ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಕ್ಟರ್‌/ಡಾಕ್ಟರ್‌ ಶ್ರೀಲೀಲಾ ಹೊಸ ಕನಸು

Last Updated 31 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಕನ್ನಡದ ಉದಯೋನ್ಮುಖ ನಟಿ ಶ್ರೀಲೀಲಾ ಚಿತ್ರರಂಗಕ್ಕೆ ಕಾಲಿಟ್ಟ ಒಂದೇ ವರ್ಷದಲ್ಲಿ ಯಶಸ್ಸಿನ ಸವಿಯುಂಡವರು. ಮೊದಲ ಚಿತ್ರ ‘ಕಿಸ್‌’ಗೆ ಚಿತ್ರರಸಿಕರು ಮಾರುಹೋಗಿದ್ದಾರೆ. ಈ ಚಿತ್ರ ಜನವರಿ 1ರಂದು ಶತದಿನೋತ್ಸವ ಕಾಣಲಿದೆ. ಇದೇ ವರ್ಷ ಶ್ರೀಮುರಳಿಗೆ ನಾಯಕಿಯಾಗಿ ನಟಿಸಿದ ಅವರ ಎರಡನೇ ಚಿತ್ರ ‘ಭರಾಟೆ’ ಕೂಡ ಸದ್ದು ಮಾಡಿದೆ. ಶ್ರೀಲೀಲಾ ನಟನೆಗೆ ಸಿನಿ ರಸಿಕರು ಫಿದಾ ಆಗಿದ್ದಾರೆ. ಶ್ರೀಲೀಲಾ ಪಾಲಿಗೆ 2019 ಅಕ್ಷರಶಃ ಬಂಪರ್‌ ಫಸಲು ನೀಡಿದೆ. ಶ್ರೀಲೀಲಾ ಆ್ಯಕ್ಟರ್‌ ಅಷ್ಟೇ ಅಲ್ಲ, ಡಾಕ್ಟರ್‌ ಕೂಡ ಹೌದು.ಎಂಬಿಬಿಎಸ್‌ ಶಿಕ್ಷಣ ಪೂರೈಸಿರುವ ಇವರು ವೈದ್ಯಕೀಯ ವೃತ್ತಿಯನ್ನು ಅಭ್ಯಾಸ ಮಾಡುತ್ತಿದ್ದಾರೆ.2020ರಲ್ಲಿ ಅವರ ಹೊಸ ಕನಸುಗಳು, ಸಂಕಲ್ಪಗಳು, ನಿರ್ಣಯಗಳು ಏನಿರಲಿವೆ ಎನ್ನುವುದನ್ನು ಅವರು ‘ಮೆಟ್ರೊ’ ಜತೆಗೆ ಹಂಚಿಕೊಂಡಿದ್ದಾರೆ.

‘2019ರ ವರ್ಷ ನನಗೆ ಅದ್ಭುತ ಆರಂಭ ನೀಡಿದೆ. ನನ್ನ ಹುಟ್ಟಿದ ದಿನವನ್ನು ಹೇಗೆ ನೆನಪಿಟ್ಟುಕೊಳ್ಳುತ್ತೇನೋ ಅದೇ ರೀತಿ ಈ ವರ್ಷವು ನನ್ನ ಬದುಕಿನಲ್ಲಿ ಅಚ್ಚಳಿಯದ ನೆನಪಿನಂತೆ ಉಳಿಯುತ್ತದೆ. ಎರಡನೇ ಬಾರಿಗೆ ಹುಟ್ಟಿದ್ದೇನೆಂದರೆ ಅದು ಈ ವರ್ಷ ಎಂದುಕೊಂಡಿದ್ದೇನೆ. ನನ್ನ ಎರಡು ಸಿನಿಮಾಗಳು ಯಶಸ್ವಿಯಾಗಿವೆ. ನನ್ನಮೊದಲ ಚಿತ್ರವೇ ನೂರನೇ ದಿನದತ್ತ ದಾಪುಗಾಲಿಟ್ಟಿದೆ ಎಂದರೆ ಯಾವ ನಟಿಗೆ ತಾನೇ ಖುಷಿಯಾಗುವುದಿಲ್ಲ ಹೇಳಿ. ಹಾಗೆಯೇ ‘ಭರಾಟೆ’ ಸಿನಿಮಾ ಕೂಡ ನನಗೆ ಸಾಕಷ್ಟು ಜನಪ್ರಿಯತೆ, ಯಶಸ್ಸು ತಂದುಕೊಟ್ಟಿತು’ ಎನ್ನುವ ಮಾತು ಸೇರಿಸಿದರು ಶ್ರೀಲೀಲಾ.

‘ಹೊಸ ವರ್ಷದಲ್ಲಿ ಅಭಿಮಾನಿಗಳಿಗೆ ಹೊಸ ಸುದ್ದಿ ಕೊಡಲು ಕಾಯುತ್ತಿದ್ದೇನೆ.ಕೈಯಲ್ಲಿ ಎರಡು ಸ್ಕ್ರಿಪ್ಟ್‌ಗಳಿವೆ. ಆದಷ್ಟು ಬೇಗ ಹೊಸ ಸಿನಿಮಾ ಪ್ರಕಟಿಸುತ್ತೇನೆ. ಒಳ್ಳೆಯ ಬ್ಯಾನರ್‌ಗಳಿಂದ ಮತ್ತು ಬೇರೆ ಭಾಷೆಗಳಿಂದಲೂ ಅವಕಾಶಗಳು ಅರಸಿ ಬರುತ್ತಿವೆ. ಆದರೆ, ನನಗೆ ಕನ್ನಡ ಚಿತ್ರಗಳಲ್ಲಿ ನಟಿಸಲು ಇಷ್ಟ’ ಎಂದು ಅವರು ಮಾತುವಿಸ್ತರಿಸಿದರು.

‘ಈಗ ನಾನು ಹೇಗಿದ್ದೀನೋ ಅದಕ್ಕಿಂತ ಇನ್ನೂ ಚೆನ್ನಾಗಿರಬೇಕೆನ್ನುವುದು ಹೊಸ ವರ್ಷದ ನಿರ್ಣಯ. ಅಂದರೆ, ಸಮಯದ ನಿರ್ವಹಣೆ ಮತ್ತು ಅಭಿನಯದಲ್ಲಿ ಸಾಕಷ್ಟು ಸುಧಾರಣೆ ಮಾಡಿಕೊಳ್ಳಲು ಬಯಸುತ್ತೇನೆ.ಈ ರೀತಿಯಲ್ಲಿ ಹೊಸ ವರ್ಷದ ನಿರ್ಣಯಗಳನ್ನು ನಾನು ಹಾಕಿಕೊಂಡಿದ್ದೇನೆ’ ಎಂದರು.

‘ನನ್ನ ಜೀವನ, ಜೀವನಶೈಲಿ ಈಗ ಮೊದಲಿನಂತೆ ಇಲ್ಲ. ಕಳೆದ ವರ್ಷ ಕಾಲೇಜಿನಲ್ಲಿರುವಾಗ ಸಾಮಾನ್ಯ ವಿದ್ಯಾರ್ಥಿಯಂತೆ ಇದ್ದೆ. ಸಿನಿಮಾದಲ್ಲಿ ಸಂಪೂರ್ಣ ಸಕ್ರಿಯವಾದ ಮೇಲೆ ಜೀವನವೂ ಸಂಪೂರ್ಣ ಬದಲಾಗಿದೆ’ ಎಂದರು.

‘ಒಂದೇ ಬಗೆಯ ಪಾತ್ರಗಳಿಗೆ ಸೀಮಿತವಾಗಲು ಇಷ್ಟವಿಲ್ಲ. ಮುಂದಿನ ಚಿತ್ರದಲ್ಲಿ ಭಿನ್ನ ಪಾತ್ರ ನಿರ್ವಹಿಸಲಿದ್ದೇನೆ’ ಎನ್ನಲುಅವರು ಮರೆಯಲಿಲ್ಲ.

ಶ್ರೀಲೀಲಾ ತೂಕ ಇಳಿಸಲು, ಫಿಟ್‌ ಆಗಿ ಇರಲು ಜಿಮ್‌ ಸೆಂಟರ್‌ನಲ್ಲಿ ಬೆವರು ಸುರಿಸುವುದಿಲ್ಲ. ಭರತನಾಟ್ಯ, ಯೋಗದಲ್ಲೂ ಆಸಕ್ತಿ ಇಟ್ಟುಕೊಂಡಿದ್ದಾರೆ. ಇವು ‘ಮೈಂಡ್‌ ಅಂಡ್‌ ಬಾಡಿ’ಯನ್ನು ಫಿಟ್‌ ಆಗಿ ಇಟ್ಟಿವೆ ಎನ್ನುತ್ತಾರೆ ಅವರು.

ಡಯಟ್‌ ವಿಚಾರಕ್ಕೆ ಬಂದಾಗ ನಾನು ತುಂಬಾ ನಿಯಂತ್ರಣದಲ್ಲಿದ್ದೇನೆ. ಶುದ್ಧ ಸಸ್ಯಾಹಾರಿ. ಸಂಗೀತ ತುಂಬಾ ಇಷ್ಟ. ವೈಯಕ್ತಿಕ ಬದುಕಿನ ಬಗ್ಗೆಯೂ ನಾನು ಮುಚ್ಚಿಡುವಂತದ್ದು ಏನೂ ಇಲ್ಲ.ಲವ್‌, ಡೇಟಿಂಗ್‌ ಯಾವುದೂ ಇಲ್ಲ. ಈಗಂತೂ ಬದುಕು ತೆರೆದಿಟ್ಟ ಪುಟ ಎನ್ನುತ್ತಾರೆ ಶ್ರೀಲೀಲಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT