ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಕಂಟೆಂಟ್‌ ಚಿತ್ರಕ್ಕೆ ಹಣ ಎಲ್ಲಿಂದ?

Last Updated 26 ಮಾರ್ಚ್ 2023, 20:18 IST
ಅಕ್ಷರ ಗಾತ್ರ

ಬೆಂಗಳೂರು: ಸಿನಿಮಾವನ್ನು ಸಬ್ಸಿಡಿ ಆಸೆಗಷ್ಟೇ ಮಾಡುತ್ತಿದ್ದಾರೆ... ಹೌದೇ? ವಿಷಯ(ಕಂಟೆಂಟ್‌) ಆಧರಿತ ಚಿತ್ರಕ್ಕೆ ಬಜೆಟ್‌ ಹೊಂದಿಸುವುದು ಹೇಗೆ? ಮಾರುಕಟ್ಟೆಯ ಪರ್ಯಾಯಗಳೇನು?

– ಇಂಥ ಹಲವಾರು ಚರ್ಚೆಗಳಿಗೆ ಪ್ರತಿಕ್ರಿಯೆ ನೀಡಲು ಸಜ್ಜಾಗಿದ್ದೇ 14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾನುವಾರ ನಡೆದ ನಿರ್ದೇಶಕರ ಪತ್ರಿಕಾಗೋಷ್ಠಿ ಹಾಗೂ ಸಂವಾದ. ಅದು ಪತ್ರಿಕಾಗೋಷ್ಠಿ ಅನ್ನುವುದಕ್ಕಿಂತ ಒಂದು ಸಂವಾದವಾಗಿಯೇ ಬದಲಾಯಿತು.

‘ಸಿನಿಮಾ ಬಂಡಿ’ (ತೆಲುಗು) ಚಿತ್ರದ ನಿರ್ದೇಶಕ ಪ್ರವೀಣ್‌ ಸಿನಿ ಉದ್ಯಮದ ಒಳಹೊಳಹುಗಳನ್ನು ತೆರೆದಿಟ್ಟರು. ತೆಲುಗು ನೆಲದಲ್ಲಿ ನಿರ್ಮಾಪಕರೇ ನಿರ್ದೇಶಕರಿಗಿಂತ ಹೆಚ್ಚು ಪ್ರಾಬಲ್ಯ ಹೊಂದಿದ್ದಾರೆ. ನಮ್ಮಲ್ಲಿ ಒಳ್ಳೆಯ ಚಿತ್ರಗಳಿಗೆ ಹೂಡಿಕೆ ಮಾಡಲು ಹೂಡಿಕೆದಾರರ ಸಭೆಗಳು ಪ್ರಮುಖ ವೇದಿಕೆ. ಫಿಲ್ಮ್‌ ಬಜಾರ್‌ ಎಂಬ ವೇದಿಕೆಯಲ್ಲಿ ನಾವು ಸದಸ್ಯರಾದರೆ ಸಾಕು. ಆಗಾಗ ನಡೆಯುವ ಸಭೆಗಳಲ್ಲಿ ನಮ್ಮ ಸಿನಿಮಾ ಪರಿಕಲ್ಪನೆಯನ್ನು ಎರಡು ನಿಮಿಷಗಳಲ್ಲ ಪ್ರಸ್ತುತಪಡಿಸಬೇಕು. ನಿರ್ಮಾಪಕರಿಗೆ ಇಷ್ಟವಾದರೆ ಬಂಡವಾಳ ಹೂಡಲು ಮುಂದಾಗುತ್ತಾರೆ. ಕಂಟೆಂಟ್‌ ಏನನ್ನು ಬಯಸುತ್ತದೋ ಅಷ್ಟು ಮಾತ್ರ ವೆಚ್ಚ ಮಾಡಬೇಕು. ಸೌಲಭ್ಯಗಳು ಇವೆ ಎಂದ ಮಾತ್ರಕ್ಕೆ ಎಲ್ಲವನ್ನೂ ಬಳಸಲೇಬೇಕೆಂದೇನಿಲ್ಲ’ ಎಂದರು.

ನಿರ್ದೇಶಕ ಶಿವಧ್ವಜ್ ಶೆಟ್ಟಿ ಮಾತನಾಡಿ, ‘ನಾವು ಕಂಟೆಂಟ್‌ ಏನನ್ನು ಬಯಸುತ್ತದೋ ಅದರ ಇತಿಮಿತಿಯೊಳಗೆ ಪರಿಕರಗಳನ್ನು ಬಳಸುತ್ತೇವೆ. ಉದಾಹರಣೆಗೆ ಹೆಚ್ಚು ಸಂಖ್ಯೆಯ ಲೈಟಿಂಗ್ ಬಳಸಲೇಬೇಕೆಂದಿಲ್ಲ. ನಾನು ಹಗಲು ಬೆಳಕಿನಲ್ಲಿ ಚಿತ್ರೀಕರಿಸಿದ್ದೂ ಇದೆ. ಮನೆಯ ಹೆಂಚು ತೆಗೆದು ಬೆಳಕು ಮೂಡಿಸಿದ್ದೂ ಇದೆ. ಹಣ ಕಡಿಮೆ ಇದ್ದಾಗ ಮನಸ್ಸು ಪ್ರಯೋಗಶೀಲವಾಗುತ್ತದೆ. ಸ್ಥಳೀಯ ಕಲಾವಿದರನ್ನು ಬಳಸುವುದರಿಂದ ಪ್ರಯಾಣ, ವಸತಿ ವೆಚ್ಚವನ್ನು ಉಳಿಸಬಹುದು’ ಎಂದರು.

‘ಸಬ್ಸಿಡಿ ಆಸೆಗೆ ಸಿನಿಮಾ ಮಾಡುವುದನ್ನು ಸಮರ್ಥಿಸುವುದಿಲ್ಲ. ಆ ನಿರೀಕ್ಷೆಯೂ ನಮಗಿರುವುದಿಲ್ಲ. ಆದರೆ, ನಮಗಾದ ವೆಚ್ಚದ ಸ್ವಲ್ಪ ಭಾಗವಾದರೂ ಸಬ್ಸಿಡಿ ಮೂಲಕ ಬರುತ್ತದಲ್ಲವೇ ಎಂಬ ಸಣ್ಣ ಸಮಾಧಾನ ಇರುತ್ತದೆ. ಸಬ್ಸಿಡಿ ಒಂದು ಪ್ರೋತ್ಸಾಹ ಇದ್ದಂತೆ’ ಎಂದರು ನಿರ್ಮಾಪಕ ಅವಿನಾಶ್‌ ಮತ್ತು ನಿರ್ದೇಶಕ ಉಮೇಶ್‌ ಬಡಿಗೇರ್‌. ಶಿವಧ್ವಜ್‌ ಶೆಟ್ಟಿ ಅವರು ಕೂಡಾ ಈ ಮಾತಿಗೆ ದನಿಗೂಡಿಸಿದರು.

ಕೋವಿಡ್‌ ಅವಧಿಯಲ್ಲಿ ಬಳ್ಳಾರಿಯಲ್ಲಿ ಗಂಗಮ್ಮ ಎಂಬ ತುಂಬು ಗರ್ಭಿಣಿ ಬಹು ಅಂಗಾಂಗ ವೈಫಲ್ಯದಿಂದ ಸಾವಿಗೀಡಾದ ಘಟನೆ ಕಾಡಿದ ಪರಿಣಾಮ ‘ಫೋಟೊ’ ಚಿತ್ರ ಮಾಡಲು ಕಾರಣವಾಯಿತು ಎಂದರು ನಿರ್ದೇಶಕ ಉತ್ಸವ್‌ ಗೋನಾವರ.

ನಿರ್ದೇಶಕ ಸಂದೀಪ್‌, ನಟ ರವಿ ಪ್ರಸಾದ್‌ ಸಂವಾದದಲ್ಲಿ ಭಾಗವಹಿಸಿದ್ದರು. ನಿರ್ದೇಶಕ ಪಿ. ಶೇಷಾದ್ರಿ ಸಂವಾದ ನಡೆಸಿಕೊಟ್ಟರು.

***

ಕಥೆಯ ಹಿಂದಿನ ಧ್ವನಿಗಳು

ಸಿನಿಮಾದಲ್ಲಿ ಕಥೆಯನ್ನು ಧ್ವನಿಸುವುದು ಶಬ್ದ ಹಾಗೂ ಶಬ್ದ ಪರಿಣಾಮ. ಈ ಬಗ್ಗೆ ಸಾಕಷ್ಟು ತಾಂತ್ರಿಕ ಪ್ರಾತ್ಯಕ್ಷಿಕೆ ಸಹಿತ ಗೋಷ್ಠಿ ನಡೆಯಿತು. ಶಬ್ದ ವಿನ್ಯಾಸದ ಕುರಿತು ಖ್ಯಾತ ಶಬ್ದ ವಿನ್ಯಾಸಕ ರಂಗನಾಥ್‌ ರವಿ (ಜಲ್ಲಿ ಕಟ್ಟು ಶಬ್ದ ವಿನ್ಯಾಸಕ), ಕಣ್ಣನ್‌ ಗಣಪತ್‌ ವಿವರಣೆ ನೀಡಿದರು.

‘ದೃಶ್ಯವನ್ನು ಅದರ ಸುತ್ತಮುತ್ತಲಿನ ಪರಿಣಾಮಗಳ ಸಹಿತ ಕಟ್ಟಿಕೊಡಬೇಕು. ಚಿತ್ರೀಕರಣ ಸ್ಥಳದಲ್ಲೇ ಧ್ವನಿಮುದ್ರಿಸಿಕೊಳ್ಳುವುದು (ಸಿಂಕ್‌ ಸೌಂಡ್‌) ಒಂದು ವಿಧಾನವಾದರೆ, ಸ್ಟುಡಿಯೋದಲ್ಲಿ ಡಬ್ಬಿಂಗ್‌ ವಿಧಾನ ಇನ್ನೊಂದು. ಮಾತು, ಸಂಗೀತ ಮತ್ತು ಆಯಾ ಪ್ರದೇಶದ ಶಬ್ದ ಪರಿಣಾಮಗಳನ್ನು ಒಟ್ಟುಗೂಡಿಸಿ ಪರಿಣಾಮಕಾರಿಯಾಗಿ ಕಟ್ಟಿಕೊಡುವುದು ಶಬ್ದ ವಿನ್ಯಾಸಕನ ಜವಾಬ್ದಾರಿ. ಹೀಗಾಗಿ ನಾವು ಸಾವಿರಾರು ಧ್ವನಿ ಮಾದರಿಗಳನ್ನು ಸಂಗ್ರಹಿಸಿಟ್ಟುಕೊಂಡಿರುತ್ತೇವೆ’ ಎಂದು ಉಭಯ ಶಬ್ದ ವಿನ್ಯಾಸಕರು ಹೇಳಿದರು.

‘ಕೆಲವೊಮ್ಮೆ ಸಣ್ಣ ಸಣ್ಣ ಶಬ್ದಗಳನ್ನು ಬೇರೆ ಬೇರೆ ಸಮಯ, ಸನ್ನಿವೇಶದಲ್ಲಿ ಧ್ವನಿ ಮುದ್ರಿಸಬೇಕಾಗುತ್ತದೆ. ಯಾವುದೋ ಶಬ್ದ ಸಹಜವಾಗಿ ಸಿಗುವುದಿಲ್ಲವೆಂದಾದಾಗ ಅದೇ ಪರಿಣಾಮ ನೀಡುವ ಪರಿಕರಗಳನ್ನು ಬಳಸಿ ಶಬ್ದ ಸೃಷ್ಟಿಸಬೇಕು. ಖಾಲಿ ಬಾಟಲಿ, ಮರದ ತುಂಡು, ಪ್ಲಾಸ್ಟಿಕ್‌, ಕಾಗದ, ಸೈಕಲ್‌ ಪಂಪ್‌, ಇತ್ಯಾದಿ ಬಳಸಿ ಧ್ವನಿ ಮುದ್ರಿಸಿ, ಅದನ್ನು ಸಂಕಲಿಸಿ ಬೇಕಾದ ಕಡೆ ಅಳವಡಿಸುತ್ತೇವೆ’ ಎಂದರು.

‘ಒಂದು ಚಿತ್ರದಲ್ಲಿ ಬಳಸಿದ್ದನ್ನು ಅಂಥದ್ದೇ ಸನ್ನಿವೇಶ ಇನ್ನೊಂದು ಚಿತ್ರದಲ್ಲಿ ಬಂದಾಗ ಬಳಸುವುದಿದೆ. ಆದರೆ, ಪರಿಣಾಮವೇ ಬೇರೆ ಇರುವಂತೆ ನೋಡಿಕೊಳ್ಳಬೇಕು. ಒಟಿಟಿ ವೇದಿಕೆಗೆ ಸಿನಿಮಾ ಕೊಡುವಾಗ ಧ್ವನಿ ಪ್ರಮಾಣವನ್ನು ತಗ್ಗಿಸಿ ಕೊಡಬೇಕಾಗುತ್ತದೆ. ಏಕೆಂದರೆ ವೀಕ್ಷಕನ ಉಪಕರಣ (ಮೊಬೈಲ್‌/ ಟಿವಿ/ ಕಂಪ್ಯೂಟರ್‌) ಇಷ್ಟೊಂದು ಗಾಢವಾದ ಧ್ವನಿ ಪ್ರಮಾಣವನ್ನು ತಡೆದುಕೊಳ್ಳುವ ಅಥವಾ ಹೊರ ಹೊಮ್ಮಿಸುವ ಸಾಮರ್ಥ್ಯ ಹೊಂದಿರುವುದಿಲ್ಲ. ಹಾಗಾಗಿ ಶಬ್ದದ ಪರಿಣಾಮಕ್ಕೆ ಚ್ಯುತಿ ಬಾರದಂತೆ ರೂಪಿಸಬೇಕಾಗುತ್ತದೆ’ ಎಂದು ಉಭಯ ಶಬ್ದ ವಿನ್ಯಾಸಕರು ಹೇಳಿದರು.

ನಿರ್ದೇಶಕ ಅಭಯಸಿಂಹ ಸಂವಾದ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT