ಕಳೆದ ಶುಕ್ರವಾರ(ಜುಲೈ 21) ಬಿಡುಗಡೆಯಾದ ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಹಲವು ಥಿಯೇಟರ್‌ಗಳಲ್ಲಿ ಹೌಸ್‌ಫುಲ್ ಪ್ರದರ್ಶನಗಳನ್ನು ಸಿನಿಮಾ ಕಾಣುತ್ತಿದ್ದು, ಹಲವು ತಿಂಗಳುಗಳಿಂದ ಬಿಕೋ ಎನ್ನುತ್ತಿದ್ದ ಚಿತ್ರಮಂದಿರಗಳು ಸಾವಿರಾರು ಪ್ರೇಕ್ಷಕರನ್ನು ಸೆಳೆಯುತ್ತಿವೆ.
‘ಚಿತ್ರ ಬಿಡುಗಡೆ ದಿನದಂದು 155 ಪರದೆಗಳಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಇದೀಗ ಈ ಪರದೆಗಳ ಸಂಖ್ಯೆ 285 ಮೀರಿದೆ. ಒಟ್ಟು 3 ಲಕ್ಷಕ್ಕೂ ಅಧಿಕ ಟಿಕೆಟ್ ಮಾರಾಟವಾಗಿದೆ’ ಎಂದಿದ್ದಾರೆ ಚಿತ್ರದ ನಿರ್ಮಾಪಕ ವರುಣ್ ಗೌಡ.
ಸಾಮಾನ್ಯ ಪ್ರೇಕ್ಷಕರಷ್ಟೇ ಅಲ್ಲದೆ ಸೆಲೆಬ್ರಿಟಿಗಳೂ ಸಿನಿಮಾ ಕಂಡು ಮೆಚ್ಚಿದ್ದಾರೆ. ಶಿವರಾಜ್‌ಕುಮಾರ್, ರಕ್ಷಿತ್ ಶೆಟ್ಟಿ, ರಮೇಶ್ ಅರವಿಂದ್ ಸೇರಿದಂತೆ ಹಲವು ನಟರು ಚಿತ್ರತಂಡದ ಬೆನ್ನುತಟ್ಟಿದ್ದಾರೆ. ರಾಜ್ಯದಲ್ಲಿ ಮತ್ತಷ್ಟು ಏಕಪರದೆ ಚಿತ್ರಮಂದಿರಗಳಲ್ಲಿ ಸಿನಿಮಾಗೆ ಬೇಡಿಕೆ ಬಂದಿದೆ ಎಂದಿದ್ದಾರೆ ವರುಣ್. ಸಿನಿಮಾ ವಿದೇಶಗಳಲ್ಲಿಯೂ ಬಿಡುಗಡೆಯಾಗುತ್ತಿದೆ. ಕೆನಡಾ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ದುಬೈ, ಸಿಂಗಪುರ ಸೇರಿದಂತೆ ಮತ್ತಷ್ಟು ದೇಶಗಳಲ್ಲೂ ಹುಡುಗ್ರ ಹಾವಳಿ ಕಾಣಿಸಿಕೊಳ್ಳಲಿದೆ. ಚಿತ್ರವನ್ನು ರಕ್ಷಿತ್ ಶೆಟ್ಟಿ ತಮ್ಮ ‘ಪರಂವಃ ಪಿಕ್ಚರ್ಸ್’ ಮೂಲಕ ಪ್ರಸ್ತುತಪಡಿಸಿದ್ದು, ವರುಣ್ ಸ್ಟುಡಿಯೋಸ್ ಹಾಗೂ ಗುಲ್ಮೋಹರ್ ಫಿಲಂಸ್ ಬ್ಯಾನರ್‌ನಡಿ ಪ್ರಜ್ವಲ್ ಬಿ.ಪಿ, ವರುಣ್ ಕುಮಾರ್ ಗೌಡ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕೆ. ಕಶ್ಯಪ್ ಬಂಡವಾಳ ಹೂಡಿ ನಿರ್ಮಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.