ಸೋಮವಾರ, ಅಕ್ಟೋಬರ್ 26, 2020
23 °C

ಸಂಜಯ್‌ ದತ್ ಜನ್ಮದಿನಕ್ಕೆ ಕೆಜಿಎಫ್‌ ಚಿತ್ರತಂಡದ ಗಿಫ್ಟ್‌ ಏನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ ನಟ ಸಂಜಯ್ ದತ್‌ ‘ಕೆಜಿಎಫ್‌ ಚಾಪ್ಟರ್‌ 2’ ಚಿತ್ರದಲ್ಲಿ ‘ಅಧೀರ’ನ ಪಾತ್ರಕ್ಕೆ ಬಣ್ಣ ಹಚ್ಚಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಸೂರ್ಯವರ್ಧನ್ ‘ಕೆಜಿಎಫ್‌ ಚಾಪ್ಟರ್ 1’ರ ಪ್ರಮುಖ ಖಳನಾಯಕ. ಈತನ ಸಹೋದರನೇ ಅಧೀರ. ಸೂರ್ಯವರ್ಧನ್‌ನ ಸಾವಿನ ಬಳಿಕ ‘ನರಾಚಿ’ ಗಣಿಯ ಅಧಿಕಾರದ ಗದ್ದುಗೆಗೇರುವುದು ಆತನ ಪುತ್ರ ಗರುಡ. ಈತನನ್ನು ಸುಫಾರಿ ಪಡೆದ ರಾಕಿ ಭಾಯ್‍(ಯಶ್‌) ಹತ್ಯೆ ಮಾಡುತ್ತಾನೆ. ಅಧೀರನ ಪ್ರವೇಶವಾಗುವುದು ಚಾಪ್ಟರ್‌ 2ರಲ್ಲಿ. ಇದಕ್ಕೆ ಸಂಜು ಜೀವ ತುಂಬಿದ್ದಾರೆ.

ಅಂದಹಾಗೆ ಜುಲೈ 29ರಂದು ಸಂಜಯ್‌ ದತ್‌ ಅವರ ಹುಟ್ಟುಹಬ್ಬ. ಅಂದು ಬೆಳಿಗ್ಗೆ 10ಗಂಟೆಗೆ ಸಂಜು ಜನ್ಮದಿನಕ್ಕೆ ಸ್ಪೆಷಲ್‌ ಗಿಫ್ಟ್ ನೀಡುವುದಾಗಿ ಹೇಳಿರುವ ಹೊಂಬಾಳೆ ಫಿಲ್ಮ್ಸ್‌, ‘ಕ್ರೂರತೆಯ ಅನಾವರಣ’ ಎಂಬ ಬರಹವಿರುವ ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಿದೆ. ನಿರ್ದೇಶಕ ಪ್ರಶಾಂತ್‌ ನೀಲ್‌ ಕೂಡ ‘ಇರುವುದೊಂದೇ ಕ್ರೂರತೆಯ ಮಾರ್ಗ’ ಎಂದು ಟ್ವೀಟ್‌ ಮಾಡಿರುವುದು ಕುತೂಹಲ ಕೆರಳಿಸಿದೆ.

ಕಳೆದ ವರ್ಷ ಸಂಜಯ್‌ ದತ್‌ ಅವರ ಜನ್ಮದಿನದಂದು ಸಂಜು ‘ಅಧೀರ’ನ ಲುಕ್‌ನಲ್ಲಿರುವ ಪೋಸ್ಟರ್‌ ಅನ್ನು ಬಿಡುಗಡೆ ಮಾಡಲಾಗಿತ್ತು. ಈ ಬಾರಿ ಹೊಂಬಾಳೆ ಫಿಲ್ಸ್ಮ್‌ ಟೀಸರ್‌, ಟ್ರೇಲರ್‌ ಅಥವಾ ಪೋಸ್ಟರ್‌ ಪೈಕಿ ಯಾವುದನ್ನು ಬಿಡುಗಡೆ ಮಾಡಲಿದೆ ಎಂಬ ಕೌತುಕ ಸಿನಿಪ್ರಿಯರಲ್ಲಿ ಮನೆ ಮಾಡಿದೆ.

ಈಗಾಗಲೇ, ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಅಕ್ಟೋಬರ್‌ 23ರಂದು ಸಿನಿಮಾದ ಬಿಡುಗಡೆಗೆ ದಿನಾಂಕವೂ ನಿಗದಿಯಾಗಿದೆ. ಕೋವಿಡ್‌–19 ಪರಿಣಾಮ ಚಿತ್ರದ ಟೀಸರ್‌ ಮತ್ತು ಟ್ರೇಲರ್‌ ಬಿಡುಗಡೆಯೂ ಆಗಿಲ್ಲ. ಹಾಗಾಗಿ, ಸಂಜಯ್ ದತ್‌ ಜನ್ಮದಿನಕ್ಕೆ ಹೊಸ ಪೋಸ್ಟರ್‌ ಜೊತೆಗೆ ಟೀಸರ್‌ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂಬುದು ಪ್ರೇಕ್ಷಕರ ಲೆಕ್ಕಾಚಾರ.

ಎರಡನೇ ಅಧ್ಯಾಯದಲ್ಲಿ ಹಿಂಸೆ ಹಾಗೂ ಆ್ಯಕ್ಷನ್ ದೃಶ್ಯಗಳು ಹೆಚ್ಚಿರುವ ಬಗ್ಗೆ ಈಗಾಗಲೇ ಚಿತ್ರದ ನಿರ್ಮಾಪಕರು ಪೋಸ್ಟರ್‌ ಮೂಲಕವೇ ಖಚಿತಪಡಿಸಿದ್ದಾರೆ. ಹಾಗಾಗಿ, ಯಶ್‌ ಮತ್ತು ಸಂಜಯ್‌ ದತ್‌ ತೆರೆಯ ಮೇಲೆ ಹೇಗೆ ಅಬ್ಬರಿಸಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಿಗೆ ಕಾಡುತ್ತಿದೆ.

ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳದಲ್ಲಿ ತೆರೆಕಂಡ ‘ಕೆಜಿಎಫ್‌ ಚಾಪ್ಟರ್‌ 1’ ಸಿನಿಮಾ ₹ 200 ಕೋಟಿಗೂ ಹೆಚ್ಚು ಗಳಿಕೆ ಕಂಡಿತ್ತು. ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ₹ 100 ಕೋಟಿಗೂ ಹೆಚ್ಚು ಗಳಿಕೆ ಕಂಡ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಶ್ರೀನಿಧಿ ಶೆಟ್ಟಿ ಈ ಚಿತ್ರದ ನಾಯಕಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು