ಬುಧವಾರ, ಜೂನ್ 3, 2020
27 °C

ನಾನಿಗೆ ಜೈ ಅಂದ ಶ್ರದ್ಧಾ ಶ್ರೀನಾಥ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನ್ನಡದ ಚೆಲುವೆ ಶ್ರದ್ಧಾ ಶ್ರೀನಾಥ್‌ ಮೊದಲ ಚಿತ್ರದಲ್ಲೇ ತೆಲುಗು ಚಿತ್ರ ಅಭಿಮಾನಿಗಳ ಮನಸೂರೆ ಮಾಡಿದ್ದಾರೆ. ಚಂದನವನದ ಈ ಪ್ರತಿಭೆ ಈಗ ಟಾಲಿವುಡ್‌ ಚಿತ್ರ ನಿರ್ದೇಶಕರ ಗಮನ ಸೆಳೆದಿದ್ದಾರೆ. ‘ಜೆರ್ಸಿ’ ಚಿತ್ರದಲ್ಲಿ ಶ್ರದ್ಧಾ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿರುವುದು ಇದಕ್ಕೆ ಕಾರಣ. ಆದರೆ ಇದೇ ವೇಳೆ ಅವರ ಒಂದು ಹೇಳಿಕೆ ಸಣ್ಣ ಸಂಚಲನ ಮೂಡಿಸಿದೆ. ಅದೇನು ಗೊತ್ತೇ?

ಮೊನ್ನೆ ಹೈದರಾಬಾದ್‌ನಲ್ಲಿ ‘ಜೆರ್ಸಿ’ ಸಿನಿಮಾದ ಪ್ರಮೋಷನ್‌ಗಾಗಿ ಕಾರ್ಯಕ್ರಮ ಆಯೋಜನೆಯಾಗಿತ್ತು. ಅದರಲ್ಲಿ ಶ್ರದ್ಧಾ, ನಾನಿ ಮತ್ತು ಕನ್ನಡದ ನಟ ಯಶ್ ನಡುವೆ ನಿಮ್ಮ ಆಯ್ಕೆ ಯಾರು ಎಂದು ಕೇಳಿದ್ದಕ್ಕೆ, ಯಶ್‌ ಅಷ್ಟಾಗಿ ಪರಿಚಯವಿಲ್ಲ. ನಾನಿ ಜೊತೆ ‘ಜೆರ್ಸಿ’ ಚಿತ್ರ ಮಾಡಿರುವ ಕಾರಣ ಅವರನ್ನು ಬಲ್ಲೆ. ನನ್ನ ಆಯ್ಕೆ ನಾನಿ’ ಎಂದು ಶ್ರದ್ಧಾ ಉತ್ತರಿಸಿದ್ದಾರೆ.

‘ಕೆಜಿಎಫ್‌ ಸಿನಿಮಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದರೂ ಅದರ ನಾಯಕನಟ ಯಶ್‌ ವೈಯಕ್ತಿಕವಾಗಿ ನನಗೆ ಪರಿಚಯವಿಲ್ಲ. ಅವರನ್ನು ಒಂದು ಬಾರಿಯಷ್ಟೇ ಭೇಟಿಯಾಗಿದ್ದೇನೆ. ಆದರೆ ನಾನಿ ಅವರೊಂದಿಗೆ ಕೆಲಸ ಮಾಡಿರುವ ಕಾರಣ ಅವರನ್ನು ಬಲ್ಲೆ. ಹೀಗಾಗಿ ಯಶ್‌ ಮತ್ತು ನಾನಿ ಅವರ ಮಧ್ಯೆ ನನ್ನ ಆಯ್ಕೆ ನಾನಿ’ ಎಂದು ತಮ್ಮ ಆಯ್ಕೆಯನ್ನು ಶ್ರದ್ಧಾ ಸಮರ್ಥಿಸಿಕೊಂಡಿದ್ದಾರೆ.

ಯಶ್‌ ಗಳಿಸಿರುವ ತಾರಾ ವರ್ಚಸ್ಸು ಅವರ ಕಠಿಣ ಪರಿಶ್ರಮದ ಫಲವಾಗಿ ಬಂದಿರುವುದು. ಕಿರುತೆರೆಯ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟವರು ಅವರು. ಕೆಜಿಎಫ್‌ ಚಿತ್ರದ ಮೂಲಕ ಕನ್ನಡದ ಚಿತ್ರಗಳ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿಕೊಟ್ಟವರು ಎಂದು ಶ್ರದ್ಧಾ ಮನತುಂಬಿ ಹೇಳಿದ್ದಾರೆ. 

ಈ ‘ಯೂ ಟರ್ನ್‌’ ಬೆಡಗಿ ‘ಮಿಲನ್‌ ಟಾಕೀಸ್‌’ ಮೂಲಕ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಎಲ್ಲಾ ಕಡೆ ತನ್ನ ಆತ್ಮವಿಶ್ವಾಸ ತುಂಬಿದ ನಟನೆಯಿಂದಲೇ ಪ್ರೇಕ್ಷಕರನ್ನು ಹಿಡಿದಿಟ್ಟಿರುವ ಶ್ರದ್ಧಾ, ತಾನು ಯಾವುದೇ ಭಾಷೆಯ ಚಲನಚಿತ್ರದಲ್ಲಿ ನಟಿಸಿದರೂ ಭಾಷೆಯ ಕಾರಣಕ್ಕೆ ತಾರತಮ್ಯ ಅಥವಾ ಹೆಚ್ಚು ಕಡಿಮೆ ಎಂಬ ಧೋರಣೆ ತಾಳುವುದಿಲ್ಲ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.