ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ | ಇದು ಅಭಿಷೇಕ್‌ ‘ಮ್ಯಾನರ್ಸ್‌’

Last Updated 1 ಡಿಸೆಂಬರ್ 2022, 20:45 IST
ಅಕ್ಷರ ಗಾತ್ರ

ಅಮರ್‌ ಚಿತ್ರದಿಂದ ಆರಂಭಿಸಿ ಈಗ ಹಂತಹಂತವಾಗಿ ಚಿತ್ರರಂಗದಲ್ಲಿ ಮುಂದುವರಿಯುತ್ತಿರುವ ಅಭಿಷೇಕ್‌ ಅಂಬರೀಷ್‌ ಅವರು ಪಾತ್ರಗಳ ಆಯ್ಕೆಯಲ್ಲಿ ಪಕ್ಕಾ ಇದ್ದಾರೆ. ಪಾತ್ರಕ್ಕೆ ತಕ್ಕಂತೆ ದೇಹವನ್ನೂ ಒಗ್ಗಿಸುವ, ಅಭಿನಯದ ಕಸುವು ತುಂಬುವ ಅವರು ತಮ್ಮ ಸಿನಿಪಯಣದ ಕುರಿತು ಮಾತಿಗಿಳಿದದ್ದು ಹೀಗೆ...

ಅಭಿಷೇಕ್‌ ಅವರ ಸಿನಿಬದುಕಿನಲ್ಲಿ ಅಪ್ಪ ಅಂಬರೀಷ್‌, ಅಮ್ಮ ಸುಮಲತಾ ಅವರ ಪ್ರಭಾವ ಎಷ್ಟಿದೆ?

ಖಂಡಿತವಾಗಿಯೂ ತುಂಬಾ ಇದೆ. ಕಥೆ ಅಥವಾ ವಿಷಯದ ಆಯ್ಕೆ ಇತ್ಯಾದಿಯಲ್ಲಿ ಸಾಕಷ್ಟು ಆಲೋಚನೆ ಮಾಡುತ್ತೇನೆ. ಕೆಲಸದ ಶಿಸ್ತು, ಬದ್ಧತೆಯಲ್ಲಿ ಹೆತ್ತವರ ಪ್ರಭಾವ ಖಂಡಿತಾ ಇದೆ. ಅಪ್ಪನ ಕಾಲದಲ್ಲಿ ಒಂದು ಸಿನಿಮಾದಿಂದ ಇನ್ನೊಂದಕ್ಕೆ ಸಾಕಷ್ಟು ವಿರಾಮ ಇತ್ತು. ಈಗ ಹಾಗಲ್ಲ. ಈಗ ಹೆಚ್ಚು ಪರಿಶ್ರಮ ಹಾಕಬೇಕು. ನಾನೂ ಪ್ರೇಕ್ಷಕರನ್ನು ರಂಜಿಸಬೇಕು. ಆ ನಿಟ್ಟಿನಲ್ಲಿ ಸಿದ್ಧತೆ ಇದ್ದೇ ಇದೆ.

ಸಿನಿಮಾ ಕ್ಷೇತ್ರಕ್ಕೆ ಬರುವಾಗ ನಿಮ್ಮ ಸಿದ್ಧತೆ ಏನಿತ್ತು?

ಎಲ್ಲ ಕಲಾವಿದರು ಏನೇನೆಲ್ಲಾ ಕಲಿತಿದ್ದಾರೋ ಅದನ್ನೇ ನಾನೂ ಕಲಿತಿದ್ದೇನೆ. ಸಿನಿಮಾ ಕ್ಷೇತ್ರಕ್ಕೆ ಬರುವುದು ಅಂದರೆ ತಮಾಷೆ ಅಲ್ಲ. ಸಿದ್ಧತೆ, ಬದ್ಧತೆ, ಗಾಂಭೀರ್ಯ ಇರಲೇಬೇಕು. ಇಂದಿನ ಪ್ರೇಕ್ಷಕರು ಸಣ್ಣ ಸಣ್ಣ ಸಂಗತಿಗಳನ್ನೆಲ್ಲಾ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಾರೆ. ಪ್ರತಿಯೊಬ್ಬ ಹೀರೊ ಕೂಡಾ ಅಪೂರ್ವ ವ್ಯಕ್ತಿಯೇ ಆಗಿರುತ್ತಾನೆ. ಅವನ ಹಿಂದೆ ದೊಡ್ಡ ಶ್ರಮ ಇದ್ದೇ ಇರುತ್ತದೆ.

ನಿಮ್ಮ ಸಿನಿಮಾ ಸಂಖ್ಯೆ ಗಮನಿಸಿದರೆ ನಿಧಾನಗತಿಯ ಚಲನೆಯೇ ಅಥವಾ ಎಚ್ಚರಿಕೆಯ ಹೆಜ್ಜೆಯೇ?

ಎರಡೂ ಅಲ್ಲ. ಸಿನಿಮಾಗಳ ಸಂಖ್ಯೆ ಮುಖ್ಯವಾಗುವುದಿಲ್ಲ. ನನಗೆ ಸರಿ ಎನಿಸಿದಾಗಲಷ್ಟೇ ಮುಂದುವರಿಯುತ್ತೇನೆ. ಉದಾಹರಣೆಗೆ ಕೋವಿಡ್‌ನಿಂದಾಗಿ ಸುಮಾರು ಎರಡು ವರ್ಷ ಚಿತ್ರರಂಗದ ಎಲ್ಲ ಚಟುವಟಿಕೆಗಳೂ ನಿಧಾನವಾದವಲ್ಲವೇ? ಈಗ ನೋಡಿ ನನ್ನ ಮುಂದಿನ ವರ್ಷದ ಯೋಜನೆಗಳೆಲ್ಲಾ ಕೈಯಲ್ಲಿವೆ. ಒಂದೊಂದು ಸಿನಿಮಾ ಒಂದೊಂದು ಅವಧಿಯನ್ನು ಬೇಡುತ್ತದೆ. ಕೆಲವು ವೇಗವಾಗಿ ಆಗಿಬಿಡುತ್ತವೆ. ಕೆಲವು ನಿಧಾನವಾಗುತ್ತವೆ. ಪ್ರಕೃತಿಯೂ ನೆರವಾಗಬೇಕು. ಕಾಲಪರಿಸ್ಥಿತಿಗಳೂ ಕಾರಣವಾಗುತ್ತವೆ. ಹಾಗಾಗಿ ಸಂಖ್ಯೆಗಳಿಗೆ ಕಟ್ಟುಬಿದ್ದು ಸಿನಿಮಾ ಮಾಡುತ್ತಲೇ ಹೋಗುವುದಿಲ್ಲ. ನಾನು ಯಾವುದೇ ಸಿನಿಮಾ ಮಾಡಿದರೂ ಪ್ರೇಕ್ಷಕನ ದುಡ್ಡಿಗೆ ಮೋಸ ಆಗಬಾರದು. ಜನ ಪ್ರೀತಿಸುವಂತಾಗಬೇಕು.

ಬ್ಯಾಡ್‌ ಮ್ಯಾನರ್ಸ್‌, ಕಾಳಿ, ಎಎ04... ಏನೇನಿವೆ ಈ ಚಿತ್ರಗಳಲ್ಲಿ?

ಮೂರೂ ಚಿತ್ರಗಳು ಮತ್ತು ಅವುಗಳ ಕಥಾ ಹಿನ್ನೆಲೆ ಬೇರೆ ಬೇರೆಯೇ ಆಗಿವೆ. ಪಾತ್ರಗಳೂ ಬೇರೆಯೇ. ನಾಯಕ ಪಾತ್ರಧಾರಿ ನಾನೊಬ್ಬನೇ. ಹಾಗಾಗಿ ಮೂರೂ ಭಿನ್ನ ಚಿತ್ರಗಳು. ಒಟ್ಟಾರೆ ಈ ಚಿತ್ರಗಳು ಅತ್ಯುತ್ತಮ ರೀತಿಯಲ್ಲಿ ಜನರಿಗೆ ತಲುಪಬೇಕು. ಇವುಗಳ ಹಿಂದೆ ನಿರ್ದೇಶಕರ ಹಾಗೂ ಇಡೀ ತಂಡದ ಪರಿಶ್ರಮ ಇದೆ.

ಪಾತ್ರದಿಂದ ಪಾತ್ರಕ್ಕೆ ಬದಲಾಗುವಾಗ ನಿಮ್ಮ ದೇಹ ಪ್ರಕೃತಿಯನ್ನು ಹೇಗೆ ಒಗ್ಗಿಸಿಕೊಳ್ಳುತ್ತೀರಿ?

ಅಭಿನಯ ಎಂದರೆ ಕೇವಲ ಜಿಮ್‌, ದೇಹ ಪ್ರದರ್ಶನ ಅಲ್ಲ. ಆದರೆ, ಅದೂ ಮುಖ್ಯ. ಪ್ರತಿಯೊಬ್ಬ ಕಲಾವಿದನೂ ಆಯಾ ಪಾತ್ರದ ಬದಲಾವಣೆಗೆ ತಕ್ಕಂತೆ ಒಗ್ಗಿಕೊಳ್ಳಲೇಬೇಕು. ಅದಕ್ಕೆ ತಕ್ಕಹಾಗೆ ಸಿದ್ಧನಾಗುತ್ತೇನೆ. ಈಗ ಹೀರೊ ಎಂದರೆ ಯಾವುದೇ ಸಿದ್ಧ ಸೂತ್ರಗಳಿಲ್ಲ. ಹೀಗೇ ಇರುತ್ತಾನೆ ಎನ್ನಲಾಗದು. ಅವುಗಳನ್ನು ಮೀರಿ ಚಿತ್ರರಂಗ ಎಷ್ಟೋ ಮುಂದಕ್ಕೆ ಹೋಗಿದೆ. ಈಗ ಕಂಟೆಂಟ್‌ (ಕಥಾವಸ್ತು) ಮಾತ್ರ ಹೀರೊ. ಅದು ಸಮರ್ಪಕವಾಗಿದ್ದರೆ ಮಾತ್ರ ಪ್ರೇಕ್ಷಕ ಸ್ವೀಕರಿಸುತ್ತಾನೆ.

ರಾಜಕೀಯದತ್ತ ಆಸಕ್ತಿ ಇದೆಯೇ?

ಅಮ್ಮ ರಾಜಕಾರಣದಲ್ಲಿ ಇದ್ದಾರೆ. ಅವರಿಗೆ ಜೊತೆಯಾಗಿ ನಿಲ್ಲುತ್ತೇನೆ. ಸದ್ಯ ರಾಜಕೀಯದ ಯಾವುದೇ ಯೋಚನೆ ಇಲ್ಲ. ಜನರಿಗೆ ಸೇವೆ ಮಾಡಬೇಕೆಂದರೆ ರಾಜಕೀಯವೇ ಆಗಬೇಕೆಂದಿಲ್ಲವಲ್ಲ. ಸದ್ಯ ಸಿನಿಮಾ. ಅದರ ನಡುವೆ ಒಂದಿಷ್ಟು ಜನರ ಸೇವೆ. ಇಷ್ಟು ಸಾಕಲ್ಲವೇ. ನನಗೆ ಅಂಥ ಆಸಕ್ತಿ ಇಲ್ಲ.

ಅಭಿಮಾನಿಗಳಿಗೆ ನಿಮ್ಮ ಮಾತು?

ತಂದೆಯವರನ್ನು ಪ್ರೀತಿಸಿದ್ದೀರಿ. ಈಗಲೂ ಪ್ರೀತಿಸುತ್ತಿದ್ದೀರಿ. ನನ್ನ ಚಿತ್ರಗಳಿಗೂ ಅದೇ ಪ್ರೀತಿ, ಬೆಂಬಲವಿರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT