‘ಯಲಾಕುನ್ನಿ’–ಇದು ಖ್ಯಾತ ಖಳನಟ ದಿವಂಗತ ವಜ್ರಮುನಿ ಅವರ ಫೇಮಸ್ ಡೈಲಾಗ್. ಇದನ್ನೇ ಶೀರ್ಷಿಕೆಯಾಗಿಟ್ಟುಕೊಂಡು ಈ ಸಿನಿಮಾ ಸೆಟ್ಟೇರಿತ್ತು. ಸೌಂದರ್ಯ ಸಿನಿ ಕಂಬೈನ್ಸ್ ಹಾಗೂ ನರಸಿಂಹ ಸಿನಿಮಾಸ್ ಲಾಂಛನದಲ್ಲಿ ಅನುಸೂಯ ಕೋಮಲ್ ಕುಮಾರ್, ಸಹನಮೂರ್ತಿ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿರುವ ಚಿತ್ರತಂಡ ಶೀಘ್ರದಲ್ಲೇ ಸಿನಿಮಾ ಬಿಡುಗಡೆಗೊಳಿಸುವುದಾಗಿ ತಿಳಿಸಿದೆ. ಬೆಂಗಳೂರು, ಮೈಸೂರು ಹಾಗೂ ಶ್ರೀರಂಗಪಟ್ಟಣದಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಶ್ರೀರಂಗಪಟ್ಟಣದಲ್ಲಿ ಚಿತ್ರಕ್ಕಾಗಿ ವಿಶೇಷ ಸೆಟ್ ಕೂಡಾ ಹಾಕಲಾಗಿತ್ತು. ಈ ಚಿತ್ರದಲ್ಲಿ ಕೋಮಲ್ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ದತ್ತಣ್ಣ, ಸಾಧು ಕೋಕಿಲ, ಮಿತ್ರ, ಸುಚೇಂದ್ರ ಪ್ರಸಾದ್, ಶಿವರಾಜ್ ಕೆ.ಆರ್. ಪೇಟೆ, ತಬಲಾ ನಾಣಿ, ರಾಜು ತಾಳಿಕೋಟೆ, ಸುಮನ್ ನಗರ್‌ಕರ್, ಮಾನಸಿ ಸುಧೀರ್, ಯತಿರಾಜ್ ಜಗ್ಗೇಶ್, ಜಯಸಿಂಹ ಮುಸುರಿ, ರಘು ರಾಮನಕೊಪ್ಪ, ಮಹಾಂತೇಶ್, ಜಯರಾಮ್ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಚಿತ್ರದ ನಾಯಕಿಯರಾಗಿ ನಿಸರ್ಗ ಅಪ್ಪಣ್ಣ ಮತ್ತು ‘ಗಿಚ್ಚಿಗಿಲಿಗಿಲಿ’ಯ ಅಮೃತಾ ಬಣ್ಣ ಹಚ್ಚಿದ್ದಾರೆ.