ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer: ಐಎಂಡಿಬಿ ಟಾಪ್‌ 250ರ ಪಟ್ಟಿಯಲ್ಲಿ ಇರೋದೇ ಕನ್ನಡದ ಎರಡು ಚಿತ್ರಗಳು!

ಅಕ್ಷರ ಗಾತ್ರ

ಬೆಂಗಳೂರು: ಐಎಂಡಿಬಿಯ ಭಾರತದ ಟಾಪ್‌ 250 ಚಿತ್ರಗಳಲ್ಲಿ ಕನ್ನಡದ ಕೇವಲ ಎರಡು ಚಿತ್ರಗಳಷ್ಟೇ ಸ್ಥಾನ ಪಡೆದಿವೆ. ಪ್ರಶಾಂತ್‌ ನೀಲ್‌ ನಿರ್ದೇಶನದ ಕೆಜಿಎಫ್‌ 1 ಮತ್ತು ಉಗ್ರಂ ಚಿತ್ರಗಳು ಕ್ರಮವಾಗಿ 132 ಮತ್ತು 219ನೇ ಸ್ಥಾನ ಪಡೆದಿವೆ. ಆದರೆ ಒಂದೇ ಒಂದು ಕನ್ನಡದ ಚಿತ್ರ ಟಾಪ್‌ ನೂರಲ್ಲಿ ಸ್ಥಾನ ಪಡೆಯದಿರುವುದು ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿದೆ.

ರಾಜಮೌಳಿ ನಿರ್ದೇಶನದ ತೆಲುಗು ಚಿತ್ರ 'ಈಗ' 215ನೇ ಸ್ಥಾನದಲ್ಲಿದೆ. ಕಿಚ್ಚ ಸುದೀಪ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ ಎಂಬ ಕಾರಣಕ್ಕೆ ಕನ್ನಡ ಚಿತ್ರ ರಸಿಕರಿಗೆ ಟಾಪ್‌ 250ರಲ್ಲಿ ಮತ್ತೊಂದು ನಮ್ಮ ಸಿನಿಮಾವಿದೆ ಎಂಬ ನೆಮ್ಮದಿ ಸಿಕ್ಕಿದೆ.

ಟಾಪ್‌ 10ರಲ್ಲಿ ತಮಿಳಿನ 3, ಮಲಯಾಳಂನ 2, ತೆಲುಗಿನ 1 ಚಿತ್ರಗಳು ಇವೆ. ಸತ್ಯಜಿತ್‌ ರೇ ನಿರ್ದೇಶನದ ಬಂಗಾಳಿ ಚಿತ್ರಗಳಾದ ಪಥೆರ್‌ ಪಾಂಚಾಲಿಹಾಗೂ ದಿ ವರ್ಲ್ಡ್‌ ಆಫ್‌ ಅಪು, ನಾನಾ ಪಾಟೇಕರ್‌ ಅಭಿನಯದ ಮರಾಠಿ ಚಿತ್ರ ನಟಸಾಮ್ರಾಟ್ ಟಾಪ್‌-10ರಲ್ಲಿ ಸ್ಥಾನ ಪಡೆದಿವೆ.

1987ರಲ್ಲಿ ಮಣಿರತ್ನಂ ನಿರ್ದೇಶನದಲ್ಲಿ, ಕಮಲ್‌ ಹಾಸನ್‌ ನಟನೆಯ 'ನಾಯಕನ್‌' ತಮಿಳು ಚಿತ್ರವು ಟಾಪ್‌ 250ರ ಮೊದಲ ಸ್ಥಾನದಲ್ಲಿದೆ. ಸತ್ಯಜಿತ್‌ ರೇ ನಿರ್ದೇಶನದ ಪಥೆರ್‌ ಪಾಂಚಾಲಿ ಚಿತ್ರವು 2ನೇ ಸ್ಥಾನದಲ್ಲಿದೆ. 2018ರಲ್ಲಿ ಬಿಡುಗಡೆಯಾದ ಮಾರಿ ಸೆಲ್ವರಾಜ್‌ ನಿರ್ದೇಶನದ ಪರಿಯೇರುಂ ಪೆರುಮಾಳ್‌ 3ನೇ ಸ್ಥಾನದಲ್ಲಿದೆ. ಸುಂದರ್‌ ಸಿ ನಿರ್ದೆಶನದಲ್ಲಿ ಕಮಲ್‌ ಹಾಸನ್‌, ಮಾಧವನ್‌ ನಟಿಸಿರುವ ಅನ್ಬೆ ಶಿವನ್‌ ನಂತರದ ಸ್ಥಾನದಲ್ಲಿದೆ.

ಮೊದಲ ಐದರ ಪೈಕಿ ಮೂರು ಚಿತ್ರಗಳು ತಮಿಳು ಸಿನಿಮಾಗಳಾಗಿದ್ದು, ಅವುಗಳಲ್ಲಿ ಎರಡು ಚಿತ್ರಗಳು ಕಮಲ್‌ ಹಾಸನ್‌ ನಟನೆಯ ಚಿತ್ರಗಳು ಎಂಬುದು ವಿಶೇಷ. 6ನೇ ಸ್ಥಾನವನ್ನು ತೆಲುಗಿನ C/0 ಕಾಂಚರಪಾಲೆಂ ಹೊಂದಿದೆ. ವೆಂಕಟೇಶ್‌ ಮಹಾ ನಿರ್ದೇಶನದಲ್ಲಿ 2018ರಲ್ಲಿ ಸಿನಿಮಾ ತೆರೆ ಕಂಡಿತ್ತು. ಇವೆಲ್ಲವೂ ಐಎಂಡಿಬಿ ರೇಟಿಂಗ್ಸ್‌ 8.5 ಹೊಂದಿವೆ. ಮೋಹನ್‌ ಲಾಲ್‌ ಅಭಿನಯದ ಮಣಿಚಿತ್ರತಾಳು ಮತ್ತು ಕಿರೀಡಂ ಕ್ರಮವಾಗಿ 8 ಮತ್ತು 9ನೇ ಸ್ಥಾನದಲ್ಲಿವೆ.

ಐಎಂಡಿಬಿ ರೇಟಿಂಗ್ಸ್‌ ಅಧಿಕೃತ ಬಳಕೆದಾರರು ನೀಡುವ ದತ್ತಾಂಶದ ಮೇಲೆ ನಿರ್ಧಾರಗೊಳ್ಳುತ್ತದೆ. ಬಳಕೆದಾರರು ರೇಟಿಂಗ್ಸ್‌ ನೀಡಿದಂತೆ ಟಾಪ್‌-250 ಪಟ್ಟಿಯೂ ಪರಿಷ್ಕೃತಗೊಳ್ಳುತ್ತದೆ.

ಏನಿದು ಐಎಂಡಿಬಿ?
ಐಎಂಡಿಬಿ ಎಂದರೆ ಇಂಟರ್ನೆಟ್‌ ಮೂವಿ ಡೇಟಾ ಬೇಸ್‌ ಎಂದಾಗಿದೆ. ಐಎಂಡಿಬಿ ಸಿನಿಮಾ ರಂಗದ ಅತ್ಯಂತ ಉತ್ತಮ ಗುಣಮಟ್ಟದ ರೇಟಿಂಗ್ಸ್‌ ಸಂಸ್ಥೆ ಎಂದು ಗುರುತಿಸಿಕೊಂಡಿದೆ. ಅಂತರರಾಷ್ಟ್ರೀಯ ಚಲನಚಿತ್ರಗಳು, ದೂರದರ್ಶನ ಕಾರ್ಯಕ್ರಮಗಳು, ಸಿನಿ ರಂಗದ ಸೆಲೆಬ್ರಿಟಿಗಳು, ನಿರ್ದೇಶಕ, ನಿರ್ಮಾಪಕರ ಮಾಹಿತಿಗಳನ್ನು ಒಳಗೊಂಡ ಅಂತರ್ಜಾಲ ದತ್ತಾಂಶ ಸಂಗ್ರಹ ಜಾಲತಾಣವಾಗಿದೆ.

1990ರಲ್ಲಿ ಆರಂಭಗೊಂಡ ಐಎಂಡಿಬಿಯಲ್ಲಿ ಯಾವುದೇ ಭಾಷೆಯ ಚಲನಚಿತ್ರ ಬಿಡುಗಡೆಗೊಂಡರೆ ಅದರ ಬಗೆಗಿನ ಸಂಕ್ಷಿಪ್ತ ಮಾಹಿತಿ ಹಾಗೂ ಚಿತ್ರದ ಟ್ರೈಲರ್‌ಅನ್ನು ಬಿಡುಗಡೆ ಮಾಡುತ್ತದೆ. ಚಲನಚಿತ್ರಗಳ ವಿಮರ್ಶೆ, ಕಥಾ ಸಾರಾಂಶ ಹಾಗೂ ಅಂಕ(ರೇಟಿಂಗ್‌) ನೀಡುತ್ತದೆ. ಅಭಿರುಚಿಯ ಸಿನಿಮಾ ಪ್ರೇಮಿಗಳು ಮೊದಲು ಐಎಂಡಿಬಿ ರೇಟಿಂಗ್ಸ್‌ ಪರಿಶೀಲಿಸಿ ಮುಂದುವರಿಯುತ್ತಾರೆ.

ಐಎಂಡಿಬಿ ರೇಟಿಂಗ್ಸ್‌ ನೀಡುವುದು ಹೇಗೆ?
ಐಎಂಡಿಬಿಯಲ್ಲಿ ದಾಖಲಾತಿ ಹೊಂದಿದ ಬಳಕೆದಾರರು ಸಿನಿಮಾಗಳಿಗೆ 1ರಿಂದ 10ರ ನಡುವೆ ಅಂಕಗಳನ್ನು ನೀಡುತ್ತಾರೆ. ಎಲ್ಲ ಬಳಕೆದಾರರು ನೀಡಿದ ರೇಟಿಂಗ್ಸ್‌ ಅನ್ನು ಲೆಕ್ಕ ಮಾಡಿ 10 ಅಂಕಗಳಿಗೆ ಎಷ್ಟು ಎಂಬುದನ್ನು ನಿರ್ಧರಿಸಲಾಗುತ್ತದೆ. ಒಬ್ಬ ಬಳಕೆದಾರನಿಗೆ ಒಂದು ಬಾರಿ ಮಾತ್ರ ಅಂಕವನ್ನು ನೀಡಲು ಸಾಧ್ಯ. ತಾನು ನೀಡಿದ ಅಂಕವನ್ನು ಪುನಃ ಬದಲಿಸಲು ಅವಕಾಶವಿದೆ. ಆದರೆ ಆತ ನೀಡಿದ್ದ ಅಂಕ ಬದಲಾಗುತ್ತದೆಯೇ ಹೊರತು ಹೆಚ್ಚುವರಿ ಅಂಕವಾಗಿ ಪರಿಗಣನೆಗೆ ಬರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT