ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದಿತಾ ಕನ್ನಡದ ರೀತಿ

Last Updated 21 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

‘ಬೆಂಗಳೂರು ನನ್ನ ಇಷ್ಟದ ನಗರಗಳಲ್ಲಿ ಒಂದು. ಇಲ್ಲಿ ಓಡಾಡುವಾಗ ಒಂದು ಸಣ್ಣ ವಿಶ್ವಕ್ಕೆ ಭೇಟಿ ಕೊಟ್ಟಂತೆ ಭಾಸವಾಗುತ್ತದೆ. ಇಲ್ಲಿ ಕಮರ್ಷಿಯಲ್‌ ಸಿನಿಮಾಗಳಷ್ಟೇ ಚೆನ್ನಾಗಿ ಕಲಾತ್ಮಕ ಸಿನಿಮಾಗಳೂ ಓಡುತ್ತವೆ. ಇದು, ಇಲ್ಲಿನ ಪ್ರೇಕ್ಷಕರ ಪ್ರೌಢ ಮನೋಭಾವವನ್ನು ಸೂಚಿಸುತ್ತದೆ. ‘ದೇವಿರಿ’ ಸಿನಿಮಾ ಚಿತ್ರೀಕರಣದ ವೇಳೆ ಬೆಂಗಳೂರಿಗೆ ಓಡಾಡುತ್ತಿದ್ದೆ. ಅದು ಬಿಟ್ಟರೆ ವಿಚಾರ ಸಂಕಿರಣ, ಸಂವಾದಗಳಿಗೆ ಬರುತ್ತಿರುತ್ತೇನೆ. ಇಲ್ಲಿಗೆ ಬಾರದೇ ಇದ್ದರೂ ಇಲ್ಲಿ ನನ್ನ ಸ್ನೇಹಿತರ ಬಳಗವಿದೆ. ಹಾಗಾಗಿ ಬೆಂಗಳೂರು ನನ್ನೊಳಗೆ ಸದಾ ಜೀವಂತವಾಗಿರುತ್ತದೆ.

‘ನನಗೆ ಕನ್ನಡ ಗೊತ್ತಿಲ್ಲ. ಆದ್ರೆ ‘ದೇವೀರಿ’ ಚಿತ್ರೀಕರಣದ ವೇಳೆ ಅಲ್ಪಸ್ವಲ್ಪ ಕನ್ನಡ ಅರ್ಥವಾಗ್ತಿತ್ತು. ಈಗ ಮರೆತಿದೆ ಬೇಜಾರು ಮಾಡ್ಕೋಬೇಡಿ.

‘ಕಮರ್ಷಿಯಲ್‌ ಚಿತ್ರಗಳಿಗಿಂತಲೂ ಕಲಾತ್ಮಕ ಚಿತ್ರಗಳು ಜನರ ಮನಸ್ಸಿನಲ್ಲಿ ಹೆಚ್ಚು ನಿಲ್ಲುತ್ತವೆ. ಚರ್ಚೆಗೊಳಗಾಗುತ್ತವೆ. ‘ಫಿರಾಕ್‌’ ಚಿತ್ರ ಇದಕ್ಕೆ ಉತ್ತಮ ನಿದರ್ಶನ. ಈಗ ‘ಮಾಂಟೊ’ ಬಗ್ಗೆ ಮಾತನಾಡೋಣ. ಭಾರತ–ಪಾಕಿಸ್ತಾನ ಕಂಡ ಅಸಾಮಾನ್ಯ ಕತೆಗಾರ ಸಾದತ್‌ ಹಸನ್‌ ಮಾಂಟೊ. ಅವರ ಅನೇಕ ಕತೆಗಳನ್ನು ಓದಿದ್ದೇನೆ. ಅವರ ಬಗ್ಗೆಯೇ ಸಿನಿಮಾ ಮಾಡಬೇಕೆಂಬ ತೀರ್ಮಾನ ಮಾಡಿದ್ದು 2012ರಲ್ಲಿ.

ಭಾರತ ಸ್ವತಂತ್ರಗೊಂಡ ದಿನಗಳಲ್ಲಿ ಸಾಮಾಜಿಕ ಸ್ಥಿತಿಗತಿ, ಭಾರತ ಮತ್ತು ಪಾಕಿಸ್ತಾನದಲ್ಲಿ ವಾಸ್ತವವಾಗಿ ಜನರು ಅನುಭವಿಸುತ್ತಿದ್ದ ಕಷ್ಟಕೋಟಲೆಗಳನ್ನು, ಅವುಗಳ ಒಳನೋಟಗಳನ್ನು ಮಾಂಟೊನಂತೆ ಚಿತ್ರಿಸಿರುವವರು ವಿರಳ. ಭೀಭತ್ಸ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ, ಹರಿತವಾಗಿ ಮಾಂಟೊ ತಮ್ಮ ಕತೆಗಳ ಮೂಲಕವೇ ಹೇಳಿದ್ದಾರೆ. ಪಾಕಿಸ್ತಾನದಲ್ಲಿ ನೆಲೆಸುವ ನಿರ್ಧಾರ ಮಾಡಿ ಅಲ್ಲಿಗೆ ತೆರಳಿದರೂ ಪಾಕ್‌ನಲ್ಲಿ ಅವರು ಧರ್ಮಭ್ರಷ್ಟರ ಹಣೆಪಟ್ಟಿ
ಯಲ್ಲೇ ನಲುಗಿದರು. ಭಾರತವೂ ಅವರನ್ನು ಒಪ್ಪಿಕೊಳ್ಳಲಿಲ್ಲ. ಆದರೆ ಮುಂಬೈನಲ್ಲಿ ನೆಲೆಸಿದ್ದ ವೇಳೆ ಅಂದರೆ 1946ರ ಹೊತ್ತಿಗೆ ಅವರು ಹಿಂದಿ ಚಿತ್ರರಂಗದ ಉತ್ತುಂಗದಲ್ಲಿದ್ದರು. ಮಾಂಟೊ ಅವರು ಬರಿಯ ಓದಿಗೆ ದಕ್ಕುವವರಲ್ಲ. ಅವರ ಜೀವನಕತೆಯಿಂದ 1946–1952ರವರೆಗಿನ ಅಧ್ಯಾಯಗಳನ್ನಷ್ಟೇ ಮೊಗೆದುಕೊಂಡು ಸಿನಿಮಾ ಮಾಡುವುದೇ ದೊಡ್ಡ ಸವಾಲಾಗಿತ್ತು.

‘ಮೇಕಿಂಗ್‌ ಆಫ್‌ ಮಾಂಟೊ’ ಅದ್ಭುತ ಅನುಭವಗಳ ಮೂಟೆ. ಸಿನಿಮಾ ಮಾಡಿ ಮುಗಿಸಿದಾಗ ನಾನು ಇನ್ನಷ್ಟು ಗಟ್ಟಿಯಾಗಿದ್ದೆ. ನಿರ್ದೇಶನ ಮತ್ತು ನಿರ್ಮಾಣದ ವೇಳೆ ಹೆಜ್ಜೆ ಹೆಜ್ಜೆಗೂ ಸವಾಲು ಎದುರಾಗುತ್ತಿತ್ತು. ಶತ್ರುರಾಷ್ಟ್ರಗಳು ಎಂದೇ ಬಿಂಬಿಸಲಾಗಿರುವ ಎರಡು ರಾಷ್ಟ್ರಗಳ ನಡುವಿನ ಸೂಕ್ಷ್ಮ ಸಂಗತಿಗಳನ್ನು ಸಿನಿಮಾ ಮೂಲಕ ಹೇಳುವುದೇ ದೊಡ್ಡ ಸವಾಲು. 1946ರ ಹೊತ್ತಿನ ಮುಂಬೈ ನಗರ 1947 ಮತ್ತು 1955ರ ನಡುವಿನ ಪಾಕಿಸ್ತಾನ, ಲಾಹೋರ್‌ನ್ನು ಈಗ ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಜೀವನ ಚರಿತ್ರೆಯನ್ನು ಸಿನಿಮಾ ಮಾಡಲು ಹೊರಟ ನಿರ್ದೇಶಕಿಗೆ ಇದೆಲ್ಲ ಪ್ರಜ್ಞೆಯಲ್ಲಿರಲೇಬೇಕಲ್ಲ. ಪಾಕಿಸ್ತಾನದೊಳಗಿನ ಚಿತ್ರಣಗಳ ಚಿತ್ರೀಕರಣಕ್ಕೆ ಅವಕಾಶ ಸಿಗಲಿಲ್ಲ. ಹಾಗಾಗಿ ನಮ್ಮ ಲಾಹೋರ್‌ ಭಾಗದಲ್ಲಿಯೇ ಚಿತ್ರೀಕರಣ ಮಾಡಬೇಕಾಯಿತು. ಒಟ್ಟಿನಲ್ಲಿ ಇಡೀ ಸಿನಿಮಾ ನಿರ್ಮಾಣವಾಗಿ ಮೊದಲ ಪ್ರತಿಯನ್ನು ನೋಡಿದಾಗ ‘ಮಾಂಟೊ’ ಇಷ್ಟು ಚೆನ್ನಾಗಿ ರೂಪುಗೊಂಡಿದೆಯೇ ಎಂದು ಕುಣಿದಾಡಿದ್ದೆ.

‘ಮಾಂಟೊ’ದ ಪೋಸ್ಟರ್‌ ಬಿಡುಗಡೆ ಮಾಡಿದ್ದು, 2017ರ ಕಾನ್‌ ಚಿತ್ರೋತ್ಸವದಲ್ಲಿ. ‘ಅನ್‌ಸರ್ಟನ್‌ ರಿಗಾರ್ಡ್ಸ್‌’ ವಿಭಾಗದಿಂದ ಭಾರತದಿಂದ ಆಯ್ಕೆಯಾಗಿದ್ದ ಏಕೈಕ ಚಿತ್ರವಿದು. ಇದು ‘ಮಾಂಟೊ’ಗೆ ಸಿಕ್ಕಿದ ದೊಡ್ಡ ಗೌರವ. ಅದಾದ ಬಳಿಕ 2017ರ ಮಾರ್ಚ್‌ನಲ್ಲಿ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ ‘ಡಿಫೆನ್ಸ್‌ ಆಫ್‌ ಫ್ರೀಡಂ’ ಎಂಬ ಕಿರುಚಿತ್ರ ಇದೇ ವರ್ಷದ ಕಾನ್‌ ಚಿತ್ರೋತ್ಸವದಲ್ಲಿ ಪೂರ್ವಪ್ರದರ್ಶನ ಕಂಡಿತ್ತು. ಇವೆಲ್ಲವೂ ‘ಮಾಂಟೊ’ಗೆ ಅಂತರರಾಷ್ಟ್ರೀಯ ಮಟ್ಟದ ಮಾನ್ಯತೆ ತಂದುಕೊಟ್ಟವು. ಚಿತ್ರಮಂದಿರಗಳಲ್ಲೂ ‘ಮಾಂಟೊ’ ಚೆನ್ನಾಗಿ ಓಡುತ್ತಾನೆ ಎಂಬ ನಿರೀಕ್ಷೆ ನನ್ನದು.

ಗೌರಿ ಹತ್ಯೆ ಮತ್ತು ಮಾಂಟೊ
‘ಗೌರಿ ಲಂಕೇಶ್‌ ಹತ್ಯೆ ಸುದ್ದಿ ಕೇಳಿ ಬೆಚ್ಚಿಬಿದ್ದಿದ್ದೆ. ಏನಾಗುತ್ತಿದೆ ನಮ್ಮ ದೇಶದಲ್ಲಿ, ಸಮಾಜದ ತಪ್ಪು–ಒಪ್ಪುಗಳನ್ನು ಎತ್ತಿ ಆಡಿದ ಹೆಣ್ಣುಮಗಳೊಬ್ಬಳನ್ನು ಮನೆ ಬಾಗಿಲಲ್ಲೇ ನೇರಾನೇರ ಗುಂಡು ಹಾರಿಸಿ ಕೊಲ್ಲುತ್ತಾರೆಂದರೆ...ಓ ಮೈ ಗಾಡ್‌!

‘ನಾನು ಕವಿತಾ ಲಂಕೇಶ್‌ ಅವರ ‘ದೇವಿರಿ’ಯಲ್ಲಿ ನಟಿಸುವ ವೇಳೆ ಗೌರಿ ಜೊತೆ ನಾನೂ ಮಾತನಾಡಿದ್ದೆ. ಧರ್ಮ, ರಾಜಕೀಯ, ಲಿಂಗಭೇದ, ಚಿಂತನೆಗಳ ಸಮರಗಳ ಮಧ್ಯೆ ಮನುಷ್ಯತ್ವವನ್ನು ಮರೆತು ತಮ್ಮ ವಿರೋಧಿಯನ್ನು ಸಲೀಸಾಗಿ ಕೊಲ್ಲುವಂತಹ ಮನಸ್ಥಿತಿ ಬೆಳೆಯುತ್ತಿದೆ. ಇಂತಹ ಬೆಳವಣಿಗೆಗಳನ್ನು ನೋಡಿದಾಗ ಮಾಂಟೊನಂತಹ ಪ್ರಬುದ್ಧ ಬರಹಗಾರನನ್ನು ಓದಿದ ಮನಸ್ಸುಗಳು ಖಂಡಿತಾ ಹಾಗೆ ಯೋಚಿಸಲಾರವು ಎಂಬುದು ನನಗೆ ಅನಿಸಿಕೆ.

ತಾಯಿಯ ಹೊಣೆಗಾರಿಕೆಯಲ್ಲಿ ರಾಜಿಯಿಲ್ಲ
ಚಿತ್ರರಂಗ, ಕಿರುಚಿತ್ರ, ಸಾಕ್ಷ್ಯಚಿತ್ರಗಳ ನಿರ್ಮಾಣ ಮತ್ತು ನಿರ್ದೇಶನ, ಬರವಣಿಗೆ, ಸಮಾಜಸೇವೆ, ವಿಚಾರ ಸಂಕಿರಣಗಳು ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವುದು ಅತ್ಯಂತ ದೊಡ್ಡ ಸವಾಲು.

ಇವೆಲ್ಲದಕ್ಕಿಂತ ಮುಖ್ಯವಾಗಿ ನಾನು ಎಂಟು ವರ್ಷದ ಮಗನ ತಾಯಿ. ಅವನು ಶಾಲಾ ಚಟುವಟಿಕೆಗಳಲ್ಲಿ ಹಿಂದೆ ಉಳಿಯದಂತೆ ನೋಡಿಕೊಳ್ಳಬೇಕು, ಬೆಳಿಗ್ಗಿನ ನಾಷ್ಟಾ, ಲಂಚ್‌ ಬಾಕ್ಸ್‌ಗಳು ಮತ್ತು ಎಲ್ಲಾ ಪುಸ್ತಕಗಳನ್ನು ಬ್ಯಾಗ್‌ನಲ್ಲಿಟ್ಟುಸಮಯಕ್ಕೆ ಸರಿಯಾಗಿ ಶಾಲೆಗೆ ಕಳುಹಿಸುವವರೆಗೆ ನಾನು ಅವನ ತಾಯಿ ಅಷ್ಟೇ ಆಗಿರುತ್ತೇನೆ. ಆಮೇಲೆ ನನ್ನ ಪ್ರಪಂಚ ತೆರೆದುಕೊಳ್ಳುತ್ತದೆ. ಇವೆಲ್ಲದರ ಮಧ್ಯೆ ನನ್ನ ಬಗ್ಗೆಯೂ ಗಮನ ಕೊಡಬೇಕಲ್ಲ? ತಾಯಿ ಒಬ್ಬಳೇ ಎಲ್ಲಾ ಜವಾಬ್ದಾರಿ ಹೊರಬೇಕಾದ ಕುಟುಂಬದಲ್ಲಿ ಎಲ್ಲಾ ಹೆಣ್ಣು ಮಕ್ಕಳ ಕಷ್ಟ ಹೀಗೇ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT