ಶುಕ್ರವಾರ, ಅಕ್ಟೋಬರ್ 30, 2020
19 °C

ಭಾರತದ ಮೊದಲ ಆಸ್ಕರ್‌ ಪ್ರಶಸ್ತಿ ವಿಜೇತೆ ಭಾನು ಅಥೈಯಾ ವಿಧಿವಶ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಭಾರತದ ಮೊದಲ ಆಸ್ಕರ್ ಪ್ರಶಸ್ತಿ ಪುರಸ್ಕೃತೆ, ವಸ್ತ್ರ ವಿನ್ಯಾಸಕಿ ಭಾನು ಅಥೈಯಾ ದೀರ್ಘಕಾಲದ ಅನಾರೋಗ್ಯದಿಂದಾಗಿ ಗುರುವಾರ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.

1983ರ ‘ಗಾಂಧಿ’ ಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿ ಪಡೆದಿದ್ದ ಅಥೈಯಾ ನಿದ್ರೆಯಲ್ಲಿದ್ದಾಗಲೇ ಇಹಲೋಕ ತ್ಯಜಿಸಿದ್ದಾರೆ ಎಂದು ಅವರ ಪುತ್ರಿ ರಾಧಿಕಾ ಗುಪ್ತಾ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಅವರ ಅಂತಿಮ ವಿಧಿವಿಧಾನಗಳು ದಕ್ಷಿಣ ಮುಂಬೈನ ಚಂದನ್ವಾಡಿ ಚಿತಾಗಾರದಲ್ಲಿ ಗುರುವಾರ ನಡೆದವು.

‘ಅವರು ಇಂದು ಮುಂಜಾನೆ ನಿಧನರಾದರು. ಎಂಟು ವರ್ಷಗಳ ಹಿಂದೆ ಅವರ ಮೆದುಳಿನಲ್ಲಿ ಗೆಡ್ಡೆಯೊಂದು ಕಾಣಿಸಿಕೊಂಡಿತ್ತು. ದೇಹದ ಒಂದು ಭಾಗಕ್ಕೆ ಪಾರ್ಶ್ವವಾಯುವಾಗಿ ಕಳೆದ ಮೂರು ವರ್ಷಗಳಿಂದ ಅವರು ಹಾಸಿಗೆ ಹಿಡಿದಿದ್ದರು,’ ಎಂದು ಅವರ ಪುತ್ರಿ ಹೇಳಿದ್ದಾರೆ.

ಕೊಲ್ಹಾಪುರದಲ್ಲಿ ಜನಿಸಿದ ಅಥೈಯಾ, ಗುರು ದತ್ ಅವರ 1956 ರ ಸೂಪರ್‌ ಹಿಟ್‌ ಚಿತ್ರ ‘ಸಿಐಡಿ’ಯಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿ ವೃತ್ತಿಜೀವನ ಆರಂಭಿಸಿದರು. ಅದೂ ಸೇರಿದಂತೆ ಅಥೈಯಾ 100ಕ್ಕೂ ಹೆಚ್ಚು ಚಿತ್ರಗಳಿಗೆ ವಸ್ತ್ರವಿನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ.

ರಿಚರ್ಡ್ ಅಟೆನ್ಬರೋ ಅವರ ’ಗಾಂಧಿ’ ಚಿತ್ರದಲ್ಲಿನ ಅತ್ಯುತ್ತಮ ವಸ್ತ್ರವಿನ್ಯಾಸಕ್ಕಾಗಿ ಅವರು ಜಾನ್ ಮೊಲ್ಲೊ ಅವರ ಜೊತೆಗೆ ಆಸ್ಕರ್‌ ಪ್ರಶಸ್ತಿ ಪಡೆದಿದ್ದರು. ಪ್ರಶಸ್ತಿಯನ್ನು ಸುರಕ್ಷಿತವಾಗಿ ಕಾಪಾಡುವ ಉದ್ದೇಶದಿಂದ ಅದನ್ನು 2012 ರಲ್ಲಿ ಅಕಾಡೆಮಿಗೆ ಹಿಂದಿರುಗಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು