ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರಂಜೀವಿ ಸರ್ಜಾ ಕುಟುಂಬದ ಕ್ಷಮೆಯಾಚಿಸಿದ ಇಂದ್ರಜಿತ್‌ ಲಂಕೇಶ್

Last Updated 5 ಸೆಪ್ಟೆಂಬರ್ 2020, 14:38 IST
ಅಕ್ಷರ ಗಾತ್ರ

ಬೆಂಗಳೂರು:ಇತ್ತೀಚೆಗಷ್ಟೇ ಅಕಾಲಿಕ ಸಾವಿಗೆ ತುತ್ತಾದ ನಟ ಚಿರಂಜೀವಿ ಸರ್ಜಾ ಅವರ ಹೆಸರನ್ನುಸ್ಯಾಂಡಲ್‌ವುಡ್‌ನ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಪ್ರಸ್ತಾಪಿಸಿದ್ದಕ್ಕೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಶನಿವಾರ ಬಹಿರಂಗ ಕ್ಷಮೆಯಾಚಿಸಿದ್ದಾರೆ.

ಚಲನಚಿತ್ರ ವಾಣಿಜ್ಯಮಂಡಳಿಯ ತುರ್ತು ಕಾರ್ಯಕಾರಿ ಸಮಿತಿ ಸಭೆಯ ನಂತರ ಮಂಡಳಿಯ ಸದಸ್ಯರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ‘ನನ್ನಿಂದ ಚಿರು ಕುಟುಂಬಕ್ಕೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಈಗಾಗಲೇ ನನ್ನ ಹೇಳಿಕೆಯನ್ನು ನಾನು ವಾಪಸ್ ಪಡೆದಿದ್ದೇನೆ. ಚಿರು ನನಗೆ ಆತ್ಮೀಯ ಸ್ನೇಹಿತ ಮತ್ತು ತಮ್ಮ ಇದ್ದಂತೆ.ಚಿರಂಜೀವಿಗೂ ಡ್ರಗ್ ಮಾಫಿಯಾಗೂ ಸಂಬಂಧ ಕಲ್ಪಿಸಿ ಮಾತನಾಡಿರಲಿಲ್ಲ. ಪೋಸ್ಟ್ ಮಾರ್ಟಂ ಆಗಬೇಕಿತ್ತು ಅಂಥ ಹೇಳಿದ್ದೇ. ಆ ಹೇಳಿಕೆಯನ್ನು ನಾನು ಈಗ ವಾಪಸ್ ಪಡೆದಿರುವ’ ಎಂದು ತಿಳಿಸಿದರು.

‘ಚಿರು ಪತ್ನಿ ಮತ್ತು ನಟಿ ಮೇಘನಾ ರಾಜ್ ಪತ್ರ ಬರೆದು ನೋವು ವ್ಯಕ್ತಪಡಿಸಿದ್ದಾರೆ. ಅವರ ತಂದೆ ತಾಯಿ ನನ್ನನ್ನು ಚಿಕ್ಕಂದಿನಲ್ಲಿ ಎತ್ತಿ ಆಡಿಸಿದ್ದಾರೆ. ಚಿರಂಜೀವಿ ಅವರ ಆಕಸ್ಮಿಕ ಸಾವು ನನಗೂನೋವು ತಂದಿತ್ತು. ಆ ನೋವಿನಲ್ಲೇ ಅವರ ಪೋಸ್ಟ್ ಮಾರ್ಟಂ ಮಾಡಬಹುದಿತ್ತು ಅಂತ ಹೇಳಿದ್ದೇ. ಆ ಮಾತು ಅವರ ಕುಟುಂಬಕ್ಕೆ ನೋವುಂಟು ಮಾಡಿದೆ. ಇದಕ್ಕೆ ವಿಷಾದಿಸುತ್ತೇನೆ. ಅದಕ್ಕಾಗಿ ಈಗ ಎಲ್ಲರ ಎದುರು ಕ್ಷಮೆ ಕೋರುತ್ತಿರುವೆ. ಕ್ಷಮೆ ಕೇಳುವುದರಿಂದ ಯಾರೂ ಚಿಕ್ಕವರಾಗುವುದಿಲ್ಲ’ ಎಂದರು.

ಇದಕ್ಕೂ ಮೊದಲು ಮೇಘನಾರಾಜ್‌, ಇಂದ್ರಜಿತ್‌ ಅವರು ಸ್ಯಾಂಡಲ್‌ವುಡ್‌ನ ಡ್ರಗ್ಸ್ ಮಾಫಿಯಾ ಬಗ್ಗೆ ಆರೋಪಿಸುವಾಗ ಚಿರು ಹೆಸರು ಪರೋಕ್ಷವಾಗು ಪ್ರಸ್ತಾಪಿಸಿದ್ದನ್ನು ಖಂಡಿಸಿ ಚಲನಚಿತ್ರ ವಾಣಿಜ್ಯಮಂಡಳಿಗೆ ಪತ್ರ ಬರೆದಿದ್ದರು. ‘ತನ್ನ ಪತಿ ಚಿರಂಜೀವಿ ಸರ್ಜಾ ಬಗ್ಗೆ ಹೇಳಿಕೆ ನೀಡಿದ ಇಂದ್ರಜಿತ್ ಲಂಕೇಶ್ ಬಹಿರಂಗ ಕ್ಷಮೆಯಾಚಿಸಬೇಕು’ ಎಂದು ಪತ್ರದಲ್ಲಿ ಅವರು ಒತ್ತಾಯಿಸಿದ್ದರು.

ನಟರಾದ ದರ್ಶನ್ ಮತ್ತು ಸುದೀಪ್ ಕೂಡ, ಇಂದ್ರಜಿತ್‌ ಹೇಳಿಕೆ ವಿರೋಧಿಸಿ, ‘ನಮ್ಮೊಂದಿಗೆ ಇಲ್ಲದ ವ್ಯಕ್ತಿಯನ್ನು ತೇಜೋವಧೆ ಮಾಡುವುದು ಸರಿಯಲ್ಲ’ ಎಂದಿದ್ದರು. ಇಂದ್ರಜಿತ್‌ ಹೇಳಿಕೆಗೆ ಚಿತ್ರರಂಗದ ಹಲವು ತಾರೆಗಳು ಅಸಮಾಧಾನ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT