ಮಂಗಳವಾರ, ಮಾರ್ಚ್ 2, 2021
18 °C

ಸಿನಿಪ್ರಿಯರಿಗೆ ಸಿಹಿ ‘ಲಡ್ಡು’ ಕೊಡಲು ಬಂದ ಬಿಂದುಶ್ರೀ

ಕೆ.ಎಂ. ಸಂತೋಷ್‌ಕುಮಾರ್‌‌ Updated:

ಅಕ್ಷರ ಗಾತ್ರ : | |

ಬಿಂದುಶ್ರೀ ಮೂಲತಃ ದಾವಣಗೆರೆ ಜಿಲ್ಲೆಯ ಚನ್ನಗಿರಿಯವರು. ವೃತ್ತಿಯಲ್ಲಿ ಟೆಕಿಯಾಗಿದ್ದವರು. ಬಾಲ್ಯದಿಂದಲೂ ಇದ್ದ ಬಣ್ಣದ ಲೋಕದ ಸೆಳೆತ ನಟಿಯಾಗಿಸಿದೆ. ಬಾಲ ನಟಿಯಾಗಿ ಹಲವು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದರು ಬಿಂದುಶ್ರೀ.

ಸಂಕ್ರಾಂತಿಯ ಎಳ್ಳುಬೆಲ್ಲ ತಿಂದು ಬಾಯಿ ಸಿಹಿ ಮಾಡಿಕೊಂಡಿರುವ ಸಿನಿಪ್ರಿಯರಿಗೆ ಹಾಸ್ಯ ರಸಾಯನ ಹಂಚಲು ‘ಲಡ್ಡು’ ಹಿಡಿದು ಬರುತ್ತಿದ್ದಾರೆ ಬಿಂದುಶ್ರೀ. ಐವರು ನಾಯಕರು ಇರುವ ಈ ಚಿತ್ರಕ್ಕೆ ಬಿಂದುಶ್ರೀ ಏಕೈಕ ನಾಯಕಿ. ರೊಮ್ಯಾಂಟಿಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಕಥಾಹಂದರ ಹೊಂದಿರುವ ಈ ಚಿತ್ರ ಈ ವಾರ ರಾಜ್ಯದಾದ್ಯಂತ ತೆರೆಕಾಣುತ್ತಿದೆ. ಹೊಸಬರೇ ಕೂಡಿರುವ ಈ ಚಿತ್ರವನ್ನು ನಿರ್ದೇಶಿಸಿದವರು ಆರ್.ರಮಾನಂದ್. ಈ ಚಿತ್ರ ಮತ್ತು ತಮ್ಮ ಸಿನಿ ಪಯಣದ ಕುರಿತು ಬಿಂದುಶ್ರೀ ‘ಪ್ರಜಾಪ್ಲಸ್‌’ ಜತೆಗೆ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಓದು ಮುಗಿಸಿ, ಪ್ರತಿಷ್ಠಿತ ಐ.ಟಿ ಕಂಪನಿಯೊಂದರಲ್ಲಿ ಮೂರು ವರ್ಷ ವೃತ್ತಿ ಕೂಡ ಮಾಡಿ, ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ, ಅದೂ ನಾಯಕಿಯಾಗಿ. ಇವರು ಮೊದಲು ನಾಯಕಿಯಾಗಿ ನಟಿಸಿದ ಚಿತ್ರ ಮಹಿಷಾಸುರ. ಈ ಚಿತ್ರ ಇತ್ತೀಚೆಗಷ್ಟೇ ಅಂದರೆ ಅನ್‌ಲಾಕ್‌ ಅವಧಿಯಲ್ಲಿ ಬಿಡುಗಡೆಯಾಗಿತ್ತು. ಈಗ ‘ಲಡ್ಡು’ ಎರಡನೇ ಚಿತ್ರ. ಇದು ತಮ್ಮ ವೃತ್ತಿಬದುಕಿಗೆ ಸಿಹಿ ಹೊತ್ತು ತರಲಿದೆ ಎನ್ನುವುದು ಅವರ ಬಹು ನಿರೀಕ್ಷೆಯೂ ಆಗಿದೆ.

‘ಕೈತುಂಬ ಸಂಬಳ ಸಿಗುತ್ತಿದ್ದ ಉದ್ಯೋಗ ತೊರೆದು ಬಣ್ಣದ ಲೋಕಕ್ಕೆ ಬಂದದ್ದು ಖುಷಿ ನೀಡಿದೆ. ತಾನು ನಿಜ ಬದುಕಿನಲ್ಲಿ ಹೇಗಿದ್ದೀನೋ ಅಂತಹುದೆ ಒಂದು ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆಂಬ ಬಯಕೆಯೂ ಇದೆ’ ಎನ್ನುವ ಇವರು ಸಿನಿರಂಗದಲ್ಲೇ ಬದುಕು ಹಸನುಗೊಳಿಸಿಕೊಳ್ಳುವ ಕನಸು ಕಟ್ಟಿಕೊಂಡಿರುವ ನಿರಾಡಂಬರ ಚೆಲುವೆ ಕೂಡ ಹೌದು.

ಲಡ್ಡು ಚಿತ್ರದಲ್ಲಿ ಒಬ್ಬ ಯುವತಿಯ ಸುತ್ತ ನಡೆಯುವ ಘಟನೆಗಳೇ ಚಿತ್ರದ ಕಥಾಹಂದರವಾಗಿದೆಯಂತೆ. ಹರ್ಷಿತ್, ನವೀನ್, ಸಮೀರ್ ನಗರದ್, ಮಧು ಹಾಗೂ ವಿಶಾಲ್ ನಾಯಕರಾಗಿ ನಟಿಸಿದ್ದಾರೆ. ಪಾರು ಖ್ಯಾತಿಯ ಪವಿತ್ರಾ ಬಿ. ನಾಯಕ್, ಮಂಜುಳಾ ರೆಡ್ಡಿ, ರಾಕ್‍ಲೈನ್ ಸುಧಾಕರ್ ಬಣ್ಣ ಹಚ್ಚಿದ್ದಾರೆ. ಪುರುಷೋತ್ತಮ್ ಛಾಯಾಗ್ರಹಣ, ನಂದು ತಿಪ್ಪು ಸಂಗೀತ ಸಂಯೋಜನೆ ಹಾಗೂ ನಿಖಿಲ್ ಅವರ ಸಂಭಾಷಣೆ ಈ ಚಿತ್ರಕ್ಕಿದೆ. ಮೇಘನಾ ವಿ. ಅವರು ಈ ಚಿತ್ರ ನಿರ್ಮಿಸಿದ್ದಾರೆ. 

‘ಶ್ರೀರಸ್ತು ಶುಭಮಸ್ತು’, ‘ಶಿವಪ್ಪನಾಯಕ’, ‘ಪ್ರೀತ್ಸೋದ್‌ ತಪ್ಪಾ’ ಸೇರಿ ಮೂವತ್ತಕ್ಕೂ ಹೆಚ್ಚು ಚಿತ್ರಗಳು, ‘ಕಾವ್ಯಾಂಜಲಿ’, ‘ಗೌತಮಿ’ಯಂತ ದೊಡ್ಡ ಧಾರಾವಾಹಿಗಳಲ್ಲಿ ಬಾಲ ನಟಿಯಾಗಿ ನಟಿಸಿ, ಓದಿನ ಸಲುವಾಗಿ ನಟನೆಗೆ ಕೆಲವು ವರ್ಷ ವಿದಾಯ ಹೇಳಿದ್ದರು. ಇವರ ತಂದೆ ಸಿವಿಲ್‌ ಎಂಜಿನಿಯರ್‌ ಆಗಿದ್ದು, ಮಗಳು ಕೂಡ ತನ್ನಂತೆ ಎಂಜಿನಿಯರ್‌ ಆಗಲೆಂದು ಬಯಸಿದ್ದರು. ತಂದೆಯ ಕನಸು ಈಡೇರಿಸುವ ನಿಟ್ಟಿನಲ್ಲಿ ಬಿಂದುಶ್ರೀ ಎಂಜಿನಿಯರಿಂಗ್‌ ಸೇರಿ, ಪದವಿಯಲ್ಲಿ 16ನೇ ರ‍್ಯಾಂಕ್‌ ಗಳಿಸಿ ತಂದೆ–ತಾಯಿ ಹೆಮ್ಮೆಪಡುವಂತೆ ಮಾಡಿದ್ದರು. ಆದರೆ, ಅಭಿನಯ ಕಲೆಯ ಮೇಲಿದ್ದ ಆಸಕ್ತಿಯಿಂದಾಗಿ ಮತ್ತೆ ತಂದೆಯ ಮನವೊಲಿಸಿ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ.

‘ನಾನು ಪುಟಾಣಿಯಾಗಿದ್ದಾಗಲೇ ಸಿನಿಮಾದಲ್ಲಿ ಅಭಿನಯಿಸಲು ಗಾಡ್‌ ಮದರ್ (ಅಮ್ಮ) ಪ್ರೇರಣೆ ನೀಡುತ್ತಿದ್ದರು. ಅವರ ಪ್ರೋತ್ಸಾಹದಿಂದಲೇ ಅಷ್ಟೊಂದು ಚಿತ್ರಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದೆ. ಗೃಹಿಣಿಯಾಗಿದ್ದ ಅಮ್ಮ ಶಾಸ್ತ್ರೀಯ ಸಂಗೀತ ಕೂಡ ಕಲಿತಿದ್ದರು. ಆದರೆ, ವೃತ್ತಿಪರ ಗಾಯಕಿಯಾಗಿರಲಿಲ್ಲ. ಅವರಿಗೆ ತನ್ನ ಮಗಳು ಕಲಾವಿದೆಯಾಗಬೇಕೆಂಬ ಆಸೆ ಇತ್ತು. ಅಮ್ಮನ ಆಸೆಯಂತೆ ಅಪ್ಪನ ಮನವೊಲಿಸಿ, ನಟನೆಯ ಬದುಕಿಗೆ ಮರಳಿ ಬಂದಿದ್ದೇನೆ. ಆದರೆ, ಇಂದು ನಾನು ನಾಯಕಿಯಾಗಿರುವುದನ್ನು ನೋಡಲು ಅಮ್ಮನೇ ಇಲ್ಲ’ ಎಂದು ಬಿಂದುಶ್ರೀ ಭಾವುಕರಾದರು.

ಪಾತ್ರಗಳ ಬಗ್ಗೆ ಮಾತು ಹೊರಳಿದಾಗ, ‘ದೊಡ್ಡ ಬ್ಯಾನರ್ ಎಂದಾಕ್ಷಣ ಯಾವುದೇ ಪಾತ್ರಕ್ಕಾದರೂ ಬಣ್ಣ ಹಚ್ಚಲಾರೆ. ಮನಸಿಗೆ ಹಿಡಿಸುವಂತಹ ಪಾತ್ರವಾಗಬೇಕು. ಅದು ಪ್ರೇಕ್ಷಕರೂ ಇಷ್ಟಪಡುವಂತಹ ಪಾತ್ರವಾಗಿರಬೇಕು. ನಾಗರಿಕ ಸಮಾಜ ಒಪ್ಪುವಂತಹದ್ದಾಗಿರಬೇಕು. ನಮ್ಮ ನಾಡಿನ ಸಂಸ್ಕ್ರತಿಯನ್ನು ಎತ್ತಿಹಿಡಿಯುವಂತಹ ಪಾತ್ರ ಸಿಕ್ಕರೆ ಅದರಲ್ಲಿ ಖಂಡಿತಾ ಅಭಿನಯಿಸುವೆ’ ಎನ್ನುವ ಬಿಂದುಶ್ರೀ ಪಾತ್ರಗಳ ಆಯ್ಕೆಯಲ್ಲಿ ತಾನೆಷ್ಟು ಜಾಣೆ ಎನ್ನುವುದನ್ನು ಅರುಹಿದರು.

ಮುಂದಿನ ಚಿತ್ರದ ಬಗ್ಗೆಯೂ ಮಾತನಾಡಿದ ಬಿಂದುಶ್ರೀ, ‘ಮಿ. ಅಂಡ್ ಮಿಸಸ್ ಜಾನು’ ಚಿತ್ರದಲ್ಲಿ ನಟಿಸುತ್ತಿರುವೆ. ಅಲ್ಲದೇ ಮೂರು ಕಥೆಗಳನ್ನು ಕೇಳಿರುವೆ. ಹೊಸ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಳ್ಳುವ ಸಂಬಂಧ ಮಾತುಕತೆ ನಡೆಯುತ್ತಿದೆ ಎನ್ನಲು ಮರೆಯಲಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು