ಸೋಮವಾರ, ಆಗಸ್ಟ್ 15, 2022
28 °C

ವಿಶ್ವವನ್ನೇ ‘ಕಬ್ಜ’ ಮಾಡಲು ಸಜ್ಜಾಗಿದ್ದಾರೆ ಚಂದ್ರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನ್ನಡ ಸೇರಿದಂತೆ ಭಾರತದ ಒಟ್ಟು ಏಳು ಭಾಷೆಗಳಲ್ಲಿ ತೆರೆಯ ಮೇಲೆ ಬರಲು ಸಜ್ಜಾಗುತ್ತಿದೆ ರಿಯಲ್‌ ಸ್ಟಾರ್‌ ಉಪೇಂದ್ರ ನಟನೆಯ ‘ಕಬ್ಜ’ ಚಿತ್ರ. ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಈ ಪ್ಯಾನ್ ಇಂಡಿಯಾ ಚಿತ್ರದ ಪೋಸ್ಟರ್‌ ಇತ್ತೀಚೆಗೆ ಬಿಡುಗಡೆಯಾಗಿದ್ದು, ವಿಶೇಷಪಾತ್ರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ.

ಸುದೀಪ್ ಅವರನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ‘ಭಾರ್ಗವ್‌ ಭಕ್ಷಿ’ ಎಂಬ ಪಾತ್ರವನ್ನು ಕೆತ್ತಿರುವ ನಿರ್ದೇಶಕ ಆರ್‌.ಚಂದ್ರು ಇಡೀ ಭಾರತಕ್ಕೆ ಕನ್ನಡ ಸಿನಿಮಾದ ತಾಕತ್ತು ತೋರಿಸಲು ಸಿದ್ಧತೆ ನಡೆಸಿದ್ದಾರೆ. ‘ಸುದೀಪ್‌ ಹಾಗೂ ಉಪೇಂದ್ರ ಇಬ್ಬರೂ ಪ್ಯಾನ್‌ ಇಂಡಿಯಾ ಹೀರೊಗಳು. ಸುದೀಪ್‌ ಅವರಿಗೆ ಪಾತ್ರವನ್ನು ವಿವರಿಸಿದಾಗ ಇಷ್ಟಪಟ್ಟರು. ಕನ್ನಡ ಸಿನಿಮಾವೊಂದನ್ನು ಈ ಮಟ್ಟಕ್ಕೆ ಮಾಡುತ್ತಿರುವಾಗ ಖಂಡಿತವಾಗಿಯೂ ಬೆಂಬಲವಿದೆ ಎಂದರು. ಚಿತ್ರದ ಮೇಕಿಂಗ್‌ ಬಗ್ಗೆಯೂ ಅವರು ಮೆಚ್ಚುಗೆ ವ್ಯಕ್ತಪಡಿಸಿದರು’ ಎನ್ನುತ್ತಾರೆ ಚಂದ್ರು.

ಕೆಜಿಎಫ್‌ ಸ್ಫೂರ್ತಿ: ‘ಕನ್ನಡ ಚಿತ್ರಗಳು ಮಾರುಕಟ್ಟೆ ಸಣ್ಣದು ಎಂದು ನಾವೇ ಒಂದು ಗಡಿ ಹಾಕಿಕೊಂಡಿದ್ದೆವು. ಚಂದ್ರಲೋಕಕ್ಕೆ ಹೋಗುವ ಕನಸಿದ್ದರೂ ನನ್ನ ಕೈಯಲ್ಲಿ ಟೆಂಪೊವಷ್ಟೇ ಇತ್ತು. ಇದನ್ನು ತೆಗೆದುಕೊಂಡು ನಾನು ಮೈಸೂರುವರೆಗೆ ಹೋಗಬಹುದಿತ್ತು. ಪ್ರಶಾಂತ್‌ ನೀಲ್‌ ಅವರು ರಾಕೆಟ್‌ ಲಾಂಚ್‌ ಮಾಡಿ ಇಲ್ಲಿಂದಲೂ ಚಂದ್ರಲೋಕಕ್ಕೆ ಹೋಗಬಹುದು ಎಂದು ತೋರಿಸಿದರು. ಕೆಜಿಎಫ್‌ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದರು. ಇದನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ನಾವು ಕೆಲಸ ಮಾಡುತ್ತಿದ್ದೇವೆ. ಇದಕ್ಕೆ ಎಲ್ಲರ ಬೆಂಬಲ ಬೇಕು. ಹೀಗಾದಲ್ಲಿ ಮಾತ್ರ ಚಿತ್ರರಂಗ ಬೆಳೆಯಲಿದೆ’ ಎನ್ನುತ್ತಾರೆ.  

‘ನನ್ನ ಈ ಹಿಂದಿನ ಎಲ್ಲ ಸಿನಿಮಾಗಳನ್ನು ಸನ್‌ ಟಿ.ವಿಗೆ ಕೊಟ್ಟಿದ್ದೇನೆ. ಸನ್‌ ಟಿ.ವಿ ಒಡಿಶಾದಲ್ಲಿ ಹೆಚ್ಚಿನ ಟಿಆರ್‌ಪಿ ಹೊಂದಿದೆ. ಜೊತೆಗೆ ಮಹಾರಾಷ್ಟ್ರ ಹಾಗೂ ಒಡಿಶಾದ ಚಿತ್ರಮಂದಿರಗಳಲ್ಲೂ ‘ಕಬ್ಜ’ ಸ್ಥಳೀಯ ಭಾಷೆಯಲ್ಲೇ ತೆರೆಕಾಣಲಿದೆ. ಕಂಟೆಂಟ್‌ ಸಿನಿಮಾಗಳು ಮರಾಠಿ ಭಾಷೆಯಲ್ಲಿ ಚೆನ್ನಾಗಿ ಓಡುತ್ತವೆ. ಅಲ್ಲಿಯೂ ನಮಗೆ ಪ್ರೇಕ್ಷಕರಿದ್ದಾರೆ ಎನ್ನುವ ಕಾರಣದಿಂದಲೇ ಒರಿಯಾ ಹಾಗೂ ಮರಾಠಿಯಲ್ಲಿ ಡಬ್‌ ಮಾಡುತ್ತಿದ್ದೇವೆ’ ಎಂದು ಹೇಳುತ್ತಾರೆ ಚಂದ್ರು.

ಲಾಕ್‌ಡೌನನಲ್ಲಿ ಸಿದ್ಧವಾಗಿದೆ ‘ಕಬ್ಜ’ 2 ಕಥೆ: ಲಾಕ್‌ಡೌನ್‌ನಲ್ಲಿ ಚಿತ್ರರಂಗದ ಚಟುವಟಿಕೆಗಳೆಲ್ಲವೂ ಸ್ತಬ್ಧವಾಗಿದ್ದಾಗ, ಕಬ್ಜ–2 ಚಿತ್ರದ ಕಥೆಯನ್ನೂ ಆರ್‌.ಚಂದ್ರು ಅವರು ಸಿದ್ಧಮಾಡಿಕೊಂಡಿದ್ದು, ಮೊದಲ ಭಾಗ ತೆರೆಗೆ ಬಂದ ಬಳಿಕವಷ್ಟೇ ಎರಡನೇ ಭಾಗದ ಚಿತ್ರೀಕರಣ ಆರಂಭಿಸಲು ನಿರ್ಧರಿಸಿದ್ದಾರೆ.

ಬೆಂಗಳೂರು, ಹೈದರಾಬಾದ್ ಮುಂತಾದ ಕಡೆ ನಿರ್ಮಿಸಲಾಗಿರುವ ಅದ್ದೂರಿ ಸೆಟ್‌ಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದೆ. ಶೇ 70ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಜುಲೈ ಮೊದಲ ವಾರದಿಂದಲೇ ಚಿತ್ರೀಕರಣ ಪುನರಾರಂಭವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು