ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಗಿಣಿ ಜೊತೆಗೆ ನನಗೆ ಸ್ನೇಹವಿಲ್ಲ: ನಟ ಯೋಗೇಶ್‌ ಸ್ಪಷ್ಟನೆ

Last Updated 22 ಸೆಪ್ಟೆಂಬರ್ 2020, 12:51 IST
ಅಕ್ಷರ ಗಾತ್ರ

‘ಡ್ರಗ್ಸ್‌ ಜಾಲಕ್ಕೂ ಮತ್ತು ನನಗೂ ಯಾವುದೇ ಸಂಬಂಧವಿಲ್ಲ. ಈ ಪ್ರಕರಣದಲ್ಲಿ ಅನಗತ್ಯವಾಗಿ ನನ್ನ ಹೆಸರನ್ನು ಸೇರ್ಪಡೆಗೊಳಿಸಲಾಗಿದೆ’ ಎಂದು ‘ಲೂಸ್‌ ಮಾದ’ ಖ್ಯಾತಿಯ ಯೋಗೇಶ್‌ ಪ್ರತಿಕ್ರಿಯಿಸಿದ್ದಾರೆ.

ಮಂಗಳವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘2013ರಲ್ಲಿ ರಾಗಿಣಿ ಜೊತೆಗೆ ಒಂದು ಸಿನಿಮಾದಲ್ಲಿ ನಟಿಸಿದ್ದೇನೆ. ಆ ನಂತರ ಆಕೆಗೆ ಒಂದು ಮೆಸೇಜ್‌ ಕೂಡ ರವಾನಿಸಿಲ್ಲ. ಆಕೆಯ ಜೊತೆಗೆ ನನಗೆ ಸ್ನೇಹವೂ ಇಲ್ಲ. ನನಗೂ ಕುಟುಂಬ ಮತ್ತು ಮಗುವಿದೆ’ ಎಂದು ಹೇಳಿದರು.

‘ಡ್ರಗ್ಸ್‌ ವಿಷಯ ಸಂಬಂಧ ನನಗೆ ಐಎಸ್‌ಡಿ ಪೊಲೀಸರಿಂದ ನೋಟಿಸ್‌ ಬಂದಿರುವುದು ಅಚ್ಚರಿ ತಂದಿದೆ. ವಿಚಾರಣೆಗೆ ಹಾಜರಾಗಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಯಾರ ಬಗ್ಗೆಯೂ ನನ್ನ ಬಳಿ ಕೇಳಿಲ್ಲ. ಮಾಡಬಾರದ ಚಟ ಮಾಡಿದ್ದೆ; ಈಗ ಬಿಟ್ಟಿದ್ದೇನೆ ಎಂದು ಸಂದರ್ಶನವೊಂದಲ್ಲಿ ಹೇಳಿದ್ದೆ. ನನ್ನ ಪ್ರಕಾರ ಮಾಡಬಾರದ ಚಟ ಅಂದರೆ ಸಿಗರೇಟ್‌ ಸೇದುವುದು ಮತ್ತು ಮದ್ಯ ಸೇವನೆ ಮಾಡುವುದು ಎಂದರ್ಥ. ಇದರ ಆಧಾರದ ಮೇಲೆಯೇ ನನಗೆ ನೋಟಿಸ್‌ ನೀಡಿರುವ ಸಾಧ್ಯತೆಯಿದೆ’ ಎಂದು ವಿವರಿಸಿದರು.

‘2011–12ರ ಅವಧಿಯಲ್ಲಿ ನಾನು ಪಾರ್ಟಿಗಳಿಗೆ ಹೋಗಿದ್ದೆ. ಆ ನಂತರದ ವರ್ಷಗಳಲ್ಲಿ ಯಾವುದೇ ಪಾರ್ಟಿಗೆ ಹೋಗಿಲ್ಲ. ನನ್ನ ಪಾಸ್‌ಪೋರ್ಟ್‌ ಅವಧಿಯೂ ಮುಗಿದಿದೆ. ಹಾಗಾಗಿ, ವಿದೇಶಿ ಪ್ರವಾಸಕ್ಕೂ ತೆರಳಿಲ್ಲ. ನಾನು ಭಾಗವಹಿಸಿದ್ದ ಪಾರ್ಟಿಗಳಲ್ಲಿ ಮತ್ತು ನನ್ನ ಸ್ನೇಹಿತರ ಬಳಗದಲ್ಲಿ ಡ್ರಗ್ಸ್‌ ಸೇವನೆಯಂತಹ ಪ್ರಕರಣ ನಡೆದಿಲ್ಲ. ಯಾರೊ ಒಬ್ಬರು ತಪ್ಪು ಮಾಡಿದ್ದಾರೆ. ಅದಕ್ಕಾಗಿ ಇಡೀ ಕನ್ನಡ ಚಿತ್ರರಂಗವನ್ನೇ ದೂಷಿಸುವುದು ಸರಿಯಲ್ಲ’ ಎಂದು ಹೇಳಿದರು.

ಯೋಗೇಶ್‌ ಅಮ್ಮ ಹೇಳಿದ್ದೇನು?

‘ಡ್ರಗ್ಸ್‌ ಜಾಲದಲ್ಲಿ ನನ್ನ ಮಗನ ಹೆಸರು ತಳುಕು ಹಾಕಿಕೊಂಡಿರುವುದಕ್ಕೆ ಆಶ್ಚರ್ಯವಾಗಿದೆ. ನಾವು ಕಾನೂನನ್ನು ಗೌರವಿಸುತ್ತೇವೆ. ಮತ್ತೆ ವಿಚಾರಣೆಗೆ ಕರೆದರೆ ನನ್ನ ಪುತ್ರ ಹಾಜರಾಗುತ್ತಾನೆ’ ಎಂದು ಯೋಗೇಶ್‌ ಅವರ ತಾಯಿ, ಕಿರುತೆರೆ ನಟಿ ಅಂಬುಜಾ ಪ್ರತಿಕ್ರಿಯಿಸಿದ್ದಾರೆ.

‘ಇತ್ತೀಚೆಗೆ ನನ್ನ ಮಗ ಅಸಿಡಿಟಿ ಕಾರಣದಿಂದಾಗಿ ಕಾಫಿ, ಟೀ ಸೇವನೆಯನ್ನೂ ಬಿಟ್ಟಿದ್ದಾನೆ. ಮದುವೆಯಾದ ಬಳಿಕ ಆತ ಯಾವುದೇ ಪಾರ್ಟಿಗಳಿಗೂ ಹೋಗಿಲ್ಲ. ಎಲ್ಲರ ವಿಚಾರಣೆಯಂತೆ ಆತನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ‌. ಅಧಿಕಾರಿಗಳ ಮುಂದೆ ಏನನ್ನು ಹೇಳಿದ್ದಾನೆ ಎಂಬುದು ನನಗೆ ಗೊತ್ತಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT