ಬುಧವಾರ, ಜೂನ್ 16, 2021
22 °C

ಬಹುಭಾಷಾ ನಟ ಕಮಲಹಾಸನ್‌ ಬೆಳ್ಳಿ ಬದುಕಿಗೆ 60 ವಸಂತಗಳ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Kamal Haasan

ಇಂದಿಗೆ (ಆಗಸ್ಟ್‌ 12) ಬಹುಭಾಷಾ ನಟ ಕಮಲಹಾಸನ್‌ ಅವರ ವೃತ್ತಿಬದುಕಿಗೆ 60 ವರ್ಷಗಳು ತುಂಬಿವೆ. ಅವರು ಹುಟ್ಟಿದ್ದು 1954ರ ನವೆಂಬರ್‌ 7ರಂದು. ‘ಕಲಾತೂರ್ ಕಣ್ಣಮ್ಮ’ ಚಿತ್ರದ ಮೂಲಕ ಬಾಲನಟನಾಗಿ ಬೆಳ್ಳಿತೆರೆ ಪ್ರವೇಶಿಸಿದರು. 1960ರ ಆಗಸ್ಟ್‌ 12ರಂದು ಈ ಚಿತ್ರ ಬಿಡುಗಡೆಯಾಯಿತು. ಇದರಲ್ಲಿನ ನಟನೆಗಾಗಿ ಅವರಿಗೆ ಶ್ರೇಷ್ಠ ಬಾಲನಟ ಪ್ರಶಸ್ತಿಯೂ ಲಭಿಸಿತು. ಮತ್ತೊಂದೆಡೆ ಅವರ ಬಣ್ಣದಬದುಕಿಗೆ ಭದ್ರ ಬುನಾದಿಯನ್ನೂ ಹಾಕಿತು.

ಆರು ದಶಕಗಳ ವೃತ್ತಿಬದುಕಿನಲ್ಲಿ 150ಕ್ಕೂ ಹೆಚ್ಚು ಸಿನಿಮಾಗಳಿಗೆ ಅವರು ಬಣ್ಣ ಹಚ್ಚಿದ್ದಾರೆ. ಆ್ಯಕ್ಷನ್‌, ರೊಮ್ಯಾಂಟಿಕ್‌, ಥ್ರಿಲ್ಲರ್‌, ಸಸ್ಪೆನ್ಸ್‌ ಹೀಗೆ ಅವರು ಬಣ್ಣ ಹಚ್ಚದ ಪಾತ್ರಗಳು ಇಲ್ಲ. ತಮಿಳು, ಹಿಂದಿ, ತೆಲುಗು, ಮಲಯಾಳ ಹಾಗೂ ಕನ್ನಡದಲ್ಲಿಯೂ ಅವರು ನಟಿಸಿದ್ದಾರೆ. ರಮೇಶ್‌ ಅರವಿಂದ್‌ ನಿರ್ದೇಶಿಸಿದ ‘ರಾಮ ಶಾಮ ಭಾಮ’ ಚಿತ್ರದಲ್ಲಿನ ಅವರ ಮನೋಜ್ಞ ನಟನೆ ಇಂದಿಗೂ ಕನ್ನಡಿಗರ ಮನದಲ್ಲಿದೆ.

ನಿರ್ದೇಶಕ ಲೋಕೇಶ್‌ ಕನಕರಾಜ್‌ ಅವರು ಕಮಲಹಾಸನ್‌ಗೆ ವಿಡಿಯೊ ಮೂಲಕ ಗೌರವ ಸಲ್ಲಿಸಿದ್ದಾರೆ. ಅವರು ನಟಿಸಿದ್ದ ‘ಸತ್ಯ’ ಚಿತ್ರದಲ್ಲಿನ ಹಾಡಿನ ಮೂಲಕವೇ ಈ ವಿಡಿಯೊ ಅರ್ಪಿಸಿರುವುದು ವಿಶೇಷ.

ಕಮಲಹಾಸನ್‌ ಕೂಡ ಟ್ವಿಟರ್‌ನಲ್ಲಿ ಈ ವಿಡಿಯೊ ಹಂಚಿಕೊಂಡಿದ್ದು ವೈರಲ್‌ ಆಗಿದೆ. ಚಿತ್ರರಂಗದ ಹಲವು ನಟ, ನಟಿಯರು ಅವರಿಗೆ ಶುಭಾಶಯ ಕೋರಿದ್ದಾರೆ. ಅವರ ಆಪ್ತ ಸ್ನೇಹಿತ ರಜನಿಕಾಂತ್‌ ಬೆಳ್ಳಿತೆರೆ ಪ್ರವೇಶಿಸಿ 45 ವಸಂತಗಳು ಪೂರ್ಣಗೊಂಡಿವೆ. ಇತ್ತೀಚೆಗೆ ಅವರು ಈ ಸಂಭ್ರಮ ಆಚರಿಸಿದ್ದರು ಉಂಟು. ಈಗ ಕಮಲಹಾಸನ್‌ ಬಣ್ಣದ ಲೋಕ ಪ್ರವೇಶಿಸಿ ಅರವತ್ತೊಂದು ವರ್ಷಗಳನ್ನು ಪೂರೈಸಿರುವುದು ಅವರ ಅಭಿಮಾನಿಗಳಿಗೆ ಖುಷಿ ತಂದಿದೆ.

ಪ್ರಸ್ತುತ ಕಮಲಹಾಸನ್ ‘ಇಂಡಿಯನ್‌ 2’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವುದು ಶಂಕರ್‌. ಕೋವಿಡ್‌–19 ಪರಿಣಾಮ ಇದರ ಶೂಟಿಂಗ್‌ ಸ್ಥಗಿತಗೊಂಡಿದೆ. ಇದಾದ ಬಳಿಕ ಅವರು ‘ತಲೈವಾ ಇರುಕ್ಕಿರನ್‌’ ಚಿತ್ರದಲ್ಲಿ ನಟಿಸಲಿದ್ದಾರೆ. 1992ರಲ್ಲಿ ತೆರೆಕಂಡಿದ್ದ ಕಮಲಹಾಸನ್‌ ನಟನೆಯ ‘ದೇವರ್‌ ಮಗನ್‌’ ಚಿತ್ರದ ಸೀಕ್ವೆಲ್ ಇದಾಗಿದೆ‌.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು