ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 ಕಾಪ್ಪಾನ್ ಚಿತ್ರ ವಿಮರ್ಶೆ| ಇದು ಬೋರೋ ಬೋರು

Last Updated 20 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಚಿತ್ರ: ಕಾಪ್ಪಾನ್ (ತಮಿಳು)
ನಿರ್ಮಾಣ: ಎ. ಸುಭಾಸ್ಕರನ್
ನಿರ್ದೇಶನ: ಕೆ.ವಿ. ಆನಂದ್
ತಾರಾಗಣ: ಸೂರ್ಯ, ಮೋಹನ್‌ಲಾಲ್, ಆರ್ಯ, ಚಿರಾಗ್ ಜಾನಿ. ಸಯೇಷಾ, ಬೊಮನ್ ಇರಾನಿ

ಅನನುಕ್ರಮಣಿಕೆಯಲ್ಲಿ ಸಿನಿಮಾ ನಿರೂಪಿಸುವುದು ಇತ್ತೀಚೆಗೆ ಚಾಳಿಯಾಗುತ್ತಿದೆ. ದೊಡ್ಡ ಬಜೆಟ್‌ನ ಬಹುಭಾಷಾ ಚಿತ್ರ ‘ಸಾಹೋ’ ಈ ಪ್ರಯತ್ನದಲ್ಲಿ ಮುಗ್ಗರಿಸಿರುವ ತಾಜಾ ಉದಾಹರಣೆಯನ್ನು ಇಟ್ಟುಕೊಂಡೇ ‘ಕಾಪ್ಪಾನ್’ ಸಿನಿಮಾವನ್ನು ವಿಭಜಿಸಿ ನೋಡಬೇಕಾಗುತ್ತದೆ.

ಸಿನಿಮಾಟೊಗ್ರಫಿಯ ಮೂಲಕ ದಶಕಗಟ್ಟಲೆ ಛಾಪು ಮೂಡಿಸಿರುವ ಕೆ.ವಿ. ಆನಂದ್ ನಿರ್ದೇಶಕರಾಗಿ ಏರಿಳಿತ ಕಂಡವರು. ಈ ಸಿನಿಮಾ ಅವರ ವೃತ್ತಿಬದುಕಿನ ಗ್ರಾಫ್‌ನಲ್ಲಿ ಇಳಿಮುಖವೇ ಹೌದು. ಕಾಶ್ಮೀರದ ರಾಜಕೀಯ ಸೂಕ್ಷ್ಮ, ಕಾರ್ಪೊರೇಟ್ ಕುಳಗಳ ಕೃತ್ರಿಮ, ಡಬಲ್ ಏಜೆಂಟ್‌ಗಳ ಬುದ್ಧಿಮತ್ತೆ, ಪ್ರಾಮಾಣಿಕ ಪ್ರಧಾನಿ, ಅವರಿಗೆ ರಕ್ಷಕನಾಗಿ ನಿಲ್ಲುವ ‘ಅಂಡರ್‌ಕವರ್’ ಮಿಲಿಟರಿ ಅಧಿಕಾರಿ ನಾಯಕ... ಈ ಎಲ್ಲವುಗಳನ್ನು ಒಳಗೊಂಡ ಚಿತ್ರಕಥೆ ಇದು. ‘ಒನ್‌ಲೈನರ್’ ಚೆನ್ನಾಗಿಯೇ ಇದೆಯಾದರೂ ಅದನ್ನು ಸಿನಿಮಾ ಶಿಲ್ಪಕ್ಕೆ ಒಗ್ಗಿಸುವಲ್ಲಿ ನಿರ್ದೇಶಕರು ಎಡವಿದ್ದಾರೆ.

ಒಂದು ಹೊಡೆದಾಟದ ದೃಶ್ಯ ಮುಗಿದೊಡನೆ ಪ್ರೇಮ ಪಲ್ಲವಿಸಲಿ, ಗಂಭೀರ ದೃಶ್ಯದ ಬೀಸಿನಿಂದ ಪ್ರೇಕ್ಷಕ ಪಾರಾಗಲೆಂದು ದಿಢೀರನೆ ಒಂದು ಹಾಡು ಮೂಡಲಿ ಎಂಬ ಹಳೆಯ ಸೂತ್ರವನ್ನು ಉಜ್ಜುತ್ತಲೇ ಅವರು ಅನನುಕ್ರಮಣಿಕೆಯಲ್ಲಿ ಕಥೆ ಹೇಳಲು ಹೊರಡುತ್ತಾರೆ. ಮೊದಲರ್ಧದಲ್ಲಿ ಈ ಕ್ರಮ ಕುತೂಹಲ ಕೆರಳಿಸುತ್ತದೆ. ಆದರೆ, ಮಧ್ಯಂತರದ ನಂತರ ಎಲ್ಲವೂ ಊಹೆಗೆ ಅನುಸಾರವಾಗಿಯೇ ನಡೆಯುತ್ತವೆ.

ಸ್ಫೋಟದಿಂದಾಗಿ ಪ್ರಧಾನಿಯ ಸಾವು ಸಂಭವಿಸುತ್ತದೆ. ನಂತರ ಅವರ ಮಗ ಕುರ್ಚಿ ಏರುತ್ತಾನೆ. ಆದರೂ ಡಬಲ್‌ ಏಜೆಂಟನ ಹಳೆಯ ಹಾವಳಿ ಮುಂದುವರಿಯುತ್ತದೆ. ನಾಯಕ ಮತ್ತೆ ಹೊಸ ಪ್ರಧಾನಿಯನ್ನೂ ರಕ್ಷಿಸಬೇಕು. ಅದನ್ನು ಹೇಗೆ ಮಾಡುತ್ತಾನೆ ಎನ್ನುವುದು ಕಥನ ಕುತೂಹಲ.

ಕೆ.ವಿ. ಆನಂದ್ ಜತೆಗೂಡಿ ಪಟ್ಟುಕೋಟೈ ಪ್ರಭಾಕರನ್ ಚಿತ್ರಕಥೆಯನ್ನು ರಚಿಸಿ, ಮಾತುಗಳನ್ನು ತಿದ್ದಿದ್ದಾರೆ. ಯಾವ ಮಾತಿನಲ್ಲೂ ‘ಪಂಚ್’ ಇಲ್ಲ. ಮೋಹನ್‌ಲಾಲ್ ಪಾತ್ರವಂತೂ ಟ್ರಿಮ್‌ ಮಾಡಿದ ಗಡ್ಡದ ಹೊರತಾಗಿ ಯಾವ ಪರಿಣಾಮವನ್ನೂ ಉಳಿಸುವುದಿಲ್ಲ. ಸೂರ್ಯ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಅವರ ಅಭಿನಯದಲ್ಲೂ ಹದವಿದೆ. ನಾಯಕಿ ಸಯೇಷಾ ಮಂಕು. ಆರ್ಯ, ಬೊಮನ್ ಇರಾನಿ ಪ್ರತಿಭೆ ವ್ಯರ್ಥವಾಗಿದೆ. ಚಿರಾಗ್ ಜಾನಿ ಮಾತ್ರ ಸೂರ್ಯ ಅವರ ಸಮಕ್ಕೂ ನಟಿಸಿದ್ದಾರೆ. ಹ್ಯಾರಿಸ್ ಜಯರಾಜ್ ಹಾಡುಗಳು ಹಿಡಿದಿಡುವುದಿಲ್ಲ.

ಸರಿಯಾದ ಶಿಲ್ಪವಿಲ್ಲದೆ ನಿರೂಪಣೆಯಲ್ಲಷ್ಟೇ ಪ್ರಯೋಗ ಮಾಡಿದರೆ ಆಗಬಹುದಾದ ಎಲ್ಲ ಎಡವಟ್ಟುಗಳಿಗೂ ಚಿತ್ರದಲ್ಲಿ ದಂಡಿಯಾಗಿ ಉದಾಹರಣೆಗಳು ಸಿಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT