ್ಪಡಿಸುವ ಶಕ್ತಿಯುತ ಮಾಧ್ಯಮವಾಗಿ ಇದು ಗುರುತಿಸಿಕೊಂಡಿದೆ. ಈ ಹೊಸ ವರ್ಷದ ಹೊಸ್ತಿಲಲ್ಲಿ, ಅದ್ಭುತವಾದ ಕಥೆ ಹಾಗೂ ಅನುಭವವನ್ನು ನೀಡುವ, ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತುವಂಥ ಸಿನಿಮಾಗಳನ್ನು ನಿರ್ಮಾಣ ಮಾಡುವ ಭರವಸೆಯನ್ನು ನೀಡುತ್ತೇವೆ. ಈ ಆಸಕ್ತಿಯ ಕಾರಣದಿಂದಲೇ ಈ ಹೂಡಿಕೆಯನ್ನು ಮಾಡುತ್ತಿದ್ದೇವೆ’ ಎಂದು ವಿಜಯ್‌ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

2018ರಲ್ಲಿ ತೆರೆಕಂಡ ಯಶ್‌ ನಟನೆಯ ‘ಕೆ.ಜಿ.ಎಫ್‌’ ಸಿನಿಮಾ ನಂತರದಲ್ಲಿ ಹೊಂಬಾಳೆ ಫಿಲ್ಮ್ಸ್‌ ಜಗತ್ತಿನೆಲ್ಲೆಡೆ ಸುದ್ದಿ ಮಾಡಿತು. 2022ರಲ್ಲಿ ತೆರೆಕಂಡ ‘ಕೆ.ಜಿ.ಎಫ್‌. ಚಾಪ್ಟರ್‌–2’ ವಿಶ್ವದೆಲ್ಲೆಡೆ 10 ಸಾವಿರಕ್ಕೂ ಅಧಿಕ ಸ್ಕ್ರೀನ್ಸ್‌ನಲ್ಲಿ ತೆರೆಕಂಡು ಮೊದಲ ದಿನವೇ ₹150 ಕೋಟಿಯವರೆಗೆ ಬಾಚಿತ್ತು. ಇದಾದ ಬಳಿಕ ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣ ಮಾಡಿದ್ದ, ರಿಷಬ್‌ ಶೆಟ್ಟಿ ನಟನೆಯ ‘ಕಾಂತಾರ’ ಕೂಡಾ ದೊಡ್ಡ ಮಟ್ಟದ ಯಶಸ್ಸು ಕಂಡಿತು.

ಸದ್ಯ ಪ್ರಭಾಸ್‌ ನಟನೆಯ, ಪ್ರಶಾಂತ್‌ ನೀಲ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ‘ಸಲಾರ್‌’ ಸಿನಿಮಾ ಹೊಂಬಾಳೆ ಕೈಯಲ್ಲಿರುವ ಬಿಗ್‌ ಪ್ರಾಜೆಕ್ಟ್‌. ಜೊತೆಯಲ್ಲೇ ಜಗ್ಗೇಶ್‌ ಅವರು ನಟಿಸಿರುವ, ಸಂತೋಷ್‌ ಆನಂದರಾಮ್‌ ನಿರ್ದೇಶನದ ‘ರಾಘವೇಂದ್ರ ಸ್ಟೋರ್ಸ್‌’, ಶ್ರೀಮುರಳಿ ನಟನೆಯ ‘ಬಘೀರ’, ರಕ್ಷಿತ್‌ ಶೆಟ್ಟಿ ನಟನೆಯ ‘ರಿಚರ್ಡ್‌ ಆ್ಯಂಟನಿ’, ‘ಲೂಸಿಯಾ’ ಪವನ್‌ ನಿರ್ದೇಶನದಲ್ಲಿ, ಫಹಾದ್‌ ಫಾಸಿಲ್‌ ನಟಿಸುತ್ತಿರುವ ‘ಧೂಮಂ’ ಪ್ರಾಜೆಕ್ಟ್‌ಗಳು ಹೊಂಬಾಳೆ ಫಿಲ್ಮ್ಸ್‌ ಕೈಯಲ್ಲಿವೆ. ಯುವರಾಜ್‌ಕುಮಾರ್‌ ನಟನೆಯ, ಸಂತೋಷ್‌ ಆನಂದರಾಮ್‌ ಅವರ ನಿರ್ದೇಶನದ ಹೊಸ ಚಿತ್ರವನ್ನೂ ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣ ಮಾಡುತ್ತಿದೆ. ಜೊತೆಯಲ್ಲಿ ಕಾಲಿವುಡ್‌ನಲ್ಲೂ ಕೆಲವು ಪ್ರಾಜೆಕ್ಟ್‌ಗಳನ್ನು ಹೊಂಬಾಳೆ ಕೈಗೆತ್ತಿಕೊಂಡಿದೆ. ಇವೆಲ್ಲದರ ಬಳಿಕ ‘ಕೆ.ಜಿ.ಎಫ್‌ ಚಾಪ್ಟರ್‌–3’ ಪ್ರಾಜೆಕ್ಟ್‌ ಹೊಂಬಾಳೆ ಪಟ್ಟಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT